/newsfirstlive-kannada/media/post_attachments/wp-content/uploads/2025/04/BK_RAVI_1.jpg)
ಬೆಂಗಳೂರು: ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಬಿ.ಕೆ ರವಿ ಅವರು ಏಪ್ರಿಲ್ 4 ರಿಂದ 15ರ ವರೆಗೆ ಅಮೆರಿಕದ ಪ್ರವಾಸ ಕೈಗೊಳ್ಳಲಿದ್ದಾರೆ. ಬ್ರಿಡ್ಜ್‌ವಾಟರ್ ಯೂನಿವರ್ಸಿಟಿ ಹಾಗೂ ಇತರ ಪ್ರತಿಷ್ಠಿತ ಸಂಸ್ಥೆಗಳ ಆಮಂತ್ರಣ ಹಿನ್ನೆಲೆಯಲ್ಲಿ ಬಿ.ಕೆ ರವಿ ಅವರು, ಹಲವು ಶೈಕ್ಷಣಿಕ ವಿಷಯಗಳ ಕುರಿತು ಅಮೆರಿಕದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಅಮೆರಿಕದಲ್ಲಿ ಕುಲಪತಿ ಪ್ರೊ ಬಿ.ಕೆ ರವಿ ಅವರು ‘ಮಾಧ್ಯಮ, ಪ್ರಜಾಪ್ರಭುತ್ವ ಮತ್ತು ಚುನಾವಣೆ’ ವಿಷಯದಲ್ಲಿ ಮಾಧ್ಯಮವು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಚುನಾವಣೆಗಳ ವರದಿ ಮಾಡುವಲ್ಲಿ ಹೇಗೆ ಪಾತ್ರವಹಿಸುತ್ತದೆ ಎಂಬುದನ್ನು ವಿಶ್ಲೇಷಣೆ ಮಾಡುವರು. ಪತ್ರಿಕೋದ್ಯಮದ ಪರಿವರ್ತನೆ ವಿಷಯದಲ್ಲಿ ಪತ್ರಿಕೋದ್ಯಮದ ಅಭ್ಯಾಸ, ಡಿಜಿಟಲ್ ಮಾಧ್ಯಮದ ಪರಿಣಾಮಗಳು ಹಾಗೂ ನೈತಿಕ ಸವಾಲುಗಳ ಕುರಿತು ಚರ್ಚೆ ಮಾಡಲಿದ್ದಾರೆ. ‘ಭಾರತೀಯ ಜ್ಞಾನ ಪರಂಪರೆ’ ಕುರಿತು ಉಪನ್ಯಾಸ ನೀಡುವ ಮೂಲಕ ಭಾರತದ ಬೌದ್ಧಿಕ ಪರಂಪರೆಯ ಮಹತ್ವ ಹಾಗೂ ಅದರ ಪ್ರಸ್ತುತ ಸಾಮಾಜಿಕ ನ್ಯಾಯ, ಸಂಸ್ಕೃತಿ ಮತ್ತು ಪರಿಸರದ ದೃಷ್ಟಿಕೋನದಲ್ಲಿ ಹೊಂದಿರುವ ಪ್ರಸ್ತುತತೆಯನ್ನು ಕುಲಪತಿಯವರು ಉಲ್ಲೇಖ ಮಾಡಲಿದ್ದಾರೆ.
ಭಾರತದ ಮಾಧ್ಯಮ ಮತ್ತು ಸಮಾಜ ಎಂಬ ವಿಷಯದಲ್ಲಿ ಭಾರತೀಯ ಮಾಧ್ಯಮದಲ್ಲಿ ವೈವಿಧ್ಯತೆ ಹಾಗೂ ಪ್ರತಿನಿದಿತ್ವದ ಕುರಿತು ಚರ್ಚಿಸುತ್ತಾರೆ. ಇದರ ಜೊತೆಗೆ ಭಾರತೀಯ ಜ್ಞಾನ ಪರಂಪರೆ ಮತ್ತು ಕನ್ನಡ ದಾಸ ಸಾಹಿತ್ಯದ ಪರಂಪರೆ ಹಾಗೂ ಕನ್ನಡದ ವಚನ ಸಾಹಿತ್ಯ ಸಂವಹನದ ವಿಶೇಷ ಗುಣಗಳು ಕುರಿತು ಮಾತನಾಡಲಿದ್ದಾರೆ. ಇದರಿಂದ ದಾಸ ಸಾಹಿತ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತಾಪಿಸಲಿದ್ದಾರೆ.
ಇದನ್ನೂ ಓದಿ:NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?
ಈ ಪ್ರವಾಸವು ಅಂತರರಾಷ್ಟ್ರೀಯ ಶೈಕ್ಷಣಿಕ ಸಹಭಾಗಿತ್ವವನ್ನು ಬಲಪಡಿಸುವ ಜೊತೆಗೆ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವ ವೇದಿಕೆಯಾಗಿರಲಿದೆ. ಜೊತೆಗೆ ಮಾಧ್ಯಮ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಹಾಗೂ ಭಾರತದ ಬೌದ್ಧಿಕ ಪರಂಪರೆಯ ಕುರಿತು ಒಳನೋಟ ನೀಡಲು ಸಹಾಯ ಮಾಡಲಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ