/newsfirstlive-kannada/media/post_attachments/wp-content/uploads/2025/07/saroja.jpg)
ಚರ್ತುಭಾಷಾ ನಟಿ ಬಿ.ಸರೋಜಾದೇವಿ ಇಂದು ವಿಧಿವಶರಾಗಿದ್ದಾರೆ. ಬಿ.ಸರೋಜಾದೇವಿ ಅವರು ಇಂಜಿನಿಯರ್ ಒಬ್ಬರನ್ನು ವಿವಾಹವಾಗಿ ಸಂತೃಪ್ತ ಸಾಂಸಾರಿಕ ಜೀವನವನ್ನು ನಡೆಸಿದವರು. ಪತಿ, ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಸಂತಸದ ಜೀವನ ನಡೆಸಿ ಇಂದು ಇಹ ಲೋಕ ತ್ಯಜಿಸಿದ್ದಾರೆ.
ಆದ್ರೆ, ಈಗಿನ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಹುಟ್ಟಿದ ಬಿ.ಸರೋಜಾದೇವಿ ಅವರನ್ನು ಪಕ್ಕದ ಮದ್ದೂರು ತಾಲ್ಲೂಕಿನ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಎಸ್.ಎಂ.ಕೃಷ್ಣ ಜೊತೆ ಮದುವೆ ಮಾಡುವ ಪ್ರಸ್ತಾಪ ಇತ್ತಂತೆ. ಈ ಬಗ್ಗೆ ಎಸ್. ಎಂ. ಕೃಷ್ಣ ಕುಟುಂಬ ಹಾಗೂ ಬಿ.ಸರೋಜಾದೇವಿ ಕುಟುಂಬಗಳ ನಡುವೆ ಪ್ರಾಥಮಿಕ ಮಾತುಕತೆ ನಡೆದಿದೆ. ಆದರೆ, ಇಬ್ಬರ ವಿವಾಹಕ್ಕೆ 2 ಕುಟುಂಬಗಳಲ್ಲಿ ಅಂತಿಮ ಒಪ್ಪಿಗೆ ಸಿಗಲಿಲ್ಲ. ಜೊತೆಗೆ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಬಿ.ಸರೋಜಾದೇವಿ ಅವರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬದ ಹಿರಿಯರು ಕೂಡ ಒಲವು ತೋರಲಿಲ್ಲ. ಹೀಗಾಗಿ ಬಿ.ಸರೋಜಾ ದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂದು ಎಸ್.ಎಂ.ಕೃಷ್ಣ ಸೋದರ ಎಸ್. ಎಂ. ಶಂಕರ್ ಹಿಂದೆ ಹೇಳಿದ್ದರು.
ಇನ್ನೂ, ಮಾಜಿ ಸಚಿವ ಹಾಗೂ ಎಸ್.ಎಂ.ಕೃಷ್ಣ ಒಡನಾಡಿಯಾಗಿದ್ದ ಎಚ್.ವಿಶ್ವನಾಥ್ ಈ ವಿಷಯವನ್ನು ತಮ್ಮ ಹಳ್ಳಿ ಹಕ್ಕಿ ಹಾಡು ಪುಸ್ತಕದಲ್ಲಿ ಬರೆದಿದ್ದರು. ಪುಸ್ತಕ ಬಿಡುಗಡೆಗೂ ಮುನ್ನ ಈ ವಿಷಯ ಮಾಧ್ಯಮಗಳಲ್ಲಿ ಸೋರಿಕೆಯಾಗಿ ದೊಡ್ಡ ರಾದ್ದಾಂತವೇ ನಡೆದು ಹೋಯಿತು. 2008ರ ಜನವರಿ 28 ರಂದು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಂಜೆ ಪುಸ್ತಕ ಬಿಡುಗಡೆ ಆಗಬೇಕಾಗಿತ್ತು. ಆದರೆ, ಆಗ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿ ಪ್ರಸಾರವಾಗಿದ್ದರಿಂದ ಮೈಸೂರು ಜಿಲ್ಲೆಯ ಎಸ್. ಎಂ.ಕೃಷ್ಣ ಅಭಿಮಾನಿಗಳು ರೊಚ್ಚಿಗೆದ್ದು ಮೈಸೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಎಸ್‌ಎಂಕೆ ಅಭಿಮಾನಿಗಳ ಗಲಾಟೆ, ಪ್ರತಿಭಟನೆ ಕಾರಣದಿಂದ ಅಂದು ಪುಸ್ತಕ ಬಿಡುಗಡೆಯನ್ನ ರದ್ದು ಮಾಡಿದ್ದರು.
ಎಚ್. ವಿಶ್ವನಾಥ್ ಅವರು 55 ವರ್ಷಗಳ ಹಿಂದೆ, ಎಸ್.ಎಂ.ಕೃಷ್ಣ ಹಾಗೂ ಬಿ.ಸರೋಜಾದೇವಿ ನಡುವೆ ಮದುವೆ ಪ್ರಸ್ತಾಪ ಇತ್ತು ಅನ್ನೋದನ್ನು ತಮಗೆ ಎಸ್‌ಎಂಕೆ ಪತ್ನಿ ಪ್ರೇಮಾ ಹಾಗೂ ಸೋದರ ಎಸ್.ಎಂ.ಶಂಕರ್ ಇಬ್ಬರೂ ಖಚಿತಪಡಿಸಿದ್ದರು ಎಂದು ಎಚ್. ವಿಶ್ವನಾಥ್ ಹೇಳಿದ್ದರು. ಸ್ವತಃ ಬಿ.ಸರೋಜಾದೇವಿ ಪ್ರಸ್ತಾಪ ಇದ್ದಿದ್ದನ್ನು ನಿರಾಕರಿಸಿರಲಿಲ್ಲ. ಕೆಲವೊಂದು ಕಾರಣಗಳಿಂದ ಇದು ಮುಂದುವರಿದು ಮದುವೆ ಸಂಬಂಧವಾಗಿ ಬದಲಾಗಲಿಲ್ಲ.
ಈ ಬಗ್ಗೆ ಈ ಹಿಂದೆ ಮಾತನಾಡಿದ ಎಚ್.ವಿಶ್ವನಾಥ್, 'ಹಳ್ಳಿ ಹಕ್ಕಿಯ ಹಾಡು ಪುಸ್ತಕದಲ್ಲಿ ಚತುರ್ಭಾಷಾ ನಟಿ, ಕನ್ನಡತಿ ಬಿ.ಸರೋಜಾ ದೇವಿ ಹಾಗೂ ಎಸ್‌ಎಂ ಕೃಷ್ಣ ಅವರ ಮದುವೆ ಪ್ರಸ್ತಾಪದ ಪ್ರಸಂಗದ ಬಗ್ಗೆ ಬರೆದಿದ್ದೆ. ಅದು ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಪುಸ್ತಕ ಬಿಡುಗಡೆ ಆದಾಗ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಅಲ್ಲಿಗೆ ಪುಸ್ತಕಗಳನ್ನು ಕಳಿಸಿಕೊಟ್ಟು, ಫೋನ್ ಮಾಡಿದೆ. 'ಸರ್ ನಿಮಗೇನಾದರೂ ಬೇಜಾರಾಯಿತಾ?' ಎಂದು ಕೇಳಿದೆ. ಅದಕ್ಕೆ ಅವರು, 'ಯಾಕೆ ಬೇಜಾರು. ಇರೋ ವಿಚಾರ ಬರೆದಿದ್ದೀಯಾ. ಮತ್ತೇನಿದೆ ಅದರಲ್ಲಿ' ಎಂದಿದ್ದರು. ಈ ರೀತಿ ಇದ್ದ ಮನುಷ್ಯ ಅವರು ಎಂದು ನೆನಪಿಸಿಕೊಂಡಿದ್ದರು.
ಇನ್ನೂ ಹಳ್ಳಿ ಹಕ್ಕಿ ಹಾಡು ಪುಸ್ತಕದ ಬಗ್ಗೆ ವಿವಾದ ಎದ್ದಾಗ, ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆಗ ಎಸ್.ಎಂ.ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಆಗ ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಪ್ರೇಮಾ ಕೃಷ್ಣ ಅವರು ನೀಡಿದ್ದ ಸ್ಪಷ್ಟನೆಯಲ್ಲಿ ಬಿ.ಸರೋಜಾದೇವಿ ಅವರನ್ನು ಎಸ್.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿತ್ತು. ಆದರೆ, ಎಸ್.ಎಂ.ಕೃಷ್ಣ ಮನೆಯಲ್ಲಿ ಸಿನಿಮಾ ಹಿನ್ನಲೆಯವರನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿರಿಯರು ಒಪ್ಪಲಿಲ್ಲ. ಅಲ್ಲಿಗೆ ಈ ವಿಷಯ ಮುಗಿಯಿತು. ನಂತರ ಮುಂದುವರಿಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಮೂಲಕ ಬಿ.ಸರೋಜಾದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ಮದುವೆ ಪ್ರಸ್ತಾಪ ಇದ್ದಿದ್ದನ್ನು ಪ್ರೇಮಾ ಅವರು ಕೂಡ ಪತ್ರಿಕಾ ಹೇಳಿಕೆಯ ಮೂಲಕ ಒಪ್ಪಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ