/newsfirstlive-kannada/media/post_attachments/wp-content/uploads/2025/02/Art-of-living-Guruji.jpg)
ಬೆಂಗಳೂರು: ಮಹಾ ಶಿವರಾತ್ರಿ ಉತ್ಸವವನ್ನು ಈ ವರ್ಷ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಹಳ ವೈಭವ ಹಾಗೂ ಉತ್ಸಾಹಗಳಿಂದ ಆಚರಿಸಲಾಗುತ್ತಿದೆ. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಉತ್ಸವವು, ಆಶ್ರಮದಲ್ಲಿ ಸಂಪೂರ್ಣ ಭಕ್ತಿ, ಜಪ-ತಪ, ಆಳವಾದ ಧ್ಯಾನ ಮತ್ತು ರುದ್ರಪೂಜೆಯ ಮಂತ್ರಘೋಷಗಳ ಮಿಲನವಾಗಲಿದೆ.
ಈ ವರ್ಷದ ಶಿವರಾತ್ರಿಯ ಹಿರಿಮೆಯೆಂದರೆ 1000 ವರ್ಷಗಳ ನಂತರ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ಬಹಿರಂಗ ಪ್ರಕಟಣೆಯಾಗುತ್ತಿರುವುದು. 1000 ವರ್ಷಗಳ ಹಿಂದೆ ಭಗ್ನವಾಗಿ ಕಣ್ಮರೆಯಾಗಿದ್ದ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಉದಯ ಆಗುತ್ತಿದೆ.
ಕ್ರಿ.ಶ 1025ರಲ್ಲಿ ಮಹಮ್ಮದ್ ಘಜ್ನಿಯು ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದಾಗ ಅದನ್ನು ಬಹಳ ಆದರ ಹಾಗೂ ಗೌರವದಿಂದ ಆರಾಧಿಸಿದ ಪೀಳಿಗೆಯು ತೀವ್ರವಾದ ನೋವಿಗೆ ಒಳಗಾಯಿತು. ಆದರೆ ಆ ಲಿಂಗವು ಸಂಪೂರ್ಣ ನಾಶವಾಗಿರಲಿಲ್ಲ. ಸೋಮನಾಥ ಜ್ಯೋತಿರ್ಲಿಂಗ ಒಂದು ವಿಶೇಷವಾದ ಶಿಲೆಯಿಂದ ಮಾಡಲ್ಪಟ್ಟಿದ್ದು, ಭೂಮಿಯಿಂದ 2 ಅಡಿ ಎತ್ತರದಲ್ಲಿ ಅದು ತೇಲುತ್ತಿತ್ತು ಎಂದು ಹೇಳಲಾಗುತ್ತದೆ.
1000 ವರ್ಷಗಳ ಕಾಲ ಅಗ್ನಿಹೋತ್ರಿ ಬ್ರಾಹ್ಮಣರು ಸಂರಕ್ಷಿಸಿ ರಹಸ್ಯವಾಗಿ ಆರಾಧಿಸಿದ ಪವಿತ್ರ ಲಿಂಗ ಇದು. ಮಹಮ್ಮದ್ ಘಜ್ನಿ ದಾಳಿಯ ನಂತರ, ಅಗ್ನಿ ಹೋತ್ರಿ ಬ್ರಾಹ್ಮಣರು ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕೊಂಡೊಯ್ದು, ದಕ್ಷಿಣ ಭಾರತದಲ್ಲಿ ರಹಸ್ಯವಾಗಿ ಆರಾಧನೆಯನ್ನು ಮುಂದುವರೆಸಿದರು. ಪೀಳಿಗೆಯಿಂದ ಪೀಳಿಗೆಗೆ ಪ್ರಸಾರವಾಗಿ, ಈ ಭಾಗಗಳು ಅಂತಿಮವಾಗಿ ಸೀತಾರಾಮ ಶಾಸ್ತ್ರಿಗಳ ಕೈಗೆ ಬಂದವು. ಇವರು ಕಳೆದ 20 ವರ್ಷಗಳಿಂದ ಇದರ ಪುನಃ ಪ್ರತಿಷ್ಠಾಪನೆಯ ಸಂದರ್ಭದ ನಿರೀಕ್ಷೆಯಲ್ಲಿ ಇದ್ದರು.
ಸಂತ ಶ್ರೀ ಪ್ರಣವೇಂದ್ರ ಸರಸ್ವತಿಯವರು 1924ರಲ್ಲಿ ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕಂಚಿ ಶಂಕರಾಚಾರ್ಯ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿಯವರಿಗೆ ಅರ್ಪಿಸಿದಾಗ ಅವರು "ಇದನ್ನು ಪ್ರತಿಷ್ಠಾಪಿಸಲು ಇನ್ನೂ 100 ವರ್ಷಗಳು ಬೇಕಾಗುತ್ತದೆ" ಎಂದು ಭವಿಷ್ಯವಾಣಿ ನುಡಿದಿದ್ದರು.
2024ರಲ್ಲಿ, ಈಗಿನ ಕಂಚಿ ಶಂಕರಾಚಾರ್ಯರ ಆಶೀರ್ವಾದ ಪಡೆದು, ಈ ಪವಿತ್ರ ಲಿಂಗವನ್ನು ಶ್ರೀ ಶ್ರೀ ರವಿಶಂಕರರ ಬಳಿಗೆ ತರಲು ನಿರ್ಧರಿಸಲಾಯಿತು.
ಜನವರಿ 2025ರಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಲಿಂಗದ ಅನಾವರಣ!
2025ರ ಜನವರಿಯಲ್ಲಿ, ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರಕ್ಕೆ ತರಲಾಯಿತು. ಸಾವಿರಾರು ಭಕ್ತರ ಎದುರು ಗುರುದೇವರು ಅದನ್ನು ಅನಾವರಣ ಮಾಡಿದರು. ಗುರುದೇವರು ಲಿಂಗವನ್ನು ಕೈಯಲ್ಲಿ ಹಿಡಿದು ಅದರ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ಪ್ರದರ್ಶನ ಮಾಡಿ ತೋರಿಸಿದರು.
ವೈಜ್ಞಾನಿಕ ಅಧ್ಯಯನ: ಅದ್ಭುತ ಕಾಂತೀಯ ಗುಣಗಳು!
2007ರಲ್ಲಿ ನಡೆಸಿದ ಭೌಗೋಳಿಕ ಅಧ್ಯಯನದಲ್ಲಿ ಈ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ, ವಿಶೇಷ ಚುಂಬಕೀಯ ಶಕ್ತಿಯ ಗುಣಗಳು ಇವೆ ಎಂಬುದು ಪತ್ತೆಯಾಗಿತ್ತು. ಇದರಲ್ಲಿ ಇರುವ ಲೋಹದ ಅಂಶವು ಅಯಸ್ಕಾಂತತೆಗೆ ಸಾಕಷ್ಟು ಕಡಿಮೆಯಾಗಿದ್ದು, ಈ ರಹಸ್ಯವನ್ನು ಅರ್ಥೈಸಲು ವಿಜ್ಞಾನಿಗಳು ಈಗಲೂ ಪ್ರಯತ್ನಿಸುತ್ತಿದ್ದಾರೆ.
ಈ ಮಹಾ ಶಿವರಾತ್ರಿಯಂದು ಆಶ್ರಮದಲ್ಲಿ ಎಲ್ಲಾ ಭಕ್ತರಿಗೆ ಅಪರೂಪದ ಅವಕಾಶವನ್ನು ಒದಗಿಸಲಾಗಿದೆ. ಫೆಬ್ರವರಿ 26ರ ಸಂಜೆ 6:30 ಗಂಟೆಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಸತ್ಸಂಗದೊಂದಿಗೆ ಪ್ರಾರಂಭವಾಗುವ ಈ ಉತ್ಸವ, ಫೆಬ್ರವರಿ 27ರ ಮುಂಜಾನೆ 4:00 ಗಂಟೆಗೆ ಮಹಾ ರುದ್ರ ಹೋಮದೊಂದಿಗೆ ಭಕ್ತಿಯ ಮೆರುಗು ನೀಡಲಿದೆ.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ 10ನೇ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನ: ಗುರುದೇವ ಶ್ರೀ ಶ್ರೀ ರವಿಶಂಕರ ಅವರು ಏನಂದ್ರು?
ಈ ಐತಿಹಾಸಿಕ ಕ್ಷಣವನ್ನು ಅನುಭವಿಸಿ, ನಿಮ್ಮ ಆತ್ಮದ ಶಿವತತ್ತ್ವವನ್ನು ಜಾಗೃತಗೊಳಿಸಲು, ಈ ಮಹಾ ಶಿವರಾತ್ರಿಯಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ನಿಮಗೆ ಆದರದ ಸ್ವಾಗತ ಕೋರಲಾಗಿದೆ. ಎಲ್ಲರಿಗೂ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ನೀವು ಬಂದು ಇದರಲ್ಲಿ ಪಾಲ್ಗೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ