/newsfirstlive-kannada/media/post_attachments/wp-content/uploads/2025/06/KRS_DAM.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಒಳ ಹರಿವು ಭಾರೀ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಪ್ರವಾಸಿ ತಾಣಗಳಿಗೆ ನಿರ್ಬಂಧ ಹಾಕಲಾಗಿದೆ.
ಕೆಆರ್‌ಎಸ್ ಡ್ಯಾಂ ಈಗಾಗಲೇ ಭರ್ತಿಯಂಚಿಗೆ ತಲುಪಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯ, ಸದ್ಯ 121 ಅಡಿಯಷ್ಟು ನೀರು ತುಂಬಿ ಕಂಗೊಳಿಸುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಕಾವೇರಿ ನದಿಗೆ 29 ಸಾವಿರ ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ:ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ದಿನ ಮುಂದೂಡಿಕೆ.. ಕಾರಣವೇನು?
ಪ್ರವಾಹ ಭೀತಿ ಎದುರಾಗುವ ಹಿನ್ನೆಲೆಯಲ್ಲಿ ಡ್ಯಾಂನ ಒಳ ಹರಿವು ಹೆಚ್ಚಾದಂತೆ ಹೊರ ಹರಿವು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಜೋರಾಗಿ ಬೀಳುತ್ತಿದೆ. ಇದರಿಂದ ಜಲಾಶಯವು 121 ಅಡಿ ಭರ್ತಿಯಾಗಿದ್ದು ಗಂಟೆ ಗಂಟೆಗೂ ಒಳ ಹರಿವು ಹೆಚ್ಚಾಗುತ್ತಿದೆ. ಸದ್ಯ ಕೆಆರ್ಎಸ್ಗೆ 20,315ಕ್ಕೂ ಹೆಚ್ಚು ಒಳ ಹರಿವು ಇದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ನೀರಿನ ಮಟ್ಟ 50 ಕ್ಯೂಸೆಕ್ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಇರುವುದರಿಂದ ಶ್ರೀರಂಗಪಟ್ಟಣ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ನದಿ ಪಾತ್ರದಲ್ಲಿ ಬರುವ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಸಂಗಮ, ಗೋಸಾಯಿ ಘಾಟ್ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ನಿಮಿಷಾಂಭ, ಶ್ರೀಗಂಗನಾಥ ದೇವಾಲಯದ ಸ್ನಾನಘಟ್ಟಗಳಿಗೂ ನಿರ್ಬಂಧ ವಿಧಿಸಲಾಗಿದೆ ಎಂದು ಶ್ರೀರಂಗಪಟ್ಟಣದ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ