/newsfirstlive-kannada/media/post_attachments/wp-content/uploads/2023/12/death-2023-12-21T183235.536.jpg)
ಬೆಂಗಳೂರು: ಈ ಪ್ರೀತಿ ಪ್ರೇಮ ಅನ್ನೋದೆ ಹೀಗೆ ಕಣ್ರೀ. ಮದುವೆಯಾದವರಿಗೂ, ಮದುವೆಯಾಗದೇ ಇದ್ದವರಿಗೂ ಈ ಲವ್ ಕಾಡದೇ ಬಿಡಲ್ಲ. ಮದುವೆಯಾಗಿ ಮಕ್ಕಳಿದ್ದ ಒಬ್ಬ ಕಾನ್ಸ್‌ಟೇಬಲ್ ಹೋಂ ಗಾರ್ಡ್ ಜೊತೆ ಲವ್ವಿ ಡವ್ವಿ ನಡೆಸ್ತಿದ್ದ. ಆದ್ರೆ ಅದ್ಯಾಕೋ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬಂದು ಜಗಳ ನಡೆದಿತ್ತು. ಆದ್ರೀಗ ಈ ಜಗಳದಲ್ಲಿ ಕಾನ್ಸ್‌ಟೇಬಲ್ ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ಕಾನ್ಸ್‌ಟೇಬಲ್ ಹೆಸರು ಸಂಜಯ್. ಮೂಲತಃ ಚೆನ್ನರಾಯಪಟ್ಟಣದವನಾಗಿರೋ ಸಂಜಯ್ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡ್ತಿದ್ರು. ಮದುವೆ ಕೂಡ ಆಗಿತ್ತು. ಅರಿತು ನಡೆಯುವ ಸತಿ ಚೆಂದದ ಸಂಸಾರ. ಇಷ್ಟೆಲ್ಲ ಇದ್ರೂ ಈ ಕಾನ್ಸ್ಟೇಬಲ್ಗೆ ಚಪಲ ಜಾಸ್ತಿ ಇತ್ತು. ಹೀಗಾಗಿ ಇದೇ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಹೋಂ ಗಾರ್ಡ್ ರಾಣಿ ಎಂಬಾಕೆ ಜೊತೆ ಈ ಸಂಜಯ್ ಲವ್ವಿ ಡವ್ವಿ ನಡೆಸಿದ್ದ. ಆದ್ರೀಗ ಇದೇ ಹೋಗಾರ್ಡ್ ಕಾನ್ಸ್‌ಟೇಬಲ್ ಸಂಜಯ್ ಜೀವಕ್ಕೆ ಕೊಳ್ಳಿ ಇಟ್ಟಿದ್ದಾಳೆ.
ರಾಣಿ ಇವಳಿಗೂ ಮದುವೆಯಾಗಿತ್ತು. ಆದ್ರೂ ಈ ಪೊಲೀಸ್ -ಹೋಂ ಗಾರ್ಡ್ ಮಧ್ಯೆ ಕುಚ್ ಕುಚ್ ನಡೀತಾನೇ ಇತ್ತು. ಇಬ್ಬರಿಗೂ ಮದುವೆಯಾಗಿದ್ರೂ ಮನೆಯವರು ಕಣ್ಣುತಪ್ಪಿಸಿ ಇಬ್ಬರೂ ಸೇರ್ತಿದ್ರು. ಸಿನಿಮಾ ಪಾರ್ಕ್ ಅಂತೆಲ್ಲ ಓಡಾಡುತ್ತಿದ್ದರು. ಸ್ವಲ್ಪ ದಿನ ಇಬ್ಬರ ಮಧ್ಯೆ ಎಲ್ಲ ಚೆನ್ನಾಗಿ ನಡೀದಿತ್ತು. ಆದ್ರೆ ಇತ್ತಿಚೆಗೆ ಕಾನ್ಸ್‌ಟೇಬಲ್ ಸಂಜಯ್ ರಾಣಿಯನ್ನ ಅವೈಡ್ ಮಾಡೋಕೆ ಶುರು ಮಾಡಿದ್ದನಂತೆ. ಕಳೆದ ಆರನೇ ತಾರೀಖು ಸಂಜಯ್ಗೆ ಕರೆ ಮಾಡಿದ್ದ ರಾಣಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ಲವರ್ ಕಾಲ್ ಮಾಡಿದ್ದ ಖುಷಿಗೆ ಮನೆಗೆ ಹೋಗಿದ್ದ ಸಂಜಯ್. ಈ ವೇಳೆ ರಾಣಿಗೆ ಚೇತನ್ ಎಂಬಾತ ಕರೆ ಮಾಡಿದ್ದಾನೆ. ಯಾರು ಆತ ಅಂತಾ ಸಂಜಯ್ ಪ್ರಶ್ನೆ ಮಾಡಿದಾಗ ನನ್ನ ಪರಿಚಯದವನು ಅಂದಿದ್ದಾಳೆ. ಬಳಿಕ ಆಕೆಯ ಮೊಬೈಲ್ ಚೆಕ್ ಮಾಡಿದಾಗ ಚಂದನ್ ಎಂಬಾತನ ಜೊತೆಯೂ ಸಲುಗೆಯಿಂದ ಚಾಟ್ ಮಾಡಿರೋದು ಪತ್ತೆಯಾಗಿದೆ.…ಇದನ್ನ ಪ್ರಶ್ನೆ ಮಾಡಿದ್ದಕ್ಕೆ ರಾಣಿ ಸಂಜಯ್ ಮೇಲೆ ಪೆಟ್ರೋಲ್ ಸುರಿದು ಬಿಟ್ಟಿದ್ದಾಳೆ.
ಇದನ್ನೂ ಓದಿ: BIGG BOSS: ಬಿಗ್ಬಾಸ್ ಮನೆಯಲ್ಲಿ ದಿಢೀರ್ ಕಾಣಿಸಿಕೊಂಡ ಮೊಬೈಲ್ ಚಾರ್ಜರ್? ವೀಕ್ಷಕರು ಫುಲ್ ಶಾಕ್!
ಅಷ್ಕಕ್ಕೂ ಆರನೇ ತಾರೀಖು ಆಗಿದ್ದು ಏನು..?
ರಾಣಿ ಬೇರೆಯವರ ಜೊತೆ ಚಾಟಿಂಗ್ ಮಾಡೋ ವಿಚಾರವಾಗಿ ಇಬ್ಬರು ಮಧ್ಯೆ ಜಗಳ ನಡೆದಿದೆ. ಸಂಜಯ್ ಯಾರು ಏನು ಅಂತೆಲ್ಲ ಪ್ರಶ್ನೆ ಮಾಡಿದ್ದಾನೆ. ಆಗ ರಾಣಿ ಯಾವುದೇ ಉತ್ತರ ಕೊಟ್ಟಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದು ಸಂಜಯ್ ತನ್ನನ್ನ ಸಾಯಿಸು ಅಂದಿದ್ದಾನೆ. ಅಷ್ಟೇ ಅಲ್ಲ ಪೆಟ್ರೋಲ್ನ್ನ ಮೈಮೇಲೆ ಸುರಿದುಕೊಂಡು ಸಾಯ್ತಿನೀ ಅಂತ ಬೆದರಿಕೆ ಹಾಕಿದ್ದಾನೆ. ಅಷ್ಟೇ ನೋಡಿ.. ರಾಣಿ ನೀನು ಏನು ಸಾಯೋದು ನಾನೆ ಸಾಯಿಸ್ತೀನಿ ಅಂತ ಬೆಂಕಿ ಹಚ್ಚಿಯೇ ಬಿಟ್ಟಿದ್ದಾಳೆ. ಸಂಜಯ್ ದೇಹಕ್ಕೆ ಬೆಂಕಿ ಹೊತ್ತಿಕೊಳ್ತಿದ್ದಂತೆ ನೀರಿನಿಂದ ಆರಿಸೋಕೆ ಪ್ರಯತ್ನಿಸಿದ್ದಾಳೆ. ಕೊನೆಗೆ ತಾನೇ ಬೈಕ್ ಮೇಲೆ ಕರೆದುಕೊಂಡು ಹೋಗಿ ಸಂಜಯ್ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾಳೆ. ದುರಂತ ಏನಂದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಂಜಯ್ ಗುರುವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.
ರಾಣಿ ಮಾತ್ರ ಇದೆಲ್ಲ ಆಕಸ್ಮಿಕವಾಗಿ ನಡೆದಿರೋದು ಅಂತ ಹೇಳಿದ್ದಾಳೆ. ಆದ್ರೆ ಸಂಜಯ್ ಕುಟುಂಬ ರಾಣಿಯೇ ನಮ್ಮ ಮಗನ ಜೀವವನ್ನ ಬಲಿ ಪಡೆದಿದ್ದಾಳೆ ಅಂತ ಕಣ್ಣೀರು ಸುರಿಸಿದ್ದಾರೆ. ನಮ್ಮ ಮಗನ ಸಾವಿಗೆ ಅವಳೇ ಹೊಣೆ ಅಂತ ರಾಣಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದೊಬ್ಬ ಮಗನನ್ನ ರಾಣಿ ಅನ್ನೋಳು ಬಲಿ ಪಡೆದಿದ್ದಾಳೆ. ಇನ್ನೂ ಮನೆಯಲ್ಲಿ ಮದುವೆಯಾಗೋ ಹೆಣ್ಣುಮಕ್ಕಳಿದ್ದಾರೆ. ಅವನ ಹೆಂಡತಿಗೆ ಯಾರು ದಿಕ್ಕು. ಆ ಹೆಣ್ಣುಮಕ್ಕಳ ಮದುವೆ ಯಾರು ಮಾಡ್ತಾರೆ ಅಂತ ಕುಟುಂಬಸ್ಥರು ಸಂಜಯ್ ಪ್ರಾಣ ಬಲಿ ಪಡೆದ ರಾಣಿ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು, ಸಾಯೋ ಕೊನೆ ಗಳಿಗೆಯಲ್ಲಿ ಸಂಜಯ್ ಘಟನೆ ಬಗ್ಗೆ ತಾಯಿ ಜೊತೆ ಹೇಳಿಕೊಂಡಿದ್ದಾನೆ. ತನ್ನ ಸಾವಿಗೆ ನ್ಯಾಯ ಕೊಡಿಸುವಂತೆ ಗೋಗರೆದಿದ್ದಾನೆ. ರಾಣಿಗೆ ಕೊಟ್ಟ ಹಣ ಒಡವೆ ಬಗ್ಗೆ ಎಲ್ಲ ಸಂಜಯ್ ಆಡಿಯೋದಲ್ಲಿ ಹೇಳಿದ್ದಾನೆ. ಹೀಗಾಗಿ ರಾಣಿಗೆ ಶಿಕ್ಷೆಯಾಗಬೇಕು ಅಂತ ಸಂಜಯ್ ತಾಯಿ ಗೋಗರೆದು ಕಣ್ಣೀರಿಟ್ಟಿದ್ದಾರೆ. ಮಗನ ಪ್ರಾಣ ಬಲಿ ಪಡೆದವಳಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ತಾಯಿ ಜೀವ ಬೇಡಿಕೊಂಡಿದೆ. ಏನೇ ಹೇಳಿ ಮದುವೆಯಾಗಿ ಮಕ್ಕಳಿದ್ರೂ ಪೊಲೀಸ್ ಇನ್ನೊಬ್ಬಳ ಆಸರೆ ಬಯಸಿದ್ದ. ಆದ್ರೀಗ ಬಯಸಿದ ಆಸರೆಯೇ ಪೊಲೀಸ್ ನರಳಿ ನರಳಿ ಸಾಯೋವಂತೆ ಮಾಡಿರೋದು ನಿಜಕ್ಕೂ ದೊಡ್ಡ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ