/newsfirstlive-kannada/media/post_attachments/wp-content/uploads/2023/09/BPL-2.jpg)
ಬೆಂಗಳೂರು: ರಾಜ್ಯದಲ್ಲಿ ಶುರುವಾಗಿರುವ ಆಪರೇಷನ್ ಬಿಪಿಎಲ್ ಅಥವಾ ಅನರ್ಹ ಪಡಿತರ ಚೀಟಿದಾರರ ಶಸ್ತ್ರಚಿಕಿತ್ಸೆ ಭಾರೀ ಹಲ್ಚಲ್ ಎಬ್ಬಿಸಿದೆ. ಆಘಾತಕಾರಿ ವಿಚಾರ ಅಂದ್ರೆ 22 ಲಕ್ಷಕ್ಕೂ ಅಧಿಕ ಅನರ್ಹರು ಬಿಲೋ ಪವರ್ಟಿ ಲೈನ್ ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಫಿಲ್ಟರ್ಗೆ ಮುಂದಾಗಿದೆ. ಆದ್ರೆ ಇದು ಜನರ ಕಳವಳಕ್ಕೆ ಕಾರಣವಾಗಿದ್ದು ಸರ್ಕಾರ ಅಭಯ ನೀಡಿದೆ.
ಆಪರೇಷನ್ BPL ರಾಜ್ಯದಲ್ಲಿ ಸದ್ಯ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡೋಕೆ ರಾಜ್ಯ ಸರ್ಕಾರ ಮುಂದಾಗಿದ್ದು ಸಂಚಲನ ಸೃಷ್ಟಿಸಿದೆ. ಮಾತ್ರವಲ್ಲದೇ ಬಿಪಿಎಲ್ ಕಾರ್ಡ್ ರದ್ದಿನ ಬಗ್ಗೆ ಜನರಲ್ಲಿ ಭಾರೀ ಕಳವಳ ಸೃಷ್ಟಿಯಾಗಿದೆ.
ಸರ್ಕಾರದ ದಾಖಲೆಯಲ್ಲಿವೆ 22 ಲಕ್ಷ ಅನರ್ಹ ಕಾರ್ಡ್
ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ಇವೆ ಎಂದು ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಇಷ್ಟು ಭಾರೀ ಪ್ರಮಾಣದ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳಿನಲ್ಲೇ ಶಾಕಿಂಗ್ ಅಂಕಿ ಅಂಶವನ್ನ ಇ ಗವರ್ನೆನ್ಸ್ ಇಲಾಖೆ ಬಿಚ್ಚಿಟ್ಟಿದೆ. ಇ ಗವರ್ನೆನ್ಸ್ ಇಲಾಖೆ ನೀಡಿದ ಮಾಹಿತಿ ಇಟ್ಟುಕೊಂಡೇ ಸರ್ಕಾರ ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ 22,62,482 ಅನರ್ಹ ಪಡಿತರ ಚೀಟಿ ಇವೆ ಅಂತ ರಿಪೋರ್ಟ್ ಇರೋದ್ರಿಂದ ಆಹಾರ ಆಯುಕ್ತರು ಜಿಲ್ಲಾವಾರು ಜಂಟಿ ಆಯುಕ್ತರಿಗೆ ಪತ್ರ ರವಾನೆ ಮಾಡಿದ್ದಾರೆ ಎನ್ನಲಾಗ್ತಿದ್ದು ಪತ್ರ ಬಂದ ಬಳಿಕ ಬಿಪಿಎಲ್ ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಅನರ್ಹ ಕಾರ್ಡ್ ಎಷ್ಟು?
22,62,482 ಒಟ್ಟು ಅನರ್ಹ ಬಿಪಿಎಲ್ ಕಾರ್ಡ್ಗಳು ರಾಜ್ಯದಲ್ಲಿವೆ. ಇದರಲ್ಲಿ 10 ಲಕ್ಷದ 97 ಸಾವಿರದ 621 ಕಾರ್ಡ್ಗಳು ಅನರ್ಹ ಅಂತ್ಯೋದಯ ಕಾರ್ಡ್ಗಳಾಗಿವೆ. 1 ಲಕ್ಷದ 6 ಸಾವಿರದ 152 ಕಾರ್ಡ್ಗಳು ತೆರಿಗೆ ಪಾವತಿ ಮಾಡುವವರದ್ದಾಗಿವೆ. 10 ಲಕ್ಷದ 54 ಸಾವಿರದ 368 ಕಾರ್ಡ್ಗಳು 1.20 ಲಕ್ಷ ಅದಾಯ ಹೊಂದಿದವರದ್ದಾಗಿವೆ. 4 ಸಾವಿರದ 272 ಕಾರ್ಡ್ಗಳು ಸರ್ಕಾರಿ ನೌಕರರದ್ದಾಗಿವೆ.
ಇನ್ನು ಇಂದು ಕೆಪಿಸಿಸಿಯಲ್ಲಿ ಭಾಷಣದ ವೇಳೆ ಬಿಪಿಎಲ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು. ಒಂದು ವೇಳೆ ಒಂದಿಬ್ಬರು ಅನರ್ಹರು ಸೇರಿಕೊಂಡರೂ ಪರವಾಗಿಲ್ಲ, ಅರ್ಹರಿಗೆ ತಪ್ಪಬಾರದು. ಅರ್ಹರ ಕಾರ್ಡ್ ಬಿಟ್ಟು ಹೋದ್ರೆ ಅರ್ಜಿ ಹಾಕಿ ವಾಪಸ್ ಕೊಡ್ತೇವೆ ಎಂದಿದ್ದಾರೆ.
ಇನ್ನು ಇದೇ ವೇಳೆ ಬಿಪಿಎಲ್ ಕಾರ್ಡ್ ಗೊಂದಲ ವಿಚಾರವನ್ನು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಪ್ರಸ್ತಾಪಿಸಿದ್ದಾರೆ.
ಬಿಜೆಪಿಯವರು ಅನಗತ್ಯವಾಗಿ ತರ್ಲೆ ಮಾಡುತ್ತಿದ್ದು ಬಿಪಿಎಲ್ ಕಾರ್ಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. 20-25% ಬಿಪಿಎಲ್ಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ರಾಜ್ಯದಲ್ಲಿ 80% ಬಡವರ ಪ್ರಮಾಣ ಇದೆಯಾ? ಬಿಪಿಎಲ್ ನವರು ಯಾರೂ ಕೂಡ ಭಯಪಡಬೇಕಿಲ್ಲ. ನಿಜವಾದ ಬಿಪಿಎಲ್ ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ ಅಂತ ಅಭಯ ನೀಡಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಆಪರೇಷನ್ ಬಿಪಿಎಲ್ ಶುರುವಾಗಿದೆ. ಇದು ಸಾಮಾನ್ಯವಾಗಿಯೇ ಗದ್ದಲ ಮೂಡಿಸಿದೆ. ಸದ್ಯ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳಿವೆ ಅನ್ನೋ ಸಂಖ್ಯೆ ಬೆಚ್ಚಿ ಬೀಳಿಸುತ್ತಿದೆ. ಅಲ್ಲದೇ ಎಲ್ಲಿ ನಮ್ಮ ಕಾರ್ಡ್ ರದ್ದಾಗುತ್ತೋ ಅಂತ ಜನಸಾಮಾನ್ಯರ ನಿದ್ದೆಗೆಡಿಸಿದೆ.
ಇದನ್ನೂ ಓದಿ:ಆರ್ಸಿಬಿ ಕ್ಯಾಂಪ್ನಲ್ಲಿ ದಿಢೀರ್ ಕಾಣಿಸಿಕೊಂಡ ಕೆಕೆಆರ್ ಸ್ಟಾರ್; ಸ್ಫೋಟಕ ಸುಳಿವು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ