/newsfirstlive-kannada/media/post_attachments/wp-content/uploads/2025/06/KRS-11.jpg)
ಮಂಡ್ಯ: ಹಳೇ ಮೈಸೂರು ಜೀವನಾಡಿ ಕೆಆರ್‌ಎಸ್ (Krishna Raja Sagara) ಡ್ಯಾಮ್ ತುಂಬುವ ಹಂತಕ್ಕೆ ಬಂದಿದೆ. ಇನ್ನೇನು ನಾಲ್ಕು ಅಡಿ ನೀರು ಬಂದರೆ ಡ್ಯಾಂ ಸಂಪೂರ್ಣ ಭರ್ತಿ ಆಗಲಿದೆ.
ಮುಂಗಾರು ಮಳೆಯ ಆರಂಭದಲ್ಲಿಯೇ ಡ್ಯಾಂ ಭರ್ತಿಯಾಗುತ್ತಿರೋದು ರಾಜ್ಯದ ಅನ್ನದಾತರಿಗೆ ಶುಭ ಸುದ್ದಿಯಾಗಿದೆ. ಈಗಾಗಲೇ 121 ಅಡಿ ತುಂಬಿರುವ ಕೆಆರ್‌ಎಸ್ ಡ್ಯಾಮ್ನ ಸಂಪೂರ್ಣ ಭರ್ತಿಗೆ 4 ಅಡಿ ನೀರು ಮಾತ್ರ ಬಾಕಿಯಿದೆ.
ಡ್ಯಾಂ ಸುರಕ್ಷತೆಗಾಗಿ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. 19 ಗೇಟ್ ಮೂಲಕ 33 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ಸುರಕ್ಷತಾ ದೃಷ್ಟಿಯಿಂದ ಒಳ ಹರಿವಿನಷ್ಟೇ ಹೊರಹರಿವು ಬಿಡಲಾಗುತ್ತಿದೆ.
ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಕಾವೇರಿ ಭೋರ್ಗರೆಯುತ್ತಿದ್ದಾಳೆ. ಗೇಟ್ನಿಂದ ಬಂಡೆಗಳಿಗೆ ಚಿಮ್ಮುತ್ತಿರುವ ರಮಣೀಯ ದೃಶ್ಯವನ್ನು ನೋಡೋದೇ ಒಂದು ಹಬ್ಬ. ಮತ್ತೊಂದೆಡೆ ನದಿ ನೀರಿನಲ್ಲಿ ಏರಿಕೆ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ.
ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಬಲಮುರಿ, ಎಡಮುರಿ, ಸಂಗಮ, ಗೋಸಾಯಿ ಘಾಟ್ಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಸ್ತಿ ವಿಸರ್ಜನೆ ಕಾರ್ಯಕ್ಕೂ ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಬ್ರೇಕ್ ಹಾಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ