/newsfirstlive-kannada/media/post_attachments/wp-content/uploads/2025/02/MH_70_6.jpg)
ಎಂಹೆಚ್-370 ವಿಮಾನ.. 2014ರ ಮಾರ್ಚ್ನಲ್ಲಿ ಮಲೇಷ್ಯಾದಿಂದ ಹೊರಟಿದ್ದ ವಿಮಾನ ಎಲ್ಲೋಯಿತು? ಏನಾಯಿತು ಎನ್ನುವುದು ಇದುವರೆಗೂ ಗೊತ್ತಿಲ್ಲ. ಆ ಫ್ಲೈಟ್ನಲ್ಲಿದ್ದ 227 ಪ್ರಯಾಣಿಕರು, 10 ಮಂದಿ ಸಿಬ್ಬಂದಿಗೆ ಏನಾದರು, ಬದುಕಿದ್ದಾರಾ, ಪ್ರಾಣ ಕಳೆದುಕೊಂಡಿದ್ದಾರಾ ಎನ್ನುವುದು ಕೂಡ ಗೊತ್ತಿಲ್ಲ. ಹೀಗೆ 11 ವರ್ಷದ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಎಂಹೆಚ್-370 ವಿಮಾನ ಹುಡುಕಾಟ ಇದೀಗ ಮತ್ತೆ ಆರಂಭವಾಗಿದೆ.
ವಿಮಾನದ ನಿಗೂಢ ನಾಪತ್ತೆ
ಈ ಎಂಹೆಚ್-370 ಫ್ಲೈಟ್ ಮಿಸ್ಸಿಂಗ್ ಪ್ರಕರಣ ವೈಮಾನಿಕ ಕ್ಷೇತ್ರದಲ್ಲೇ ಅತ್ಯಂತ ನಿಗೂಢ ಪ್ರಕರಣ ಎಂದೇ ಹೇಳಲಾಗುತ್ತದೆ. ಅದಕ್ಕೂ ಒಂದಷ್ಟು ಕಾರಣಗಳಿವೆ. ಅಷ್ಟಕ್ಕೂ ಈ ವಿಮಾನ ಕಣ್ಮರೆಯಾಗಿದ್ದೇ ಒಂದು ರೀತಿ ವಿಚಿತ್ರ, ನಿಗೂಢ. ಮಾರ್ಚ್ 8, 2014ರಂದು ರಾತ್ರಿ 12.30ರ ಸುಮಾರಿಗೆ 227 ಪ್ರಯಾಣಿಕರನ್ನು ಹೊತ್ತ ಎಂಹೆಚ್-370 ವಿಮಾನ ಮಲೇಷ್ಯಾದಿಂದ ಚೀನಾ ಕಡೆ ಪ್ರಯಾಣ ಆರಂಭಿಸಿತ್ತು. ಕೌಲಾಲಂಪುರ ಏರ್ಪೋರ್ಟ್ನಿಂದ ಹೊರಟಿದ್ದ ವಿಮಾನ ರಾತ್ರಿ ಸುಮಾರು 1:21ರ ವೇಳೆ ರಡಾರ್ನಿಂದ ಇದ್ದಕ್ಕಿದ್ದಂತೆ ಕಣ್ಮರೆ ಆಗಿತ್ತು. ಟೇಕಾಫ್ ಆದ ಸರಿ ಸುಮಾರು 50 ನಿಮಿಷಗಳ ಬಳಿಕ ಫ್ಲೈಟ್ನ ಸಂಪರ್ಕ ಸಂಪೂರ್ಣ ಕೈ ತಪ್ಪಿತ್ತು. ಮರುದಿನ ಬೆಳಗ್ಗೆ 6:32ಕ್ಕೆ ಬೀಜಿಂಗ್‌ನಲ್ಲಿ ಈ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದ್ರೆ ಎಷ್ಟು ಸಮಯ ಕಳೆದರೂ ವಿಮಾನದ ಸುಳಿವೇ ಇರಲಿಲ್ಲ. ಅಂದು ಮಿಸ್ ಆದ ವಿಮಾನದ ಸುಳಿವು, ಕುರುಹು ಇದುವರೆಗೂ ಪತ್ತೆಯಾಗಿಲ್ಲ.
ಕ್ಯಾಪ್ಟನ್ ಕೊನೆಯ ಮಾತು
ವಿಯೇಟ್ನಾಂ ಏರ್ಸ್ಪೇಸ್ಗೆ ಆಗಮಿಸುತ್ತಿದ್ದಂತೆ ಕ್ಯಾಪ್ಟನ್ ಜಹೀರ್ ಅಹ್ಮದ್ ಶಾ, ‘ಗುಡ್ ನೈಟ್ ಮಲೇಷಿಯನ್ ತ್ರಿ ಸೆವೆನ್ ಝೀರೋ’ ಎಂದು ಸೈನ್ ಆಫ್ ಮಾಡಿದ್ದೇ ಕೊನೆ ಮಾತು. ಆ ಬಳಿಕ ಆ ವಿಮಾನ ಕಣ್ಮರೆ ಆಗಿಬಿಟ್ಟಿತ್ತು. ವಿಯೇಟ್ನಾಂ ಏರ್ಸ್ಪೇಸ್ಗೆ ಹೋದ ಬಳಿಕ ಹಠಾತ್ ರಡಾರ್ನಿಂದ ಮಿಸ್ ಆದ ವಿಮಾನ ಸಂಪರ್ಕ ಕಳೆದುಕೊಂಡು ನಾಪತ್ತೆ ಆಗಿಬಿಟ್ಟಿತ್ತು.
ವಿಮಾನದಲ್ಲಿ ಇದ್ದಿದ್ದು ಒಬ್ಬರಲ್ಲ, ಇಬ್ಬರಲ್ಲ ಬರೊಬ್ಬರಿ 227 ಮಂದಿ. ಇಷ್ಟೊಂದು ಜನರು ಏಕಕಾಲದಲ್ಲಿ ಕಣ್ಮರೆಯಾಗಿದ್ದು ಆಗಿನ ಸಮಯಕ್ಕೆ ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿತ್ತು. ಕೇವಲ ಮಲೇಷ್ಯಾದ ಸರ್ಕಾರ ಮಾತ್ರವಲ್ಲ, ಒಂದು ಲೆಕ್ಕದಲ್ಲಿ ಇಡೀ ವಿಶ್ವವೇ ಈ ವಿಮಾನದ ಹುಡುಕಾಟಕ್ಕೆ ಇಳಿದಿತ್ತು. 7 ದೇಶಗಳ ಸುಮಾರು 34 ಶಿಪ್‌ಗಳು, 28 ಏರ್‌ಕ್ರಾಫ್ಟ್‌ಗಳು ನೂರಾರು ಸಿಬ್ಬಂದಿ ಈ ವಿಮಾನಕ್ಕಾಗಿ ಹುಡುಕಾಟ ನಡೆಸಿದರು. ಇಷ್ಟಾದ್ರೂ ಆ ವಿಮಾನಕ್ಕೆ ಏನಾಯಿತು ಅನ್ನೋ ಸುಳಿವು ಸಿಕ್ಕಿಲ್ಲ.
ಫ್ಲೈಟ್ ಯೂಟರ್ನ್.. ಕಹಾನಿ ಮೇ ಟ್ವಿಸ್ಟ್
ಮಾರ್ಚ್ 12ಕ್ಕೆ ಯಾರೂ ಊಹೆ ಮಾಡಿರದಂತ ಒಂದು ಅಚ್ಚರಿಯ ಸುಳಿವೊಂದು ಸಿಗುತ್ತೆ. ವಿಮಾನ ನಾಪತ್ತೆಯಾದ 4 ದಿನದ ಬಳಿಕ ಹೊಸ ಸುಳಿವೊಂದು ಸಿಗುತ್ತೆ. ಈ ವಿಮಾನ ಕೊನೆಯ ಬಾರಿಗೆ ಮಿಲಿಟರಿ ರಡಾರ್ ಕಣ್ಣಿಗೆ ಬಿದ್ದಿರೋದು ಬೆಳಕಿಗೆ ಬರುತ್ತೆ. ಅದು ಮಾರ್ಚ್ 12ರಂದು ಮಧ್ಯರಾತ್ರಿ 2.22ರ ವೇಳೆಗೆ ಅಂಡಮಾನ್ ನಿಕೋಬಾರ್ ವಲಯದ ಭಾಗದತ್ತ ಹೋಗ್ತಿರುವಂತೆ ಈ ವಿಮಾನ ಇರೋದು ರಾಡರ್ ಕಣ್ಣಿಗೆ ಬಿದ್ದಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಯಾಕಂದ್ರೆ ಚೀನಾದ ದಕ್ಷಿಣ ಸಮುದ್ರದಲ್ಲಿರಬೇಕಿದ್ದ ಫ್ಲೈಟ್, ಕಂಪ್ಲೀಟ್ ಯೂಟರ್ನ್ ಪಡೆದು ಮಲೇಷ್ಯಾದ ಪಶ್ಚಿಮ ಭಾಗದಲ್ಲಿ ಬರೋ ಸ್ಟ್ರೈಟ್ ಆಫ್ ಮಲೇಷ್ಯಾದಲ್ಲಿ ಕಂಡು ಬಂದಿತ್ತು. ಅರ್ಥಾತ್ ಈ ವಿಮಾನ ತನ್ನ ಮಾರ್ಗವನ್ನೇ ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ ಅನ್ನೋ ಆತಂಕಕಾರಿ ಮಾಹಿತಿ ಪತ್ತೆಯಾಗಿತ್ತು. ಅದಾದ ನಂತರ ಈ ಭಾಗದ ಸಮುದ್ರದಲ್ಲೂ ಹುಡುಕಾಟ ಶುರುವಾಗಿತ್ತು. ಹಿಂದೂ ಮಹಾ ಸಾಗರದ ವಲಯದಲ್ಲಿ ಬರೋ 7TH ARC ಅನ್ನೋ ಪ್ರದೇಶದಲ್ಲಿ ವಿಮಾನ ಕ್ರ್ಯಾಶ್ ಆಗಿರಬಹುದು ಅಂತಾ ಅಂದಾಜು ಮಾಡಲಾಯಿತು. ಬಳಿಕ ಅಲ್ಲಿ ದೊಡ್ಡ ಪ್ರಮಾಣದ ಸರ್ಚಿಂಗ್ ನಡೆಸಲಾಗಿತ್ತು. ಆದ್ರೆ ವಿಮಾನ ಏನಾಗಿದೆ ಎನ್ನುವುದು ಗೊತ್ತಾಗಿಲ್ಲ.
ಮೊದಲ ಕುರುಹು ಪತ್ತೆ
2015ರಲ್ಲಿ ಮಡಾಗಾಸ್ಕರ್ ಹತ್ತಿರ, ಆಫ್ರಿಕಾದ ಆಗ್ನೇಯ ಕರಾವಳಿ ತೀರದಲ್ಲಿರೋ ದ್ವೀಪದಲ್ಲಿ ಈ ವಿಮಾನದ ಒಂದು ರೆಕ್ಕೆ ಪತ್ತೆಯಾಗುತ್ತೆ. ಇದು ನಾಪತ್ತೆಯಾಗಿದ್ದ ಎಂಹೆಚ್ 370 ವಿಮಾನದ ಬಗ್ಗೆ ಸಿಕ್ಕ ಮೊಟ್ಟ ಮೊದಲ ಕುರುಹು. ಆದ್ರೆ ಆ ಭಾಗದಲ್ಲಿ ವಿಮಾನದ ಒಂದು ರೆಕ್ಕೆ ಪತ್ತೆಯಾಗಿದ್ದು ಬಿಟ್ರೆ, ಮತ್ಯಾವುದೇ ಕುರುಹು ಸಿಕ್ಕಿಲ್ಲ. ಹುಡುಕಾಟಕ್ಕೂ ಫಲ ಸಿಗಲಿಲ್ಲ. ಇದಾದ ಬಳಿಕ 2018ರವರೆಗೂ ಇಡೀ ಹಿಂದೂ ಮಹಾಸಾಗರವನ್ನೇಲ್ಲಾ ಜಾಲಾಡಿದ್ದರು. ಚೀನಾ, ಮಲೇಷ್ಯಾ, ಆಸ್ಟ್ರೇಲಿಯಾ ದೇಶಗಳ ಸಹಕಾರದೊಂದಿಗೆ ಸತತ 4 ವರ್ಷ ಸರ್ಚಿಂಗ್ ಆಪರೇಷನ್ ನಡೆಸಿದರು. ಹೆಚ್ಚು ಚೀನಾದ ಪ್ರಯಾಣಿಕರೇ ಇದ್ದ ಕಾರಣ ತನ್ನೆಲ್ಲಾ ಶಕ್ತಿಯನ್ನೂ ಡ್ರ್ಯಾಗನ್ ರಾಷ್ಟ್ರ ಹುಡುಕಾಟಕ್ಕೆ ಬಳಸಿತ್ತು. ಆದ್ರೆ ಈ ಕಾರ್ಯಾಚರಣೆ ಫಲ ಕೊಡಲಿಲ್ಲ. ಕೋಟಿ ಕೋಟಿ ಖರ್ಚಿನ ಬಳಿಕ ಈ ಹುಡುಕಾಟದ ಕಾರ್ಯಾಚರಣೆ ನಡೆಸಿದ್ದ ಓಷನ್ ಇನ್ಫಿನಿಟಿ ಸಂಸ್ಥೆ 2018ರಲ್ಲಿ ತನ್ನ ಹುಡುಕಾಟ ನಿಲ್ಲಿಸಿತ್ತು. ಇದೊಂದು ವಿಫಲ ಶೋಧ ಕಾರ್ಯವೆಂದು ಹೇಳಿ ಕೈಚೆಲ್ಲಿತ್ತು. ಆದ್ರೀಗ ಮತ್ತೆ ಮತ್ತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಡುಕಾಟಕ್ಕೆ ಮುಂದಾಗಿದೆ. ಈ ಬಾರಿ ನಿರಂತರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚೋದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ:ಟೇಕ್ ಆಫ್ ಆಗಿದ್ದ ವಿಮಾನ ಪತನ.. ಮಹಿಳೆಯರು, ಮಕ್ಕಳು ಸೇರಿ 46 ಪ್ರಯಾಣಿಕರು ನಿಧನ
ಹತ್ತಾರು ಅನುಮಾನ.. ಹಲವಾರು ಕಥೆ
ಇನ್ನು, ಈ ವಿಮಾನ ನಾಪತ್ತೆ ಆಗಿರೋದರ ಹಿಂದೆ ಸಾಕಷ್ಟು ಊಹಾಪೋಹದ ಕಥೆಗಳು ಅಡಗಿವೆ. ವಿಮಾನ ಸಮುದ್ರ ಪಾಲಾಗಿರಬಹುದು ಅನ್ನೋದು ಬಹುತೇಕ ತಜ್ಞರ ಅಂದಾಜು. ಆದ್ರೆ ಇದನ್ನ ಹೊರತಾಗಿಯೂ ಸಾಕಷ್ಟು ಚರ್ಚೆಗಳು ಈ ವಿಮಾನದ ದುರಂತದ ಹಿಂದೆ ನಡೆದಿವೆ. ಕೆಲವರ ಪ್ರಕಾರ ಏಲಿಯನ್ಗಳ ದಾಳಿ ಅನ್ನೋದಾಗಿತ್ತು. ಇನ್ನೂ ಕೆಲವರು ವಿಮಾನ ಪೈಲೆಟ್ಗಳ ಆತ್ಮಾಹುತಿ ಪ್ರಯತ್ನ ಅಂತಾ ಕರೆದರು. ಸುಳಿವೇ ಸಿಗದ ಕಾರಣ ವಿಮಾನವನ್ನ ಹೈಜಾಕ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಈ ಫ್ಲೈಟ್ನಲ್ಲಿ ಇಬ್ಬರು ಇರಾನ್ ಯುವಕರು ಫೇಕ್ ಪಾಸ್ಪೋರ್ಟ್ ಬಳಸಿ ಪ್ರಯಾಣಿಸಿರೋದು ಬೆಳಕಿಗೆ ಬಂದ ಬಳಿಕ ಹೈಜಾಕ್ ಅನುಮಾನ ದುಪ್ಪಟ್ಟಾಯಿತು. ಕೊನೆ ಬಾರಿಗೆ ವಿಮಾನ ಪೈಲೆಟ್ಗಳ ಕಂಟ್ರೋಲ್ನಲ್ಲಿರದೇ ಆಟೋ ಪೈಲೆಟ್ ಮೋಡ್ನಲ್ಲಿ ಚಲಿಸ್ತಿತ್ತು ಅನ್ನೋ ಅಂಶ ಕೂಡ ಸಾಕಷ್ಟು ಚರ್ಚೆ, ಅನುಮಾನಕ್ಕೆ ಕಾರಣವಾಗಿದೆ.
ಅದು ಏನೇ ಇರಲಿ ಕಾಣೆಯಾದವರ ಕುಟುಂಬದವರು ಇನ್ನೂ ತಮ್ಮವರು ಬದುಕಿದ್ದಾರೆ ಅಂತಲೇ ನಂಬಿಕೊಂಡಿದ್ದಾರೆ. ಆದ್ರೆ 11 ವರ್ಷ ಕಳೆದರೂ ಯಾರೊಬ್ಬರ ಸುಳಿವು ಇದುವರೆಗೆ ಸಿಕ್ಕಿಲ್ಲ. ಕಾಣದ ವಸ್ತುಗಳ ಬಗ್ಗೆ ನೂರಾರು ಊಹಾಪೋಹಗಳು ಸಹಜ. ಆದ್ರೂ ಇಷ್ಟೊಂದು ತಂತ್ರಜ್ಞಾನ ಮುಂದುವರಿದ ಸಮಯದಲ್ಲೂ ಒಂದು ವಿಮಾನ ಪತ್ತೆಗೆ ಸಾಧ್ಯವಾಗದಿರೋದು ಅಚ್ಚರಿ. ಈ ಬಾರಿ ಹುಡುಕಾಟದಲ್ಲಾದ್ರೂ ಯಶಸ್ವಿ ಸಿಗುತ್ತಾ?. ಸಿಗಲಿ ಅನ್ನೋದು ಕಾಣೆಯಾದವರ ಕುಟುಂಬದವರ ಬಯಕೆ ಆಗಿದೆ.
ವಿಶೇಷ ವರದಿ:ಪ್ರಿಯತೋಷ್. ಎಸ್, ನ್ಯೂಸ್ಫಸ್ಟ್ ಡೆಸ್ಕ್
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ