ಸಿಎಂ ಎದುರಲ್ಲೇ ಸಚಿವರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್​ ಶಾಸಕರು.. ಬೆನ್ನಲ್ಲೇ ಕಟ್ಟಪ್ಪಣೆ ಹೊರಡಿಸಿದ ಸಿದ್ದು..!

author-image
Gopal Kulkarni
Updated On
ಸಿಎಂ ಎದುರಲ್ಲೇ ಸಚಿವರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್​ ಶಾಸಕರು.. ಬೆನ್ನಲ್ಲೇ ಕಟ್ಟಪ್ಪಣೆ ಹೊರಡಿಸಿದ ಸಿದ್ದು..!
Advertisment
  • ‘ಸಚಿವರು ನಮ್ಮ ಕೈಗೇ ಸಿಗ್ತಿಲ್ಲ’.. ಸಿಎಂ ಮುಂದೆ ಶಾಸಕರ ಆಕ್ರೋಶ
  • ಶಾಸಕರಿಗೆ ಅನುದಾನದ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ
  • ಅಧಿವೇಶನ ಬಳಿಕ ಸಚಿವರ ರಾಜ್ಯ ಪ್ರವಾಸಕ್ಕೆ ಸಿಎಂ ಹುಕುಂ

ಕಾಂಗ್ರೆಸ್​ನಲ್ಲಿ ಅಂತರ್​ಬೇಗುದಿಗಳ ಸಂಖ್ಯೆ ಹೆಚ್ಚಾಗ್ತಿದೆ. ಖುದ್ದು ಕಾಂಗ್ರೆಸ್​ ಶಾಸಕರೇ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಅದರಲ್ಲೂ 2 ವರ್ಷಗಳಿಂದ ಅನುದಾನ ಸಿಕ್ಕಿಲ್ಲ ಅಂತ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಶಾಸಕರ ಸಮಸ್ಯೆಗಳನ್ನೆಲ್ಲ ಆಲಿಸಿದ ಸಿಎಂ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಸರ್ಕಾರ ರಚಿಸಿ ಎರಡು ವರ್ಷಗಳು ಇನ್ನೇನು ಪೂರ್ಣವಾಗಲಿವೆ. ಆದ್ರೆ 130ಕ್ಕೂ ಅಧಿಕ ಭರ್ಜರಿ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್​ಗೆ ಈ ಬಹುಮತವೇ ಕಂಟಕವಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ.

130 ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದ್ದರಿಂದಲೋ ಏನೋ ನಮ್ಮ ಬಳಿ ಹೆಚ್ಚಿನ ಸಂಖ್ಯಾಬಲವಿದೆ ಅನ್ನೋ ಅಹಂ ಕೆಲವರಲ್ಲಿ ಬಂದಂತಿದೆ. ಹೀಗಾಗಿ ಕೆಲ ನಾಯಕರು ಏನು ಮಾಡಿದ್ರೂ ನಡೆಯುತ್ತೆ ಅಂತ ಬೇಕಾಬಿಟ್ಟಿ ನಡೆದುಕೊಳ್ತಿದ್ದಾರೆ ಅನ್ನೋ ಆರೋಪ ಕೇಳಿಬರ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಸಚಿವರು ನಮ್ಮ ಕೈಗೇ ಸಿಗ್ತಿಲ್ಲ ಅಂತ ಖುದ್ದು ಕಾಂಗ್ರೆಸ್ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

publive-image

ಇದನ್ನೂ ಓದಿ:ಶ್ರೀರಾಮ ಆಯ್ತು ಈಗ ಸೀತೆಗೊಂದು ಬೃಹತ್ ಮಂದಿರ; ಸಂಚಲನ ಸೃಷ್ಟಿಸಿದ ಬಿಜೆಪಿ ಘೋಷಣೆ! ಕಾರಣವೇನು?

ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿದ್ರೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ. ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ತಿದಾರೆ. ಕ್ಷೇತ್ರದ ಕೆಲಸಗಳ ನಿಮಿತ್ತ ಸಂಪರ್ಕಕ್ಕೆ ಯತ್ನಿಸಿದರೂ ಸಚಿವರು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಸಲ್ಲದ‌ ಕಾರಣಗಳನ್ನ ಹೇಳಿ ನಮ್ಮನ್ನ ಸಾಗ ಹಾಕಲು ನೋಡುತ್ತಾರೆ. ಇದು ಹೀಗೆ ಆದರೆ ಸಚಿವರಾಗಿ ಯಾಕೆ ಇರಬೇಕು. ಸ್ಪಂದಿಸದ ಸಚಿವರನ್ನ ಮುಂದುವರೆಸುವ ಅಗತ್ಯ ಏನಿದೆ. ತಮ್ಮ ನಡೆ ಬದಲಿಸಿಕೊಳ್ಳದ‌ ಸಚಿವರನ್ನ ಸಂಪುಟದಿಂದ ಕೈಬಿಡಿ ಎಂದು ಸಿಎಂಗೆ ಶಾಸಕರು ಒತ್ತಾಯಿಸಿದ್ದಾರೆ. ಇದೇ ವೇಳೆ ಕೌನ್ಸಿಲಿಂಗ್ ಮೂಲಕ ನಡೆಸುವ ವರ್ಗಾವಣೆ ಪ್ರಕ್ರಿಯೆಯನ್ನ ಕೈಬಿಡುವಂತೆಯೂ ಒತ್ತಾಯ ಮಾಡಿದ್ದಾರೆ. ಉಪನೋಂದಣಾಧಿಕಾರಿ ಹಾಗೂ ಪಿಡಿಒಗಳ ವರ್ಗಾವಣೆಯನ್ನ ಕೌನ್ಸಿಲಿಂಗ್ ಮೂಲಕ ಆರಂಭಿಸಲಾಗಿದೆ. ಇದರಿಂದ ಬೇಕಾದವರನ್ನ ವರ್ಗಾವಣೆ ಮಾಡಿಸಿಕೊಳ್ಳಲಾಗ್ತ್ತಿಲ್ಲ. ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಆಗುವವರು ನಮ್ಮ ಮಾತನ್ನ ಕೇಳಲ್ಲ. ನಮಗೆ ಬೇಕಾದವರನ್ನ ಹಾಕಿಸಿಕೊಳ್ಳಲು ಕೌನ್ಸಿಲಿಂಗ್ ಪ್ರಕ್ರಿಯೆ ನಿಲ್ಲಿಸಿ ಎಂದು ಸಿಎಂಗೆ ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಗೆ ಅನಾರೋಗ್ಯ.. ದೆಹಲಿ ಪ್ರವಾಸ ದಿಢೀರ್ ರದ್ದು

ಇಷ್ಟೇ ಅಲ್ಲದೇ ಶಾಸಕರು ಸಚಿವರ ಕಾರ್ಯವೈಖರಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ರು. 2 ವರ್ಷದಿಂದ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ. ಸಚಿವರು ಕರೆ ಸ್ವೀಕರಿಸುತ್ತಿಲ್ಲ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೆಲಸ ಆಗದಿದ್ರೆ ಕ್ಷೇತ್ರದ ಜನರಿಗೆ ನಾವು ಏನು ಹೇಳಬೇಕು? ಲೋಕೋಪಯೋಗಿ ಇಲಾಖೆಯಲ್ಲಿ ಪ್ರತಿಪಕ್ಷದ ಶಾಸಕರು ಹೇಳಿದವರಿಗೆ ಎಲ್‌ಒಸಿ ಬಿಡುಗಡೆಯಾಗುತ್ತಿದೆ. ಆಡಳಿತ ಪಕ್ಷದ ಶಾಸಕರ ಕಡೆಯವರಿಗೆ ಅವಕಾಶ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಸಕರನ್ನ ಸಿಎಂ ಸಮಾಧಾನಪಡಿಸಿದ್ದು ಈ ಬಾರಿ ಬಜೆಟ್‌ನಲ್ಲಿ 8,500 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಎಲ್ಲರಿಗೂ ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡಲಾಗುವುದೆಂದು ಅಭಯ ನೀಡಿದ್ದಾರೆ.

publive-image

ಇನ್ನು ಅಧಿವೇಶನ ಮುಗಿಯುತ್ತಿದ್ದಂತೆ ಸಚಿವರೆಲ್ಲರೂ ರಾಜ್ಯ ಪ್ರವಾಸ ಮಾಡಬೇಕು ಅಂತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಕಾರ್ಯಕರ್ತರ ಅಹವಾಲು ಆಲಿಸಿ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ಕೊಡಬೇಕೆಂದು ಸೂಚಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್​ನಲ್ಲಿ ಒಂದಿಲ್ಲೊಂದು ಅಂತರ್​ಬೇಗುದಿ ಇದ್ದೇ ಇದೆ. ಈಗ ಶಾಸಕರು ತಮ್ಮ ಸಚಿವರ ವಿರುದ್ಧವೇ ಗರಂ ಆಗಿ ಸಿಎಂಗೆ ಅಹವಾಲು ಸಲ್ಲಿಸಿದ್ದಾರೆ. ಇದಕ್ಕೆ ಸಿಎಂ ಅಭಯ ಕೊಟ್ಟಿದ್ದು ಇನ್ಮುಂದಾದ್ರೂ ಸಚಿವರು ಸ್ಪಂದಿಸ್ತಾರಾ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment