/newsfirstlive-kannada/media/post_attachments/wp-content/uploads/2025/05/Bangalore-Rains.jpg)
ಮಳೆ ಬಂದ್ರೆ ಇಳೆಗೆ ಜೀವ ಕಳೆ.. ಸಕಲ ಜೀವರಾಶಿಗಳಿಗೂ ಉತ್ಸಾಹದ ಹೊಳೆ.. ಪೂರ್ವ ಮುಂಗಾರಿನಲ್ಲೇ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣ ರಾಜ್ಯದಲ್ಲಿ ರಣಾರ್ಭಟ ತೋರುತ್ತಿದ್ದಾನೆ. ಇನ್ನೂ ಎರಡ್ಮೂರು ದಿನದಲ್ಲಿ ರಾಜ್ಯಕ್ಕೆ ಮುಂಗಾರಿನ ಆಗಮವೂ ಆಗಲಿದ್ದು ವರುಣನ ಅಧಿಕೃತ ಎಂಟ್ರಿ ಹೇಗಿರುತ್ತೆ ಅನ್ನೋ ಆತಂಕ ಜನರಲ್ಲಿ ಮನೆಮಾಡಿದೆ.
ಮಲೆನಾಡು ಭಾಗದಲ್ಲಿ ಮುಂದುವರೆದ ಗಾಳಿ-ಮಳೆ
ಮುಂಗಾರು ಆರಂಭದಲ್ಲೇ ಮಲೆನಾಡು ಮಳೆನಾಡಾಗಿದೆ.. ಮಲೆನಾಡಿನ ಹಲವು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗ್ತಿದೆ.. ಭಾರೀ ಗಾಳೆ ಮಳೆಗೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪ ಬೃಹತ್ ಮರ ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ. ಮರ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬಿರುಗಾಳಿ ಮಳೆಗೆ ಹಾವೇರಿ ಜಿಲ್ಲೆ ಅನ್ನದಾತರು ಕಂಗಾಲು
ಬಿರುಗಾಳಿ ಮಳೆಗೆ ಹಾವೇರಿ ಜಿಲ್ಲೆ ಅನ್ನದಾತರು ಕಂಗಾಲಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅರಿಶಿನಗುಪ್ಪಿ ಗ್ರಾಮದಲ್ಲಿ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳಕ್ಕೆ ನೀರು ನುಗ್ಗಿ ಮೆಕ್ಕೆಜೋಳ ನೀರುಪಾಲಾಗಿದೆ.. 20ಕ್ಕೂ ಅಧಿಕ ಮೆಕ್ಕೆಜೋಳದ ರಾಶಿ ನೀರು ನುಗ್ಗಿ ಮೊಳಕೆ ಒಡೆಯುತ್ತಿರೋದನ್ನ ಕಂಡು ರೈತರು ಕಣ್ಣೀರಿಟ್ಟಿದ್ದಾರೆ.
ಪೂರ್ವ ಮುಂಗಾರಿನ ಆರ್ಭಟಕ್ಕೆ ಭರ್ತಿಯಾದ ಯಗಚಿ ಡ್ಯಾಂ
ಪೂರ್ವ ಮುಂಗಾರಿನ ಆರ್ಭಟಕ್ಕೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿರುವ ಯಗಚಿ ಡ್ಯಾಂ ಭರ್ತಿಯಾಗಿದೆ.. ಜಲಾಶಯ ಭರ್ತಿಯಾಗಿರೋ ಹಿನ್ನೆಲೆ 500 ಕ್ಯೂಸೆಕ್ ನೀರನ್ನ ಹೊರಬಿಡಲಾಗಿದೆ.. 3.60 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಯಗಚಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಬಾಗೀನ ಅರ್ಪಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!
ಕೃಷ್ಣಾ ನದಿ ಒಳ ಹರಿವು ಹೆಚ್ಚಳ.. ರೈತರು ಫುಲ್ ಖುಷ್!
ಕಳೆದ 8 ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾನದಿಗೆ ಅಪಾರ ಪ್ರಮಾಣದ ಒಳಹರಿವು ಇದೆ.. ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನಾಲ್ಕು ಅಡಿ ನೀರು ಏರಿಕೆಯಾಗಿದೆ.. ಈ ಹಿನ್ನೆಲೆ ಕಲ್ಲೋಳ-ಯಡೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಳ ಹಂತದ ಸೇತುವೆ ಮುಳುಗಡೆಯ ಹಂತ ತಲುಪಿದೆ.. ಕೃಷ್ಣಾ ನದಿ ಒಳಹರಿವು ಹೆಚ್ಚಾದ ಹಿನ್ನೆಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮೈದುಂಬಿದ ಗಾಜನೂರಿನ ತುಂಗಾ ಜಲಾಶಯ!
ಮಲೆನಾಡಿನ ಮಹಾಮಳೆಗೆ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಜಲಾಶಯ ತುಂಬುವ ಹಂತಕ್ಕೆ ತಲುಪಿದೆ.. ಡ್ಯಾಂನಿಂದ ಯಾವುದೇ ವೇಳೆ ನೀರು ಹೊರಕ್ಕೆ ಬಿಡುವ ಸಾಧ್ಯತೆ ಇದೆ.. ತುಂಗಾ ಜಲಾಶಯ ಆಡಳಿತ ನದಿ ಪಾತ್ರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಕೇರಳದಿಂದ ಬಂತು ಗುಡ್ನ್ಯೂಸ್.. ಮುಂಗಾರು ಎಂಟ್ರಿ ಬಗ್ಗೆ ಮಹತ್ವದ ಸಂದೇಶ..!
ಕುಸಿಯುವ ಹಂತದಲ್ಲಿ ಕಲ್ಲಿನ ಗುಡ್ಡ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಹಾಗೂ ಕೊಮ್ಮನಪಟ್ಟಿ ಗ್ರಾಮಗಳ ಮಧ್ಯದ ರಾಷ್ಟ್ರೀಯ ಹೆದ್ದಾರಿ 150 ಎಯಲ್ಲಿ ಕಲ್ಲಿನ ಗುಡ್ಡ ಕುಸಿಯುವ ಹಂತದಲ್ಲಿದೆ.. ನಿತ್ಯವು ವಾಹನ ಸವಾರರು ಭಯದಿಂದ ಸಂಚಾರ ಮಾಡ್ತಿದ್ದಾರೆ.. ಗುಡ್ಡವನ್ನು ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆದ್ರೂ ಯಾವುದೇ ಪ್ರಯೋಜನ ಆಗಿಲ್ಲ.
ಕೇರಳಕ್ಕೆ ಮುತ್ತಿಕ್ಕಿದ ಮಾನ್ಸೂನ್ ಮಾರುತಗಳು!
ನಿರೀಕ್ಷೆಯಂತೆ ನಿನ್ನೆ ಕೇರಳ ರಾಜ್ಯಕ್ಕೆ ಮುಂಗಾರಿನ ಮಾರುತರಾಜನ ಎಂಟ್ರಿ ಆಗಿದೆ.. ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ ಅಂತ ಹವಾಮಾನ ಇಲಾಖೆ ಘೋಷಿಸಿದೆ.. ಈ ವರ್ಷ ಎಂಟು ದಿನಕ್ಕೂ ಮೊದಲೇ ಮುಂಗಾರು ಎಂಟ್ರಿ ಕೊಟ್ಟಿದೆ.. ಇನ್ನೂ ಎರಡು ಮೂರು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರಿನ ಅಭಿಷೇಕ ಆಗಲಿದೆ.. ತೆಲಂಗಾಣ, ತಮಿಳುನಾಡು, ಆಂಧ್ರ, ರಾಯಲ್ಸೀಮಾ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಒಟ್ನಲ್ಲಿ ಟ್ರೈಲರ್ನಲ್ಲೇ ರಾಜ್ಯದ ಜನರ ಚಳಿ ಬಿಡಿಸುತ್ತಿರುವ ಮಳೆರಾಯ ಇನ್ನು ಎಂಟ್ರಿ ಬಳಿಕ ಇನ್ನೇನೆಲ್ಲಾ ಅನಾಹುತ ಸೃಷ್ಟಿಮಾಡ್ತಾನೆ ಕಾದು ನೋಡಬೇಕಿದೆ.. ಸಾವು-ನೋವಿಗೆ ಕಾರಣವಾಗದೇ ಸಕಲ ಜೀವರಾಶಿಗಳನ್ನೂ ಸೊಂಪಾಗಿ ತಣಿಸಿ ವರುಣಾ ಮೃದು ನರ್ತನ ತೋರೆಂದು ರಾಜ್ಯದ ಜನತೆ ಪ್ರಾರ್ಥಿಸುತ್ತಿದೆ.
ಇದನ್ನೂ ಓದಿ: ಪ್ಲೇ-ಆಫ್ಗೆ ಬಂತು ಆನೆಬಲ.. ಬಲಿಷ್ಠ ಸ್ಟಾರ್ ವೇಗಿಗೆ ಮತ್ತೆ ವೆಲ್ಕಮ್ ಹೇಳಿದ ಆರ್ಸಿಬಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ