/newsfirstlive-kannada/media/post_attachments/wp-content/uploads/2025/04/Maxwell_1.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 18 ರನ್ಗಳಿಂದ ಅಮೋಘ ಗೆಲುವು ಸಾಧಿಸಿದೆ. ಸದ್ಯ ಟೂರ್ನಿಯಲ್ಲಿ 4 ಪಂದ್ಯ ಆಡಿರುವ ಪಂಜಾಬ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿದೆ. ಚೆನ್ನೈ ಜೊತೆ ನಡೆದ ರಣರೋಚಕ ಪಂದ್ಯದಲ್ಲಿ ಪಂಜಾಬ್ ಗೆದ್ದು ಬೀಗಿದೆ. ಇದರ ಜೊತೆ ಆಲ್ರೌಂಡರ್ ಮ್ಯಾಕ್ಸ್ವೆಲ್ಗೆ ಭಾರೀ ಮೊತ್ತದ ದಂಡ ಕೂಡ ಹಾಕಲಾಗಿದೆ.
ನಿಯಮದ ಪ್ರಕಾರ ಪಂಜಾಬ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1ರಂತೆ ತಪ್ಪು ಮಾಡಿರುವುದು ಕಂಡುಬಂದಿದೆ. ಈ ತಪ್ಪಿನಿಂದಾಗಿ ಪಂದ್ಯದ ಶುಲ್ಕದಲ್ಲಿ ಶೇಕಡಾ 25ರಷ್ಟು ಮ್ಯಾಕ್ಸ್ವೆಲ್ಗೆ ದಂಡ ಹಾಕಲಾಗಿದೆ. ಇದರ ಜೊತೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಕ್ಸ್ವೆಲ್ಗೆ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:ಕಿಂಗ್ ಕೊಹ್ಲಿ, ಸೂರ್ಯ ಅಲ್ಲವೇ ಅಲ್ಲ.. 2025ರ ಆರೆಂಜ್ ಕ್ಯಾಪ್ ಪಡೆದ ಸ್ಟಾರ್ ಬ್ಯಾಟರ್ ಯಾರು?
ಐಪಿಎಲ್ ಪಂದ್ಯ ಆಡುವಾಗ ಯಾವುದೇ ಆಟಗಾರ ಅಸಭ್ಯ ವರ್ತನೆ, ಕ್ರಿಕೆಟ್ ಆಡುವ ವಸ್ತುಗಳನ್ನ ದುರುಪಯೋಗ ಮಾಡುವುದು, ಇತರೆ ಆಟಗಾರರನ್ನು ಹೀಯಾಳಿಸುವುದು, ಜಾಹೀರಾತು ಫಲಕಗಳನ್ನು ಒಡೆಯುವುದು, ಡ್ರೆಸ್ಸಿಂಗ್ ರೂಮ್ನಲ್ಲಿ ಅಸಭ್ಯ ವರ್ತನೆ, ಗ್ಲಾಸ್ ಒಡೆಯುವುದು, ಔಟ್ ಆದರೆ ಬ್ಯಾಟ್ನಿಂದ ಕೋಪ ತೀರಿಸಿಕೊಳ್ಳುವುದು ಇಂತಹ ವರ್ತನೆ ತೋರಿದರೆ ದಂಡ ವಿಧಿಸಲಾಗುತ್ತದೆ.
ಚೆನ್ನೈ ವಿರುದ್ಧ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ್ದ ಗ್ಲೇನ್ ಮ್ಯಾಕ್ಸ್‌ವೆಲ್ ಕೇವಲ ಒಂದು ರನ್ಗೆ ಆರ್ ಅಶ್ವಿನ್ ಬೌಲಿಂಗ್ನಲ್ಲಿ ಔಟ್ ಆಗಿದ್ದರು. ಇದೇ ಪಂದ್ಯದಲ್ಲಿ 2 ಓವರ್ಗಳನ್ನು ಮಾಡಿ ಕೇವಲ 11 ರನ್ ನೀಡಿ ಒಂದು ವಿಕೆಟ್ ಕೂಡ ಮ್ಯಾಕ್ಸಿ ಪಡೆದಿದ್ದರು. ಆದರೆ ಪಂದ್ಯದ ವೇಳೆ ಅವರು ಮಾಡಿರುವ ವರ್ತನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮ್ಯಾಕ್ಸ್ವೆಲ್ಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ