/newsfirstlive-kannada/media/post_attachments/wp-content/uploads/2025/04/Mandya-kabaddi-Tragedy-2.jpg)
ಮಂಡ್ಯ: ಯಾವುದೇ ಕ್ರೀಡೆಯಾಗಿರಲಿ, ಪ್ರೇಕ್ಷಕರು ಇಲ್ಲ ಅಂದ್ರೆ ಅದಕ್ಕೆ ಕಳೆಯೇ ಇರಲ್ಲ. ಪ್ರೇಕ್ಷಕರು ನೋಡಿ ಪ್ರೋತ್ಸಾಹ ಮಾಡಿದಷ್ಟು ಆಟಗಾರನ ಹುಮ್ಮಸ್ಸು ಹೆಚ್ಚುತ್ತೆ. ಹೀಗೆ ಮಂಡ್ಯದ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಕಬಡ್ಡಿ ಆಟಗಾರರನ್ನ ಹುರಿದುಂಬಿಸಲು ಬಂದಿದ್ದ ಪ್ರೇಕ್ಷಕರೇ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ.
ಕಬಡ್ಡಿ ಆಟ ನೋಡೋದೇ ಚೆಂದ.. ರೈಡರ್‌ಗಳ ಆಟ, ಡಿಫೆಂಡರ್‌ಗಳು ಹಿಡಿದು ಹಾಕುವ ಆ ಝಲಕ್ ಕಣ್ಣಿಗೆ ಹಬ್ಬ. ಹೀಗೆ ಕಬಡ್ಡಿ ಆಟ ನೋಡಲು ಹೋದ ಸ್ಥಳದಲ್ಲಿ ದುರಂತವೇ ಸಂಭವಿಸಿದೆ.
ಕಬ್ಬಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿತ
ಓರ್ವ ಸಾವು.. 13ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯದ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ನಿನ್ನೆ ಕಬಡ್ಡಿ ಪಂದ್ಯವನ್ನ ಆಯೋಜನೆ ಮಾಡಲಾಗಿತ್ತು. ಕಬಡ್ಡಿ ಆಟವನ್ನ ನೋಡಲು ಸಾವಿರಾರು ಜನರು ಸೇರಿದ್ರು. ಹೀಗೆ ಪಂದ್ಯ ವೀಕ್ಷಣೆ ಮಾಡುವ ವೇಳೆ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿಟ್ಟಿದೆ. ಪರಿಣಾಮ ಗ್ಯಾಲರಿಯಲ್ಲಿ ಇದ್ದ ಜನರೆಲ್ಲಾ ದಪ್ ಅಂತ ಕೆಳಗಡೆ ಬಿದ್ದಿದ್ದಾರೆ.
ಕಬಡ್ಡಿ ಪಂದ್ಯ ವೀಕ್ಷಿಸಲು ಬಂದಿದ್ದ 50 ವರ್ಷದ ಪಾಪಣ್ಣಚಾರಿ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಸಂಬಂಧಿಕರು ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಘೋರ ದುರಂತ.. ತಂದೆ ಜೊತೆ ಜೀವ ಕಳೆದುಕೊಂಡ ಮಗಳು; ಆಗಿದ್ದೇನು?
ಗ್ಯಾಲರಿ ಕುಸಿದ ಘಟನೆಯಲ್ಲಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ 13 ಜನರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ.
ಮಿಮ್ಸ್ ಆಸ್ಪತ್ರೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ
ದುರ್ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಭೇಟಿ ನೀಡಿದ್ರು. ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯವನ್ನ ವಿಚಾರಿಸಿದ್ರು. ಮೃತಪಟ್ಟ ವ್ಯಕ್ತಿ ಹಾಗೂ ಗಾಯಾಳುಗಳ ಸಂಬಂಧಿಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದ್ರು. ಈ ವೇಳೆ ಕಬ್ಬಡಿ ಆಯೋಜಕರ ವಿರುದ್ದ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕ್ರೀಡೆ, ಪಂದ್ಯಾವಳಿಗಳಲ್ಲಿ ಜನ ಸೇರೋದು ಸಾಮಾನ್ಯ. ಈ ವೇಳೆ ಮತ್ತೊಮ್ಮೆ ಈ ರೀತಿಯ ಘಟನೆಗಳು ಸಂಭವಿಸದಂತೆ ಕ್ರಮವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ