/newsfirstlive-kannada/media/post_attachments/wp-content/uploads/2025/03/Jyothi-Raj-4.jpg)
ಉಡುಪಿ: ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್. ಏಳು ಸುತ್ತಿನ ಕೋಟೆ ಹತ್ತುವುದರಲ್ಲಿ ಇವರು ಪಂಟರ್. ದೊಡ್ಡ ದೊಡ್ಡ ಬಿಲ್ಡಿಂಗ್‌ಗಳನ್ನ ಏರೋ ಮೂಲಕ ಹಲವು ಸಾಹಸಗಳನ್ನೂ ಮಾಡಿದ್ದಾರೆ. ಇದೀಗ ಕರಾವಳಿಯಲ್ಲೂ ತಮ್ಮ ಸಾಹಸವನ್ನ ಜ್ಯೋತಿರಾಜ್ ಪ್ರದರ್ಶಿಸಿದ್ದಾರೆ. ಹನುಮಾನ್ ವಿಗ್ರಹವನ್ನ ಏರಿ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ:ಡಯೆಟ್ ಪ್ಲ್ಯಾನ್ ಫಾಲೋ ಮಾಡೋರೇ ಎಚ್ಚರ.. 23 ವರ್ಷದ ಯುವತಿ ಜೀವಕ್ಕೆ ಕುತ್ತು; ಆಗಿದ್ದೇನು?
ಉಡುಪಿ ಜಿಲ್ಲೆ ಕುಂದಾಪುರದ ಕೋಟೇಶ್ವರದಲ್ಲಿರುವ ಅಪರೂಪದ ಹನುಮಾನ್ ವಿಗ್ರಹವನ್ನ ಏರಿ ಕೋತಿರಾಜ್ ಹೊಸ ಸಾಹಸ ಮೆರದಿದ್ದಾರೆ. 85 ಅಡಿ ಎತ್ತರದ ಹನುಮನ ವಿಗ್ರಹವನ್ನು ಏರುವ ಮೂಲಕ ಕೋತಿರಾಜ್ ಎಂದೆ ಪ್ರಖ್ಯಾತನಾದ ಜ್ಯೋತಿರಾಜ್ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಕುಂದಾಪುರದ ಹನುಮಾನ್ ವಿಗ್ರಹ ಎಲ್ಲರ ಗಮನ ಸೆಳೆಯುವ ತಾಣ. ತನ್ನ ವಿಭಿನ್ನ ಸಾಹಸದ ಮೂಲಕವೇ ಜನಪ್ರಿಯರಾದ ಕೋತಿರಾಜ್ ತನ್ನ ಇಷ್ಟದೇವರಾದ ಹನುಮಂತನ ವಿಗ್ರಹದ ತುತ್ತ ತುದಿಗೆ ಏರಿ ಎಲ್ಲರನ್ನೂ ಅಚ್ಚರಿಯಲ್ಲಿ ತಳ್ಳಿದ್ದಾರೆ.
ಬರೋಬ್ಬರಿ 85 ಅಡಿ ಎತ್ತರದ ಈ ಹನುಮಾನ್ ವಿಗ್ರಹ ಮಳೆ ಬಿಸಿಲನ್ನದೆ ಬಯಲಲ್ಲಿ ನಿಂತು ಜನರನ್ನು ಹರಸುವ ಭಂಗಿಯಲ್ಲಿದೆ. ಈ ವಿಗ್ರಹದ ವಿವಿಧ ಭಾಗಗಳಲ್ಲಿ ಗಿಡ ಗಂಟೆಗಳು ಬೆಳೆದಿದ್ದು ಅದನ್ನು ಸ್ವಚ್ಛಗೊಳಿಸುವುದು ಹೇಗಪ್ಪಾ ಎಂದು ಸ್ಥಳೀಯರು ತಲೆಕೆಡಿಸಿಕೊಂಡಿದ್ದರು. ಎಲ್ಲರೂ ಹುಬ್ಬೆರುವ ರೀತಿಯಲ್ಲಿ ಕೋತಿರಾಜ್ ಆ ಕೆಲಸವನ್ನು ಮಾಡಿ ತೋರಿಸಿದ್ದಾರೆ.
ಜೋಗದಲ್ಲಿ ಬೆಟ್ಟ ಏರುವ ಸಂದರ್ಭ ಗಾಯಗೊಂಡಿದ್ದ ಕೋತಿರಾಜ್ ಸ್ವಲ್ಪ ಸಮಯ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ತಮ್ಮ ಸಾಹಸಗಳಿಗೆ ಕೈ ಹಾಕಿದ್ದಾರೆ. ದುಬೈ ಚೀನಾ ಮುಂತಾದ ದೇಶದ ಬೃಹತ್ ಕಟ್ಟಡಗಳನ್ನು ಏರುವ ಆಸೆ ಹೊಂದಿರುವ ಇವರು, ಅಲ್ಲಿಗೆ ತೆರಳಿ ನಿರಾಸೆಯಿಂದ ವಾಪಾಸ್ ಆಗಿದ್ದಾರೆ. ಜೀವ ಒತ್ತೆಯಿಟ್ಟು ನಡೆಸುವ ತಮ್ಮ ಸಾಹಸಗಳಿಗೆ ಸಾರ್ವಜನಿಕರಿಂದ ಸಹಾಯ ಯಾಚಿಸಿದ್ದಾರೆ. ಇವರ ಸಾಹಸಕ್ಕೆ ಜನರು ಕೈಜೋಡಿಸಿದ್ರೆ ಮಂಕಿಮ್ಯಾನ್ ಮತ್ತಷ್ಟು ಸಾಹಸಗಾಥೆಗಳನ್ನ ಜನರು ನೋಡೋದು ಖಚಿತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ