/newsfirstlive-kannada/media/post_attachments/wp-content/uploads/2025/07/Nikhil_Kamath_new.jpg)
ಭಾರತದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದನ್ನು ಕಡಿಮೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಕೋವಿಡ್ ನಂತರ ನಿರುದ್ಯೋಗ ಗಗನಕ್ಕೇರಿದೆ. ಜತೆಗೆ ಇತ್ತೀಚೆಗೆ ಖಾಸಗಿ ವಲಯದಲ್ಲಿ ಲೇ ಆಫ್ ಕೂಡ ನಡೆಯುತ್ತಿದೆ. ಇದರ ಮಧ್ಯೆ ಝರೋಧಾ ಸಹ ಸಂಸ್ಥಾಪಕ, ಯುವ ಉದ್ಯಮಿ ನಿಖಿಲ್ ಕಾಮತ್ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಒಂದು ನೀಡಿದ್ದಾರೆ.
ಇನ್ಮುಂದೆ ನಾಲ್ಕು ವರ್ಷ ಡಿಗ್ರಿ ಅಥವಾ ಇನ್ಯಾವುದೇ ಪದವಿ ಪಡೆದು ಉದ್ಯೋಗ ಅರಸುತ್ತಾ ಫೀಲ್ಡಿಗೆ ಬರಬೇಡಿ. ಒಂದು ವೇಳೆ ಬಂದ್ರೂ ಮಾರುಕಟ್ಟೆಯಲ್ಲಿ ನೀವು ಪಡೆದ ಡಿಗ್ರಿಗೆ ಉದ್ಯೋಗವೇ ಇರಲ್ಲ. ಕಾರಣ 2030ರ ವೇಳೆಗೆ 92 ಮಿಲಿಯನ್ ಉದ್ಯೋಗ ಕಣ್ಮರೆಯಾಗಲಿದೆ. 78 ಮಿಲಿಯನ್ ಉದ್ಯೋಗಗಳು ಅಸ್ಥಿರತೆ ಎದುರಿಸಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಹಾಗಂತ ಆತಂಕ ಪಡುವ ಅಗತ್ಯವಿಲ್ಲ ಎಂದಿರೋ ನಿಖಿಲ್ ಕಾಮತ್ ಅವರು 2030ರ ವೇಳೆಗೆ 170 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಈ ಉದ್ಯೋಗ ಗಿಟ್ಟಿಸಿಕೊಳ್ಳಲು ಡಿಗ್ರಿ ಅರ್ಹತೆ ಆಗುವುದಿಲ್ಲ ಎಂದಿದ್ದಾರೆ.
2030ರ ವೇಳೆ ಡಿಗ್ರಿ ಔಟ್‌ಡೇಟೆಡ್- ನಿಖಿಲ್ ಕಾಮತ್
2030ರ ವೇಳೆ 3-4 ವರ್ಷದ ಡಿಗ್ರಿ ಕೋರ್ಸ್‌ಗಳು ಅರ್ಥ ಕಳೆದುಕೊಳ್ಳಲಿದೆ. ಕಾರಣ ಈ ಡಿಗ್ರಿ ಕೌಶಲ್ಯ ಅಥವಾ ಸರ್ಟಿಫಿಕೇಟ್ ಔಟ್‌ಡೇಟೆಡ್ ಆಗಲಿದೆ. ಡಿಗ್ರಿ ಪಡೆದು ಕೆಲಸಕ್ಕಾಗಿ ಅಲೆದರೆ ಒಂದು ಕೆಲಸವೂ ಸಿಗುವುದಿಲ್ಲ. 2030ರ ವೇಳೆಗೆ ಉದ್ಯೋಗ ಪಡೆಯುವ ಸ್ವರೂಪವೇ ಬದಲಾಗಲಿದೆ ಎಂದು ನಿಖಿಲ್ ಕಾಮತ್ WEF ಅಧ್ಯಯನ ವರದಿ ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಕಲಿಯುವ ಕೋರ್ಸ್ ಇನ್ಮುಂದೆ ವೇಸ್ಟ್. ಇದರಿಂದ ಯಾವುದೇ ಜಾಬ್ ಸಿಗಲ್ಲ. ಕಾರಣ ಮುಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅಂದ್ರೂ ಪ್ರಮುಖವಾಗಿ ಕೌಶಲ್ಯ ಹಾಗೂ ಪ್ರತಿಭೆ ಮುಖ್ಯ. ಯಾವುದೇ ಟಾಸ್ಕ್ ನೀಡಿದ್ರೂ ಅದನ್ನು ಪೂರ್ಣಗೊಳಿಸುವ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಇದು ಶಾಲಾ ಕಾಲೇಜುಗಳ ಪಠ್ಯಗಳಿಂದ ಸಾಧ್ಯವಿಲ್ಲ. ಬದಲಿಗೆ ತಂತ್ರಜ್ಞಾನದಲ್ಲಿ ಆಗುವ ಬದಲಾವಣೆ, ಉದ್ಯೋಗ ಕ್ಷೇತ್ರ ಏನು ಡಿಮ್ಯಾಂಡ್ ಇಡುತ್ತೇ ಅದನ್ನೇ ಕಲಿಯಬೇಕು ಎಂದರು.
AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚ ಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. 2030ರ ವೇಳೆಗೆ ಶೇಕಡಾ 34ರಷ್ಟು ಕೆಲಸವನ್ನು ತಂತ್ರಜ್ಞಾನ ಮಾಡಲಿದೆ. ಶೇಕಡಾ 33 ರಷ್ಟು ಉದ್ಯೋಗಕ್ಕೆ ಟೆಕ್ ಹಾಗೂ ಮಾನವ ಸಂಪನ್ಮೂಲ ಬಳಕೆಯಾಗಲಿದೆ. ಹೀಗಾಗಿ ಲೇ ಆಫ್ ಸಾಮಾನ್ಯ ಅನ್ನೋ ಆತಂಕಕಾರಿ ವಿಷಯ ಹೊರಬಿದ್ದಿದೆ.
ಇದನ್ನೂ ಓದಿ:ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ನಿರ್ಧಾರ.. 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ!
ಮುಂದಿನ ದಿನಗಳಲ್ಲಿ ಯಾವ ಕೆಲಸಕ್ಕೆ ಬೇಡಿಕೆ ಹೆಚ್ಚು?
ಫ್ಯೂಚರ್ನಲ್ಲಿ ಕಾರ್ಮಿಕರು, ಡ್ರೈವರ್, ಪ್ಲಂಬರ್ ಸೇರಿದಂತೆ ಹಲವು ಫಿಸಿಕಲ್ ಉದ್ಯೋಗಗಳಿಗೆ ಭಾರಿ ಬೇಡಿಕೆ ಬರಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದೀಗ WEF ಅಧ್ಯಯನ ವರದಿ ಪ್ರಕಾರ ಯಾವ ಕೆಲಸಗಳಿಗೆ ಬೇಡಿಕೆ ಅನ್ನೋ ಮಾಹಿತಿಯನ್ನು ನಿಖಿಲ್ ಕಾಮತ್ ಹೇಳಿದ್ದಾರೆ.
ಎಐ, ಬಿಗ್ ಡೇಟಾ, ಸೈಬರ್ ಸೆಕ್ಯೂರಿಟಿ, ಕ್ರಿಯೇಟಿವ್ ಥಿಂಕಿಂಗ್, ಪರಿಸರ ಸರಂಕ್ಷಣೆ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಉದ್ಯೋಗ ಬೇಡಿಕೆ ಭಾರಿ ಹೆಚ್ಚಾಗಲಿದೆ ಎಂದಿದ್ದಾರೆ. ಹೀಗಾಗಿ ನೀವು ದಶಕಗಳ ಹಿಂದೆ ಏನೋ ಕಲಿತಿದ್ದೀರಿ ಅನ್ನೋದು ಮುಖ್ಯವಲ್ಲ. 2030ರ ವೇಳೆಗೆ ಹೇಗೆ ಅಪ್‌ಗ್ರೇಡ್ ಆಗುತ್ತೀರಿ ಎಂಬುದು ಮುಖ್ಯ ಎಂದರು ನಿಖಿಲ್ ಕಾಮತ್.
ಭವಿಷ್ಯದ ಉದ್ಯೋಗಗಳಲ್ಲಿ ತಂತ್ರಜ್ಞಾನ ಒಂದು ಅಡಿಪಾಯವಾಗಲಿದೆ. ಇದರೊಂದಿಗೆ ಉದ್ಯೋಗಿಗಳ ಮರುಕೌಶಲ್ಯ ಅಗತ್ಯ ಇದೆ. ಕಂಪನಿಗಳು automation ಬದ್ಧತೆಯೊಂದಿಗೆ ಮಾನವ ಸಂಪನ್ಮೂಲ ವಿಕಾಸಕ್ಕೂ ಗಮನ ಹರಿಸಬೇಕಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾರಣದಿಂದ ಹಲವು ಉದ್ಯೋಗ ಕಡಿತಗೊಂಡರೆ ದುಪ್ಪಟ್ಟು ಉದ್ಯೋಗ ಸೃಷ್ಟಿಯಾಗಲಿದೆ. ಹೀಗೆ ಸೃಷ್ಟಿಯಾಗುವ ಉದ್ಯೋಗಕ್ಕೆ ನಿಮ್ಮಲ್ಲಿ ಕೌಶಲ್ಯವಿರಬೇಕು. ಕೌಶಲ್ಯವಿಲ್ಲದಿದ್ದರೆ ಅಥವಾ ಅಪ್‌ಗ್ರೇಡ್ ಆಗದಿದ್ದರೆ ಮಾರುಕಟ್ಟೆಯಲ್ಲಿ ನೀವು ಅಪ್ರಸ್ತುತವಾಗುತ್ತೀರಿ ಎಂದು ನಿಖಿಲ್ ಕಾಮತ್ ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ