ಆಸ್ಪತ್ರೆಯಲ್ಲೇ ಜೀವಬಿಟ್ಟ ಬರೋಬ್ಬರಿ 10 ಬಾಣಂತಿಯರು; ಈ ದುರಂತಕ್ಕೆ ಕಾರಣ ಯಾರು?

author-image
Ganesh Nachikethu
Updated On
ಮಕ್ಕಳಾಗುತ್ತಿಲ್ಲ ಅನ್ನೋ ಕೊರಗಿದ್ಯಾ? ಎಲ್ಲರೂ ಓದಲೇಬೇಕಾದ ಪ್ರಮುಖ ಸ್ಟೋರಿ!
Advertisment
  • ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವಿನ ಸರಣಿ
  • ಬಳ್ಳಾರಿ ಬಳಿಕ ರಾಯಚೂರು ಜಿಲ್ಲೆಯಲ್ಲೂ ನಿಲ್ಲದ ಸಾವು
  • 50 ದಿನಗಳಲ್ಲಿ ಜೀವ ಬಿಟ್ಟ ಬರೋಬ್ಬರಿ 10 ಬಾಣಂತಿಯರು

ರಾಯಚೂರು: ರಾಜ್ಯದಲ್ಲಿ ಮತ್ತೆ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಬಳ್ಳಾರಿ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲೂ ಬಾಣಂತಿಯರು ಕೊನೆಯುಸಿರೆಳೆಯುತ್ತಿದ್ದಾರೆ. 50 ದಿನಗಳಲ್ಲಿ 10 ತಾಯಂದಿರು ಜೀವ ಬಿಟ್ಟಿದ್ದಾರೆ. ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಗುವಿಗೆ ಜನ್ಮ ನೀಡಿದ ಗಂಟೆಯಲ್ಲೇ ತಾಯಂದಿರು ಕಂದನನ್ನು ತಬ್ಬಲಿ ಮಾಡುತ್ತಿದ್ದಾರೆ. ಮೇಲಿಂದ ಮೇಲೆ ಬಾಣಂತಿಯರು ಸಾವನ್ನಪ್ಪುತ್ತಿರುವುದು ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್​ನಲ್ಲಿ ಐವರು ಸಾವನ್ನಪ್ಪಿದ್ದು ಇನ್ನೂ ಕಣ್ಮುಂದಿರುವಾಗಲೇ ಮತ್ತೊಂದು ಜಿಲ್ಲೆಯಲ್ಲಿ ಈ ಸಾವಿನ ಸರಣಿ ಮುಂದುವರಿದಿದೆ.

50 ದಿನಗಳಲ್ಲಿ ಜೀವ ಬಿಟ್ಟಿದ್ದು ಬರೋಬ್ಬರಿ 10 ಬಾಣಂತಿಯರು

ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್​ ಆಸ್ಪತ್ರೆ ಮಾತ್ರವಲ್ಲದೇ ಇದೀಗ ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲೂ ಬಾಣಂತಿಯರು ಕೊನೆಯುಸಿರೆಳೆಯುತ್ತಿದ್ದಾರೆ. 50 ದಿನಗಳಲ್ಲಿ ಬರೋಬ್ಬರಿ 10 ಬಾಣಂತಿಯರು ಜೀವ ಬಿಟ್ಟಿದ್ದಾರೆ. ಅಂದ್ರೆ 10 ಹಸುಗೂಸು ತಬ್ಬಲಿಗಳಾಗಿವೆ. ರಾಯಚೂರಿನ ಗಾರಲದಿನ್ನಿಯ ಬಾಣಂತಿ ಈಶ್ವರಿ ಕೊನೆಯುಸಿರೆಳೆದಿದ್ದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

10 ಬಾಣಂತಿಯರು ಸಾವು

ಡಿಸೆಂಬರ್ 8 ರಂದು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಈಶ್ವರಿಗೆ ಸಹಜ ಹೆರಿಗೆಯಾಗಿತ್ತು. ಮನೆಗೆ ಬಂದ ಬಳಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ತೀವ್ರ ರಕ್ತಸ್ರಾವ, ಜ್ವರ, ಆಯಾಸ ಹಿನ್ನೆಲೆ ಮತ್ತೆ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಅಲ್ಲಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ರಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈಶ್ವರಿ ಡಿಸೆಂಬರ್ 13ರಂದು ಸಾವನ್ನಪ್ಪಿದ್ದಾರೆ. ಈ ಸಾವಿಗೆ ಮಟಮಾರಿ ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ರಿಮ್ಸ್​ಗೆ ರವಾನಿಸುವ ಮುನ್ನ ಸೂಕ್ತವಾಗಿ ಸ್ಪಂದಿಸಿ ಚಿಕಿತ್ಸೆ ನೀಡದಿದ್ದಕ್ಕೆ ಸಾವನ್ನಪ್ಪಿದ್ದಾಳೆಂದು ಕುಟುಂಬದವರು ದೂರಿದ್ದಾರೆ.

ಇನ್ನು ಬಾಣಂತಿಯ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆರೋಗ್ಯ ಇಲಾಖೆ ವಿರುದ್ಧ ಬೇಜವಾಬ್ದಾರಿ ಹಾಗೂ ಕರ್ತವ್ಯಲೋಪ ಆರೋಪ ಮಾಡಿದ್ದಾರೆ. ಬಾಣಂತಿಯರ ಸಾವಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಒಂದ್ವೇಳೆ ಸರ್ಕಾರ ಪರಿಹಾರ ನೀಡದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ನವಜಾತ ಶಿಶುಗಳೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಡ್ರೋನ್ ಪ್ರತಾಪ್‌ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ.. ಜೈಲು ಸೇರಿದ್ರೂ ರಿಲೀಫ್​ ಸಿಗೋ ಚಾನ್ಸೇ ಇಲ್ಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment