/newsfirstlive-kannada/media/post_attachments/wp-content/uploads/2025/01/Saif-Ali-Khan-News.jpg)
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದ ಆರೋಪಿಯನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಂಗ್ಲಾ ಮೂಲದವನು ಎನ್ನಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಕೋರ್ಟ್ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅತ್ತ ಸೈಫ್ ಅಲಿ ಖಾನ್ ಚೇತರಿಸಿಕೊಳ್ತಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ಗೇಟ್ ವೇ ಆಫ್ ಇಂಡಿಯಾ ಮುಂಬೈ ಸಿಟಿ ಸದ್ಯ ಅಪರಾಧ ಕೃತ್ಯಗಳಿಗೆ ಗೇಟ್ ತೆರೆದಿರುವಂತಿದೆ. ಮೇಲಿಂದ ಮೇಲೆ ರಾಜಕೀಯ ಗಣ್ಯರು, ಸೆಲೆಬ್ರಿಟಿಗಳ ಮೇಲೆ ದಾಳಿ ಸಾಮಾನ್ಯವಾಗಿಬಿಟ್ಟಿವೆ. ಕಡಲ ನಗರಿ ಮುಂಬೈ ಅದ್ಯಾಕೋ ಸೇಫ್ ಸಿಟಿಯಲ್ಲ ಎಂಬಂತೆ ಭಾಸವಾಗ್ತಿದೆ. ಬಾಲಿವುಡ್ ನವಾಬನ ಮನೆಗೆ ನುಗ್ಗಿ ರಕ್ತಚರಿತ್ರೆ ಹರಿಸಿದ್ದು ಮಾತ್ರ ಕರಾಳ.
ನಡುರಾತ್ರಿ ನುಗ್ಗಿ ಚಾಕು ಇರಿತಿದ್ದ ಕಿರಾತಕ ಅರೆಸ್ಟ್
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪಿಯನ್ನು ಕೊನೆಗೂ ಮುಂಬೈ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದಾಳಿಕೋರನನ್ನು ಮೊಹ್ಮದ್ ಷರೀಫುಲ್ಲಾ ಇಸ್ಲಾಂ ಶೆಹಝಾದ್ ಅಂತ ಗುರುತಿಸಲಾಗಿದೆ. ಈ ಬಗ್ಗೆ ಮುಂಬೈನ ಬಾಂದ್ರಾ ಪೊಲೀಸರು ಮಾಹಿತಿ ನೀಡಿದ್ದಾರೆ. 30 ವರ್ಷ ವಯಸ್ಸಿನ ಆರೋಪಿ ಥಾಣೆಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಮೆಟ್ರೊ ನಿರ್ಮಾಣ ಸ್ಥಳದಲ್ಲಿನ ಕಾರ್ಮಿಕರ ಶಿಬಿರದಲ್ಲಿ ಬಂಧಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರ ಮುಂದೆ ಆರೋಪಿ ನಾಟಕ ಮಾಡಿದ್ದು ತನ್ನ ಹೆಸರು ವಿಜಯ್ ದಾಸ್ ಅಂತ ಹೇಳಿದ್ದಾನೆ. ಒಮ್ಮೊಮ್ಮೆ ಒಂದೊಂದು ಹೆಸರು ಹೇಳುವ ಮೂಲಕ ಗೊಂದಲ ಮೂಡಿಸಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಮೊಹ್ಮದ್ ಷರೀಫುಲ್ಲಾ ಬಾಂಗ್ಲಾದೇಶದ ಪ್ರಜೆ ಎನ್ನಲಾಗಿದೆ. ಈತ ಭಾರತೀಯ ಎನ್ನಲು ಯಾವುದೇ ಪುರಾವೆ ಇಲ್ಲ, ಅಕ್ರಮವಾಗಿ ಬಂದು ನೆಲೆಸಿದ್ದ ಎನ್ನಲಾಗಿದೆ. ಕಳ್ಳತನ ಮಾಡುವ ಉದ್ದೇಶದಿಂದ ಸೈಫ್ ಮನೆಗೆ ಹೋಗಿದ್ದೆ ಅಂತ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಆರೋಪಿ ಬಳಿ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಆರೋಪಿಗೆ 5 ದಿನ ಕಸ್ಟಡಿಗೆ ಒಪ್ಪಿಸಿದ ಕೋರ್ಟ್
ಬಂಧಿತ ಆರೋಪಿಯನ್ನು ಪೊಲೀಸರು ಬಾಂದ್ರಾ ಹಾಲಿಡೇ ಕೋರ್ಟ್ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ದಾಳಿಕೋರ ಬಾಂಗ್ಲಾದೇಶವನಾಗಿದ್ದು, ದಾಳಿಯ ಹಿಂದೆ ಯಾವುದೇ ಅಂತರರಾಷ್ಟ್ರೀಯ ಪಿತೂರಿ ಇದೆಯೇ ಎಂದು ತನಿಖೆ ಮಾಡಲು ಆತನನ್ನ ಕಸ್ಟಡಿ ನೀಡುವಂತೆ ಪೊಲೀರು ಕೋರಿದ್ರು.ಈ ಹಿನ್ನಲೆ ಇದೀಗ ನ್ಯಾಯಾಲಯ ಆರೋಪಿಯನ್ನ ಜನವರಿ 24ರವರೆಗೆ ಪೋಲೀಸ್ ಕಸ್ಟಡಿಗೆ ನೀಡಿದೆ.
ಸೈಫ್ ಅಲಿ ಖಾನ್ ಚೇತರಿಕೆ
ಈ ನಡುವೆ 6 ಬಾರಿ ಚಾಕು ಇರಿತಕ್ಕೆ ಒಳಗಾಗಿ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಜನವರಿಂದ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.
ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಅವರ ಕೊಲೆ ಯತ್ನ ನಡೆಸಿರುವ ಆರೋಪಿಗೆ 10 ವರ್ಷಗಳ ಕಾಲ ಶಿಕ್ಷೆ ವಿಧಿಸಲು ಅವಕಾಶ ಇದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ವಹಿಸಿದ್ದು ಮತ್ತಷ್ಟು ಸ್ಫೋಟಕ ವಿಚಾರಗಳು ಹೊರಬರುವ ನಿರೀಕ್ಷೆ ಇದೆ.
ಇದನ್ನೂ ಓದಿ:ರಕ್ತದ ಮಡುವಿನಲ್ಲೇ 7 ವರ್ಷದ ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದ ಸೈಫ್ ಅಲಿ ಖಾನ್; ಫೋಟೋ ರಿಲೀಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ