/newsfirstlive-kannada/media/post_attachments/wp-content/uploads/2025/02/BGM-CONDUCTOR.jpg)
ಬೆಳಗಾವಿ, ಇದು ಕನ್ನಡ ನೆಲ.. ಇಲ್ಲಿ ಮರಾಠಿ ಭಾಷಿಗರು ನಡೆಸುವ ಪುಂಡಾಟಕ್ಕೆ ಅಂಕುಶವೇ ಇಲ್ಲದಂತಾಗಿದೆ. ಮರಾಠಿ ಮಾತನಾಡದ ಬಸ್ ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ.. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗಳನ್ನು ತಡೆದು ಶಿವಸೇನೆ ಕಿರಿಕ್ ಮಾಡಿದೆ. ಜೊತೆಗೆ ಬಾಲಬಿಚ್ಚಿರೋ ಎಂಇಎಸ್ ಪುಂಡರ ಹಾವಳಿ ಮತ್ತಷ್ಟು ಹೆಚ್ಚಾಗಿದೆ.
ಬೆಳಗಾವಿ ಕರ್ನಾಟಕದಲ್ಲಿದಿಯೋ ಅಥವಾ ಮಹಾರಾಷ್ಟ್ರದಲ್ಲಿದಿಯೋ ಗೊತ್ತಾಗ್ತಿಲ್ಲ, ಒಂದಲ್ಲ, ಒಂದು ಕಿರಿಕ್ ಮಾಡೋ ಮಹಾ ಪುಂಡರು ಶಾಂತಿಪ್ರಿಯ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ. ಸರ್ ಟಿಕೆಟ್ ತಗೊಳ್ಳಿ ಎಂದಿದ್ದೇ ತಪ್ಪಾಯ್ತು. ಕನ್ನಡ ನೆಲದಲ್ಲಿ ಕನ್ನಡದ ರಥವೇರಿ ಕನ್ನಡಮ್ಮನಿಗೆ ಮಾಡಿರೋ ಅಪಮಾನ ಇದು. ಕನ್ನಡ ಮಾತಾಡದ ಕಂಡಕ್ಟರ್ ಮೇಲೆ ಭಾಷಾಗಿರಿ ನಡೆಸಿದ್ದು ಬೂದಿ ಮುಚ್ಚಿದ ಕೆಂಡದಂತಾಗಿದೆ.
ಕಂಡಕ್ಟರ್ ಮೇಲಿನ ಹಲ್ಲೆ ಕೇಸ್ನಿಂದ ಗಡಿಯಲ್ಲಿ ಗದ್ದಲ
ಕುಂದಾನಗರಿಯಲ್ಲಿ ಶಿವಸೇನೆ ಪುಂಡರು ಮೈಮೇಲೆ ದೆವ್ವ ಹೊಕ್ಕಂತೆ ಆಡುತ್ತಾ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ದಾದಾಗಿರಿ ನಡೆಸಿದ್ದಾರೆ. ಮೊನ್ನೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಓರ್ವ ಅಪ್ರಾಪ್ತೆ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಇದೀಗ ಪುಂಡರ ಪರ ವಕಾಲತ್ತು ವಹಿಸಿರೋ ಶಿವಸೇನೆ ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿ ಹೈಡ್ರಾಮಾ ಮಾಡಿದೆ. ಇದೀಗ ಶಿವಸೇನೆಯ ಜೊತೆ ಎಂಇಎಸ್ ಕೂಡಾ ಕೈ ಜೋಡಿಸಿ ಕಿತಾಪತಿ ಮಾಡುತ್ತಿದೆ.
ಕರ್ನಾಟಕದ ಸಾರಿಗೆ ವೋಲ್ವೋ ಬಸ್ ಅಂಬಾರಿ ಪುಣೆಯಿಂದ ಪ್ರಯಾಣಿಕರನ್ನ ಹೊತ್ತು ಬೆಳಗಾವಿಗೆ ಬರ್ತಿತ್ತು. ಈ ವೇಳೆ ಬಸ್‌ನ ಅಡ್ಡಗಟ್ಟಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಮರಾಠಿ ಭಾಷೆಯಲ್ಲಿ ಬಸ್ ಮೇಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಎಂದು ಮರಾಠಿಯಲ್ಲಿ ಬರೆದು ಉದ್ಧಟತನ ತೋರಿದ್ದಾರೆ. ಇದಷ್ಟೇ ಅಲ್ಲ. ಕನ್ನಡ ಬೋರ್ಡ್‌ಗೂ ಕಪ್ಪು ಮಸಿ ಬಳಿದು ಎಂಇಎಸ್ ಕಪಿಗಳು ಕುಚೇಷ್ಟೆ ತೋರಿದ್ದಾರೆ.
ಇನ್ನೂ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇತ್ತ ಕರ್ನಾಟಕಕ್ಕೆ ಬರ್ತಿದ್ದ ಮಹಾರಾಷ್ಟ್ರ ಸಾರಿಗೆ ಬಸ್‌ಗಳನ್ನ ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ಕೂಡಾ ಅಲರ್ಟ್ ಆಗಿದೆ.
ಭಾಷೆ ಬರದಿದ್ದರೆ ಹೊಡೆದ್ರೆ ಭಾಷೆ ಬರುತ್ತಾ?
ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಮಹಾ ಪುಂಡರು ನಡೆಸಿರೋ ಹಲ್ಲೆಯನ್ನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಖಂಡಿಸಿದ್ದಾರೆ. ಭಾಷೆ ಬರಲ್ಲ ಅಂತ ಹೊಡೆದ್ರೆ ಭಾಷೆ ಬರುತ್ತಾ ಅಂತ ಮಹಾರಾಷ್ಟ್ರ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭೂಮಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡೋದು ಸಹಿಸಲಾಗದು. ಪದೇ ಪದೇ ಬಾಲ ಬಿಚ್ಚುವ ಇಂತಹ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ