/newsfirstlive-kannada/media/post_attachments/wp-content/uploads/2025/06/Smriti_Mandhana-1.jpg)
ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಅವರು ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಈ ಮೂಲಕ ಭಾರತದ ಮಹಿಳಾ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ.
ನಾಟಿಂಗ್ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ತಂಡ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ ಮಾಡಿತು. ಓಪನರ್ಸ್​ ಆಗಿ ಕ್ರೀಸ್​​ಗೆ ಬಂದಿದ್ದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ಇಂಗ್ಲೆಂಡ್​ ಆಟಗಾರ್ತಿಯರಿಗೆ ಬೆವರಿಳಿಸಿದರು.
ಶಫಾಲಿ ವರ್ಮಾ 20 ರನ್​ಗೆ ಔಟ್ ಆದರೂ ಸ್ಮೃತಿ ಮಂದಾನ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ ಕೇವಲ 51 ಬಾಲ್​​ಗಳನ್ನು ಆಡಿದ ಸ್ಮೃತಿ ಮಂದಾನ ಅತ್ಯದ್ಭುತವಾದ 15 ಬೌಂಡರಿಗಳು ಹಾಗೂ 3 ಬಿಗ್​​ ಸಿಕ್ಸರ್​ಗಳಿಂದ ಹಂಡ್ರೆಡ್​ ಬಾರಿಸಿದರು. ಪಂದ್ಯದ ಕೊನೆವರೆಗೂ ಇದ್ದ ಅವರು ದೊಡ್ಡ ಮೊತ್ತದ ರನ್​ ಗಳಿಸಲು ನೆರವಾದರು. ಪಂದ್ಯದಲ್ಲಿ ಒಟ್ಟು 62 ಎಸೆತ ಎದುರಿಸಿ 112 ರನ್​ಗಳಿಂದ ಆಡುವಾಗ 19.2ನೇ ಓವರ್​​ನಲ್ಲಿ ವಿಕೆಟ್​ ಒಪ್ಪಿಸದರು. ಹರ್ಲೀನ್ ಡಿಯೋಲ್ 43 ರನ್​ಗಳಿಂದ ಮಂದಾನ ಸಾಥ್ ನೀಡಿದರು.
ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 211 ರನ್​ಗಳ ಟಾರ್ಗೆಟ್​ ಅನ್ನು ನೀಡಿತು. ಈ ಟಾರ್ಗೆಟ್ ಹಿಂದೆ ಬಿದ್ದ ಇಂಗ್ಲೆಂಡ್​ ಮಹಿಳಾ ತಂಡ ಕ್ಯಾಪ್ಟನ್ ನ್ಯಾಟ್ ಸಿವರ್-ಬ್ರಂಟ್ ಅರ್ಧಶತಕ ಬಾರಿಸಿದರು ಅಷ್ಟೇ. ಉಳಿದವರ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್​ ಕೇವಲ 113 ರನ್​ಗಳಿಗೆ ಆಲೌಟ್​ ಆಯಿತು. ಭಾರತದ ಬೌಲರ್​ ಶ್ರೀಚಾರಣಿ 4 ವಿಕೆಟ್​ ಪಡೆದು ಮಿಂಚಿದರು. ಇದರಿಂದ ಭಾರತ 97 ರನ್​ಗಳ ಗೆಲುವು ಪಡೆಯಿತು.
ಸ್ಮೃತಿ ಮಂದಾನ ದಾಖಲೆಗಳು
- ಟಿ20ಯಲ್ಲಿ ಇದು ಮಂದಾನರ ಮೊದಲ ಸೆಂಚುರಿ
- ಟಿ20, ಏಕದಿನ, ಟೆಸ್ಟ್​ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ
- ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ 3 ಸ್ವರೂಪಗಳಲ್ಲಿ ಸೆಂಚುರಿ ಬಾರಿಸಿದ 5ನೇ ಕ್ರಿಕೆಟರ್ ​
- ಟಿ20ಯಲ್ಲಿ ಶತಕ ಬಾರಿಸಿದ ಭಾರತದ 2ನೇ ಆಟಗಾರ್ತಿ (ಮೊದಲು ಹರ್ಮನ್​​ಪ್ರೀತ್​ ಕೌರ್)
- ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಟಿ20 ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ
- ಒಡಿಐನಲ್ಲಿ 11, ಟೆಸ್ಟ್​ನಲ್ಲಿ 2 ಹಾಗೂ ಈಗ ಟಿ20ಯಲ್ಲಿ 1 ಶತಕ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ