ಮಠ ನಿರ್ದೇಶಕ ಗುರುಪ್ರಸಾದ್ ಕೊನೆಯ ಆಡಿಯೋ ಈಗ ಬಿಡುಗಡೆ; ಅಸಲಿ ಕಾರಣವೇನು?

author-image
admin
Updated On
ಮಠ ನಿರ್ದೇಶಕ ಗುರುಪ್ರಸಾದ್ ಕೊನೆಯ ಆಡಿಯೋ ಈಗ ಬಿಡುಗಡೆ; ಅಸಲಿ ಕಾರಣವೇನು?
Advertisment
  • 2ನೇ ಪತ್ನಿ ಸುಮಿತ್ರಾ ಜೊತೆಗೆ ಫೋನ್‌ನಲ್ಲಿ ಜಗಳ, ನೋವಿನ ವಿಚಾರ
  • ತಾವೇ ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ದಾರಂತೆ ಗುರುಪ್ರಸಾದ್!
  • ಆಡಿಯೋ ಬಿಡುಗಡೆ ಮಾಡಿದವರಿಗೆ ಗುರುಪ್ರಸಾದ್ ಪತ್ನಿ ಹೇಳಿದ್ದೇನು?

ಮಠ, ಎದ್ದೇಳು ಮಂಜುನಾಥ ಖ್ಯಾತ ನಿರ್ದೇಶಕ ಗುರುಪ್ರಸಾದ್‌ 2024 ನವೆಂಬರ್ 3ರಂದು ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. 3 ತಿಂಗಳು ಕಳೆದ ಮೇಲೆ, ಎದ್ದೇಳು ಮಂಜುನಾಥ್ -2 ಚಿತ್ರ ಬಿಡುಗಡೆಗೆ ಸಜ್ಜಾಗಿರುವಾಗ ಗುರುಪ್ರಸಾದ್ ಅವರ ಕೊನೆಯ ಆಡಿಯೋ ಬಿಡುಗಡೆ ಆಗಿದೆ.

ಗುರುಪ್ರಸಾದ್ ಅವರು ಸಾವಿಗೂ ಮುನ್ನ ತಮ್ಮ 2ನೇ ಪತ್ನಿ ಸುಮಿತ್ರಾ ಅವರ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಆಡಿಯೋದಲ್ಲಿ ಆತ್ಮಹತ್ಯೆಯ ಆಲೋಚನೆ, ಹಣದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸಾವಿಗೂ ಒಂದು ದಿನ ಮೊದಲು ಮಾತನಾಡಿರೋ ಆಡಿಯೋ ಇದು ಎನ್ನಲಾಗುತ್ತಿದೆ.

ಗುರುಪ್ರಸಾದ್ ಅವರೇ ಈ ಆಡಿಯೋವನ್ನು ತಾವೇ ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ದರಂತೆ. ಇದೀಗ ಎದ್ದೇಳು ಮಂಜುನಾಥ್ -2 ಚಿತ್ರ ಬಿಡುಗಡೆಗೆ ಪತ್ನಿ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಅವರ ಆಪ್ತ ಬಳಗ ಗುರುಪ್ರಸಾದ್ ಸಾವಿನ ಸತ್ಯ ಎಲ್ಲರಿಗೂ ಗೊತ್ತಾಗಲಿ ಅಂತ ಆಡಿಯೋ ರಿಲೀಸ್ ‌ಮಾಡಿದ್ದಾರೆ ಎನ್ನಲಾಗಿದೆ.

publive-image

ನಿರ್ದೇಶಕ ಗುರುಪ್ರಸಾದ್ ಅವರು ಆಡಿಯೋದಲ್ಲಿ ಎರಡನೇ ಪತ್ನಿ ಸುಮಿತ್ರ ಅವರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಎದ್ದೇಳು ಮಂಜುನಾಥ-2 ಗುರುಪ್ರಸಾದ್ ನಟಿಸಿ ನಿರ್ದೇಶಿಸಿದ ಕೊನೆಯ ಚಿತ್ರ. ಈ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಮುಂದಾಗಿರುವಾಗ ಗುರು 2ನೇ ಪತ್ನಿಯಿಂದಲೇ ಸಂಕಷ್ಟ ಎದುರಾಗಿದೆ.

ಗುರುಗೆ ಕೊನೆ ಸಿನಿಮಾ ಮೂಲಕ ಗೌರವ ಸಲ್ಲಿಸೋಕೆ ಆಗ್ತಿಲ್ಲ. ಅಂದುಕೊಂಡಂತಾಗಿದ್ರೆ ಕೊನೆಯ ಸಿನಿಮಾ ರಿಲೀಸ್ ಆಗ್ತಿತ್ತು. ಆದರೆ ಸುಮಿತ್ರಾ ಅವರು ನಿರ್ಮಾಪಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಹೀಗಾಗಿ ಕೋರ್ಟ್​ ಸಿನಿಮಾ ರಿಲೀಸ್​ಗೆ ತಡೆಯಾಜ್ಞೆ ನೀಡಿದೆ ಎಂದು ಸಹ ನಿರ್ಮಾಪಕ ರವಿ ದೀಕ್ಷಿತ್​ ಬೇಸರ ವ್ಯಕ್ತಪಡಿಸಿದ್ದಾರೆ.

publive-image

ಸುಮಿತ್ರಾ ಅವರ ಸ್ಪಷ್ಟನೆ ಏನು?
ಗುರುಪ್ರಸಾದ್ ಅವರ ಕೊನೆಯ ಆಡಿಯೋ ಮತ್ತು ನಿರ್ಮಾಪಕರ ಮಾತಿಗೆ ಸುಮಿತ್ರಾ ಅವರು ನ್ಯೂಸ್‌ ಫಸ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಮತ್ತು ಗುರುಪ್ರಸಾದ್ ಅವರಿಗೆ ಕಪ್ಪು ಚುಕ್ಕಿ ತರೋ ಪ್ರಯತ್ನ ಇದು. ಇದು ಸಾಯೋದಕ್ಕೂ ಮುನ್ನ ಕಳಿಸಿರೋ ಆಡಿಯೋ ಅಲ್ಲ ಎಂದಿದ್ದಾರೆ.

ನಾನು ಮತ್ತು ಗುರುಪ್ರಸಾದ್‌ ತುಂಬಾ ದಿನಗಳ ಹಿಂದೆಯೇ ಮಾತಾಡಿರೋ ಫೋನ್ ಕಾಲ್ ಇದು. ಗುರು ತೀರಿಕೊಂಡ ಬಳಿಕ ಎದ್ದೇಳು ಮಂಜುನಾಥ 2 ಸಿನಿಮಾನ ಗುರು ಬ್ಯಾನರ್‌ನಲ್ಲಿ ತರಬೇಕು ಅನ್ನೋದು ನಮ್ಮ ಆಸೆ ಆಗಿತ್ತು. ಜೊತೆಗೆ ಅವರ ಪೇಮೆಂಟ್ ನಮಗೆ ನೀಡಬೇಕು ಅನ್ನೋ ಒಡಂಬಡಿಕೆ ಆಗಿತ್ತು. ಆದ್ರೀಗ ಅದೆಲ್ಲವನ್ನೂ ಬದಿಗಿಟ್ಟು, ಅವರೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ತಡೆಯಾಜ್ಞೆ ತರಲಾಗಿತ್ತು. ಆದ್ರೀಗ ಟೀಂನವ್ರು ನಮ್ಮ ವಿರುದ್ಧವೇ ಪಿತೂರಿ ಮಾಡಿದ್ದಾರೆ ಎಂದು ಸುಮಿತ್ರಾ ಹೇಳಿದ್ದಾರೆ.

ಗಂಡ-ಹೆಂಡ್ತಿ ಜಗಳ ಇರೋದು ಸಾಮಾನ್ಯ. ಆದರೆ ಈ ಥರಾ ನೀಚವಾಗಿ ಬಿಂಬಿಸುತ್ತಾರೆ ಅಂತಾ ಗೊತ್ತಿರಲಿಲ್ಲ. ನಾವಿಬ್ಬರು ಚೆನ್ನಾಗಿದ್ವಿ. ನಮ್ಮ ಸಂಸಾರ ಚೆನ್ನಾಗಿತ್ತು. ರಂಗನಾಯಕ ಸಿನಿಮಾದ ಸೋಲಿಂದ ತುಂಬಾ ನೊಂದಿದ್ರು. ಅವರ ಸಾವಿಗೆ ಇನ್ನೂ ಕಾರಣ ಸಿಕ್ಕಿಲ್ಲ. ಅವರಿಗೆ ಆರ್ಥಿಕ ತೊಂದರೆ, ಹಾಗೂ ಯಾವುದೇ ಒತ್ತಡವೂ ಇರಲಿಲ್ಲ ಎಂದು ಸುಮಿತ್ರಾ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment