/newsfirstlive-kannada/media/post_attachments/wp-content/uploads/2025/05/RAIN-13.jpg)
ಮುಂಗಾರು.. ಮೋಡಗಳು ಕರಗಿ ನೀರಾಗಿ ಭೂಮಿಯನ್ನು ತಬ್ಬುವ ಸಮಯ.. ಪ್ರಕೃತಿಗೆ ಚೈತನ್ಯ ತುಂಬುವ ಮಳೆ ಬಾರದಿದ್ರೆ ಇಳೆಗೆ ಆಸ್ತಿತ್ವವೇ ಇಲ್ಲ.. ದೇವರನಾಡು ಕೇರಳಕ್ಕೆ ಅವಧಿಗೂ ಮುನ್ನವೇ ಮಾನ್ಸೂನ್ ಎಂಟ್ರಿ ಕೊಟ್ಟು ಸಂತಸ ತಂದಿದೆ. ಇನ್ನೆರಡು ಮೂರು ದಿನಗಳಲ್ಲೇ ಮುಂಗಾರಿನ ಸ್ವಾಗತಕ್ಕೆ ಕರುನಾಡು ಕೂಡ ಸಜ್ಜಾಗಿದೆ. ಈ ಮಧ್ಯೆ ಪೂರ್ವ ಮುಂಗಾರು ರೈತರ ಮೊಗದಲ್ಲಿ ಖುಷಿ ತಂದಿದ್ರೆ ಕೆಲವೆಡೆ ಅವಾಂತರಗಳು ಮುಂದುವರಿದಿವೆ.
ಎಂಟು ದಿನಗಳ ಮೊದಲೇ ಮುಂಗಾರು ಎಂಟ್ರಿ!
ಮುಂಗಾರು ಮಳೆ.. ಒಲವಿನ ಸುರಿಮಳೆಯಾಗಿ ಭುವಿ-ಬಾನು ಒಂದಾಗುವ ಸುದಿನ.. ನಿರೀಕ್ಷೆಯಂತೆ ಇವತ್ತು ಕೇರಳ ರಾಜ್ಯಕ್ಕೆ ಮುಂಗಾರಿನ ಮಾರುತರಾಜನ ಎಂಟ್ರಿ ಆಗಿದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ ಅಂತ ಹವಾಮಾನ ಇಲಾಖೆ ಘೋಷಿಸಿದೆ. ಈ ವರ್ಷ ಎಂಟು ದಿನಕ್ಕೂ ಮೊದಲೇ ಮುಂಗಾರು ಎಂಟ್ರಿ ಕೊಟ್ಟಿರೋದು ವಿಶೇಷ.. ಅಂದಹಾಗೆ 2009ರಲ್ಲಿ ಮೇ, 23ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿತ್ತು, ಆದಾದ ಬಳಿಕ ಈಗ ಮೇ 24 ರಂದೇ ಕೇರಳಕ್ಕೆ ಮಾನ್ಸೂನ್ ಎಂಟ್ರಿ ಕೊಟ್ಟಿದೆ.. ಸಾಮಾನ್ಯವಾಗಿ ಮುಂಗಾರು ಮಳೆ ಜೂನ್ 1 ರಂದು ಕೇರಳ ಪ್ರವೇಶಿಸುವುದು ವಾಡಿಕೆ.. ಇನ್ನೂ ಎರಡು ಮೂರು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರಿನ ಅಭಿಷೇಕ ಆಗಲಿದೆ. ತೆಲಂಗಾಣ, ತಮಿಳುನಾಡು, ಆಂಧ್ರ, ರಾಯಲ್​ಸೀಮಾ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ರೈತ ಗೆದ್ರೆ ಇಡೀ ನಾಡೇ ಗೆದ್ದಂತೆ.. ನ್ಯೂಸ್ ಫಸ್ಟ್ ‘ಕೃಷಿ ದೇವೋಭವ’ ಕಾರ್ಯಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಅಭಿನಂದನೆ
/newsfirstlive-kannada/media/post_attachments/wp-content/uploads/2025/05/RAIN-12.jpg)
7 ದಿನಗಳ ಕಾಲ ಭಾರಿ ಮಳೆ
ಕಡಲ ನಗರಿ ಉಡುಪಿಗೆ ಮುಂಗಾರು ಪೂರ್ವ ಮಳೆ ವಿರಾಮ ನೀಡಿಲ್ಲ.. ರೆಡ್, ಆರೆಂಜ್, ಯೆಲ್ಲೋ ಅಲರ್ಟ್ ಮುಂದುವರಿದಿದೆ.. ಈ ಮಧ್ಯೆ ಚಂಡಮಾರುತದ ಆತಂಕ ಆವರಿಸಿದೆ. ಕಡಲಿನಲ್ಲಿ ಅಲೆಗಳ ಅಬ್ಬರದಿಂದ ಪ್ರಕ್ಷುಬ್ದತೆ ಮೂಡಿದೆ. ಮೀನುಗಾರಿಕೆಯ ದೋಣಿಗಳು ಸಮುದ್ರ ಪಾಲಾಗದಂತೆ ರಕ್ಷಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ನೀರು ತುಂಬಿಕೊಳ್ಳುವ ಮೊದಲು ಬೋಟುಗಳನ್ನು ದಡಕ್ಕೆ ತರಲು ಹರಸಾಹಸ ನಡೀತಿದೆ.
ಮಂಗಳೂರು ತೀರದಲ್ಲಿ ಕಡಲ್ಕೊರೆತದ ಭೀತಿ!
ಮಂಗಳೂರಿನ ಬಟ್ಟಪಾಡಿಯಲ್ಲಿ ಆಳೆತ್ತರದ ಅಲೆಗಳ ಆರ್ಭಟಕ್ಕೆ ಕಡಲ ಕೊರೆತದ ಆತಂಕ ಶುರುವಾಗಿದೆ. ತಡೆಗೋಡೆ ನಿರ್ಮಾಣಕ್ಕೆ ಕಳೆದ 6 ತಿಂಗಳ ಹಿಂದೆಯೇ 5 ಕೋಟಿ ಹಣ ಬಿಡುಗಡೆಯಾಗಿದ್ದರೂ ಇನ್ನೂ ತಡೆಗೋಡೆ ನಿರ್ಮಾಣ ಆಗಿಲ್ಲ.. ಹೀಗಾಗಿ ಸಮುದ್ರ ತೀರದ ನಿವಾಸಿಗಳು ಭೀತಿಗೊಳಗಾಗಿದ್ದಾರೆ. ಅತ್ತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಭಾರಿ ಮಳೆಗೆ ಮರಗಳು, ವಿದ್ಯುತ್​ ಕಂಬಗಳು ಧರಾಶಾಹಿಯಾಗಿವೆ. ಸಂಚಾರಕ್ಕೆ ಅಡ್ಡಿಯಾಗಿದೆ.. ಎಲ್ಲವನ್ನ ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಿಬ್ಬಂದಿ ಹರಸಾಹಸಪಡುವಂತಾಗಿದೆ.
ಇದನ್ನೂ ಓದಿ: ವಿಮಾನಗಳ ಕಿಟಕಿಯಲ್ಲಿ ವಿಡಿಯೋ ರೆಕಾರ್ಡ್ ಮಾಡದಂತೆ DGCA ಆದೇಶ; ಕಾರಣವೇನು?
/newsfirstlive-kannada/media/post_attachments/wp-content/uploads/2025/05/RAIN-14.jpg)
ಇತ್ತ ಮುಂಗಾರು ಆರಂಭಕ್ಕೂ ಮೊದಲೇ ಕೊಪ್ಪಳದ ಕಿನ್ನಾಳ-ಮುದ್ಲಾಪುರ ಬಳಿಯ ಹಿರೇಹಳ್ಳ ಮಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ.. 1.6 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ತುಂಬಲು ಕ್ಷಣಗಣನೆ ಆರಂಭವಾಗಿದ್ದು ಜಲಾಶಯ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ, ಮುಂಗಾರಿಗೂ ಮುನ್ನವೇ ಮಳೆಯ ಸಿಂಚನ ಆಗಿದೆ.. ಬಿಸಿಲ ಬೇಗೆಯಿಂದ ಬಳಲಿದ ಮನಕ್ಕೆ ಇಂಪು ನೀಡಿದೆ. ಕೃಷಿ ಚಟುವಟಿಕೆಗಳೂ ಗರಿ ಬಿಚ್ಚಿವೆ.. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ: 150 ವರ್ಷ ಇತಿಹಾಸದ ಮರ ನೆನಪು ಮಾತ್ರ.. ಬೆಂಗಳೂರಿನ ಸಸ್ಯಕಾಶಿಯಲ್ಲಿ ಗಿಡ, ಮರಗಳ ಮೂಕ ರೋಧನ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us