/newsfirstlive-kannada/media/post_attachments/wp-content/uploads/2025/02/MYS_KUMBHA-1.jpg)
ರಾಜ್ಯ ಸರ್ಕಾರ ನಾಡಿನ ಜನತೆಗೆ ಸಿಹಿಸುದ್ದಿ ನೀಡಿದೆ. ಉತ್ತರಪ್ರದೇಶದ ಪ್ರಯಾಗರಾಜ್ಗೆ ತೆರಳಿ ಪುಣ್ಯಸ್ನಾನ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಕೊರಗುತ್ತಿದ್ದವರಿಗೆ ಕರುನಾಡಿನ ಮಣ್ಣಿನಲ್ಲೇ ಕುಂಭಮೇಳವನ್ನ ಕಣ್ತುಂಬಿಕೊಳ್ಳುವ ಸೌಭಗ್ಯವನ್ನ ಒದಗಿಸಿಕೊಟ್ಟಿದೆ. ಅಷ್ಟಕ್ಕೂ ಈ ಕುಂಭಮೇಳ ಜರುಗುತ್ತಿರುವುದು ಎಲ್ಲಿ?.
ಮಹಾಕುಂಭಮೇಳ.. ಸದ್ಯ ಈ ಶಬ್ಧ ಇಡೀ ವಿಶ್ವವನ್ನೇ ಭಾರತದತ್ತ ತಿರುಗಿನೋಡುವಂತೆ ಮಾಡಿದೆ.. ಸನಾತನ ಧರ್ಮದ ಕೀರ್ತಿಪತಾಕೆಯನ್ನ ಆಕಾಶದೆತ್ತರಕ್ಕೆ ಪುಟಿದೆಬ್ಬಿಸಿರೋ ಈ ಮಹಾಮೇಳ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಹೊಸ ದೃಶ್ಯಕಾವ್ಯವನ್ನೇ ಸೃಷ್ಟಿಸಿದೆ.
ಮಹಾಕುಂಭಮೇಳ ಜಗತ್ತಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ದಾಖಲೆಗಳನ್ನ ಸರಿಗಟ್ಟಿದೆ. ಕೋಟಿ ಕೋಟಿ ಭಕ್ತರ ಮಹಾಸಂಗಮ ಹಾಗೂ ಲಕ್ಷಾಂತರ ಸಾಧು-ಸಂತರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿರೋ ಈ ಮಹಾಮೇಳ ಅದೆಷ್ಟೋ ಜನರಿಗೆ ಕನಸಾಗೇ ಉಳಿದಿದೆ. ಕುಂಭಮೇಳವನ್ನ ಕಾಣಲಾಗಲಿಲ್ಲವಲ್ಲ ಎಂಬ ಕೊರಗಿನಲ್ಲಿರೋ ಕರುನಾಡಿನ ಜನತೆಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ.
ಕರುನಾಡಿನಲ್ಲೂ ಕಳೆಗಟ್ಟಿದ ಕುಂಭಮೇಳದ ವೈಭವ!
ಮಹಾಕುಂಭಮೇಳವನ್ನ ಮಿಸ್ ಮಾಡಿಕೊಂಡ ಕುರುನಾಡ ಜನೆತೆಗೆ ಸರ್ಕಾರ ಬಂಪರ್ ಗಿಫ್ಟ್ ಒಂದನ್ನ ನೀಡಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರೋ ಮಹಾಕುಂಭಮೇಳಕ್ಕೆ ತೆರಳಲು ಆಗದೇ ಇರುವಂತವರು ಕರುನಾಡ ಮಣ್ಣಿನಲ್ಲೇ ಕುಂಭಮೇಳದ ವೈಭವ ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿಬಂದಿದೆ. ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಕುಂಭಮೇಳ ಏರ್ಪಡಿಸಲಾಗಿದೆ. ಕಾವೇರಿ, ಕಪಿಲ ಹಾಗೂ ಸ್ಫಟಿಕ ನದಿಗಳು ಸೇರುವ ಅಪರೂಪದ ಜಾಗದಲ್ಲಿ ಇಂದಿನಿಂದ 3 ದಿನಗಳ ಕಾಲ ಕುಂಭಮೇಳ ನಡೆಯಲಿದೆ.
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ 6 ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕುಂಭಮೇಳದ ಅಂಗವಾಗಿ ಸಕಲ ಸಿದ್ಧತೆ ಕೈಗೊಂಡಿದೆ. ಇಂದು ಬೆಳಗ್ಗೆ 9 ರಿಂದ 9.30ರೊಳಗೆ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:Aero Show; 100 ದೇಶಗಳು ಭಾಗಿ.. ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ..!
ಹಲವೆಡೆ ಮುಳುಗುತಜ್ಞರ ನಿಯೋಜನೆ
ಕುಂಭಮೇಳದ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವೇದಿಕೆ, ಲೈಟಿಂಗ್ಸ್ ಅಳವಡಿಕೆ ಮಾಡಲಾಗಿದೆ. ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗುತಜ್ಞರನ್ನ ನಿಯೋಜನೆ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಾರ ಇದಕ್ಕಾಗಿ 6 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಇಂದು ತ್ರಯೋದಶಿ ಹಿನ್ನೆಲೆ ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಥಿತಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.. ಮೈಸೂರಿನಲ್ಲಿ ನಡೆಯುತ್ತಿರೋ ಮಿನಿಕುಂಭಮೇಳ ಹೊಸ ಬಾಷ್ಯ ಬರೆಯಲು ಅಣಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ