Rohit Sharma: ಟೀಂ ಇಂಡಿಯಾ ಕ್ಯಾಪ್ಟನ್ ಜೀವನ ಪಥ

Rohit Sharma: ಬ್ಯಾಟ್ ಖರೀದಿಸಲು ಹಣ ಇರಲಿಲ್ಲ.. ಇಂದು ₹182 ಕೋಟಿ ಒಡೆಯನಾದ ರೋಚಕ ಜರ್ನಿ!

ಕ್ರಿಕೆಟ್ ಜಗತ್ತಿನ ವಿಶ್ವ ಕಂಡ ಅಗ್ರ ಗಣ್ಯರ ಸಾಲಿನಲ್ಲಿ Rohit Sharma ಕೂಡ ಒಬ್ಬರು. 2024ರಲ್ಲಿ ಭಾರತಕ್ಕೆ ಟಿ-20 ವಿಶ್ವಕಪ್​​ ಗೆಲ್ಲಿಸಿಕೊಟ್ಟ ನಂತರ ಅವರ ಗೌರವ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸಚಿನ್, ಸೆಹ್ವಾಗ್ ನಂತರ ಭಾರತ ತಂಡದ ಆರಂಭಿಕ ಆಟದ ದಿಕ್ಕನ್ನು ಬದಲಿಸಿದ ಶ್ರೇಯಸ್ಸು ರೋಹಿತ್ ಶರ್ಮಾ ಅವರದ್ದಾಗಿದೆ. ನಂತರದ ದಿನಗಳಲ್ಲಿ ಟೆಸ್ಟ್, ಏಕದಿನ ಹಾಗೂ ಟಿ-20 ತಂಡದ ನಾಯಕರಾಗಿ ಟೀಂ ಇಂಡಿಯಾದಲ್ಲಿ ದರ್ಬಾರ್ ನಡೆಸಿದ ರೋಹಿತ್. ವಿಶ್ವದ ದೈತ್ಯ ಕ್ರಿಕೆಟ್​ ತಂಡಗಳಿಗೆ, ಸೂಪರ್ ಸ್ಟಾರ್ ಎನಿಸಿಕೊಂಡ ದಿಗ್ಗಜರಿಗೆ ನಡುಕ ಹುಟ್ಟಿಸಿದವರು. ಭಾರತ ಕ್ರಿಕೆಟನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ದಿ ಗ್ರೇಟ್ ‘ಹಿಟ್​​ ಮ್ಯಾನ್’​​ಗೆ ಸಲ್ಲುತ್ತದೆ. ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರನ ಯಶೋಗಾಥೆ ಇಲ್ಲಿದೆ.

Rohit Sharma

ರೋಹಿತ್ ಶರ್ಮಾ ಎಲ್ಲಿಯವರು?

ಗುರುನಾಥ ಶರ್ಮಾ ಹಾಗೂ ಪೂರ್ಣಿಮಾ ಶರ್ಮಾ ದಂಪತಿ ಮಗನಾಗಿ ಏಪ್ರಿಲ್ 30, 1987ರಲ್ಲಿ ಮಹಾರಾಷ್ಟ್ರದ ನಾಗಪುರದ ಬಾನ್ಸೋದ್​​ನಲ್ಲಿ ರೋಹಿತ್ ಜನಿಸಿದರು. ಪ್ರಾಥಮಿಕ ಶಿಕ್ಷಣದ ಜೊತೆ ಜೊತೆಗೆ ಶಾಲಾ ದಿನಗಳಲ್ಲಿ, ಬೇಸಿಗೆ ಶಿಬಿರಗಳಲ್ಲಿ ಕ್ರಿಕೆಟ್​​ ಆಡುತ್ತಾ ಬೆಳೆದರು. ನಂತರ ಕೋಚ್ ದಿನೇಶ್ ಲಾಡ್​ ಅವರ ಸಹಾಯದಿಂದ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್​​ ಸೇರಿಕೊಂಡರು. ಶಾಲಾ ಕ್ರಿಕೆಟ್ ಪಂದ್ಯಗಳಲ್ಲಿ ಹೆಸರು ಮಾಡಿದ ಹಿನ್ನೆಲೆಯಲ್ಲಿ ‘ಅಂಡರ್​-20 ಮುಂಬೈ’ ತಂಡಕ್ಕೆ ಸೇರ್ಪಡೆಗೊಂಡರು. ಆ ನಂತರ ಭಾರತದ ಅಂಡರ್-17, ಅಂಡರ್-19 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿ ಮುನ್ನಡೆದರು.


ಬಲಗೈ ಬ್ಯಾಟ್ಸ್​ಮನ್ ಮತ್ತು ಆಫ್ ಬ್ರೇಕ್ ಬೌಲರ್ ಆಗಿರುವ ರೋಹಿತ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಇನ್ನು ರೋಹಿತ್ ವೃತ್ತಿ ಜೀವನದ ಬಗ್ಗೆ ನೋಡೋದಾದರೆ ಕ್ರಿಕೆಟ್​ನಲ್ಲಿ ಮುಖ್ಯ ವಾಹಿನಿಗೆ ಬರುವುದಕ್ಕಿಂತ ಮೊದಲು ಆಫ್ ಸ್ಪಿನ್ನರ್​​ ಆಗಿ ಬೌಲಿಂಗ್ ಮಾಡುತ್ತಿದ್ದರು. ಆ ನಂತರದ ದಿನಗಳಲ್ಲಿ ಬ್ಯಾಟ್ಸ್​​ಮನ್​ ಆಗಿ ರೂಪಾಂತರಗೊಂಡರು. ಕೊನೆಗೆ ಬ್ಯಾಟಿಂಗ್​ನಲ್ಲಿಯೇ ಯಶಸ್ಸು ಕಂಡರು.

Rohit Sharma

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ

2007ರಲ್ಲಿ ಬೆಲ್​ಫೆಸ್ಟ್​ನಲ್ಲಿ ಐರ್ಲೆಂಡ್​ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದರು. 2013ರಲ್ಲಿ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್, ಮೊದಲ ಎರಡೂ ಟೆಸ್ಟ್​ ಪಂದ್ಯಗಳಲ್ಲೂ ಶತಕ ಬಾರಿಸಿ ಸೈ ಎನಿಸಿಕೊಂಡರು. ಈ ಮೂಲಕ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಮೊದಲು ಗಂಗೂಲಿ ಈ ಸಾಧನೆ ಮಾಡಿದ್ದರು.

Rohit Sharma

ಟೆಸ್ಟ್​ನಲ್ಲಿ ರೋಹಿತ್ ಸಾಧನೆ

ಇಲ್ಲಿಯವರೆಗೆ ಭಾರತ ಪರ 59 ಟೆಸ್ಟ್​ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 101 ಇನ್ನಿಂಗ್ಸ್ ಆಡಿ 4138 ರನ್​ಗಳನ್ನು ಸಿಡಿಸಿದ್ದಾರೆ. 45.47 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ರೋಹಿತ್ 12 ಶತಕ, ಒಂದು ಡಬಲ್ ಸೆಂಚುರಿ, 17 ಅರ್ಧಶತಕ ಬಾರಿಸಿದ್ದಾರೆ. 212 ರನ್ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸ್ಕೋರ್ ಆಗಿದೆ.

ಏಕದಿನ ಕ್ರಿಕೆಟ್​ನಲ್ಲಿ ಇಲ್ಲಿಯವರೆಗೆ ರೋಹಿತ್ ಒಟ್ಟು 265 ಮ್ಯಾಚ್​ಗಳನ್ನು ಆಡಿದ್ದಾರೆ. 49.17 ಸರಾಸರಿಯಲ್ಲಿ ಬ್ಯಾಟ್ ಮಾಡಿ 10866 ರನ್​ಗಳಿಸಿದ್ದಾರೆ. ಮೂರು ದ್ವಿಶತಕ ಬಾರಿಸಿರುವ ಅವರು, 31 ಶತಕ ಚಚ್ಚಿದ್ದಾರೆ. 57 ಅರ್ಧಶತಕ ಪೂರೈಸಿರುವ ರೋಹಿತ್ ಒಂದೇ ಇನ್ನಿಂಗ್ಸ್​ನಲ್ಲಿ 264 ರನ್​ಗಳಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ವಿಶ್ವಕಪ್ ಗೆಲ್ಲಿಸಿಕೊಟ್ಟು ಟಿ-20 ಕ್ರಿಕೆಟ್​ಗೆ ವಿದಾಯ

2007, ಸೆಪ್ಟೆಂಬರ್ 19 ರಂದು ಇಂಗ್ಲೆಂಡ್ ವಿರುದ್ಧ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಭಾರತದ ಪರ ಒಟ್ಟು 159 ಪಂದ್ಯಗಳನ್ನು ಆಡಿ 4231 ರನ್ಸ್​ ಕಲೆ ಹಾಕಿದ್ದಾರೆ. 140.89 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿರುವ ರೋಹಿತ್, ಐದು ಶತಕ, 32 ಅರ್ಧ ಶತಕ ಸಿಡಿಸಿದ್ದಾರೆ. ಸಿಕ್ಸರ್ ಬಾರಿಸುವಲ್ಲಿ ಪಂಟರ್ ಆಗಿರುವ ರೋಹಿತ್ ಟಿ-20ಯಲ್ಲಿ ಒಟ್ಟು 206 ಸಿಕ್ಸರ್​ಗಳನ್ನು ಹೊಡೆದಿದ್ದಾರೆ. 2024 ಮೇ 17 ಅಂತಾರಾಷ್ಟ್ರೀ ಟಿ-20 ಕ್ರಿಕೆಟ್​ಗೆ ರೋಹಿತ್ ಗುಡ್​ಬೈ ಹೇಳಿದ್ದಾರೆ. ಟಿ-20 ವಿಶ್ವಕಪ್​​ನ ಫೈನಲ್​ ಪಂದ್ಯದಲ್ಲಿ ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಿದ್ದವು. ಅದೇ ರೊಹಿತ್ ಅವರ ಕೊನೆಯ ಟಿ-20 ಪಂದ್ಯವಾಗಿದೆ. ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ 2 ವಿಕೆಟ್ ಪಡೆದರೆ, ಏಕದಿನದಲ್ಲಿ 9 ಹಾಗೂ ಟಿ-20 ಯಲ್ಲಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

Rohit Sharma


ನಾಯಕರಾಗಿ ರೋಹಿತ್ ಸಾಧನೆ

ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಟೀಂ ಇಂಡಿಯಾವನ್ನು 48 ಬಾರಿ ಮುನ್ನಡೆಸಿದ್ದಾರೆ. ಅದರಲ್ಲಿ 34 ಪಂದ್ಯಗಳಲ್ಲಿ ಗೆಲುವು ಕಂಡು 12 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಪಂದ್ಯ ಟೈ ಆಗಿದೆ. ಅವರ ಕ್ಯಾಪ್ಟನ್ಸಿಯಲ್ಲಿ ವಿನ್ನಿಂಗ್ ಶೇಕಡಾವಾರು 70.83 ಇದೆ. ಟಿ-20ಯಲ್ಲಿ ಒಟ್ಟು 62 ಪಂದ್ಯಗಳನ್ನು ಮುನ್ನಡೆಸಿರುವ ರೋಹಿತ್, 49ರಲ್ಲಿ ಗೆಲುವು ಸಾಧಿಸಿದ್ದಾರೆ. 12 ರಲ್ಲಿ ಸೋಲನ್ನು ಕಂಡಿದ್ದು ಒಂದು ಪಂದ್ಯ ಟೈ ಆಗಿದೆ. ಟಿ20 ವಿಶ್ವಕಪ್​ನಲ್ಲಿ 13 ಪಂದ್ಯಗಳನ್ನು ಮುನ್ನಡೆಸಿದ್ದು, 11ರಲ್ಲಿ ಗೆಲುವು ಸಾಧಿಸಿದ್ದಾರೆ. ಏಕದಿನ ವಿಶ್ವಕಪ್​​ ಪಂದ್ಯದಲ್ಲಿ 11 ಪಂದ್ಯ ಮುನ್ನಡೆಸಿ 10 ರಲ್ಲಿ ಗೆಲುವು ಸಾಧಿಸಿ ಒಂದರಲ್ಲಿ ಸೋಲನ್ನು ಕಂಡಿದ್ದಾರೆ. ಏಷ್ಯಾಕಪ್​​ನಲ್ಲಿ 11 ಪಂದ್ಯಗಳನ್ನು ಮುನ್ನಡೆಸಿ 9 ರಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕರಾಗಿ 16 ಪಂದ್ಯಗಳ್ನು ಮುನ್ನಡೆಸಿದ್ದು 10ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ನಾಲ್ಕರಲ್ಲಿ ಸೋತಿದ್ದಾರೆ. ಎರಡು ಪಂದ್ಯಗಳು ಡ್ರಾ ಆಗಿವೆ. ಇನ್ನು ಭಾರತದ ಪರ ಒಟ್ಟು 126 ಪಂದ್ಯಗಳಿಗೆ ನಾಯಕರಾಗಿ 93ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 28 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಕಂಡಿವೆ. ಇನ್ನೆರಡು ಪಂದ್ಯಗಳು ಯಾವುದೇ ಫಲಿತಾಂಶ ಬಂದಿಲ್ಲ.

Rohit Sharma

ಐಪಿಎಲ್​​​ನಲ್ಲಿ ರೋಹಿತ್ ಅವರೇ ಕಿಂಗ್..!​​

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್, 2008ರಲ್ಲಿ ಮೊದಲ ಬಾರಿಗೆ ಕೆಕೆಆರ್ ಪರ ಆಡಿದ್ದರು. ಒಟ್ಟು 257 ಐಪಿಎಲ್ ಪಂದ್ಯಗಳನ್ನು ಆಡಿರುವ ರೋಹಿತ್, 6628 ರನ್​ಗಳಿಸಿದ್ದಾರೆ. 109 ಐಪಿಎಲ್​ನಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಎರಡು ಶತಕ, 43 ಅರ್ಧ ಶತಕ ಕೂಡ ರೋಹಿತ್ ಹೆಸರಲ್ಲಿ ಇದೆ. ಐಪಿಎಲ್​ನಲ್ಲಿ ಒಟ್ಟು 15 ವಿಕೆಟ್ ಕಿತ್ತಿದ್ದಾರೆ.

ಐಪಿಎಲ್​​ನಲ್ಲಿ ನಾಯಕರಾಗಿ..

ಐಪಿಎಲ್​​ನಲ್ಲಿ ನಾಯಕರಾಗಿ ರೋಹಿತ್ ಶರ್ಮಾ 158 ಪಂದ್ಯಗಳನ್ನು ಮುನ್ನಡೆಸಿದ್ದು, 87ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 67 ಪಂದ್ಯಗಳಲ್ಲಿ ಸೋತು 4 ಮ್ಯಾಚ್​ ಟೈ ಮಾಡಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ಗೆ ಕ್ಯಾಪ್ಟನ್​ ಆಗಿ ಐದು ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ.

ವೈಯಕ್ತಿಕ ಜೀವನ

ರೋಹಿತ್ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಶ್​ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2008ರಲ್ಲಿ ಮೊದಲ ಬಾರಿಗೆ ರಿತಿಕಾರನ್ನು ಭೇಟಿಯಾದರು. ಈ ಜೋಡಿಗೆ ಶಮೀರಾ ಎಂಬ ಮುದ್ದಾದ ಮಗು ಇದೆ.

182 ಕೋಟಿ ಒಡೆಯ ರೋಹಿತ್

ರೋಹಿತ್ ಶರ್ಮಾ ಅವರು ಒಟ್ಟು 182 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಮುಂಬೈನಲ್ಲಿ 30 ಕೋಟಿ ಮೌಲ್ಯದ ಭವ್ಯ ಬಂಗಲೆ ಹೊಂದಿದ್ದಾರೆ. ವಿಶೇಷ ಅಂದರೆ ಅವರಿಗೆ ಕಾರುಗಳ ಕ್ರೇಜ್ ತುಂಬಾನೇ ಇದೆ. 3.15 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಕಾರು ಕೂಡ ಇದೆ. ಜೊತೆಗೆ 88.18 ಲಕ್ಷದ ಮರ್ಸ್ಡಿಸ್​ ಕಾರು ಕಾರನ್ನೂ ಇಟ್ಕೊಂಡಿದ್ದಾರೆ. ಜೊತೆಗೆ 56.50 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಕಾರು ಕೂಡ ಇದೆ. ಅಲ್ಲದೇ 62.48 ಕೋಟಿ ರೂಪಾಯ ಫಾರ್ಚುನರ್ ಕಾರು ಸಹ ಹೊಂದಿದ್ದಾರೆ. 15 ಲಕ್ಷ ಬೆಲೆಯ ಸುಜುಕಿ ಹೈಯಾಬುಸಾ ಸೂಪರ್ ಬೈಕ್ ಹೊಂದಿದ್ದಾರೆ.

ಒಂದು ಕಾಲದಲ್ಲಿ ಕ್ರಿಕೆಟ್ ಕಿಟ್ ಖರೀದಿಸಲು ಪರದಾಡುತ್ತಿದ್ದ ಹುಡುಗ ರೋಹಿತ್ ಶರ್ಮಾ. ಬ್ಯಾಟ್ ಖರೀದಿಸಲು ಹಾಲು ಮಾರು ಹಣ ಸಂಪಾನೆ ಮಾಡುತ್ತಿದ್ದರಂತೆ. ಆದರಿಂದ ಹಿಂತಿರುಗಿ ನೋಡಿದರೆ ರೋಹಿತ್ ಅವರ ಸಾಧನೆ ಪರ್ವದಷ್ಟಿದೆ. ರೋಹಿತ್ ಅವರ ಪ್ರತಿಭೆಗೆ ಬಡತನ ಅಡ್ಡಿ ಆಗಲಿಲ್ಲ. ಸಾಧಿಸುವ ಛಲದ ನಿರ್ಧಿಷ್ಟ ಗುರಿಯ ಪರಿಣಾಮ ರೋಹಿತ್ ಇಂದು ದಿಗ್ಗಜರ ಸಾಲಿನಲ್ಲಿ ನಿಂತಿದ್ದಾರೆ. ಅವರ ಸಾಧನೆಯನ್ನು ಮನಗಂಡ ಭಾರತ ಸರ್ಕಾರ 2015ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2020ರಲ್ಲಿ ಮೇಜರ್ ದ್ಯಾನ್ ಚಂದ್ರ ಖೇಲ್ ರತ್ನ ಅವಾರ್ಡ್​ಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಹಲವು ಐಸಿಸಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಜೊತೆಗೆ 2024ರಲ್ಲಿ ದ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲೂ ಕಾಣಿಸಿಕೊಂಡಿದ್ದು, ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ನಮ್ಮ ಇತ್ತೀಚಿನ ತಾಜಾ ಸುದ್ದಿಗಳನ್ನು ಓದಿ