/newsfirstlive-kannada/media/post_attachments/wp-content/uploads/2025/01/MYS_WOMAN.jpg)
ಮೈಸೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದ್ದು ಜನರು ತೀವ್ರ ಆತಂಕಕ್ಕೆ ಗುರಿಯಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಮಹಿಳೆಯೊಬ್ಬರು ವಿಷದ ಮಾತ್ರೆ ನುಂಗಿ ಜೀವ ತೆಗೆದುಕೊಂಡಿದ್ದಾರೆ.
ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಮಹಿಳೆ ಜಯಶೀಲ (53) ಪ್ರಾಣ ಬಿಟ್ಟವರು. ಈ ಮಹಿಳೆ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆ ಎಂದು ಐಐಎಫ್ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ನಲ್ಲಿ 5 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ಕಂತುಗಳನ್ನು ಕಟ್ಟುತ್ತಿದ್ದರು. ಆದರೆ ಇತ್ತಿಚೇಗೆ ಹಸುವಿನ ಆಕಸ್ಮಿಕ ಮರಣದಿಂದ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಇಎಂಐ ಕಟ್ಟಲು ಸಮಸ್ಯೆ ಎದುರಾಗಿತ್ತು.
ಇದನ್ನೂ ಓದಿ:BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?
ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದ ಮಹಿಳೆ, ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಜಮೀನಿನಲ್ಲಿ ವಿಷದ ಮಾತ್ರೆಗಳನ್ನು ನುಂಗಿ ಒದ್ದಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗಮಧ್ಯೆ ಮಹಿಳೆ ಜೀವ ಬಿಟ್ಟಿದ್ದಾರೆ. ಸದ್ಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಕಳೆದ ವಾರವೇ ನ್ಯೂಸ್ ಫಸ್ಟ್ ಮೈಕ್ರೋ ಫೈನಾನ್ಸ್ ಕುರಿತು ವರದಿ ಬಿತ್ತರಿಸಿತ್ತು. ಮೈಕ್ರೋ ಫೈನಾನ್ಸ್ನಿಂದ ಸಮಸ್ಯೆಯಾಗಿ ಗ್ರಾಮಸ್ಥರು ಊರು ಬಿಡುತ್ತಿದ್ದಾರೆ ಎಂದು ವರದಿ ಮಾಡಲಾಗಿತ್ತು. ನ್ಯೂಸ್ ಫಸ್ಟ್ ವರದಿ ಬಳಿಕ ಪೊಲೀಸರು ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ನಡೆಸಿದ್ದರು. ನಂಜನಗೂಡು ತಹಶೀಲ್ದಾರ್ ಆರ್ಬಿಐಗೆ ಪತ್ರ ಬರೆದಿದ್ದರು. ಇಷ್ಟೇ ಅಲ್ಲದೇ ಸಿಎಂ ಸಿದ್ದರಾಮಯ್ಯ ಕೂಡ ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ನಿಂದ ಮಹಿಳೆ ಜೀವ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ