/newsfirstlive-kannada/media/post_attachments/wp-content/uploads/2025/04/Pahalgam-Terror-Attack-Saiful1.jpg)
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಎರಡು ಬೆಟ್ಟಗಳ ನಡುವಿನ ಜಾಗ ಬೈಸರನ್ನಲ್ಲಿ ಮಂಗಳವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ 26ಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿವೆ. ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಪಹಲ್ಗಾಮ್ ಕಣಿವೆ ಇಷ್ಟು ಕ್ರೂರವಾಗಿ, ರಕ್ತಸಿಕ್ತದ ಕೋಡಿ ಹರಿಯುವ ಹಿಂದೆ ಒಬ್ಬ ಮಾಸ್ಟರ್ ಮೈಂಡ್ ಇದ್ದಾನೆ. ಅವನೇ ಭಯೋತ್ಪಾದಕ ಸೈಫುಲ್ಲಾ ಖಾಲಿದ್.
ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ
ದೇಶದಲ್ಲಿ ಇಂಥ ಉಗ್ರರ ದಾಳಿ ನಡೆದಾಗ ಇದಕ್ಕೆ ರೂವಾರಿಗಳು ನಾವೇ ಎಂದು ಮುಂದೆ ಬರುವ ಉಗ್ರ ಸಂಘಟನೆಗಳು ಇವೆ. ಈಗ ಪಹಲ್ಗಾಮ್ ದಾಳಿಯ ಹೊಣೆಯನ್ನ ಟಿಆರ್‌ಎಫ್, ಅಂದರೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ 'ದಿ ರೆಸಿಸ್ಟೆನ್ಸ್ ಫ್ರಂಟ್' ತಾನೆ ರೂವಾರಿ ಎಂದು ಒಪ್ಪಿಕೊಂಡಿದೆ.
ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಚಟುವಟಿಕೆಗಳನ್ನ ಮುಂದಿದ್ದು ನಡೆಸೋನು, ಇದೆ ಲಷ್ಕರ್-ಇ-ತೊಯ್ಬಾ ಸಂಘಟನೆ ಡೆಪ್ಯುಟಿ ಚೀಪ್ ಸೈಫುಲ್ಲಾ ಖಾಲಿದ್. ಇವನೇ ಈ ದಾಳಿಗೆ ಮಾಸ್ಟರ್ ಮೈಂಡ್ ಎಂದು ತಿಳಿಸಲಾಗಿದೆ. ಮತ್ತೊಂದು ಆಘಾತಕಾರಿ ವಿಷಯ ಏನಂದರೆ.. ಸೈಫುಲ್ಲಾ ಖಾಲಿದ್ ಭಾರತದ ಅತಿದೊಡ್ಡ ಶತ್ರುವಾಗಿರುವ ಹಫೀಜ್ ಸಯೀದ್ಗೆ ಆಪ್ತ ಸ್ನೇಹಿತ ಎನ್ನಲಾಗಿದೆ.
ಐಷಾರಾಮಿ ಕಾರುಗಳಲ್ಲಿ ಓಡಾಟ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಭದ್ರತೆ
ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಓಡಾಟ ನಡೆಸುವ ಸೈಫುಲ್ಲಾ, ಪ್ರಾಣಭಯದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಭದ್ರತೆ ನಡುವೆಯೇ ಇರುತ್ತಾನೆ. ಇವನನ್ನ ಕಂಡರೇ ಪಾಕಿಸ್ತಾನಕ್ಕೆ ಎಲ್ಲಿಲ್ಲದ ಪ್ರೀತಿ ಎಂದು ಹೇಳಲಾಗಿದೆ. ಇದಕ್ಕೆ ಕಾರಣವೂ ಇಲ್ಲದೇ ಹೋಗಿಲ್ಲ. ಇವನ ದ್ವೇಷ ಭಾಷಣಗಳಿಗೆ, ಇಡೀ ಪಾಕ್ನ ಉಗ್ರರು, ಪಾಕ್ ಸೈನಿಕರು ಫಿದಾ ಆಗ್ತಾರಂತೆ. ದ್ವೇಷದ ಭಾಷಣಗಳಿಂದ ಸೈನಿಕರನ್ನ ಪ್ರೇರೇಪಿಸುವ ಕಾರಣಕ್ಕೆ, ಪಾಕಿಸ್ತಾನ ಸೇನೆ ಇವನಿಗೆ ಆಹ್ವಾನ ಕೊಡುತ್ತಿರುತ್ತೆ. ಹೀಗಾಗಿ ಪಾಕಿಸ್ತಾನ ಸೇನೆಯ ಜೊತೆ ಸೈಫುಲ್ಲಾನಿಗೆ ನಿರಂತರ ಸಂಪರ್ಕ ಇದೆ ಎನ್ನಲಾಗಿದೆ.
ಪಾಕ್ ಸೈನಿಕರನ್ನ ದ್ವೇಷ ಭಾಷಣಗಳಿಂದ ಉತ್ತೇಜಿಸುವ ಸೈಫುಲ್ಲಾ
ಪಹಲ್ಗಾಮ್ ದಾಳಿಗೆ ಎರಡು ತಿಂಗಳ ಹಿಂದೆ, ಇದೇ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಬಂದಿದ್ದನಂತೆ. ಅಲ್ಲಿ ಪಾಕಿಸ್ತಾನ ಸೇನೆಯ ದೊಡ್ಡ ಬೆಟಾಲಿಯನ್ ಇದೆ. ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಎಂಬುವವನು, ಸೈಫುಲ್ಲಾನನ್ನು ಜಿಹಾದಿ ಭಾಷಣ ಮಾಡಲು ಅಲ್ಲಿಗೆ ಕರೆಸಿದ್ದ ಎನ್ನಲಾಗಿದೆ. ಅಲ್ಲಿ ಅವನು ಪಾಕಿಸ್ತಾನ ಸೇನೆಯನ್ನ ಭಾರತದ ವಿರುದ್ಧ ಕೆರಳುವಂತೆ ಪ್ರಚೋದಿಸಿದ್ದನಂತೆ.
ಆರ್ಟಿಕಲ್ 370 ರದ್ದಿನಿಂದ ಮತ್ತಷ್ಟು ದ್ವೇಷ
ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದಾದಗಿನಿಂದ ಪಾಕ್ಗೆ, ಭಾರತದ ಮೇಲೆ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು. ಆರ್ಟಿಕಲ್ 370 ರದ್ದು ಬಳಿಕವೇ ISIನಿಂದ ‘ರೆಸಿಸ್ಟಂಟ್ ಫ್ರಂಟ್’ ಸ್ಥಾಪನೆ ಮಾಡಲಾಗಿತ್ತು. ಆಗ ಈ ‘ರೆಸಿಸ್ಟಂಟ್ ಫ್ರಂಟ್’ಗೆ ಇದೇ ಸೈಫುಲ್ಲಾ ಖಾಲೀದ್ ನೇತೃತ್ವ ವಹಿಸಿಕೊಂಡಿದ್ದ.
ಇದನ್ನೂ ಓದಿ: ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!
ಆರ್ಟಿಕಲ್ 370 ರದ್ದಿನ ವಿಚಾರವನ್ನೂ ಸೈಫುಲ್ಲಾ ಕೆಲ ಸಭೆಗಳಲ್ಲಿ ಪ್ರಸ್ತಾಪಿಸಿ, ಫೆಬ್ರವರಿ 2, 2025 ರಂದು ಒಂದು ಹೇಳಿಕೆಯನ್ನ ಕೊಟ್ಟಿದ್ದಾನೆ. ಅದೇನಂದರೆ.. 2026ರ ಫೆ.2ರೊಳಗೆ ಕಾಶ್ಮೀರವನ್ನ ವಶ ಪಡಿಸಿಕೊಳ್ತೆವೆ.. ಮುಂದಿನ ದಿನಗಳಲ್ಲಿ, ನಮ್ಮ ಮುಜಾಹಿದ್ದೀನ್ ದಾಳಿಯನ್ನ ಇನ್ನಷ್ಟು ತೀವ್ರಗೊಳಿಸಿ, ಫೆಬ್ರವರಿ 2, 2026 ರ ವೇಳೆಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಗಂಟಲು ಕಿತ್ತುಕೊಂಡಿದ್ದನಂತೆ.
ಪಾಕ್ ಕಾಡುಗಳಲ್ಲಿ ಶಿಬಿರಗಳು.. ಪಾಕ್ ಸೇನೆ ಸಹಾಯ!
ನೂರಾರು ಪಾಕಿಸ್ತಾನಿ ಹುಡುಗರು ಅಬೋಟಾಬಾದ್‌ನ ಕಾಡುಗಳಲ್ಲಿ ಭಯೋತ್ಪಾದಕ ಶಿಬಿರದಲ್ಲಿ ಸೇರುತ್ತಾ ಇರುತ್ತಾರೆ. ಈ ಶಿಬಿರಗಳನ್ನ ಲಷ್ಕರ್-ಎ-ತೈಬಾದ ರಾಜಕೀಯ ವಿಭಾಗ ಪಿಎಂಎಂಎಲ್ ಮತ್ತು ಎಸ್‌ಎಂಎಲ್ ಆಯೋಜಿಸುತ್ತಾ ಇರುತ್ತವೆ. ಅಲ್ಲೂ ಈ ಸೈಫುಲ್ಲಾ ಖಾಲಿದ್ ಇರ್ತಾನೆ. ಪಾಕ್ನ ಪ್ರತಿ ಉಗ್ರ ಸಂಘಟನೆಗಳಿಗೆ, ದಾಳಿಗೆ ಪ್ರಯತ್ನಿಸೋ ಪ್ರತಿ ಉಗ್ರರಿಗೆ, ಪಾಕ್ ಸೇನೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ. ಗುಳ್ಳೆನರಿಗಳಂತೆ ಮರೆಯಲ್ಲಿದ್ದು, ದೇಶದ ನೆತ್ತಿಯಲ್ಲಿ ನೆತ್ತರು ಹರಿಸುವ, ಉಗ್ರರ ಅಟ್ಟಹಾಸಕ್ಕೆ, ಭಾರತ ಯಾವ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತೆ ಅನ್ನೋ ಆಶಾನೋಟ ದೇಶದ ಜನರಲ್ಲಿ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ