/newsfirstlive-kannada/media/post_attachments/wp-content/uploads/2025/01/BNG_GANGADARESHWARA.jpg)
ದೇಶಾದ್ಯಂತ ಮಕರ ಸಂಕ್ರಾಂತಿಯನ್ನ ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ಪವಿತ್ರ ನದಿಗಳಿಗೆ ತೆರಳಿ ಭಕ್ತಿಭಾವದಿಂದ ಅಸಂಖ್ಯೆ ಭಕ್ತಕೋಟಿ ಮಿಂದು ಪೂಣ್ಯಸ್ನಾನ ಮಾಡುತ್ತಿದ್ದಾರೆ. ಇತ್ತ, ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ಅದೃಶ್ಯ ಜ್ಯೋತಿಯ ವಿಸ್ಮಯಕ್ಕೆ ಜಾಗರಣೆ ನಡೆದಿದೆ. ಇನ್ನು, ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯ ನಮಸ್ಕಾರದ ಘಳಿಗೆ ನೋಡಲು ಕಾತರದಿಂದ ಜನ ಕಾದಿದ್ದಾರೆ.
ಸಂಕ್ರಾಂತಿ, ಇದು ಸುಗ್ಗಿ ಹಬ್ಬ. ಸಂಕ್ರಾಂತಿ ಸಮೃದ್ಧಿಯ ಸಂಕೇತ. ಮನೆ-ಮನಗಳಲ್ಲಿ ಶಾಂತಿ-ನೆಮ್ಮದಿ ಬೇಡುವ ಸಂಭ್ರಮದ ಹಬ್ಬ. ಎಳ್ಳು-ಬೆಲ್ಲದ ಸಮ್ಮಿಶ್ರಣ. ಇಂಗ್ಲೀಷ್ ಕ್ಯಾಲೆಂಡರ್ನ ವರ್ಷದ ಮೊದಲ ಹಬ್ಬ. ಸಂಕ್ರಾಂತಿ ಸೂರ್ಯದೇವ ತನ್ನ ಪಥ ಬದಲಿಸುವ ಘಳಿಗೆ. ಅಂದ್ಹಾಗೆ ಇವತ್ತು ಇಡೀ ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ-ಸಡಗರ ಎಲ್ಲೆಡೆ ಬೀರಿದೆ.
ಶಬರಿಮಲೆಯಲ್ಲಿ ಜಗಜ್ಯೋತಿ, ಗಂಗಾಧರನಿಗೆ ಸೂರ್ಯ ಸ್ನಾನ!
ಹಗಲು ಜಾಸ್ತಿಯಾಗಿ, ಕತ್ತಲು ಕರಗುವ ಕಾಲ ಆರಂಭ ಆಗಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಸಂಕ್ರಾಂತಿ ಬಲು ವಿಶೇಷವಾಗಿದೆ. 30 ವರ್ಷಗಳ ಬಳಿಕ ಹುಣ್ಣಿಮೆ ಮರುದಿನವೇ ಮಕರ ಸಂಕ್ರಾಂತಿ ಆಗಮಿಸಿದೆ. ಅಂದ್ಹಾಗೆ ಅಯ್ಯಪ್ಪನ ಸನ್ನಿಧಾನ ಶಬರಿಮಲೆಯಲ್ಲಿ ಭಕ್ತಸಾಗರ ನೆರೆದಿದೆ.
ಪೊನ್ನಂಬಲಮೇಡುವಿನಲ್ಲಿ ಜ್ಯೋತಿಯ ರೂಪದಲ್ಲಿ ಅಯ್ಯಪ್ಪ ದರ್ಶನ!
ಈ ವರ್ಷದ ಮಂಡಲ ಪೂಜೆ ಆರಂಭವಾದಾಗಿನಿಂದ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಕರವಿಳಕ್ಕು ಪೂಜೆಗಾಗಿ ದೇವಾಲಯವನ್ನು ತೆರೆಯಲಾಗಿದ್ದು, ಜನವರಿ 9 ರಾತ್ರಿಯಿಂದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಮಂಡಲ ಮತ್ತು ಮಕರವಿಳಕ್ಕು ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 42 ಲಕ್ಷ ಮೀರಿದೆ. ಮಕರ ಜ್ಯೋತಿ ದರ್ಶನವು ಇವತ್ತು ಸಂಜೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಕೊನೆಗೊಳ್ಳಲಿದೆ. ಶಬರಿಮಲೆಯಲ್ಲಿ ಭಕ್ತಸಂದಣಿಯನ್ನು ನಿಯಂತ್ರಿಸಲು ದೇವಸ್ವಂ ಮಂಡಳಿಯು ವಿವಿಧ ನಿರ್ಬಂಧಗಳನ್ನ ಜಾರಿಗೊಳಿಸಿದೆ.
ಇದನ್ನೂ ಓದಿ:ಮಹಾಕುಂಭ ಮೇಳದ ಮೊದಲ ದಿನ ಹೇಗಿತ್ತು? ಏನೆಲ್ಲಾ ನಡೀತಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಮಹಾದೇವನ ಅಪ್ಪಣೆ ಕೇಳುವ ರವಿರಾಯ!
ಸಂಕ್ರಾಂತಿ ಅಂದ್ರೆನೆ ಸೂರ್ಯಾರಾಧನೆಯ ಹಬ್ಬ. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯ. ಸಮಸ್ತ ದೇವತಾ ಕಾರ್ಯ ಶುಭ ಕಾರ್ಯಗಳಿಗೆ ಈ ಉತ್ತರಾಯಣ ಕಾಲವೇ ಶ್ರೇಷ್ಠ. ಬೆಂಗಳೂರಿನ ಗವಿ ಗಂಗಾಧರೇಶ್ವರನ ಅಪ್ಪಣೆಗೆ ಕಾಯುವ ಸೂರ್ಯದೇವ, ತನ್ನ ಚುಂಬಕ ರಶ್ಮಿಯ ಮೂಲಕ ಪದ ಸ್ಪರ್ಶ ಮಾಡಿ ಮುಂದೇ ಸಾಗ್ತಾನೆ. ಮೊದಲು ಶಿವನ ವಾಹನ ನಂದಿಯನ್ನ ಸ್ಪರ್ಶಿಸುವ ಭಾಸ್ಕರ, ಬಳಿಕ ಗರ್ಭಗುಡಿಯಲ್ಲಿ ಶಿವನಿಗೆ ನಮಸ್ಕರಿಸಿ ದಿಕ್ಕು ಬದಲಿಸ್ತಾನೆ.
ಇತ್ತ, ಶ್ರೀರಂಗಪಟ್ಟಣ ದಕ್ಷಿಣ ಕಾವೇರಿ ನದಿ ತೀರದಲ್ಲಿರುವ ಏಕೈಕ ಶಿವನ ದೇವಾಲಯ ಪುರಾಣ ಪ್ರಸಿದ್ಧ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯ ಲಿಂಗಕ್ಕೂ ಸೂರ್ಯಸ್ನಾನ ನಡೆಯಲಿದೆ. ಸೂರ್ಯನ ಪ್ರಥಮ ರಶ್ಮಿ ಕಿರಣಗಳು ಸ್ಪರ್ಶ ಮಾಡುವ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಸಂಕ್ರಾಂತಿ ಹಬ್ಬವು ಶಾಂತಿ-ಸಮೃದ್ಧಿ ತರಲಿ. ನಿಮ್ಮ ಜೀವನದಲ್ಲಿ ಹೊಸ ಚೈತನ್ಯ ಮೂಡಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ