/newsfirstlive-kannada/media/post_attachments/wp-content/uploads/2025/02/mahakumbhmela-Prayagraj-1-1.jpg)
ವಿಜಯಪುರ: ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ವೇಳೆ ಬರೋಬ್ಬರಿ 24 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಪತ್ತೆಯಾದ ಅಪರೂಪದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಿಂದ ನಾಪತ್ತೆಯಾಗಿದ್ದ ರಮೇಶ ಚೌಧರಿ ಮರಳಿ ಊರು ಸೇರಿದ್ದಾನೆ.
ಇತ್ತೀಚೆಗೆ ಬಳೂತಿ ಗ್ರಾಮದ ಮಲ್ಲನಗೌಡ ಪಾಟೀಲ್ ಹಾಗೂ ಇತರರು ಪ್ರಯಾಗ್ ರಾಜ್ ಪ್ರವಾಸ ಕೈಗೊಂಡಿದ್ದರು. ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಕಾಶಿಗೆ ತೆರಳಿದ್ದ ಮಲ್ಲನಗೌಡ ಹಾಗೂ ಇತರರು ಅಲ್ಲಿದ್ದ ರಮೇಶ ಚೌಧರಿ ಅವರನ್ನು ಸಾಧು ವೇಶದಲ್ಲಿ ಕಂಡಿದ್ದಾರೆ.
ಮಲ್ಲನಗೌಡ ಪಾಟೀಲ್ ಕಣ್ಣಿಗೆ ರಮೇಶ ಬಿದ್ದಿದ್ದು, ಕನ್ನಡದಲ್ಲಿ ಮಾತನಾಡಿಸಿ ಮಾಹಿತಿ ಪಡೆದಿದ್ದಾರೆ. ಆಗ ರಮೇಶ ತನ್ನ ಪೂರ್ವಾಪರು ತಂದೆ, ತಾಯಿ ಹಾಗೂ ಕುಟುಂಬಸ್ಥರ ಹೆಸರುಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: ಏನ್ ಗುರು ಇದು.. ಮಹಾಕುಂಭಮೇಳದಲ್ಲಿ ಗಂಡನಿಗೆ ವಿಡಿಯೋ ಕಾಲ್; ಫೋನ್ನನ್ನೇ ಮುಳುಗಿಸಿದ ಮಹಿಳೆ! VIDEO
ರಮೇಶ ಚೌಧರಿ 2001ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದ. ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಗ್ರಾಮಸ್ಥರಿಗೆ ಸಿಕ್ಕ ರಮೇಶ ತಾನು ಮನೆ ಬಿಟ್ಟು ಬಿಹಾರದ ಪಾಟ್ನಾದಲ್ಲಿ ಡಾಂಬರೀಕರಣ ಕೆಲಸ ಮಾಡುತ್ತಾ ಕಾಲ ಕಳೆದೆ. ಒಂದೆರಡು ಬಾರಿ ಊರ ನೆನಪಾಗಿ ವಾಪಸ್ ಬರುವ ವಿಫಲ ಪ್ರಯತ್ನ ಮಾಡಿದೆ. ಭಯ, ಒತ್ತಡದ ಕಾರಣ ವಾಪಸ್ ಬರೋಕೆ ಆಗಲಿಲ್ಲಾ ಎಂದು ಹೇಳಿದ್ದಾನೆ.
ರಮೇಶ ಸಿಕ್ಕಿರುವ ಮಾಹಿತಿಯನ್ನು ಮಲ್ಲನಗೌಡರು ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರ ಜೊತೆಗೆ ಹಂಚಿಕೊಂಡಿದ್ದಾರೆ. ತಮ್ಮ ವಾಹನದಲ್ಲೇ ವಾಪಸ್ ಬಳೂತಿ ಗ್ರಾಮಕ್ಕೆ ರಮೇಶನನ್ನು ಕರೆ ತಂದಿದ್ದಾರೆ. 24 ವರ್ಷದ ಬಳಿಕ ಸಿಕ್ಕ ರಮೇಶನನ್ನು ಗ್ರಾಮಸ್ಥರು, ಕುಟುಂಬದವರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ನಾಪತ್ತೆಯಾಗಿದ್ದವ ಮರಳಿ ಮನೆಗೆ ಸೇರುವಂತೆ ಮಾಡಿದ್ದೇ ಕುಂಭಮೇಳ ಎಂದು ಗ್ರಾಮಸ್ಥರು ಸಂತೋಷ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ