/newsfirstlive-kannada/media/post_attachments/wp-content/uploads/2025/05/KPSC-Exam-Bangalore-1.jpg)
ಬೆಂಗಳೂರು: ಸದಾ ವಿವಾದಗಳಿಂದಲೇ ಸುದ್ದಿಯಾಗುವ KPSC ಇಂದಿನಿಂದ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನ ನಡೆಸುತ್ತಿದೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ A ಮತ್ತು ಗ್ರೂಪ್ B ವೃಂದದ ಮುಖ್ಯ ಪರೀಕ್ಷೆ ಇದಾಗಿದೆ. ಒಟ್ಟು 384 ಹುದ್ದೆಗಳಿಗೆ ಇಂದಿನಿಂದ 4 ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತಿದೆ. ಗೊಂದಲ, ವಿವಾದಗಳ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಾ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಇಂದು ನಡೆಯುತ್ತಿರುವ ಮೇನ್ಸ್ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ನಿನ್ನೆ ತಡರಾತ್ರಿವರೆಗೂ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿದೆ. ಇಂದು ಮುಂಜಾನೆ 3 ಗಂಟೆಯವರೆಗೂ ಉದ್ಯೋಗ ಸೌಧದಲ್ಲಿ ಹಾಲ್ ಟಿಕೆಟ್ ವಿತರಣೆ ಮಾಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಕೆಲವರಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ. KATನಲ್ಲಿ ಪಿಟಿಷಿಯನ್ ಹಾಕಿದವರಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಸೋಮವಾರ ಕೋರ್ಟ್‌ನಲ್ಲಿ ಈ ಕೇಸ್ ವಿಚಾರಣೆ ಕೂಡ ಇದೆ.
ಕೋರ್ಟ್‌ನಲ್ಲಿ ಕೇಸ್ ವಿಚಾರಣೆ ಇದ್ರೂ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಕೆಪಿಎಸ್‌ಸಿಯ 350 ಅಭ್ಯರ್ಥಿಗಳ ಭವಿಷ್ಯ ಗೊಂದಲಕ್ಕೆ ಸಿಲುಕಿದೆ. ಅಭ್ಯರ್ಥಿಗಳ ಭವಿಷ್ಯದ ಜೊತೆ kpsc ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಲಾಗಿದೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಮಹತ್ವದ ತಿರುವು.. ಪ್ರತೀಕಾರದ ಮಾಸ್ಟರ್ ಮೈಂಡ್ ಹೆಸರು ರಿವೀಲ್..!
ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವೇನು?
ನ್ಯೂಸ್ ಫಸ್ಟ್ ಚಾನೆಲ್‌ಗೆ ಅಭ್ಯರ್ಥಿಗಳಾದ ಪವಿತ್ರಾ ಹಾಗೂ ಶ್ರೀಕೃಷ್ಣ ಎಂಬುವವರು ಮಾತನಾಡಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ನಡೀತಿದೆ. ಸೋಮವಾರ ನ್ಯಾಯಾಲಯ ಅಂತಿಮ ತೀರ್ಪು ಕೊಡುವ ಸಾಧ್ಯತೆ ಇದೆ. 5 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಒಟ್ಟು 70 ಸಾವಿರ ಕನ್ನಡದ ಅಭ್ಯರ್ಥಿಗಳಿದ್ದಾರೆ. ಈಗ 65 ಸಾವಿರಕ್ಕೂ ಅಧಿಕ ಕನ್ನಡದ ವಿದ್ಯಾರ್ಥಿಗಳು ಪರೀಕ್ಷೆ ಬರೀಬೇಕು ಅಂದ್ರೆ ಮತ್ತೆ ಕೋರ್ಟ್ ಹೋಗಬೇಕು. ಈಗ ಕೋರ್ಟ್‌ಗೆ ಹೋದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಇದೇನಾ ಸಿಎಂ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯ? ಕನ್ನಡದ ಮಕ್ಕಳಿಗೆ ಕೆಪಿಎಸ್‌ಸಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪು ತಪ್ಪಾಗಿ ಪ್ರಶ್ನೆ ಕೊಟ್ಟು ಭಾಷಾಂತರ ತಪ್ಪಾಗಿ ಮಾಡಿ ನಮಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ. ಇವೆಲ್ಲದರ ನಡುವೆ ಕೆಪಿಎಸ್‌ಸಿ ಮೇನ್ಸ್‌ಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದು ಅನ್ಯಾಯ.. ಅನ್ಯಾಯ.. ನಮಗೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ