/newsfirstlive-kannada/media/post_attachments/wp-content/uploads/2025/02/Tamilnadu-Mutton-Shop.jpg)
ಚಿಕನ್, ಮಟನ್ ಅಂದ್ರೆ ಕಿವಿ ಕೊಯಿಸಿಕೊಳ್ಳುತ್ತಾನೆ ಅನ್ನೋ ಮಾತೊಂದಿದೆ. ಮಾಂಸವನ್ನು ಅತಿಯಾಗಿ ಬಯಸೋ ಮಂದಿಗೆ ಇಂಥಾ ಗಾದೆ ಹೇಳುತ್ತಾರೆ. ಇಂಥಾ ಅಪ್ಪಟ ಮಾಂಸ ಪ್ರಿಯ ಒಬ್ಬ ಮಾಡಿದ ಕೃತ್ಯಕ್ಕೆ ಜನ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ಮಾಂಸದಂಗಡಿ ಮಾಲೀಕನಿಗೆ ಎಲ್ಲವೂ ಬಾಯಿಗೆ ಬಂದಂತಾಗಿತ್ತು.
ಫ್ರೀ ಮಾಂಸ ಬೇಕು.. ಕಮ್ಮಿ ರೇಟ್​​ ಮಾಂಸ ಬೇಕು ಅಂತಿದ್ದ!
ತಮಿಳುನಾಡಿನ ತೇಣಿ ಸಮೀಪದ ಪಳನಿಶೆಟ್ಟಿ ಪಟ್ಟಣದಲ್ಲಿ ಮಣಿಯರಸನ್ ಮಟನ್ ಆಂಗಡಿ ಇದೆ. ಇಲ್ಲಿ ಮೇಕೆ ಮಾಂಸಕ್ಕೆ ಮೋಸ್ಟ್ ಫೇವರೇಟ್​ ಅಂಗಡಿ ಅಂದ್ರೆ ಇದೊಂದೇ ಒಂದು. ಇದರ ಮಾಲೀಕನ ಹೆಸರು ಮಣಿಯರಸನ್. ಪ್ರತೀ ದಿನವೂ ಈ ಅಂಗಡಿಗೆ ನೂರಾರು ಗಿರಾಕಿಗಳು ಬರ್ತಿದ್ದಾರೆ. ಇದೇ ಗಿರಾಕಿಗಳ ಮಧ್ಯೆಯೇ ಓರ್ವ ಮಾಂಸ ಪ್ರಿಯ ಬರುತ್ತಿದ್ದ. ಅವನೇ ಅನ್ಬು ಕುಮಾರ್​. ಇವನದ್ದು ಪ್ರತೀ ದಿನವೂ ಮಣಿಯರಸನ್ ಜೊತೆ ಜಗಳ ಇದ್ದೇ ಇರುತ್ತಿತ್ತು. ಕಮ್ಮಿ ರೇಟಿಗೆ ಒಳ್ಳೆಯ ಮಟನ್ ಕೊಡು ಅಂತ ಜಗಳ ತೆಗೆಯುತ್ತಿದ್ದ. ಇದೇ ಫೆಬ್ರುವರಿ 9ರಂದು ಇವತ್ತು ನನಗೆ ಫ್ರೀಯಾಗಿ ಮಟನ್ ಕೊಡಬೇಕು ಅಂತ ಜಗಳಕ್ಕಿಳಿದಿದ್ದ. ಇದರಿಂದ ರೋಸಿ ಹೋದ ಮಣಿಯರಸನ್ ಮಟನ್ನೂ ಇಲ್ಲ.. ಗಿಟನ್ನೂ ಇಲ್ಲ ಹೊರಡು ಇಲ್ಲಿಂದ ಅಂತ ಆವಾಜ್ ಹಾಕಿ ಕಳುಹಿಸಿದ್ದ. ಎಲ್ಲರ ಎದುರು ಅಪಮಾನಗೊಂಡ ಅನ್ಬು ಕುಮಾರ್​​ ಕೋಪದಿಂದಲೇ ಅಲ್ಲಿಂದ ಹೊರಟು ಬಿಟ್ಟ.
ಕೋಪದಿಂದ ಸ್ಮಶಾನದಿಂದ ಪಾರ್ಸಲ್ ತಂದ ಅನ್ಬು ಕುಮಾರ್!
ಮಣಿಯರಸನ್ ಮಾತುಗಳಿಂದ ಕೋಪಗೊಂಡ ಅನ್ಬು ಕುಮಾರ್​ ಸೀದಾ ಸ್ಮಶಾನಕ್ಕೆ ಹೋಗಿದ್ದ.. ಅಲ್ಲಿ ಇತ್ತೀಚೆಗೆ ಹೂತಿದ್ದ ಶವವೊಂದನ್ನು ಎತ್ತಿಕೊಂಡು ಬಂದು ಮಣಿಯರಸನ್ ಅಂಗಡಿ ಮುಂದೆ ಎಸೆದಿದ್ದ. ಶವ ಕಂಡ ಗ್ರಾಹಕರು ಕೊಳೆತು ನಾರುತ್ತಿದ್ದ ಶವದ ವಾಸನೆಗೆ ಅಲ್ಲಿಂದ ಓಡಿ ಹೋದ್ರು. ಒಂದಷ್ಟು ಮಂದಿಯಂತೂ ಭಯಭೀತರಾಗಿ ಮಣಿಯರಸನ್ ಮೇಕೆ ಮಟನ್ ಅಂಗಡಿ ಸಹವಾಸವೇ ಬೇಡ ಅಂತ ಮನೆಯತ್ತ ದೌಡಾಯಿಸಿದ್ರು.
ಜನ ಅಲ್ಲಿಂದ ಓಡಿದ್ದನ್ನು ನೋಡಿದ ಅನ್ಬು ಕುಮಾರ್​ ಒಮ್ಮೆ ನಕ್ಕು ಅಲ್ಲೇ ನಿಂತಿದ್ದ. ಅಷ್ಟೊತ್ತಿಗೆ ವಿಷಯ ತಿಳಿದ ಪಳನಿಶೆಟ್ಟಿ ಪೊಲೀಸರು ಮಣಿಯರಸನ್ ಮಟನ್ ಅಂಗಡಿಗೆ ಬಂದ್ರು. ನಗುತ್ತಾ ನಿಂತಿದ್ದ ಅನ್ಬು ಕುಮಾರ್​​ಗೆ ಸ್ಫಾಟಲ್ಲೇ ಎರಡು ಬಿಟ್ರು. ಕೂಡಲೇ ಅವನನ್ನು ವಶಕ್ಕೆ ಪಡೆದು ಕೋರ್ಟ್​​ ಮುಂದೆ ನಿಲ್ಲಿಸಿದ್ದಾರೆ. ಸ್ಮಶಾನದಿಂದ ತಂದ ಶವ ಯಾರದ್ದು ಅನ್ನೋ ತನಿಖೆ ಆರಂಭಿಸಿದ್ದಾರೆ. ಮಾಂಸ ಕೊಡಲಿಲ್ಲ ಅಂತ ಮಟನ್ ಅಂಗಡಿಗೆ ಶವವನ್ನು ತಂದು ಎಸೆದ ಅನ್ಬು ಕುಮಾರ್​ ಕಂಬಿ ಎಣಿಸುತ್ತಿದ್ದಾನೆ.
ವರದಿ : ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ