/newsfirstlive-kannada/media/post_attachments/wp-content/uploads/2024/11/Nayana-tara-Dhanush.jpg)
ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಧನುಷ್ ಫೈಟ್ ಶುರುವಾಗಿದೆ. ಧನುಷ್ ವಿರುದ್ಧ ಸಿಡಿದೆದ್ದ ನಯನತಾರಾ ಅವರು ಬಹಿರಂಗ ಪತ್ರ ಬರೆದು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ನಯನತಾರಾ ವರ್ಸಸ್ ಧನುಷ್ ಬಹಿರಂಗ ಸಮರ ಕುತೂಹಲಕ್ಕೆ ಕಾರಣವಾಗಿದೆ.
ನಯನತಾರಾ ಅವರು ನೆಟ್‌ಫ್ಲಿಕ್ಸ್‌ನಲ್ಲಿ ಒಂದು ಡಾಕ್ಯುಮೆಂಟರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದರ ಹೆಸರು ನಯನತಾರಾ- ಬಿಯಾಂಡ್ ಫೈರಿಟೇಲ್. ಈ ಡಾಕ್ಯುಮೆಂಟರಿಗೆ 2015ರಲ್ಲಿ ಬಿಡುಗಡೆಯಾಗಿದ್ದ ನಾನುಂ ರೌಡಿ ದಾನ ಸಿನಿಮಾದ ತೆರೆ ಹಿಂದಿನ ದೃಶ್ಯ ಬಳಕೆಗೆ ನಯನತಾರಾ ಅವರು ಅನುಮತಿ ಕೋರಿದ್ದರು.
ನಾನುಂ ರೌಡಿ ದಾನ ಸಿನಿಮಾದಲ್ಲಿ ನಟಿ ನಯನತಾರಾ ಅವರು ನಟಿಸಿದ್ದರು. ಹೀಗಾಗಿ ಸಿನಿಮಾದ ತೆರೆ ಹಿಂದಿನ ವಿಡಿಯೋ ಬಳಕೆಗೆ ನಯನತಾರಾ ಅನುಮತಿ ಕೋರಿದ್ದರು. ಆದರೆ ನಟ ಧನುಷ್ ಅವರು ಆ ದೃಶ್ಯ ಬಳಕೆಗೆ ಅನುಮತಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ನಯನತಾರಾಗೆ ಲೀಗಲ್ ನೋಟಿಸ್ ಕಳಿಸಿ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಭಾಸ್, ರಜಿನಿಕಾಂತ್‌ಗೆ ಪುಷ್ಪರಾಜ್ ಸೆಡ್ಡು; ಅಲ್ಲು ಅರ್ಜುನ್ ಸಂಭಾವನೆ ಈಗ ಎಷ್ಟು ಕೋಟಿ?
ರೊಚ್ಚಿಗೆದ್ದ ಲೇಡಿ ಸೂಪರ್ ಸ್ಟಾರ್!
ಧನುಷ್ ಅವರ ನೋಟಿಸ್‌ಗೆ ರೊಚ್ಚಿಗೆದ್ದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಧನುಷ್‌ಗೆ ಈ ಬಹಿರಂಗ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ನಯನತಾರಾ- ಬಿಯಾಂಡ್ ಫೈರಿಟೇಲ್ ಡಾಕ್ಯುಮೆಂಟರಿಯಲ್ಲಿ 2015ರ ಸಿನಿಮಾದ ದೃಶ್ಯಗಳಿಲ್ಲದೆ ಡಾಕ್ಯುಮೆಂಟರಿ ಎಡಿಟ್ ಮಾಡಿಸಿದ್ದಾರೆ.
ನಯನತಾರಾ ಪತ್ರದಲ್ಲಿ ಏನಿದೆ?
ನಯನತಾರಾ ಅವರು ಧನುಷ್‌ಗೆ ಬರೆದ ಪತ್ರದಲ್ಲಿ ನೀವು ತೀರಾ ಕೆಳಮಟ್ಟಕ್ಕೆ ಇಳಿದಿದ್ದೀರಿ. ಇದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತೆ. ನೀವು ಏನನ್ನು ಹೇಳುತ್ತಿರೋ ಅದನ್ನು ಪಾಲಿಸಲ್ಲ. ಆಡಿಯೋ ಲಾಂಚ್‌ನಲ್ಲಿ ಅಭಿಮಾನಿಗಳ ಎದುರಿಗೆ ಬಿಂಬಿತವಾಗುವಂತೆ ನೀವು ಇಲ್ಲ. ನನ್ನ ವಿರುದ್ಧ ನಿಮಗೆ ಪ್ರತೀಕಾರ ಯಾಕೆ ಎಂದು ನಯನತಾರಾ ಪ್ರಶ್ನಿಸಿದ್ದಾರೆ.
ನಿಮಗೆ ಗೊತ್ತಿರುವ ವ್ಯಕ್ತಿಗಳ ಯಶಸ್ಸಿನಿಂದ ನಿಮ್ಮ ಅಂತರಾತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಜಗತ್ತು ವಿಶಾಲವಾಗಿದೆ. ಜಗತ್ತು ಎಲ್ಲರಿಗೂ ಸೇರಿದೆ. ಬೇರೆಯವರ ಸುಖ, ಸಂತೋಷದಲ್ಲಿ ನಮ್ಮ ಸುಖ, ಸಂತೋಷ ಇದೆ. ನನ್ನ ಬಗೆಗಿನ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯನ್ನು ನೋಡಲು ನಿಮಗೆ ಸಲಹೆ ನೀಡುತ್ತಿದ್ದೇನೆ. ಇದರಿಂದ ನೀವು ಬದಲಾಗಬಹುದು ಅನ್ನೋ ನಂಬಿಕೆ ನನಗಿದೆ. ನಮಗೆ ಪ್ರೀತಿಯನ್ನು ಹಂಚುವುದು ಮುಖ್ಯ. ಮುಂದೊಂದು ದಿನ ನೀವು ಪ್ರೀತಿಯನ್ನು ಹಂಚುತ್ತೀರಿ ಎಂಬ ಭರವಸೆ ಇದೆ ಎಂದು ನಯನತಾರಾ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಯನತಾರಾ ಅವರ ಈ ಬಹಿರಂಗ ಪತ್ರ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಪತ್ರಕ್ಕೆ ನಟ ಧನುಷ್ ಅವರು ಏನ್ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಈಗ ಪ್ರಮುಖವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ