/newsfirstlive-kannada/media/post_attachments/wp-content/uploads/2025/06/Business-Idea1.jpg)
ಬಹಳಷ್ಟು ಮಂದಿಗೆ ಉದ್ಯಮ ಆರಂಭಿಸಬೇಕೆಂಬ ಆಸೆ, ಗುರಿ ಇದೆ. ಆದರೇ, ಹೇಗೆ ಉದ್ಯಮ ಆರಂಭಿಸಬೇಕೆಂದೇ ಗೊತ್ತಾಗದೇ ತೊಳಲಾಡುತ್ತಿದ್ದಾರೆ. ಅಂಥವರಿಗಾಗಿ ಈ ವಿಶೇಷ ಲೇಖನ. ಈ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಯಮ ಆರಂಭಿಸು, ಉದ್ಯೋಗ ನೀಡು ಹೆಸರಿನ ಕಾರ್ಯಾಗಾರವನ್ನು ಕರ್ನಾಟಕ ಸರ್ಕಾರ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಖ್ಯಾತನಾಮ ಉದ್ಯಮಿಗಳು ತಮ್ಮ ಯಶಸ್ಸಿನ ಕಥೆಯನ್ನು ಯುವ ಜನತೆಯ ಮುಂದೆ ಬಿಚ್ಚಿಟ್ಟಿದ್ದರು. ಉದ್ಯಮ ಆರಂಭಿಸುವವರಿಗೆ ಸ್ಪೂರ್ತಿ, ಪ್ರೇರಣೆ ನೀಡುವ ಮಾತುಗಳನ್ನಾಡಿದ್ದರು. ಜೊತೆಗೆ ಮಾರುಕಟ್ಟೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಜನರ ಸಮಸ್ಯೆಗಳನ್ನ ಹೇಗೆ ಅರ್ಥ ಮಾಡಿಕೊಂಡು ಅವುಗಳಿಗೆ ಹೇಗೆ ಪರಿಹಾರ ನೀಡಿದರೇ, ಯಶಸ್ಸು ಸಿಗುತ್ತೆ ಎಂಬುದನ್ನು ತಮ್ಮ ಅನುಭವದ ಆಧಾರದ ಮೇಲೆ ವಿವರಿಸಿ ಹೇಳಿದ್ದರು.
ಇದನ್ನೂ ಓದಿ: ಗುಡ್ನ್ಯೂಸ್; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ
ಯಶಸ್ವಿ ಉದ್ಯಮಿಗಳ ಅನುಭವ, ಮಾರ್ಗದರ್ಶನ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಖಂಡಿತ ಮಾರ್ಗದರ್ಶಿಯಾಗುತ್ತೆ. ಹಾಗಾಗಿ ಯಶಸ್ವಿ ಅನುಭವಿಗಳ ಮಾತು, ಇಂದಿಗೂ, ಎಂದೆಂದಿಗೂ ಪ್ರಸ್ತುತ. ಹಾಗಾಗಿ ಉದ್ಯಮ(ಬ್ಯುಸಿನೆಸ್) ಆರಂಭಿಸಬೇಕು. ಜೀವನದಲ್ಲಿ ಯಶಸ್ಸು ಗಳಿಸಬೇಕು, ನಮ್ಮನ್ನು ಕಾಲೆಳೆಯುವರೇ ನಮ್ಮ ಸುತ್ತ ತುಂಬಿರುವಾಗ ಜೀವನದಲ್ಲಿ ಹೇಗೆ ಮುಂದೆ ಬರಬೇಕು ಎಂದು ಆಲೋಚಿಸುತ್ತಾ ಕುಳಿತಿರುವವರಿಗೆ ಈ ಲೇಖನ ಹೊಸ ಐಡಿಯಾ, ಬ್ಯುಸಿನೆಸ್ ಹಾದಿಯನ್ನು ತೋರಿಸುತ್ತೆ. ಬ್ಯುಸಿನೆಸ್ ನಲ್ಲಿ ಯಾವ ತಪ್ಪು ಮಾಡಬಾರದು, ಹೇಗೆ ಮುನ್ನೆಡೆಯಬೇಕು ಎಂಬ ಹಾದಿಯನ್ನ ತೋರಿಸುತ್ತೆ.
ಯಾವ್ಯಾವ ಯಶಸ್ವಿ ಉದ್ಯಮಿಗಳು ಯುವ ಜನತೆಗೆ ಹೇಳಿದ್ದೇನು? ಅನ್ನುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಜೀವನದಲ್ಲಿ ಅಳವಡಿಸಿಕೊಂಡು ಉದ್ಯಮ ಆರಂಭಿಸಿ. ಜೀವನದಲ್ಲಿ ಮುಂದೆ ಬನ್ನಿ. ನಿಮ್ಮ ಕಾಲೆಳೆಯುವವರಿಗೆ ನಿಮ್ಮ ಸಾಧನೆ, ಯಶಸ್ಸಿನ ಮೂಲಕ ಉತ್ತರ ನೀಡಿ.
ಉದ್ಯಮ ಆರಂಭಿಸುವ ಮುನ್ನ ಏನು ಮಾಡಬೇಕು?
ಉದ್ಯಮ ಆರಂಭಿಸುವ ಮೊದಲು ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡಬೇಕು. ಬಳಿಕ ಯಾವ ಸಮಸ್ಯೆಗೆ ನೀವು ಪರಿಹಾರ ಕೊಡುತ್ತೀರಿ, ಹೇಗೆ ಪರಿಹಾರ ಕೊಡುತ್ತೀರಿ ಎಂಬುದು ಮುಖ್ಯ. ಆದಾದ ಬಳಿಕ ಅದನ್ನು ಎಷ್ಟರಮಟ್ಟಿಗೆ ವಿಸ್ತರಣೆ ಮಾಡುತ್ತೀರಿ ಎಂಬುದು ಮುಖ್ಯ. ಇವಿಷ್ಟು ನಡೆದರೇ, ಬಂಡವಾಳ ತಾನಾಗಿಯೇ ಹರಿದು ಬರುತ್ತೆ. ಭಾರತದಲ್ಲಿ ಈಗ ಬಂಡವಾಳಕ್ಕೆ ಕೊರತೆ ಇಲ್ಲ. ಬಂಡವಾಳ ಸಮಸ್ಯೆಯೂ ಅಲ್ಲ ಎಂದು ಉದ್ದಿಮೆ ಆರಂಭಿಸುವ ಆಕಾಂಕ್ಷೆಯಿಂದ ಬೆಂಗಳೂರಿನ ಅರಮನೆಯಲ್ಲಿ ಸೇರಿದ್ದ 6 ಸಾವಿರ ಯುವಜನತೆಗೆ ಹೇಳಿದವರು Fisdom APP ಸಿಇಒ ಮತ್ತು ಸಹ ಸಂಸ್ಥಾಪಕ ಎಸ್.ವಿ.ಸುಬ್ರಮಣ್ಯ.
ಮತ್ತೊಂದು ಉದ್ಯಮ ಯಶಸ್ಸಿನ ಕಥೆಯನ್ನು ಹಂಚಿಕೊಂಡವರು ಅಪ್ರಮೇಯ ರಾಧಾಕೃಷ್ಣ. ಟ್ವಿಟರ್ಗೆ ದೇಶಿಯ ಪರ್ಯಾಯ ಎನಿಸಿಕೊಂಡಿರುವ ಸಾಮಾಜಿಕ ಆ್ಯಪ್ ‘ಕೂ’ದ ಸಂಸ್ಥಾಪಕ ಸಿಇಒ ಅಪ್ರೇಮಯ ರಾಧಾಕೃಷ್ಣ ತಮ್ಮ ಉದ್ಯಮದ ಪ್ರಾರಂಭದ ದಿನಗಳು, ತಮ್ಮ ಯೋಚನೆಗಳು, ಸಮಸ್ಯೆಗಳಿಗೆ ಪರಿಹಾರ, ಮಾಡಿದ ಸಂಶೋಧನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ‘ಸ್ನೇಹಿತರು ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನೋಡಿ ಪಟ್ಟಿ ಮಾಡಿಕೊಂಡೆ. ಅವುಗಳಿಗೆ ಏನು ಪರಿಹಾರ ಸಿಗಬಹುದು ಎಂದು ಯೋಚಿಸಿದೆ. ಬೆಂಗಳೂರಿನಲ್ಲಿ ಆಟೋಗಳು ಗ್ರಾಹಕರು ಕರೆದ ಕಡೆ ಬರಲ್ಲ, ಡಬಲ್ ಚಾರ್ಜ್ ಮಾಡ್ತಾರೆ ಅಂತೆಲ್ಲಾ ಜನರಿಗೆ ಸಮಸ್ಯೆ ಇತ್ತು. 2010ರ ಸಮಯದಲ್ಲಿ ಮೆರು, ಮ್ಯಾಕ್ಸಿ ಕ್ಯಾಬ್ ಇದ್ದವು. ಆದರೇ, ಅವು ಏರ್ಪೋರ್ಟ್ ಗೆ ಮಾತ್ರ ಜನರನ್ನು ಡ್ರಾಪ್ ಮಾಡುತ್ತಿದ್ದವು. ಹೀಗಾಗಿ ಜನರು ಆ್ಯಪ್ನಲ್ಲಿ ಕ್ಲಿಕ್ ಮಾಡಿದರೇ, ಅವರ ಹತ್ತಿರವಿರುವ ಕಾರ್ ಅವರನ್ನು ಪಿಕಪ್ ಮಾಡಿ, ಡ್ರಾಪ್ ಮಾಡುವಂಥ ಕಂಪನಿ ತೆರೆದರೇ ಹೇಗೆಂದು ಯೋಚಿಸಿದೆ. ಟ್ಯಾಕ್ಸಿ ಡ್ರೈವರ್ಗಳ ಜೊತೆಗೆ ಮಾತನಾಡಿದೆ, ನಿಮಗೆ ಹೆಚ್ಚಿನ ಗ್ರಾಹಕರು ಸಿಕ್ಕರೇ ಹೇಗೆ? ನಿಮ್ಮ ಆದಾಯ ಹೆಚ್ಚಾಗುತ್ತೆ ಅಂತ ವಿವರಿಸಿದೆ. ಅವರು ಒಪ್ಪಿದರು. ಬಳಿಕ ಇದರ ಬಗ್ಗೆ ರಿಸರ್ಚ್ ಮಾಡಿದೆ. ಇದಕ್ಕಾಗಿ ಜೀವನದ 2 ವರ್ಷ ರಿಸ್ಕ್ ತೆಗೆದುಕೊಂಡೆ. ಆ್ಯಪ್ ಅಭಿವೃದ್ದಿಪಡಿಸಿ, ಟ್ಯಾಕ್ಸಿ ಫಾರ್ ಶ್ಯೂರ್ ಶುರು ಮಾಡಿದೆವು. ಆಗ ಸ್ಮಾರ್ಟ್ ಪೋನ್ ಬಂದಿದ್ದರಿಂದ ಆ್ಯಪ್ ಮಾಡಿದೆವು. ಆಗ ನಾವು ಮೂರು ಜನರು ಇದಕ್ಕೆ ಎಂಟು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆವು. ಆದರೆ, ಅದು ಕೇವಲ ಮೂರೂವರೆ ವರ್ಷದಲ್ಲಿ 1,200 ಕೋಟಿ ರೂಪಾಯಿವರೆಗೂ ಬೆಳೆಯಿತು. ಮಾರುಕಟ್ಟೆ, ನಮ್ಮ ಐಡಿಯಾವನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ಟ್ಯಾಕ್ಸಿ ಫಾರ್ ಶ್ಯೂರ್ ಅನ್ನೇ ಓಲಾಗೆ ಮಾರಿದೆವು. ಓಲಾದ ಯಶಸ್ಸಿನಲ್ಲಿ ನಮ್ಮ ಪಾತ್ರವೂ ಇದೆ’ ಎಂದು ಅಪ್ರಮೇಯ ರಾಧಾಕೃಷ್ಣ ಅವರು ತಮ್ಮ ಯಶಸ್ಸಿನ ಕಥೆಯನ್ನು ಯುವ ಉದ್ಯಮ ಆಕಾಂಕ್ಷಿಗಳ ಮುಂದೆ ಬಿಚ್ಚಿಟ್ಟರು.
ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್ಫ್ರೆಂಡ್.. ಬಿಗ್ಬಾಸ್ ವಿನ್ನರ್ ಕೂಡ ಈ ಹಿಂದೆ ಹೃದಯಾಘಾತದಿಂದ ನಿಧನ!
ಕೂ ಆ್ಯಪ್ ಜನಕ ಅಪ್ರಮೇಯ ರಾಧಾಕೃಷ್ಣ ಅಪ್ಪಟ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಬೆಂಗಳೂರಿನ ಕುಮಾರನ್ ಸ್ಕೂಲ್ನಲ್ಲಿ ಓದಿದವರು. ಬಳಿಕ ಐಐಟಿ ಸುರತ್ಕಲ್, ಐಐಎಂ ಅಹಮದಾಬಾದ್ನಲ್ಲಿ ಓದಿದರು. ರೆಡ್ ಬಸ್, ಪ್ಲಿಫ್ ಕಾರ್ಟ್ ಕಂಪನಿಗಳ ಸಕ್ಸಸ್ ಸ್ಟೋರಿ ಓದಿ ಸ್ಫೂರ್ತಿ ಪಡೆದವರು. ಬಳಿಕ ಟ್ಯಾಕ್ಸಿ ಫಾರ್ ಶ್ಯೂರ್ ಆ್ಯಪ್ ಅಭಿವೃದ್ದಿಪಡಿಸಿ, ಬೆಂಗಳೂರಿನ ಜನರಿಗೆ ಕಡಿಮೆ ದುಡ್ಡಲ್ಲಿ ಟ್ಯಾಕ್ಸಿಯಲ್ಲಿ ಓಡಾಡುವ ಸೌಲಭ್ಯ ಕಲ್ಪಿಸಿದರು. ಅದೇ ಈಗ ಓಲಾ ಆಗಿದೆ. ಈಗ ಅಪ್ರೇಮಯ ರಾಧಾಕೃಷ್ಣ, ಟ್ವೀಟರ್ಗೆ ಪೈಪೋಟಿ ನೀಡಲು ಸ್ವದೇಶಿ ಕೂ ಆ್ಯಪ್ ಅಭಿವೃದ್ಧಿಪಡಿಸಿದ್ದರು. ಆದರೇ ಕ್ಯೂ ಆ್ಯಪ್ ಅನ್ನು ಬೇರೆಯವರಿಗೆ ಮಾರುವ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ನಾವು ಇನೊವೇಷನ್ ಮಾಡುತ್ತಲೇ ಇರಬೇಕು. ಇಡೀ ವಿಶ್ವವು ಈಗ ನಮ್ಮಿಂದ ಟೆಕ್ನಾಲಜಿಯನ್ನು ಕಲಿತುಕೊಳ್ಳಬೇಕು ಎಂದು ಅಪ್ರಮೇಯ ರಾಧಾಕೃಷ್ಣ ಹೇಳಿದರು.
ಬೌನ್ಸ್ ಸಿಇಒ ವಿವೇಕ್ ಹಳ್ಳೇಕೆರೆ ಬೌನ್ಸ್ ಬೈಕ್ ಕಂಪನಿಯ ಸಿಇಒ ವಿವೇಕ್ ಹಳ್ಳೇಕೇರೆ ಸಹ ಕಾರ್ಯಾಗಾರದಲ್ಲಿ ಮಾತನಾಡಿದರು. ನಿಮ್ಮ ಕುತೂಹಲವನ್ನು ಫಾಲೊ ಮಾಡಿ, ಬಳಿಕ ಹಾರ್ಡ್ವರ್ಕ್ ತಾನಾಗಿಯೇ ಬರುತ್ತೆ. ನೀವು ಜೀವನದಲ್ಲಿ ಕನಿಷ್ಠ ರಿಗ್ರೇಟ್ಗಳೊಂದಿಗೆ ಬದುಕಬೇಕು. ನಿಮ್ಮ ಔಪಚಾರಿಕ ಶಿಕ್ಷಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಎಲ್ಲವೂ ನಿಮ್ಮ ಮೈಂಡ್ನಲ್ಲಿ ಇರುತ್ತೆ. ನಿಮ್ಮ ಕನಸು ಸಾಕಾರಗೊಳಿಸಲು ನೀವೆಷ್ಟು ತಾಳ್ಮೆಯಿಂದ ಕೆಲಸ ಮಾಡುತ್ತೀರಿ ಎಂಬುದಷ್ಟೇ ಮುಖ್ಯ ಎಂದು ತಿಳಿಸಿದರು.
ನಿಮ್ಮ ಆಸಕ್ತಿ ಇರುವುದರ ಕಡೆಗೆ ನೀವು ಹೋಗಿ. ಭಾರತದಲ್ಲಿ ಈಗ 20 ಕೋಟಿಗೂ ಹೆಚ್ಚಿನ ವಾಹನಗಳಿವೆ. ಹವಾಮಾನ ಬದಲಾವಣೆ ಆಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರ ಮಾಡಬೇಕಾಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಬರುತ್ತಿದೆ. ಇದು ಶತಮಾನದಲ್ಲಿ ಒಮ್ಮೆ ಬರುವ ಅವಕಾಶ. ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಈಗ ಬದಲಾವಣೆಯ ಕಾಲ. ಬೌನ್ಸ್ ಕಂಪನಿಯು ಉದಯೋನ್ಮುಖ ಉದ್ಯಮಿಗಳನ್ನು ಪೋತ್ಸಾಹಿಸುತ್ತಿದೆ. ನಮ್ಮ ಕಂಪನಿಯ ವೆಬ್ಸೈಟ್ಗೆ ಹೋದರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದರು.
ಮುನ್ನುಗ್ಗಿ ಕೆಲಸ ಮಾಡಬೇಕು: ರಮೇಶ್ ಪದಕಿ ಗೇಮ್ ಕಂಪನಿಯ ಸಿಇಒ ಮದನ್ ಪದಕಿ ಮಾತನಾಡಿ, ಉದ್ಯಮ ಆರಂಭಿಸುವವರಿಗೆ ಪ್ರತಿ ಹಂತದಲ್ಲೂ ಸವಾಲು, ಕಷ್ಟ ಎಲ್ಲವೂ ಎದುರಾಗುತ್ತೆ. ಅವುಗಳನ್ನೆಲ್ಲಾ ಹೇಗೆ ಎದುರಿಸಿ ಮುನ್ನುಗ್ಗಬೇಕು ಎನ್ನುವುದನ್ನು ಕನ್ನಡ ಸಿನಿಮಾದ ಹಾಡುಗಳನ್ನು ತಮ್ಮ ಪಿಪಿಟಿ ಮೂಲಕ ಪ್ಲೇ ಮಾಡಿ ಯುವಜನತೆಗೆ ಧೈರ್ಯ ತುಂಬಿದರು. ಯಾಱರು ಉದ್ಯಮಿದಾರರಾಗಬೇಕೆಂದು ಬಯಸುತ್ತೀರೋ ಅವರು ಬಂಗಾರದ ಮನುಷ್ಯ ಕನ್ನಡ ಸಿನಿಮಾ ನೋಡಿ ಎಂದರು. ಜನಪ್ರಿಯ ಚಿತ್ರಗೀತೆ ‘ಆಗದು ಎಂದು ಕೈ ಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ’ ಎಂಬ ರಾಜಕುಮಾರ್ ಹಾಡಿನ ವಿಡಿಯೋ ಪ್ಲೇ ಮಾಡಿದರು.
ಉದ್ಯಮಿದಾರರ ಜೀವನದ ಪಯಣ ಹೇಗಿರುತ್ತೆ ಎಂಬ ಬಗ್ಗೆಯೇ ಸಂಶೋಧನೆ ನಡೆಯಿತು. ಆ ಸಂಶೋಧನೆಯಲ್ಲಿ ತಿಳಿದು ಬಂದಿದ್ದೇನೆಂದರೇ, ಉದ್ದಿಮೆದಾರರಾಗಲು ಮೊದಲು ನೀವು ಉದ್ಯಮ ಚಟುವಟಿಕೆಯನ್ನು ಆರಂಭಿಸಬೇಕು. ಇಂದೇ ಸಣ್ಣ ಪ್ರಮಾಣದಲ್ಲೇ ಆಗಲಿ, ಪ್ರಾರಂಭ ಮಾಡಿ. ಅದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೆ. ನಾನು ಉದ್ದಿಮೆ ಮಾಡುತ್ತೇನೆ ಅಂತ ಹೇಳಿದಾಗ, ನನ್ನ ತಂದೆ-ತಾಯಿ ನನ್ನ ಜೊತೆ ಮಾತನಾಡುವುದನ್ನು ಬಿಟ್ಟುಬಿಟ್ಟಿದ್ದರು. ಆಗ ನನ್ನ ತಲೆಕೂದಲು ಬೇರೆ ಉದುರಿ ಬೋಳುತಲೆಯಾಗಿತ್ತು. ಉದ್ದಿಮೆದಾರರಾಗಲು ದಪ್ಪ ಚರ್ಮ ಕೂಡ ಇರಬೇಕು. ನೀವು ಮುನುಗ್ಗಬೇಕು. ಯಾರೇ ಕೂಗಾಡಲಿ, ಊರೇ ಹೋರಾಡಲಿ, ಎಮ್ಮೆ ನಿನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ಸಂಪತ್ತಿಗೆ ಸವಾಲ್ ಸಿನಿಮಾದ ಹಾಡನ್ನು ಪ್ಲೇ ಮಾಡಿದ್ದರು. ಮುನುಗ್ಗಿ ಕೆಲಸ ಮಾಡಿದರೆ ಎಲ್ಲವೂ ಆಗುತ್ತದೆ. ಗ್ರಾಹಕರು, ಬಂಡವಾಳ, ಹೂಡಿಕೆ ಎಲ್ಲವೂ ಸಿಗುತ್ತದೆ. ಆದರೆ, ಎಲ್ಲದ್ದಕ್ಕೂ ಮೊದಲು ನೀವು ಮುನ್ನುಗ್ಗಿ ಕೆಲಸ ಮಾಡಬೇಕು. ಕಾಫಿ ಶಾಪ್, ಟೀ ಶಾಪ್, ಬೇಕರಿಯಿಂದಲೇ ಆರಂಭಿಸಿ, ದೊಡ್ಡ ಉದ್ಯಮವಾಗಿ ಬೆಳೆಯಬಹುದು ಎಂದು ರಮೇಶ್ ಪದಕಿ ಧೈರ್ಯ, ಆತ್ಮವಿಶ್ವಾಸ, ಭರವಸೆ ತುಂಬುವ ಮಾತುಗಳನ್ನಾಡಿ ಹುರಿದುಂಬಿಸಿದರು.
ಇದನ್ನೂ ಓದಿ: 5 ಹುಲಿಗಳ ಅಂತ್ಯ ಕೇಸ್.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ
ಸಮಸ್ಯೆಯನ್ನು ನೋಡುವ ವಿಧಾನದಲ್ಲೇ ಯಶಸ್ಸು: ಎಸ್.ವಿ. ಸುಬ್ರಮಣ್ಯ ಫಿಸ್ ಡಮ್ ಆ್ಯಪ್ ಸಿಇಒ ಎಸ್.ವಿ.ಸುಬ್ರಮಣ್ಯ ಮಾತನಾಡುತ್ತಾ, ಯುವಜನತೆಯಲ್ಲಿ ಸ್ಫೂರ್ತಿ ತುಂಬಿದರು. ಉದ್ಯಮಿಯಾಗಲು ಸ್ಫೂರ್ತಿ ಬೇಕು, ಐಡಿಯಾ ಬೇಕು. ಲಂಡನ್ನಲ್ಲಿ ಶೂ ಕಂಪನಿಯೊಂದು ತನ್ನ ಇಬ್ಬರು ಸೇಲ್ಸ್ಮನ್ಗಳನ್ನು ಈಸ್ಟ್ ಆಫ್ರಿಕಾಗೆ ಕಳಿಸಿತ್ತು. ಒಬ್ಬ ಸೇಲ್ಸ್ಮನ್ ಈಸ್ಟ್ ಆಫ್ರಿಕಾದಲ್ಲಿ ಯಾರೂ ಕೂಡ ಶೂ ಹಾಕುತ್ತಿಲ್ಲ. ಹೀಗಾಗಿ ಇಲ್ಲಿಗೆ ಶೂ ಕಳಿಸಬೇಡಿ ಎಂದು ಕಂಪನಿಗೆ ವರದಿ ಕಳಿಸಿದ್ದರು. ಇನ್ನೊಬ್ಬ ಸೇಲ್ಸ್ಮನ್, ಈಸ್ಟ್ ಆಫ್ರಿಕಾದಲ್ಲಿ ಯಾರೂ ಕೂಡ ಶೂ ಹಾಕುತ್ತಿಲ್ಲ. ಇಲ್ಲಿ ಶೂಗೆ ಬಾರಿ ಬೇಡಿಕೆ ಇದೆ. ಹೆಚ್ಚಿನ ಶೂಗಳನ್ನು ಈಸ್ಟ್ ಆಫ್ರಿಕಾಗೆ ಕಳಿಸಿ ಎಂದು ಕಂಪನಿಗೆ ವರದಿ ಕಳಿಸಿದ್ದ. ಹೀಗಾಗಿ ನಾವು ವಿಷಯವನ್ನು ನೋಡುವುದರ ಮೇಲೆ ನಮಗೆ ಯಶಸ್ಸು ಸಿಗುತ್ತೆ ಎಂದು ಸುಬ್ರಮಣ್ಯ ವಿವರಿಸಿದ್ದರು.
ಎಲ್ಲ ಅವಕಾಶಗಳನ್ನು ಯುವಜನತೆ ಸಮರ್ಥವಾಗಿ ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಪ್ರತಿಭೆಯೂ ಇದೆ. ಬಂಡವಾಳಕ್ಕೂ ಕೊರತೆ ಇಲ್ಲ. ಭಾರತದಲ್ಲಿ ಈ ವರ್ಷ ಮೊದಲ 6 ತಿಂಗಳಲ್ಲಿ 11 ಬಿಲಿಯನ್ ಡಾಲರ್ ವೆಂಚ್ಯುರ್ ಕ್ಯಾಪಿಟಲ್ನಲ್ಲಿ ಹೂಡಿಕೆಯಾಗಿದೆ. ಇದರಲ್ಲಿ ಅರ್ಧ ಬಂಡವಾಳ ಬೆಂಗಳೂರಿಗೆ ಬಂದಿದೆ. ಇಂಡಿಯಾದಲ್ಲಿ 52 ಯೂನಿಕಾರ್ನ್ ಕಂಪನಿಗಳು ಇವೆ. 1 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಬಂಡವಾಳದ ಕಂಪನಿಯನ್ನು ಯೂನಿಕಾರ್ನ್ ಕಂಪನಿ ಎಂದು ಕರೆಯುತ್ತಾರೆ. ಭಾರತಕ್ಕೆ ಪ್ರತಿ ವರ್ಷ 25 ಬಿಲಿಯನ್ ಡಾಲರ್ ವೆಂಚ್ಯುರ್ ಕ್ಯಾಪಿಟಲ್ನಲ್ಲಿ ಹಣ ಹೂಡಿಕೆಯಾಗುತ್ತಿದೆ. ನೀವು ರಿಸ್ಕ್ ತೆಗೆದುಕೊಂಡು ಉದ್ಯಮ ಆರಂಭಿಸಬೇಕು. ಜೀವನದಲ್ಲಿ ದೊಡ್ಡ ರಿಸ್ಕ್ ಏನೆಂದರೇ, ರಿಸ್ಕ್ ತೆಗೆದುಕೊಳ್ಳದೇ ಇರೋದು ಎಂದು ವಿಶ್ಲೇಷಿಸಿದರು.
ಉದ್ಯಮ ಆರಂಭಿಸಲು ರಾಜ್ಯ ಸರ್ಕಾರದಿಂದ ಪೋತ್ಸಾಹದ ಬಗ್ಗೆ ಕಾರ್ಯಾಗಾರದಲ್ಲಿ ಐಟಿ, ಬಿಟಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ನೀತಿ ಆಯೋಗದ ಪ್ರಕಾರ, ದೇಶದಲ್ಲಿ ಕರ್ನಾಟಕವೇ ಇನ್ನೋವೇಷನ್ನಲ್ಲಿ ಅತ್ಯಂತ ಮುಂದಿರುವ ರಾಜ್ಯ. ಬೆಂಗಳೂರಿನಲ್ಲಿ ಅತಿ ಹೆಚ್ಚು ಐಟಿ ಕಂಪನಿಗಳಿವೆ. ವಿಶ್ವದಲ್ಲಿ ಅತಿಹೆಚ್ಚು ಸ್ಟಾರ್ಟಾಪ್ ಇರುವ ನಗರಗಳ ಪೈಕಿ ಬೆಂಗಳೂರಿಗೆ 23ನೇ ಸ್ಥಾನ ಇದೆ. ಕೊರೊನಾದ ಬಳಿಕ ಬೆಂಗಳೂರಿನಲ್ಲಿ 14 ಯೂನಿಕಾರ್ನ್ ಕಂಪನಿಗಳು ತಲೆ ಎತ್ತಿವೆ. ಉದ್ಯಮ ಆರಂಭಿಸಲು ಮುಂದೆ ಬರುವ ಆಸಕ್ತರಿಗೆ ಕರ್ನಾಟಕ ಸರ್ಕಾರ ಹಲವು ಪೋತ್ಸಾಹಧನಗಳನ್ನು ನೀಡುತ್ತಿದೆ.
ಎಲೆಕ್ಟ್ರಿಕ್ ವೆಹಿಕಲ್ ನೀತಿ, ಐಟಿ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಬಯೊ ಟೆಕ್ನಾಲಜಿಯಲ್ಲಿ ಕರ್ನಾಟಕ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ದೇಶೀಯ ಪೇಟೆಂಟ್ಗಳಿಗೆ ಇನ್ಸೆಂಟೀವ್ ನೀಡಲಾಗುತ್ತಿದೆ. 85ಕ್ಕೂ ಹೆಚ್ಚು ಚಿಪ್ ಡಿಸೈನ್ ಕಂಪನಿಗಳು ಕರ್ನಾಟಕದಲ್ಲಿವೆ. ಎಲೆಕ್ಟ್ರಾನಿಕ್ ಉತ್ಪನ್ನದ ಕಂಪನಿಗಳಿಗೆ ಭೂಮಿಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ, 2 ಟಯರ್, 3ಟಯರ್ ಸಿಟಿಗಳಲ್ಲೂ ಉದ್ಯಮ ಸ್ಥಾಪನೆಗೆ ಪೋತ್ಸಾಹ ನೀಡಲಾಗುತ್ತಿದೆ. ಮೈಸೂರು ಸೈಬರ್ ಸೆಕ್ಯೂರಿಟಿ ಕ್ಲಸ್ಟರ್ ಆಗಿ ಬೆಳವಣಿಗೆಯಾಗುತ್ತಿದೆ. ಈಗ ಕರ್ನಾಟದಲ್ಲಿ ಉದ್ಯಮಿಗಳಿಗೆ ಯಾವುದೇ ತೊಂದರೆ ಇಲ್ಲ. ಇದಕ್ಕೆ ಕನ್ನಡಿಯಂತೆ ಸ್ಟಾರ್ಟಪ್ ರಿಜಿಸ್ಟ್ರೇಷನ್ ಹೆಚ್ಚಾಗಿರುವುದೇ ಸಾಕ್ಷಿ. ಕರ್ನಾಟಕದಲ್ಲಿ 13 ಸಾವಿರ ಸ್ಟಾರ್ಟಪ್ ರಿಜಿಸ್ಟ್ರೇಷನ್ ಆಗಿವೆ ಎಂದು ಐಟಿ ಬಿಟಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ