/newsfirstlive-kannada/media/post_attachments/wp-content/uploads/2025/07/KSCA-AUCTIONs.jpg)
ಕೆಎಸ್ಸಿಎ ಮಹಾರಾಜ T20 ಟ್ರೋಫಿ ಸೀಸನ್-4 ಆಟಗಾರರ ಹರಾಜು ಪ್ರಕ್ರಿಯೆಗೆ, ಅದ್ಧೂರಿ ತೆರೆ ಬಿದ್ದಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು, ಲಕ್ಷ ಲಕ್ಷ ಹಣ ಕೊಟ್ಟು ಸ್ಟಾರ್ ಆಟಗಾರರನ್ನ ಖರೀದಿಸಿದ್ರು. ಈ ಬಾರಿ ಯಾವ ಆಟಗಾರನಿಗೆ ಹೊಸ ಫ್ರಾಂಚೈಸಿ ಸಿಕ್ಕಿದೆ? ಯಾವೆಲ್ಲಾ ಆಟಗಾರು ಎಷ್ಟು ಮೊತ್ತಕ್ಕೆ ಸೇಲಾದ್ರು? ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಲಕ್ಕಿ ಆಟಗಾರ ಯಾರು ಅನ್ನೋ ವಿವರ ಇಲ್ಲಿದೆ.
ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ತಮ್ಮ ತಮ್ಮ ತಂಡಗಳನ್ನ ಮತ್ತಷ್ಟು ಬಲಿಷ್ಟಗೊಳಿಸಲು, ಫ್ರಾಂಚೈಸಿ ಮಾಲೀಕರು ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿಸಿದ್ದಾರೆ. ಸೂಪರ್ಬ್ ಪ್ರಿಪರೇಶನ್, ವೆಲ್ ಪ್ಲಾನ್ಡ್ ಮತ್ತು ಗ್ರೇಟ್ ಸ್ಟ್ರಾಟಜಿಯೊಂದಿಗೆ ಆಕ್ಷನ್ ಟೇಬಲ್ಗೆ ಎಂಟ್ರಿ ಕೊಟ್ಟಿದ್ದ ಫ್ರಾಂಚೈಸಿ ಓನರ್ಸ್, ಚಾಣಾಕ್ಷತನದಿಂದ ಆಟಗಾರರ ಖರೀದಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ರು.
ಇದನ್ನೂ ಓದಿ: ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್ ಫೇವರಿಟ್..!
ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ, ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಹೆಚ್ಚು ಡಿಮ್ಯಾಂಡ್ ಇತ್ತು. ಅದ್ರಲ್ಲೂ ಐಪಿಎಲ್ ಆಡಿದ ಆಟಗಾರರನ್ನ, ಫ್ರಾಂಚೈಸಿ ಮಾಲೀಕರು ಖರೀದಿಸಲು ಹೆಚ್ಚು ಆಸಕ್ತಿ ತೋರಿಸಿದ್ರು.
ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು
ಬಿಡ್ಡಿಂಗ್ ವಾರ್ನಲ್ಲಿ ದೇವದತ್ ಪಡಿಕ್ಕಲ್ 13.20 ಲಕ್ಷ ರೂಪಾಯಿಗೆ ಹುಬ್ಬಳ್ಳಿ ಟೈಗರ್ಸ್ ಪಾಲಾದರು. ಮನೀಶ್ ಪಾಂಡೆ 12.20 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ಗೆ ಸೇಲಾದ್ರೆ, ಅಭಿನವ್ ಮನೋಹರ್ ಸಹ 12.20 ಲಕ್ಷ ರೂಪಾಯಿಗೆ, ಹುಬ್ಬಳ್ಳಿ ಟೈಗರ್ಸ್ ತಂಡ ಸೇರಿಕೊಂಡ್ರು. ವೇಗಿ ವಿಧ್ವತ್ ಕಾವೇರಪ್ಪರನ್ನ ಶಿವಮೊಗ್ಗ ಲಯನ್ಸ್ 10.80 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದ್ರೆ, ಲೆಗ್ಸ್ಪಿನ್ನರ್ ಶ್ರೇಯಸ್ ಗೋಪಾಲ್, 8.60 ಲಕ್ಷಕ್ಕೆ ಮಂಗಳೂರು ಡ್ರ್ಯಾಗನ್ಸ್ ಫ್ರಾಂಚೈಸಿಗೆ ಎಂಟ್ರಿ ಕೊಟ್ಟಿದ್ದಾರೆ.
ಯುವ ಆಟಗಾರರೂ ತಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಗಮನ ಸೆಳೆದು ಲಕ್ಷ ಲಕ್ಷ ಪಡೆದುಕೊಂಡ್ರು. ಯುವ ವೇಗಿ ವಿದ್ಯಾಧರ್ ಪಾಟೀಲ್ 8.30 ಲಕ್ಷ ರೂಪಾಯಿ ಪಡೆದುಕೊಂಡ್ರೆ, ಆಲ್ರೌಂಡರ್ ಅನಿಶ್ವರ್ ಗೌತಮ್ 8.20 ಲಕ್ಷಕ್ಕೆ, ಶಿವಮೊಗ್ಗ ತಂಡಕ್ಕೆ ಸೇರ್ಪಡೆಯಾದ್ರು. ಉಳಿದಂತೆ ಸಿದ್ಧಾರ್ಥ್ ಕೆ.ವಿ 6.10 ಲಕ್ಷಕ್ಕೆ ಗುಲ್ಬರ್ಗ ಮಿಸ್ಟಿಕ್ಸ್, ಕ್ರಾಂತಿ ಕುಮಾರ್ 5.60 ಲಕ್ಷಕ್ಕೆ ಮಂಗಳೂರು ಡ್ರ್ಯಾಗನ್ಸ್, ಚೇತನ್ ಎಲ್.ಆರ್ 5.10 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್, ಮೋನಿಶ್ ರೆಡ್ಡಿ 4.65 ಲಕ್ಷಕ್ಕೆ ಗುಲ್ಬರ್ಗ ಮಿಸ್ಟಿಕ್ಸ್, ಮೊಹಮ್ಮದ್ ತಾಹ 4.60 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್ ಮತ್ತು ಕೃಷ್ಣಪ್ಪ ಗೌತಮ್ 4.40 ಲಕ್ಷ ರೂಪಾಯಿಗೆ ಮೈಸೂರು ವಾರಿಯರ್ಸ್ ಪಾಲಾದ್ರು.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣ ರಿವೀಲ್; ಸಚಿನ್ ನಿವೃತ್ತಿ ಬಳಿಕ ಇದೊಂದೇ ದೊಡ್ಡ ಪ್ರಾಬ್ಲಂ..!
ಆಟಗಾರರನ್ನ ಫ್ರಾಂಚೈಸಿ ಮಾಲೀಕರು ಹರಾಜಿನಲ್ಲಿ ಖರೀದಿಸಿದ್ರೆ, ತಂಡಗಳು ಕೆಲ ಆಟಗಾರರನ್ನ ರೀಟೈನ್ ಮಾಡಿಕೊಂಡಿವೆ. ಮಂಗಳೂರು ಡ್ರ್ಯಾಗನ್ಸ್, ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೋರೋನ್ಹಾ, ಲೋಚನ್ ಗೌಡ, ಪರಾಸ್ ಆರ್ಯರನ್ನ ರೀಟೈನ್ ಮಾಡಿಕೊಂಡಿದ್ರೆ, ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ನವೀನ್ ಎಂ.ಜಿ, ಸೂರಜ್ ಅಹುಜಾರನ್ನ ತಮ್ಮಲ್ಲೇ ಉಳಿಸಿಕೊಂಡಿತ್ತು.
ಗುಲ್ಬರ್ಗ ಮಿಸ್ಟಿಕ್ಸ್, ವೈಶಾಕ್ ವಿಜಯ್ ಕುಮಾರ್, ಸಮರ್ಥ್ ಆರ್.ಲುನ್ವಿತ್ ಸಿಸೋಡಿಯಾ, ಪ್ರವೀಣ್ ದುಬೆಯಂತಹ ಸ್ಟಾರ್ ಆಟಗಾರರನ್ನ ರೀಟೈನ್ ಮಾಡಿಕೊಂಡಿದ್ರೆ, ಹುಬ್ಳಳ್ಳಿ ಟೈಗರ್ಸ್ ಕೆ.ಸಿ.ಕಾರಿಯಪ್ಪ, ಮನ್ವಂತ್ ಕುಮಾರ್, ಶ್ರೀಜೀತ್ ಕೆ.ಎಲ್.ಕಾರ್ತಿಕ್ ಕೆ.ಪಿರಂತಹ ಟಿ-ಟ್ವೆಂಟಿ ಫಾರ್ಮೆಟ್ಗೆ ಹೇಳಿ ಮಾಡಿಸಿದ ಆಟಗಾರರ ಮೇಲೆ ನಂಬಿಕೆ ಇಟ್ಟುಕೊಂಡಿತ್ತು.
ಇದನ್ನೂ ಓದಿ: ಜಾಗೃತಿ ವಿಡಿಯೋ ಡಿಲೀಟ್! ಕ್ಷಮೆ ಕೇಳಿ ಬೇಸರ ಹೊರ ಹಾಕಿದ ಶಿಕ್ಷಕಿ ವಂದನಾ ರೈ..!
ಮೈಸೂರ್ ವಾರಿಯರ್ಸ್ ತಂಡದಲ್ಲಿ, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಕಾರ್ತಿಕ್ ಸಿ.ಎ, ಕಾರ್ತಿಕ್ ಎಸ್.ಯು ಮುಂದುವರೆದ್ರೆ, ಶಿವಮೊಗ್ಗ ಲಯನ್ಸ್ ಕೌಶಿಕ್ ವಿ. ನಿಹಾಲ್ ಉಲ್ಲಾಳ್, ಹಾರ್ದಿಕ್ ರಾಜ್, ಅವಿನಾಶ್.ಡಿ ಮೇಲೆ ಭರವಸೆ ಇಟ್ಟುಕೊಂಡಿದೆ.
ಯುವ ಕ್ರಿಕೆಟಿಗರಿಗೆ ತಮ್ಮ ಟ್ಯಾಲೆಂಟ್ ತೋರಿಸಲು ಕೆಎಸ್ಸಿಎ ಮಹಾರಾಜ T20 ಟ್ರೋಫಿ, ಉತ್ತಮ ವೇದಿಕೆಯಾಗಿದೆ. ಈ ಪ್ರತಿಷ್ಟಿತ ಟೂರ್ನಿಯಲ್ಲಿ ಆಟಗಾರರು ಮಿಂಚಿದ್ರೆ, ಅದೃಷ್ಟ ಬದಲಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ