/newsfirstlive-kannada/media/post_attachments/wp-content/uploads/2025/04/Bangalore-house-chirate-4.jpg)
ಬೆಂಗಳೂರಲ್ಲಿ ಬೆಳಗ್ಗೆ ಎದ್ದು ಮನೆ ಡೋರ್ ಓಪನ್ ಮಾಡಿದ್ರೆ ಹಾಲು, ನ್ಯೂಸ್ ಪೇಪರ್, ವಾಕಿಂಗ್ ಮಾಡೋರು ಎದುರಾಗುತ್ತಾರೆ. ಆದರೆ ಚಿರತೆಯೇ ಮನೆ ಒಳಗೆ ನುಗ್ಗಿದ್ರೆ ಹೇಗಿರುತ್ತೆ. ಇದನ್ನ ಕಲ್ಪಿಸಿಕೊಳ್ಳುದು ಸಾಧ್ಯವಿಲ್ಲ. ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಇಂದು ನಡೆದ ಈ ಘಟನೆ ಮೈಜುಮ್ಮೆನ್ನಿಸುವಂತಿದೆ.
ವೆಂಕಟೇಶ್ ಎಂಬುವವರು ಇವತ್ತು ಬೆಳಗ್ಗೆ ಎದ್ದ ಕೂಡಲೇ ಅವರಿಗೆ ಚಿರತೆ ಕಣ್ಣಿಗೆ ಬಿದ್ದಿದೆ. ವೆಂಕಟೇಶ್ ಮನೆಯಿಂದ ಹೊರಗಡೆ ಬರ್ತಿದ್ದಂತೆ ಚಿರತೆ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಕೂಡಲೇ ವೆಂಕಟೇಶ್ ಮನೆ ಬಾಗಿಲನ್ನು ಲಾಕ್ ಮಾಡಿ ಹೊರಗೆ ಬಂದಿದ್ದಾರೆ. ಮನೆಗೆ ನುಗ್ಗಿದ್ದ ಚಿರತೆಯನ್ನು ಲಾಕ್ ಮಾಡಿ ವೆಂಕಟೇಶ್ ಧೈರ್ಯ ಪ್ರದರ್ಶಿಸಿದ್ದಾರೆ.
ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಇವತ್ತು ಚಿರತೆಯದ್ದೇ ಚಿಂತೆಯಾಗಿದೆ. ನಿನ್ನೆ ರಾತ್ರಿಯಿಡೀ ಮಂಜುನಾಥ್ ಎಂಬುವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ರೌಂಡ್ಸ್ ಹಾಕಿರುವ ಚಿರತೆ ಬೆಳಗ್ಗೆ ಬಾಡಿಗೆದಾರ ವೆಂಕಟೇಶ್ ಮನೆಯೊಳಗೆ ಹೋಗಿದೆ. ಕೂಡಲೇ ಮನೆ ಬಾಗಿಲನ್ನು ಲಾಕ್ ಮಾಡಿದ ವೆಂಕಟೇಶ್ ಅವರು ಚಿರತೆ ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಓಲಾ, ಉಬರ್ಗೆ ಬಿಗ್ ಶಾಕ್.. ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್ ಬ್ರೇಕ್..!
ವೆಂಕಟೇಶ್ ಹಾಗೂ ಸ್ಥಳೀಯರು ಮನೆಯೊಳಗೆ ಚಿರತೆಯನ್ನು ಲಾಕ್ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಸಮೇತ ವೆಂಕಟೇಶ್ ಅವರ ಮನೆಗೆ ಆಗಮಿಸಿದ್ದಾರೆ. ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಮನೆಯೊಳಗೆ ಸೇರಿದ ಚಿರತೆ ಭಯದಲ್ಲಿ ಬೆಡ್ ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿದೆ. ಅರಣ್ಯ ಸಿಬ್ಬಂದಿ ಹೆಲ್ಮೆಟ್ ಧರಿಸಿ ಅರವಳಿಕೆ ಇಂಜೆಕ್ಷನ್ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ. ತಜ್ಞ ವೈದ್ಯ ಕಿರಣ್ ಅವರು ಚಿರತೆಗೆ ಅರವಳಿಕೆ ಇಂಜೆಕ್ಷನ್ ಡಾಟ್ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಬೋನಿಗೆ ಶಿಫ್ಟ್ ಮಾಡಲಾಗಿದೆ.
4 ಗಂಟೆಗಳ ಕಾಲ ಸತತ ಕಾರ್ಯಾಚರಣೆ ಬಳಿಕ ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಆಪರೇಷನ್ ಚಿರತೆ ಹಿನ್ನೆಲೆಯಲ್ಲಿ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಭಾರೀ ಜನ ಸೇರಿದ್ದರು. ಮನೆಯ ಸುತ್ತಮುತ್ತ ಪೊಲೀಸರು ಭದ್ರತೆ ಕೈಗೊಂಡು ಹೊರಗಡೆ ನಿಂತ ಜನರನ್ನು ಚದುರಿಸಿದರು. ಅರಣ್ಯ ಇಲಾಖೆ, ವೈದ್ಯರು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಸತತ 4 ಗಂಟೆಗಳ ಆಪರೇಷನ್ ಯಶಸ್ವಿಯಾಗಿದೆ. ಆತಂಕದಲ್ಲಿದ್ದ ಜನ, ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದು, ವೆಂಕಟೇಶ್ ದಂಪತಿಯ ದಿಟ್ಟತನಕ್ಕೆ ಖುಷಿಯಾಗಿದ್ದಾರೆ. ಸ್ಥಳೀಯರು ಈ ದಂಪತಿ ಜೊತೆ ಫೋಟೋ ತೆಗೆದು ಖುಷಿ ಪಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ