/newsfirstlive-kannada/media/post_attachments/wp-content/uploads/2025/02/KUMBHA_MAMATHA.jpg)
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳದ ಸಂಭ್ರಮ ಮೇಳೈಸಿದೆ. 50 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿ ದಾಖಲೆ ಸೃಷ್ಟಿಯಾಗಿದೆ. ಕಿನ್ನರ ಅಖಾಡದಿಂದ ಹೊರಬಿದ್ದಿದ್ದ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಮರಳಿ ಕಿನ್ನರ ಅಖಾಡ ಸೇರಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಸಾಧು-ಸಂತರ ಅಪೂರ್ವ ಸಂಗಮ, ಕೋಟ್ಯಾಂತರ ಭಕ್ತರ ಸಮಾಗಮದಿಂದ ಗಂಗಾನದಿ ತೀರದಲ್ಲಿ ದೃಶ್ಯ ಕಾವ್ಯ ಕಳೆಗಟ್ಟಿದೆ. ಕೇಸರಿ ಮಯವಾಗಿರೋ ಪ್ರಯಾಗ್ ರಾಜ್ನಲ್ಲಿ ಸನಾತನ ಧರ್ಮದ ವೈಭವವೇ ಧರೆಗಿಳಿದಂತಿದೆ.
ಆರಂಭವಾದ 33 ದಿನಕ್ಕೇ ದಾಖಲೆ ಬರೆದ ಮಹಾಕುಂಭಮೇಳ!
ದೇಶದ ಮೂಲೆ ಮೂಲೆಯಿಂದ ಮಹಾಕುಂಭ ಮೇಳಕ್ಕೆ ಭಕ್ತರು ಭೇಟಿ ನೀಡುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು ಶಿವನ ಜಪ ಮಾಡಿ ಪುನೀತರಾಗ್ತಿದ್ದಾರೆ. ಅಚ್ಚರಿ ಏನಂದ್ರೆ ಜನವರಿ 13ರಂದು ಪ್ರಾರಂಭವಾದಾಗಿನಿಂದ ಈವರೆಗೆ ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
13ನೇ ದಿನದ ತಿಥಿ ನಡೆಯುವಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ಮನೆಮಗ
ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕಣ್ಮುಚ್ಚಿದ್ದಾನೆ ಅಂದುಕೊಂಡವನು ತನ್ನ ತಿಥಿ ದಿನದಂದು ಪ್ರತ್ಯಕ್ಷವಾಗಿ ಕುಟುಂಬಸ್ಥರಿಗೆ ಸಂತಸದ ಶಾಕ್ ನೀಡಿದ್ದಾನೆ. ಪ್ರಯಾಗ್‌ರಾಜ್‌ನ ಖುಂತಿ ಗುರು ಎಂಬುವವರು ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನ ಮಾಡಲು ಹೋಗುತ್ತೀನಿ ಎಂದು ಹೊದವರು ವಾಪಸ್ ಆಗಿರಲಿಲ್ಲ. ಘಟನೆ ನಡೆದು ವಾರಕ್ಕೂ ಹೆಚ್ಚು ದಿನ ಬಾರದಿರುವುದನ್ನು ಗಮನಿಸಿದ ಕುಟುಂಬಸ್ಥರು ಕಾಲ್ತುಳಿತದಲ್ಲಿ ಕಣ್ಮುಚ್ಚಿರಬಹುದೆಂದು ಭಾವಿಸಿ ತಿಥಿ ಕಾರ್ಯ ಮಾಡಿದ್ದಾರೆ. ಆದರೆ, ಕುಟುಂಬಸ್ಥರು ಕಣ್ಮುಚ್ಚಿದ್ದಾನೆಂದು ಭಾವಿಸಿದ ವ್ಯಕ್ತಿಯು ತಿಥಿಯ ದಿನದಂದು ಪ್ರತ್ಯಕ್ಷವಾಗಿದ್ದಾನೆ.
ಇದನ್ನೂ ಓದಿ:ಪ್ರೇಮಿಗಳ ದಿನದಂದೇ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿದ ಪವಿತ್ರಾ ಗೌಡ
ಮತ್ತೆ ಕಿನ್ನರ ಅಖಾಡ ಸೇರಿದ ಸನ್ಯಾಸಿನಿ ಮಮತಾ ಕುಲಕರ್ಣಿ!
ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಕಿನ್ನರ ಅಖಾಡಕ್ಕೆ ಮತ್ತೆ ಸೇರ್ಪಡೆಗೊಂಡಿದ್ದಾರೆ. ಫೆಬ್ರುವರಿ 10ರಂದು ಮಮತಾ ಕುಲಕರ್ಣಿಯನ್ನ ಮಹಾಮಂಡಲೇಶ್ವರರನ್ನಾಗಿ ಮಾಡಿದ ನಂತರ ಪ್ರಾರಂಭವಾದ ವಿವಾದದಿಂದಾಗಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿನಾರಾಯಣ ತ್ರಿಪಾಠಿ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನ ಹಂಚಿಕೊಂಡಿರೋ ಮಮತಾ ಮತ್ತೆ ಕಿನ್ನರ ಅಖಾಡಕ್ಕೆ ಸೇರ್ಪಡೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಹಾಕುಂಭಮೇಳದಲ್ಲಿ ಶ್ವಾನಕ್ಕೂ ಪುಣ್ಯ ಸ್ನಾನ!
ಮಹಾಕುಂಭಮೇಳದಲ್ಲಿ ಓರ್ವ ತನ್ನ ಶ್ವಾನಕ್ಕೂ ಪುಣ್ಯಸ್ನಾನ ಮಾಡಿಸಿದ್ದಾನೆ. ವನ್ಶ್ ಚಬ್ರಾ ಎಂಬಾತ ತನ್ನ ಪ್ರೀತಿಯ ಶ್ವಾನಕ್ಕೆ ಪುಣ್ಯ ಸ್ನಾನ ಮಾಡಿಸಿ ಆ ವಿಡಿಯೋವನ್ನ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳದ ವೈಭವದಲ್ಲಿ ಭಕ್ತರು 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನೂ 13 ದಿನಗಳ ಕಾಲ ಮಹಾಕುಂಭಮೇಳದ ಸಂಭ್ರಮ ಬಾಕಿ ಇದ್ದು ಮತ್ತೆಷ್ಟು ಭಕ್ತರು ಭಾಗಿಯಾಗ್ತಾರೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ