/newsfirstlive-kannada/media/post_attachments/wp-content/uploads/2025/01/RAVIKUMAR_S.jpg)
ಪ್ರತಿ ವರ್ಷ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿಕೊಂಡು ಬರುತ್ತಿರುವ ಮಂಡ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿವೇಕಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಂಭ್ರಮಿಸಿದ್ರೆ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು ಶಿಕ್ಷಣದ ಮಹತ್ವವನ್ನ ತಿಳಿಸಿಕೊಟ್ಟರು.
ಮಾಜಿ ಶಾಸಕ ಎಂ.ಶ್ರೀನಿವಾಸ್ರ ಕನಸಿನ ಕೂಸು ವಿವೇಕಾ ವಿದ್ಯಾಸಂಸ್ಥೆ. ಮಂಡ್ಯದ ಬಡ, ಮಧ್ಯಮ ವರ್ಗದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯದಲ್ಲಿ ಆರಂಭವಾದ ವಿವೇಕಾ ವಿದ್ಯಾಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಮಂಡ್ಯದ ಹನಕೆರೆ ಗ್ರಾಮದಲ್ಲಿರುವ ವಿವೇಕಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆದಿದೆ.
ಇದನ್ನೂ ಓದಿ:BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಖಾಲಿ.. ತಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಬಹುದು
ವಿವೇಕಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವವನ್ನು ನ್ಯೂಸ್ ಫಸ್ಟ್ ಸಂಸ್ಥೆಯ ಸಿಇಓ ಎಸ್.ರವಿಕುಮಾರ್ ಉದ್ಘಾಟಿಸಿದರು. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಇದರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಹೆಚ್.ಎನ್.ಯೋಗೇಶ್, ಮೈಂಡ್ ಬ್ಲೂ ನಿರ್ದೇಶಕರಾದ ಸೆಂಥಿಲ್ ಸೇರಿ ಹಲವರು ಉಪಸ್ಥಿರಿದ್ದರು. ಈ ವೇಳೆ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯೂಸ್ ಫಸ್ಟ್ ಸಂಸ್ಥೆಯ ಸಿಇಓ ಎಸ್.ರವಿಕುಮಾರ್, ಸಂಸ್ಕೃತ ವ್ಯಾಕಾರಣದ ಪಿತಾಮಹ ಪಾಣಿನಿ ಕಥೆ ಹೇಳುವ ಮೂಲಕ ಪೋಷಕರಿಗೆ, ಮಕ್ಕಳಿಗೆ ವಿದ್ಯೆ, ವಿದ್ಯಾದಾನದ ಮಹತ್ವ ತಿಳಿಸಿದರು. ಮಕ್ಕಳಿಗೆ ಪಾಠದ ಜೊತೆಗೆ ಜೀವನಪಾಠ, ಸಂಸ್ಕಾರ ಹೇಳಿಕೊಡುವ ತರಗತಿ ಕೊಡಿಸುವಂತೆ ವಿವೇಕಾ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷರಾದ ಹೆಚ್.ಎನ್.ಯೋಗೇಶ್ಗೆ ಸಲಹೆ ನೀಡಿದರು.
ವಿದ್ಯಾ, ಜ್ಞಾನ ಹಾಗೂ ಸಂಸ್ಕಾರ ಈ ಮೂರು ನಮ್ಮ ಜೀವನದ ಉದ್ದಕ್ಕೂ ಇರುತ್ತವೆ. ಅದೇ ಕಾರಣಕ್ಕೆ ನಾವೆಲ್ಲಾ ಚೆನ್ನಾಗಿ ಓದಬೇಕು. ಜ್ಞಾನವಂತರಾಗಬೇಕು. ನಮ್ಮಲ್ಲಿ ಸಂಸ್ಕಾರ ಇರಬೇಕು. ಶಾಲೆಯ ಪಾಠದ ಜೊತೆಗೆ ಜೀವನ ಪಾಠವನ್ನು ವಾರಕ್ಕೆ ಒಂದು ಗಂಟೆಯಾದರೂ ಹೇಳಿಕೊಟ್ಟರೆ ಮಕ್ಕಳ ಜೀವನದಲ್ಲಿ ಮುಂದೆ ಅದು ಉಪಯೋಗ ಆಗುತ್ತದೆ.
ಎಸ್.ರವಿಕುಮಾರ್, ನ್ಯೂಸ್ ಫಸ್ಟ್ ಸಿಇಓ
ಇನ್ನು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವ ವಿವೇಕಾ ವಿದ್ಯಾಸಂಸ್ಥೆ ಜೊತೆ ನಾವು, ನಮ್ಮ ಸರ್ಕಾರ ಎಂದೆಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಹೆಚ್.ಎನ್.ಯೋಗೇಶ್ ಮಾತನಾಡಿ ನಮ್ಮ ಸಂಸ್ಥೆ ಹಳ್ಳಿಗಾಡಿನ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತಿದ್ದು, ಮುಂದೆಯೂ ನೀಡುತ್ತೇವೆಂದು ಎಂದು ಮಾತು ಕೊಟ್ಟರು.
‘ವಿದ್ಯಾಸಂಸ್ಥೆ ಜೊತೆ ನಮ್ಮ ಸರ್ಕಾರ ಇರುತ್ತೆ’
ಈ ಶಾಲೆಗೆ 5 ಎಕರೆ ಜಾಗವನ್ನು ಸುತ್ತಮುತ್ತ ಎಲ್ಲಿ ಸರ್ಕಾರದ ಸ್ಥಳವಿದೆ ಅದನ್ನು ಅಲಾರ್ಟ್ ಮಾಡಿಕೊಟ್ಟು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ. ಇನ್ನು ಹಲವಾರು ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಕೊಡಲು ಶಿಕ್ಷಣ ಸಂಸ್ಥೆ ಜೊತೆ ಕಾನೂನಾತ್ಮಕವಾಗಿ ಇರುತ್ತೇನೆ. ಶಿಕ್ಷಣ ಸಂಸ್ಥೆ ಇನ್ನಷ್ಟು ಬೆಳೆದು ದೇಶದಲ್ಲಿ ಮಕ್ಕಳು ಹೆಸರು ಪಡೆಯಲಿ. ಕಡಿಮೆ ದರದಲ್ಲಿ ಉತ್ತಮವಾದ ಶಿಕ್ಷಣವನ್ನು ವ್ಯವಸ್ಥಿತವಾಗಿ ಕೊಡುತ್ತಿದ್ದಾರೆ.
ಗಣಿಗ ರವಿಕುಮಾರ್, ಮಂಡ್ಯ ಶಾಸಕ
‘ಹಳ್ಳಿಗಾಡಿನ ಮಕ್ಕಳಿಗೂ ಉತ್ತಮ ಶಿಕ್ಷಣ’
ಆಟದಲ್ಲಿ, ಪಾಠದಲ್ಲಿ ಯಾವುದರಲ್ಲೇ ಆಗಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಿಗಬೇಕು. 100 ಕಂಪ್ಯೂಟರ್ಗಳಿವೆ. ಎಲ್ಲರ ತರದ ಸೈನ್ಸ್ ಲ್ಯಾಬ್ಗಳು, 10 ಸಾವಿರ ಬುಕ್ಗಳು ಗ್ರಂಥಾಲಯದಲ್ಲಿವೆ. ಸ್ಪರ್ಧೆಯಲ್ಲೂ ಮಕ್ಕಳು ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಕರ್ಯ ಒದಗಿಸಲಾಗುತ್ತದೆ.
ಹೆಚ್.ಎನ್.ಯೋಗೇಶ್, ವಿವೇಕಾವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷರು
ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಮನಮೋಹಕವಾಗಿದ್ದವು. ಅದರಲ್ಲೂ ಪಾರ್ವತಿ ಸ್ನಾನ ಮಾಡಲು ಬಯಸಿದಾಗ ಗಣೇಶ ಕಾವಲು ಕಾಯುತ್ತಿದ್ದನು. ಆಗ ಮನೆಗೆ ಬಂದ ಶಿವನು ಕೋಪಗೊಂಡು ಗಣೇಶನ ತಲೆಯನ್ನು ಕತ್ತರಿಸಿದನು. ಕೊನೆಗೆ ತನ್ನ ತಪ್ಪಿನ ಅರಿವಾಗಿ ಆನೆಯ ತಲೆಯೊಂದಿಗೆ ಗಣಪತಿಗೆ ಮರುಜೀವ ನೀಡಿದ ಪ್ರಾತ್ಯಕ್ಷಿಕೆ, ಮಣಿಕಂಠ ಮಹಾತ್ಮೆ, ಹೆಣ್ಣಿನ ಮಹತ್ವ ಸಾರುವ ಗೀತೆಗಳಿಗೆ ಮಕ್ಕಳು ಹೆಜ್ಜೆ ಹಾಕಿದರು. ಇದನ್ನು ಕಂಡ ಪೋಷಕರು ಮತ್ತು ಗಣ್ಯರು ಫಿದಾ ಆದರು.
ಹನಕೆರೆ ವಿವೇಕಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಅರ್ಥ ಪೂರ್ಣವಾಗಿತ್ತು. ಮಕ್ಕಳು ತಮ್ಮ ಒಳಗಿನ ಕಲೆ ಪ್ರದರ್ಶಿಸಿ ಎಲ್ಲರ ಮನಸೂರೆಗೊಳಿಸಿದ್ರೆ, ಗಣ್ಯರು ವಿದ್ಯೆಯ ಮಹತ್ವವನ್ನ ಸಾರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ