/newsfirstlive-kannada/media/post_attachments/wp-content/uploads/2025/01/MAHA-KUMBH-1.jpg)
ಪ್ರಯಾಗ್‌ರಾಜ್: 2025ರ ಮಹಾ ಕುಂಭಮೇಳಕ್ಕೆ ಇವತ್ತು ಎರಡನೇ ದಿನ. ಮಕರ ಸಂಕ್ರಾತಿಯಂದು ಜಗತ್ತಿನ ಅತಿ ದೊಡ್ಡ ಧಾರ್ಮಿಕ ಜಾತ್ರೆ ನಡೆಯುತ್ತಿರೋದು ಮತ್ತೊಂದು ವಿಶೇಷ. ಈ ಮಹಾಕುಂಭ ಮೇಳದಿಂದ ಉತ್ತರ ಪ್ರದೇಶ ಸರ್ಕಾರದ ಆರ್ಥಿಕತೆಗೂ ಬಲ ಸಿಗುವ ನಿರೀಕ್ಷೆ ಇದ್ದು, ಮಹಾಕುಂಭ ಮೇಳದಿಂದ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯ ಅಂದಾಜಿದೆ.
2025ರ ಮಹಾ ಕುಂಭಮೇಳಕ್ಕೆ ಸಾಗರದಂತೆ ಹರಿದು ಬಂದ ಜನ
ಕೋಟ್ಯಂತರ ಭಕ್ತರನ್ನ ಸೆಳೆಯುತ್ತಿರೋ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ. ಪ್ರಯಾಗ್‌ರಾಜ್ ಮಿನಿ ಭಾರತದಂತೆ ಕಾಣಿಸ್ತಿದೆ. ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ. ನಿನ್ನೆ ಒಂದೇ ದಿನ ಒಂದೂವರೆ ಕೋಟಿ ಜನ, ಪವಿತ್ರ ಗಂಗೆಯಲ್ಲಿ ಪುಣ್ಯ ಸ್ನಾನಗೈದಿದ್ದಾರೆ. 144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ.
2 ದಿನ ಸಂಗಮದಲ್ಲಿ 4 ಕೋಟಿ ಭಕ್ತರು ಶಾಹಿ ಸ್ನಾನದ ನಿರೀಕ್ಷೆ!
ಇವತ್ತು ಮಕರ ಸಂಕ್ರಾಂತಿ. ಹೀಗಾಗಿ 2 ದಿನ ಸಂಗಮದಲ್ಲಿ ಬರೋಬ್ಬರಿ 4 ಕೋಟಿ ಭಕ್ತರು ಶಾಹಿ ಸ್ನಾನದ ನಿರೀಕ್ಷೆ ಇದೆ. 45 ದಿನಗಳ ಕಾಲ ನಡೆಯುವ ಮಹಾಕುಂಭಮೇಳದಲ್ಲಿ ದೇಶ, ವಿದೇಶಗಳಿಂದ 45 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಹಾಕುಂಭ ಮೇಳ ನಡೆಯುವ ಜಾಗವನ್ನೇ ಉತ್ತರ ಪ್ರದೇಶದ 76ನೇ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ.
ಮಹಾಕುಂಭ ಮೇಳದಿಂದ ₹2 ಲಕ್ಷ ಕೋಟಿ ಆದಾಯ ನಿರೀಕ್ಷೆ
ಈ ಧಾರ್ಮಿಕ ಸಂಗಮ ಭಕ್ತರನ್ನ ಸೆಳೆಯೋದು ಮಾತ್ರವಲ್ಲ ಉತ್ತರ ಪ್ರದೇಶದ ಆರ್ಥಿಕತೆ ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯುತ್ತಿದೆ. ಮಹಾಕುಂಭಮೇಳ ಉತ್ತರ ಪ್ರದೇಶದ ಆರ್ಥಿಕತೆಗೆ ಬಲ ತುಂಬಲಿದೆ ಅಂತ ಅಂದಾಜಿಸಲಾಗಿದೆ. ಯುಪಿ ಸರ್ಕಾರ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿಗಳನ್ನ ಖರ್ಚು ಮಾಡ್ತಿದೆ. ಆದ್ರೆ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನೂ ಹೊಂದಿದೆ. ಜೊತೆಗೆ ಕೇಂದ್ರಕ್ಕೂ ಆರ್ಥಿಕ ಲಾಭ ನೀಡ್ತಿದೆ. ಭಕ್ತಾದಿಗಳ ಓಡಾಟಕ್ಕೆ ಸುಮಾರು 13 ಸಾವಿರ ವಿಶೇಷ ರೈಲಿನ ಟ್ರಿಪ್ಗಳನ್ನ ನೀಡಿದೆ.
ಭಕ್ತರ ಸುರಕ್ಷತೆಗೆ ಆದ್ಯತೆ!
ಆರ್ಟಿಫಿಷಿಯಲ್ ಇಂಟಲಿಜೆನ್ಸ್ನ 2,700 ಕ್ಯಾಮರಾ ಆಳವಡಿಕೆ ಮಾಡಿರೋ ಪೊಲೀಸರು ಅಂಡರ್ ವಾಟರ್ ಡ್ರೋನ್ಗಳನ್ನ ಬಳಸ್ತಿದ್ದಾರೆ. ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನ ಎಂಟ್ರಿ ಪಾಯಿಂಟ್ನಲ್ಲಿ ಬಳಕೆ ಮಾಡಲಾಗಿದೆ. ಆನ್ಲೈನ್ ಬೆದರಿಕೆ ಮಾನಿಟರ್ ಮಾಡಲು 56 ಸೈಬರ್ ವಾರಿಯರ್ಗಳನ್ನ ನಿಯೋಜನೆ ಆಗಿದೆ. ಮಹಾಕುಂಭ ಮೇಳದ ಏರಿಯಲ್ ದೃಶ್ಯ ನೋಡಲು ಹೆಲಿಕಾಪ್ಟರ್ ರೈಡ್ ಹೋಗಲು 1,296 ರೂಪಾಯಿ ಟಿಕೆಟ್ ರೇಟ್ ಫಿಕ್ಸ್ ಮಾಡಿದೆ. ತಮ್ಮ ಕುಟುಂಬಗಳಿಂದ ಬೇರ್ಪಟ್ಟಿದ್ದ 250ಕ್ಕೂ ಹೆಚ್ಚು ವ್ಯಕ್ತಿಗಳನ್ನ ಪುನಃ ಕುಟುಂಬಕ್ಕೆ ಒಪ್ಪಿಸಲಾಗಿದೆ.
144 ವರ್ಷಕ್ಕೆೊಮ್ಮೆ ಆಚರಿಸೋ ಮಹಾ ಕುಂಭಮೇಳವನ್ನ ಇನ್ನೊಮ್ಮೆ ಬರುವಷ್ಟರಲ್ಲಿ ಈ ಪೀಳಿಗೆ ಇರೋದೆ ಇಲ್ಲ. ವಿಶ್ವದ ಅತಿದೊಡ್ಡ ಈ ಧಾರ್ಮಿಕ ಆಚರಣೆಯನ್ನ ನಾವೆಲ್ಲಾರೂ ಕಣ್ಮುಂಬಿಕೊಳ್ತಿರೋದು ಪುಣ್ಯವೇ ಸರಿ.
ಇದನ್ನೂ ಓದಿ:ಶಾಸಕಾಂಗ ಸಭೆಯಲ್ಲೇ ಹೆಬ್ಬಾಳ್ಕರ್ ವಿಚಾರಕ್ಕೆ DCM ಡಿಕೆಶಿ, ಸತೀಶ್ ಜಾರಕಿಹೊಳಿ ಜಗಳ; ಅಸಲಿಗೆ ನಡೆದಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ