/newsfirstlive-kannada/media/post_attachments/wp-content/uploads/2025/02/CIBIL-SCORE.jpg)
ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯೇ ಇದೆ. ಮದುವೆ ಮಾಡುವುದು ಎನ್ನುವುದೇ ಒಂದು ಪುಣ್ಯದ ಕಾರ್ಯ ಎಂಬ ನಂಬಿಕೆ ಭಾರತೀಯ ಪರಂಪರೆಯಲ್ಲಿ ನೆಲೆಯೂರಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆಗಳು, ಬಾಂಧವ್ಯಗಳು ಎಲ್ಲವೂ ಕೂಡ ದುಡ್ಡು ಮತ್ತು ಅಂತಸ್ತಿನ ತಳಹದಿಯ ಮೇಲೆ ನಿಲ್ಲುತ್ತಿರುವುದು ದೊಡ್ಡ ದುರಂತವೇ ಸರಿ. ಸಣ್ಣ ಸಣ್ಣ ಕಾರಣಗಳಿಗೆ ಇತ್ತೀಚೆಗೆ ಮದುವೆ ಮುರಿದು ಬೀಳುತ್ತಿರುವ ಬಗ್ಗೆ ನೀವು ಕೇಳಿಯೂ ಇರುತ್ತೀರಿ ನೋಡಿಯೂ ಇರುತ್ತೀರಿ. ಅಂತಹದೇ ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ಮಹಾರಾಷ್ಟ್ರದ ಮುರ್ಜಿಜಾಪುರದಲ್ಲಿ ನಡೆದಿದೆ.
ಈ ಒಂದು ಮದುವೆ ಮುರಿದು ಬಿದ್ದಿದ್ದು ಜಾತಕ ಕೂಡಿ ಬಂದಿಲ್ಲ ಎಂಬ ಕಾರಣಕ್ಕೆ ಅಲ್ಲ, ರಾಶಿಗಳು, ಗುಣ, ಗೋತ್ರಗಳು ಕೂಡಿ ಬಂದಿಲ್ಲ ಎಂಬ ಕಾರಣಕ್ಕೂ ಕೂಡ ಅಲ್ಲ. ಮದುವೆಯಾಗುವ ಮಧುಮಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂಬ ಒಂದೇ ಒಂದು ಕಾರಣಕ್ಕೆ ವಧುವಿನ ಕಡೆಯವರ ಮದುವೆಯನ್ನು ಮುರಿದುಕೊಂಡಿದ್ದಾರೆ.
ಮದುವೆ ಮಾತುಕತೆಗೆ ಬಂದ ಎರಡು ಕಡೆಯವರು ಒಂದು ಕಡೆ ಸೇರಿ ಚೆನ್ನಾಗಿಯೇ ಎಲ್ಲಾ ರೀತಿಯ ಮಾತುಕತೆಗಳನ್ನು ಮುಗಿಸಿದ್ದರು. ಗಂಡು ಮತ್ತು ಹೆಣ್ಣಿನ ಇಬ್ಬರೂ ಕಡೆಯವರಿಗೆ ಎಲ್ಲವೂ ಒಪ್ಪಿಗೆ ಆಗಿತ್ತು. ಇನ್ನೇನು ಮುಂದಿನ ಕಾರ್ಯ ಮಾಡೋಣ ನಿಶ್ಚಿತಾರ್ಥ ಮತ್ತು ಮದುವೆಯ ದಿನಾಂಕ ನಿಗದಿ ಮಾಡೋಣ ಎಂಬ ಹಂತಕ್ಕೆ ಬಂದಾಗ ಹುಡುಗಿಯ ಅಂಕಲ್ ಒಬ್ಬರು ಅನಿರೀಕ್ಷಿತವಾದ ಬೇಡಿಕೆಯೊಂದನ್ನು ಇಡುತ್ತಾರೆ. ನಾನು ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎನ್ನುತ್ತಾರೆ. ಇದನ್ನು ಕೇಳಿದ ಅಲ್ಲಿದ್ದ ಎಲ್ಲರಿಗೂ ಒಂದು ಕ್ಷಣ ಅಚ್ಚರಿ.
ಇದನ್ನೂ ಓದಿ:ಪ್ರೀತಿಗಾಗಿ 80 ಲಕ್ಷ ಖರ್ಚು! ಡೈಮಂಡ್ ರಿಂಗ್, iPhone ಎಲ್ಲವೂ ಕೊಡಿಸಿದ್ದ.. ಅಯ್ಯೋ ಪಾಪ!
ಯಾವಾಗ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೋ ಹುಡುಗ ಹಲವು ಕಡೆ ಸಾಲ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿದ್ದಾನೆ ಎಂಬುದು ಕಂಡು ಬರುತ್ತದೆ. ಇದರಿಂದ ನನ್ನ ಮಗಳ ಬದುಕು ಹಾಳಾಗುತ್ತದೆ ಈ ಮದುವೆ ಬೇಡ ಎಂದು ನಿರ್ಧರಿಸಿದ ಹುಡುಗಿಯ ಕುಟುಂಬ ಹುಡುಗನ ಮನೆಯಿಂದ ಎದ್ದು ಬರುತ್ತದೆ.
ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿರುವ ಈ ಹುಡುಗನಿಗೆ ಮದುವೆ ಯಾಕೆ ಬೇಕು ? ಎಂದು ಪ್ರಶ್ನಿಸಿದ ಹುಡುಗಿಯ ಅಂಕಲ್ ವಾದ ಮಾಡುತ್ತಾನೆ. ಉಳಿದವರು ಕೂಡ ಅವರ ಮಾತಿಗೆ ಸಮ್ಮತಿಯನ್ನು ನೀಡಿ ಮದುವೆಯ ಮಾತುಕತೆಯನ್ನು ಅಲ್ಲಿಗೆ ನಿಲ್ಲಿಸಿ ಮನೆಯಿಂದ ಎದ್ದು ಬರುತ್ತಾರೆ.
ಇದನ್ನೂ ಓದಿ:ಮದುವೆಯಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ‘ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗ; ಹುಡುಗಿಯ ತಂದೆ ಮಾಡಿದ್ದೇನು?
ಈ ದೇಶದಲ್ಲಿ ಮದುವೆ ಅಥವಾ ಹುಡುಗಿ ಹುಡುಗನನ್ನು, ಹುಡುಗ ಹುಡುಗಿಯನ್ನು ತಿರಸ್ಕಾರ ಮಾಡಲು, ರಾಶಿ, ಜಾತಕ, ಗುಣ, ಗೋತ್ರಗಳು ಹೆಚ್ಚು ಕಾರಣವಾಗುತ್ತವೆ. ಆದ್ರೆ ಸಿಬಿಲ್ ಸ್ಕೋರ್ ಕಾರಣದಿಂದ ಮದುವೆಯೊಂದು ರದ್ದಾದ ಪ್ರಕರಣ ಬಹುಶಃ ಇದೇ ಮೊದಲ ಬಾರಿಗೆ ಇರಬೇಕು.
ಏನಿದು ಸಿಬಿಲ್ ಸ್ಕೋರ್
ಅಸಲಿಗೆ ಈ ಸಿಬಿಲ್ ಸ್ಕೋರ್ ಏನು ಅನ್ನೋದನ್ನ ನೋಡುವುದಾದ್ರೆ, ಕ್ರೆಡಿಟ್ ಇನ್ಫಾರ್ಮೆಷನ್ ಬ್ಯುರೊ ಲಿಮಿಟೆಡ್ ಎಂಬುದು ನೀಡುವ ಮೂರು ಡಿಜಿಟ್ನ ನಂಬರ್. 300 ರಿಂದ 900ರವರೆಗೂ ಅದು ನಿಮ್ಮ ಸಾಲ ಪಡೆದ ಹಾಗೂ ತೀರಿಸಿದ ರೀತಿಯ ಮೇಲೆ ನಂಬರ್ನ್ನು ಕೊಡುತ್ತದೆ. ಇದೇ ಸಿಬಿಲ್ ಸ್ಕೋರ್ ಆಧಾರದ ಮೇಲೆಯೇ ಬ್ಯಾಂಕ್ಗಳು ಸಾಲ ಹಾಗೂ ಕ್ರೆಡಿಟ್ ಕಾರ್ಡ್ನ್ನು ನೀಡಲಾಗುವುದು. ನೀವು ಸಾಲ ಪಡೆಯಲು ಕನಿಷ್ಠವೆಂದರೂ 650 ರಿಂದ 700ರಷ್ಟು ನಿಮ್ಮ ಸಿಬಿಲ್ ಸ್ಕೋರ್ ಇರಬೇಕು. ಹೆಚ್ಚು ಹೆಚ್ಚು ಸ್ಕೋರ್ ಇದ್ದವರು ಹೆಚ್ಚು ಬ್ಯಾಂಕ್ಗಳಲ್ಲಿ ಸಾಲ ಹಾಗೂ ಸಾಲದ ರೂಪದಲ್ಲಿ ಸಿಗುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ