/newsfirstlive-kannada/media/post_attachments/wp-content/uploads/2025/07/KPL_CHANDRU_2.jpg)
ಕೊಪ್ಪಳ: ಹೃದಯಾಘಾತದಿಂದ ಉಸಿರು ಚೆಲ್ಲುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಹಾಸನದಲ್ಲಿ ಹಾರ್ಟ್​ ಅಟ್ಯಾಕ್​ನಿಂದ ನಿಧನ ಹೊಂದುತ್ತಿರುವವರ ಘಟನೆ ಎಲ್ಲ ಕಡೆ ಹಬ್ಬಿತ್ತು. ರಾಜ್ಯದ ಕೆಲ ಜಿಲ್ಲೆಗಳಲ್ಲೂ ಹೃದಯಾಘಾತದ ಘಟನೆಗಳು ದಾಖಲಾಗುತ್ತಿವೆ. ಇದೀಗ ಕೊಪ್ಪಳದಲ್ಲಿ ಶಾಸಕರ ಪಿಎ ಒಬ್ಬರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ನಿವಾಸಿ ಚಂದ್ರಕಾಂತ ವಡ್ಡಿಗೇರಿ (46) ಉಸಿರು ಚೆಲ್ಲಿದ್ದಾರೆ. ಇವರು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಬಳಿ ಪಿಎ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 20 ವರ್ಷಗಳಿಂದ ದೊಡ್ಡನಗೌಡ ಪಾಟೀಲ್​ರ ಬಳಿಯೇ ಕೆಲಸ ಮಾಡುತ್ತಿದ್ದ ಚಂದ್ರಕಾಂತ ವಡ್ಡಿಗೇರಿ ಅವರಿಗೆ ಮೊದಲು ಎದೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಅವರನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಂದ್ರಕಾಂತ ವಡ್ಡಿಗೇರಿ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಶಾಸಕ ದೊಡ್ಡನಗೌಡ ಪಾಟೀಲ್ ಅವರು ತೀವ್ರ ದುಃಖಿತರಾಗಿದ್ದಾರೆ. ಚಂದ್ರಕಾಂತ ವಡ್ಡಿಗೇರಿ ಅವರು ಪುರಸಭೆ ಮಾಜಿ ಸದಸ್ಯರೂ ಆಗಿದ್ದರು.
ಈ ಬಗ್ಗೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಆಪ್ತ ಸಹಾಯಕನಾಗಿ, ಕುಷ್ಟಗಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚಟುವಟಿಕೆಯಿಂದ ಸಕ್ರಿಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ವಡ್ಡಿಗೇರಿ ಇಂದು ನಮ್ಮನ್ನು ಅಗಲಿದ ಸುದ್ದಿ ಅತೀವ ದುಃಖ ತಂದಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಆತನಿಲ್ಲದ ನಮ್ಮ ಕಚೇರಿ, ಪಕ್ಷದ ಕಾರ್ಯಾಲಯವನ್ನು ಊಹಿಸಿಕೊಳ್ಳಲು ಅಸಾಧ್ಯ. ನೀರವ ಮೌನ, ದುಃಖ, ಬೇಸರ ಆವರಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ