/newsfirstlive-kannada/media/post_attachments/wp-content/uploads/2025/06/RAMLINGA-REDDY.jpg)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಂದ್ರೆ ಕೆಎಸ್‌ಆರ್‌ಟಿಸಿ. ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಸುಮಾರು 8 ವರ್ಷಗಳ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಖುದ್ದು 2 ಸಾವಿರ ಚಾಲಕ ಮತ್ತು ಕಂಡಕ್ಟರ್ಸ್ಗೆ ನಿಯೋಜನಾ ಆದೇಶ ಪತ್ರಗಳನ್ನು ವಿತರಣೆ ಮಾಡಿದ್ದಾರೆ.
ರಾಜ್ಯ ಸರ್ಕಾರ ನಿಗಮದಲ್ಲಿ 2020ನೇ ಸಾಲಿನಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ ದಿನಾಂಕ 13-10-2023 ರಂದು 300 ತಾಂತ್ರಿಕ ಸಹಾಯಕ ಹಾಗೂ 2000 ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿತ್ತು.
ಇದನ್ನೂ ಓದಿ: ಕೋಚಿಂಗ್, ಟ್ಯೂಷನ್ ಅವಲಂಬನೆ ತಗ್ಗಿಸುವ ಕುರಿತ ಶಿಫಾರಸ್ಸಿಗೆ ಸಮಿತಿ ರಚನೆ
ಸದ್ಯ ಅದರಂತೆ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಅಷ್ಟೇ ಅಲ್ಲ ಆಯ್ಕೆಯಾದ ಅಭ್ಯರ್ಥಿಗಳನ್ನು ವಿಭಾಗ /ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.
2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಸುಮಾರು 25,494 ಮಂದಿ ಅರ್ಜಿ ಹಾಕಿದ್ದರು. ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ 13954 ಮಂದಿ ಅರ್ಹರಾಗಿದ್ದರು. ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಲ್ಲಿ ಮೆರಿಟ್/ಮೀಸಲಾತಿ ಅನುಸಾರ 2000 ಹುದ್ದೆಗಳಿಗೆ ಭರ್ತಿ ಮಾಡಲಾಗಿದೆ. ಜತೆಗೆ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ 209 ಮೃತಾವಲಂಬಿತರಿಗೆ ನೌಕರಿ ನೀಡಲಾಗಿದೆ.
ನಾಲ್ಕು ಸಾರಿಗೆ ನಿಗಮದಲ್ಲಿ 1,000 ಮೃತಾವಲಂಭಿತರಿಗೆ ನೇಮಕಾತಿ ನೀಡಲಾಗಿದೆ. ಒಟ್ಟಾರೆ ನಿಗಮದಲ್ಲಿ ಕಳೆದ ಒಂದುವರೆ ವರ್ಷದಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಇದನ್ನೂ ಓದಿ: ಪೈಲಟ್ ಆಗುವುದು ಹೇಗೆ.. ವಿದ್ಯಾರ್ಥಿಗಳು ಇದಕ್ಕಾಗಿ ಯಾವ ಕೋರ್ಸ್ ಮಾಡಬೇಕು..?
ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಚಾಲನಾ ಸಿಬ್ಬಂದಿ ನೇಮಕಾತಿಯು ಪಾರದರ್ಶಕವಾಗಿ ಮಾಡಲಾಗಿದೆ. ಇದರಲ್ಲಿ ಯಾವುದೇ ವ್ಯಕ್ತಿಯ ಹಸ್ತಕ್ಷೇಪ ಇಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿರುತ್ತದೆ ಎಂದರು.
ಹೊಸದಾಗಿ ನೇಮಕಗೊಂಡಿರುವ ಚಾಲನಾ ಸಿಬ್ಬಂದಿ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಆ್ಯಕ್ಸಿಡೆಂಟ್ ಆಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ರಾಮಲಿಂಗಾರೆಡ್ಡಿ ಏನಂದ್ರು ಅಂತಾ ನೋಡೋದಾದ್ರೆ.. ರಾಜ್ಯದ 4 ಸಾರಿಗೆ ನಿಗಮಗಳಿಂದ ಸುಮಾರು 1000ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಿದ್ದೇವೆ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ 1 ಕೋಟಿ ನೀಡಲಾಗುವುದು. ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ ರೂ.10 ಲಕ್ಷಗಳ ಕಟುಂಬ ಕಲ್ಯಾಣ ಯೋಜನೆ ಅಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಮಗಳಿಗೆ NASA ಆಹ್ವಾನ
ಬರೋಬ್ಬರಿ 8 ವರ್ಷಗಳ ಬಳಿಕ ಎಸ್‌ಆರ್‌ಟಿಸಿ ನೇಮಕಾತಿ ನಡೆದಿದೆ. ಮುಂದಿನ ದಿನಗಳಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಿದ್ದು, ಆಸಕ್ತ ಅಭ್ಯರ್ಥಿಗಳು ಅಪ್ಲೈ ಮಾಡಬಹುದು. SSLC, PUC ಮತ್ತು ಡಿಗ್ರಿ ಪಾಸಾದವರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ