/newsfirstlive-kannada/media/post_attachments/wp-content/uploads/2024/10/esrel.jpg)
ಇಸ್ರೇಲ್ ದೇಶ ಎಂದೂ ಮರೆಯದ ಒಂದು ಹೆಸರು ಅಂದ್ರೆ ಅದು ಎಲಿ ಕೋಹೆನ್. ಈಜಿಪ್ಟ್ನ ಅಲೆಕ್ಸಾಂಡ್ರಿಯಾದಲ್ಲಿ ಹುಟ್ಟಿ ಬೆಳದ ಈ ಯಹೂದಿ ಮುಂದೆ ಇಸ್ರೇಲ್ನ ಮೋಸಾದ್ಗೆ ದೊಡ್ಡ ವರವಾಗಿದ್ದು ಈಗ ಇತಿಹಾಸ. 1967ರ ಯುದ್ಧದಲ್ಲಿ ಸಿರಿಯಾ ವಶದಲ್ಲಿದ್ದ ಗೋಲನ್ ಹೈಟ್ಸ್ನ್ನು ಇಸ್ರೇಲ್ ಕೆಲವೇ ಗಂಟೆಗಳಲ್ಲಿ ವಶವಾಗುವುದಕ್ಕೆ ಇದೇ ಎಲಿ ಕೋಹೆನ್ ಕಾರಣ. ಎಲಿ ಕೊಹೆನ್ ಕಥೆ ಹೇಳುವುದಕ್ಕೂ ಮೊದಲು ನಾವು ನಿಮಗೆ ಸಿರಿಯಾದ ಆಗರ್ಭ ಶ್ರೀಮಂತ ಉದ್ಯಮಿ ಕೆಮಾಲ್ ಅಮೀನ್ ಥಾಬೆಟ್ ಒಂದು ಕಹಾನಿಯನ್ನು ಇಲ್ಲಿ ಹೇಳಲೇಬೇಕು.
ಕೆಮಾಲ್ ಅಮೀನ್ ಥಾಬೆಟ್, ಅಂದು ಸಿರಿಯಾದ ಪ್ರಮುಖ ಪಕ್ಷವಾದ ಬಾಥ್ ಪಾರ್ಟಿಗೆ ದಂಡಿ ದಂಡಿಯಾಗಿ ದೇಣಿಗೆ ನೀಡುತ್ತಿದ್ದ. ಅದು ಮಾತ್ರವಲ್ಲ ಕೆಮಾಲ್ ಅಮೀನ್ ಥಾಬೆಟ್ಗೆ ಸಿರಿಯಾ ಸೈನಿಕರ ಅಂದ್ರೆ ಎಲ್ಲಿದ ಒಂದು ಪ್ರೀತಿ. ಅವರಿಗೆ ಆಗಾಗ ಮದ್ಯದ ಪಾರ್ಟಿಗಳು ಜೋರಾಗಿ ನಡೆಸುತ್ತಿದ್ದ. ಉರಿ ಬಿಸಿಲು ಮಳೆ ಎನ್ನದೇ ನಿರಂತರವಾಗಿ ದೇಶ ಕಾಯುವ ಯೋಧರು ಕೊಂಚ ಮೋಜು ಮಸ್ತಿ ಮಾಡಲಿ ಅನ್ನೋದು ಕೆಮಾಲ್ ಅಮೀನ್ ಥಾಬೆಟ್ನ ಆಸೆ. ಹೀಗಾಗಿ ಅವನ ಭವ್ಯ ಬಂಗಲೆಯಲ್ಲಿ ಆಗಾಗ ಸೇನೆಯ ಪ್ರಮುಖರು, ಹಲವಾರು ಸೈನಿಕರು ಬೀಡಾರ ಹೂಡುತ್ತಿದ್ದರು. ಅವರಿಗೆ ಅದ್ಭುತ ಪಾರ್ಟಿಯೊಂದು ಪ್ರತಿಬಾರಿಯೂ ನೀಡಲಾಗುತ್ತಿತ್ತು. ಮದ್ಯದ ಜೊತೆಗೆ ಮಾನಿನಿಯರೂ ಕೂಡ ಸರಬಾರಾಜು ಮಾಡಲಾಗುತ್ತಿತ್ತು. ಕೆಮಾಲ್ ಪಾರ್ಟಿ ಅಂದ್ರೆ ಅಲ್ಲಿ ಟ್ಯೂನೆಷಿಯಾ, ಲೆಬನಾನ್ ಟರ್ಕಿಯಿಂದ ಬರುವ ಎಳೆ ಪ್ರಾಯದ ಸುಂದರಿಯರೂ ಕೂಡ ಸೇರುತ್ತಿದ್ದರು. ಇದೇ ಸಮಯದಲ್ಲಿ ಸಿರಿಯಾದ ರಾಜಕಾರಣದಲ್ಲೊಂದು ಕ್ಷಿಪ್ರ ಕ್ರಾಂತಿಯಾಗಿ ಹೋಯ್ತು. ಕೆಮಾಲ್ನಿಂದ ಕೋಟ್ಯಾಂತರ ರೂಪಾಯಿ ಹಣವನ್ನು ದೇಣಿಗೆ ಪಡೆಯುತ್ತಿದ್ದ ಬಾಥ್ ಪಾರ್ಟಿಯ ಮುಖಂಡ ಅಮಿನ್ ಅಲ್ ಹಫೀಜ್ ಅಂದಿನ ಸಿರಿಯಾ ಅಧ್ಯಕ್ಷನ ಲುಲಾಯಿ ಅಲ್ ಅಟ್ಟಾಸಿಯ ನೆತ್ತಿಯ ಮೇಲೆ ಬಂದೂಕನ್ನಿಟ್ಟು ಬಲತ್ಕಾರದಿಂದ ರಾಜೀನಾಮೆ ಪಡೆದು, ತಾನೇ ಸಿರಿಯಾ ಅಧ್ಯಕ್ಷ ಎಂದು ಘೋಷಿಸಿಕೊಂಡ.
ಇಲ್ಲಿ ಕೆಮಾಲ್ ಮನೆಯಲ್ಲಿ ತಿಂದುಂಡು ಕುಡಿದು ಅಮಲಲ್ಲಿ ಮಲಗಿದ್ದ ಸೈನಿಕರ ನಿದ್ದೆ ಇನ್ನೂ ಅರ್ಧವಿದ್ದಾಗಲೇ ಸಿರಿಯಾದಲ್ಲೊಂದು ರಾಜಕೀಯ ಕ್ಷಿಪ್ರಕ್ರಾಂತಿ ನಡೆದು ಹೋಗಿತ್ತು. ಬಾಥ್ ಪಾರ್ಟಿಯ ಮುಖಂಡ ಅಮಿನ್ ಅಲ್ ಹಫೀಸ್ ಅಧಿಕಾರವಹಿಸಿಕೊಂಡಿದ್ದ. ಈ ಒಂದು ರಾಜಕೀಯ ಕ್ರಾಂತಿಯ ಹಿಂದೆ ಕೆಮಾಲ್ನ ಹಣ ಕೆಲಸ ಮಾಡಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾವಾಗ ಹಫೀಸ್ ಅಧಿಕಾರಕ್ಕೆ ಏರಿದನೋ ಅಂದಿನಿಂದ ಕೆಮಾಲ್ ಹಾಗೂ ಹಫೀಸ್ ನಡುವಿನ ಸ್ನೇಹ ಇನ್ನುಷ್ಟು ಗಾಢವಾಯಿತು. ಎಲ್ಲ ನಿರ್ಧಾರಕ್ಕೂ ಮುನ್ನ ಹಫೀಸ್ ಕೆಮಾಲ್ನನ್ನು ಭೇಟಿಯಾಗಿ ಅವನ ಸಲಹೆ ಪಡೆಯುವುದನ್ನು ಮರೆಯುತ್ತಿರಲಿಲ್ಲ.
ಇದನ್ನೂ ಓದಿ:ಆಪ್ತ ದೇಶಗಳ ಆಪ್ತಮಿತ್ರ, ಯುದ್ಧ ತಂತ್ರಗಳಲ್ಲಿ ಪಳಗಿದ ಪ್ರವೀಣ.. ಪ್ರಧಾನಿ ನೆತನ್ಯಾಹು ಓದಿದ್ದು ಏನು..?
ಇದೇ ಸಮಯದಲ್ಲಿ ಸಿರಿಯಾದಲ್ಲಿ ಒಂದು ಹುಲ್ಲುಕಡ್ಡಿ ಅಲಗಿದರೂ ಕೂಡ ಅದು ಟೆಲ್ ಅವೀವ್ನ ಮೋಸಾದ್ ಕಚೇರಿಯನ್ನು ಸೇರತೊಡಗಿತು. ಯಾವುದೋ ಒಬ್ಬ ಭಯಂಕರ ಚಾಣಾಕ್ಷ ಇಸ್ರೇಲ್ ಒಳಗೆ ಸೇರಿಕೊಂಡು ಇಲ್ಲಿನ ಮಾಹಿತಿ ರವಾನಿಸುತ್ತಿದ್ದಾನೆ ಎಂಬ ತಲೆನೋವು ಹಫೀಸ್ ಜೊತೆ ಜೊತೆಗೆ ಕೆಮಾಲ್ಗೂ ಕೂಡ ಕಾಡತೊಡಗಿತು. ಹೀಗೆ ಸದಾ ಸಿರಿಯಾ ಜನರ ಕಲ್ಯಾಣಕ್ಕಾಗಿ ಚಿಂತಿಸುತ್ತಿದ್ದ ಕೆಮಾಲ್ ಹೆಚ್ಚು ಹೆಚ್ಚು ಜನನುರಾಗಿ ಕೆಲಸಕ್ಕಾಗಿ ದೇಣಿಗೆ ನೀಡತೊಡಗಿದ. ಮೂಲತಃ ಅರ್ಜೆಂಟೈನಾದವನಾಗಿದ್ದ ಕೆಮಾಲ್ ಸಿರಿಯಾಗೆ ಬಂದಿಳಿದ ಮೂರೇ ವರ್ಷಗಳಲ್ಲಿ ಸಿರಿಯಾ ಜನರ ಆರಾಧ್ಯ ದೈವನಾಗಿಯೇ ಉಳಿದು ಬಿಟ್ಟ ಇದೇ ಸಮಯದಲ್ಲಿ ಇಸ್ರೇಲ್ ಮತ್ತು ಸಿರಿಯಾ ನಡುವೆ ಸದಾ ಸಂಘರ್ಷಕ್ಕೆ ಕಾರಣವಾಗುತ್ತಿದ್ದ ಗೋಲನ್ ಹೈಟ್ಸ್ ನೋಡಬೇಕೆಂದು ಕೆಮಾಲ್ ಅಲ್ಲಿಗೆ ಹೊರಟು ನಿಂತ.
ಇದನ್ನೂ ಓದಿ:ಲೆಬನಾನ್ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?
ಗೋಲನ್ ಹೈಟ್ಸ್ ತುದಿಯಲ್ಲಿ ನೆರಳಿಲ್ಲದೇ ಬಂಕರ್ಗಳಲ್ಲಿ ಅಡಗಿ ಕುಳಿತಿದ್ದ ಸೈನಿಕರನ್ನು ಕಂಡು ಮಮ್ಮಲ ಮರುಗಿದ ಕೆಮಾಲ್ ಪ್ರತಿ ಬಂಕರ್ನ ಬಲಕ್ಕೆ 20 ಯೂಕಲಿಪ್ಸ್ ಗಿಡಗಳನ್ನು ನೆಡುವಂತೆ, ಅದರ ಖರ್ಚನ್ನು ತಾನೇ ಭರಿಸುವಂತೆ ಹೇಳಿ ಹೊರಟು ಹೋದ. ಇತ್ತ ಇಸ್ರೇಲ್ನ ಮೋಸಾದ್ ಸಿರಿಯಾ ರಾಜಕಾರಣದ ಇಂಚಿಂಚೂ ಮಾಹಿತಿಯನ್ನು ಕದಿಯುತ್ತಲೇ ಇತ್ತು. ಕೊನೆಗೆ ಸೋವಿಯತ್ನಿಂದ ರೇಡಿಯೋ ತರಗಂಗಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಯಂತ್ರವನ್ನು ತರಿಸಿಕೊಳ್ಳಲಾಗಿತ್ತು.
ಗೂಢಚಾರನ ಪತ್ತೆಗೆ ಕರ್ನಲ್ ಅಹ್ಮದ್ ಎಂಬುವವನ್ನು ಕೂಡ ನೇಮಿಸಲಾಗಿತ್ತು. ಕೊನೆಗೆ ಒಂದು ದಿನ ಆ ಮೋಸಾದ್ ಗೂಢಚಾರ ಪತ್ತೆಯಾಗುವ ದಿನ ಬಂದೇ ಬಿಟ್ಟಿತ್ತು. ಅಹ್ಮದ್ ಕಂಟ್ರೋಲ್ ರೂಮ್ಗೆ ಒಂದು ಕರೆ ಬಂದು ಕೆಮಾಲ್ ವಾಸವಿರುವ ಮನೆಯ ಹತ್ತಿರದಿಂದಲೇ ರೆಡಿಯೋ ಕರೆಗಳು ಹೋಗುತ್ತಿರುವ ಸಿಗ್ನಲ್ ಬರುತ್ತಿರುವುದಾಗಿ ಮಾಹಿತಿ ನೀಡಿದಾಗ ಅಹ್ಮದ್ ತಡಮಾಡಲಿಲ್ಲ ಕೂಡಲೇ ಅತ್ತ ನುಗ್ಗಿದ. ಕೆಮಾಲ್ ಇದ್ದ ಅಪಾರ್ಟ್ಮೆಂಟ್ಗೆ ಬಂದವನ ಕಿವಿಗೆ ಅಪ್ಪಳಿಸಿದ್ದು ಯಾರೋ ಮೆಸೆಜ್ ಮಾಡುತ್ತಿರುವ ಸೌಂಡ್. ಬಾಗಿಲು ತಳ್ಳಿ ನುಗ್ಗಿದ ಸೇನೆ ಒಂದ ಕ್ಷಣ ತಮ್ಮ ಕಣ್ಣನ್ನು ತಾವೇ ನಂಬದಾಗಿ ಹೋಗಿದ್ದರು. ಇಡೀ ಸಿರಿಯಾವೆಂಬ ಸಿರಿಯಾವೇ ಇಷ್ಟು ಸರಳವಾಗಿ ಯಾಮಾರಿ ಹೋಯ್ತಾ ಎಂದು ದಂಗುಬಡಿದು ನಿಂತಿದ್ದರು. ಅಲ್ಲಿ ಟೈಪ್ರೈಟರ್ ಮೇಲೆ ಅಕ್ಷರ ಟೈಮ್ ಮಾಡುತ್ತಾ ಕುಳಿತಿದ್ದವನು ಬೇರೆ ಯಾರು ಅಲ್ಲ ಅಂದು ಸಿರಿಯಾ ಅಧ್ಯಕ್ಷ ಅಮಿನ್ ಅಲ್ ಹಫೀಸ್ನ ಆಪ್ತಮಿತ್ರ, ಕೆಲವೇ ದಿನಗಳಲ್ಲಿ ಸಿರಿಯಾ ರಕ್ಷಣಾ ಸಚಿವನಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದ ಕೆಮಾಲ್ ಅಮಿನ್ ಥಾಬೆಟ್.
ಇದನ್ನೂ ಓದಿ: ಇಸ್ರೇಲ್ನ ಆ ಒಂದು ಕನಸು ನನಸಾಗುವ ಸಮಯ ಬಂತಾ? ರಷ್ಯಾದ ಪ್ರಖ್ಯಾತ ರಾಜನೀತಿ ತಜ್ಞ ಈ ಬಗ್ಗೆ ಹೇಳುವುದೇನು?
ಅಸಲಿಗೆ ಕೆಮಾಲ್ ಅಮಿನ್ ಥಾಬೆಟ್ ಎಂದು ಹೆಸರಿಟ್ಟುಕೊಂಡು ಸಿರಿಯಾಗೆ ಬಂದವನು, ಮೋಸಾದ್ ತನ್ನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಏಜೆಂಟ್, ಹೆಸರು ಎಲಿ ಕೋಹೆನ್. ಈ ಸುದ್ದಿ ಕೇಳಿ ಅಮಿನ್ ಅಲ್ ಹಸನ್ ಅಕ್ಷರಶಃ ಕುಸಿದು ಬಿದ್ದ. ಬಗಲಿನಲ್ಲಿಯೇ ಇದ್ದ ದುಷ್ಮನ್ ಸ್ನೇಹಿತನಾಗಿ ಹೇಗೆಲ್ಲಾ ಯಾಮಾರಿಸಿಬಿಟ್ಟನಲ್ಲ ಎಂದು ಕನಲಿಹೋಗಿದ್ದ. ಮೋಸಾದ್ಗೆ ನೀಡಿದ ಮಾಹಿತಿಯನ್ನು ಹೊರಹಾಕಿಸಲು ಕೊಹೇನ್ಗೆ ಚಿತ್ರಹಿಂಸೆ ನೀಡಲಾಯ್ತು. ಅವನು ಒಂದಕ್ಷರವೂ ಬಾಯಿ ಬಿಡಲಿಲ್ಲ. ಕೊನೆಗೆ 18 ಮೇ 1965ರಲ್ಲಿ ಸಿರಿಯಾದ ಡೆಮಾಸ್ಕಸ್ನಲ್ಲಿ ಎಲಿ ಕೋಹೆನ್ನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯ್ತು. ಅವನು ಮಾಡಿದ ಆರೋಪಗಳನ್ನು ಅವನ ನಿಲುವಂಗಿಯ ಮೇಲೆ ಅರೆಬಿಕ್ ಭಾಷೆಯಲ್ಲಿ ಬರೆಯಲಾಗಿತ್ತು. ಎಲಿ ಕೋಹೆನ್ನ್ನು ಕಾಪಾಡಲು ಇಸ್ರೇಲ್ ಹರಸಾಹಸಪಟ್ಟಿತಾದ್ರೂ ಸಿರಿಯಾ ತಾನೂ ಮೋಸ ಹೋದ ಆಕ್ರೋಶ ಅವನನ್ನು ಉಳಿಯಗೊಡಲಿಲ್ಲ. ಕೋಹೆನ್ ಪತ್ನಿ ಪರಿಪರಿಯಾಗಿ ಬೇಡಿಕೊಂಡರು ಆಕೆಯ ಪತಿಯ ಶವ ಅವಳಿಗೆ ನೀಡಲಿಲ್ಲ ಸಿರಿಯಾ. ಹೀಗೆ ಇಸ್ರೇಲ್ನ ಒಬ್ಬ ಚಾಣಾಕ್ಷ ಮೋಸಾದ್ ಏಜೆಂಟ್ ಡೆಮಾಸ್ಕಸ್ನಲ್ಲಿ ಅನಾಥ ಶವವಾಗಿ ಹೋಗಿದ್ದ.
ಕೋಹೆನ್ ಮೃತಪಟ್ಟ 2 ವರ್ಷಗಳಲ್ಲಿ ಅಂದ್ರೆ 1967ರಲ್ಲಿ ಒಟ್ಟು ಆರು ದೇಶಗಳು ಇಸ್ರೇಲ್ ಮೇಲೆ ಯುದ್ಧ ಸಾರಿದವು. ಅದರಲ್ಲಿ ಸಿರಿಯಾ ಕೂಡ ಒಂದಾಗಿತ್ತು. ಈ ಯುದ್ಧದ ಸಮಯದಲ್ಲಿ ಇಸ್ರೇಲ್ಗೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಗೋಲನ್ ಹೈಟ್ಸ್ ಬೆಟ್ಟ. ತುತ್ತ ತುದಿಯ ಮೇಲೆ ಕುಳಿತಿದ್ದ ಸಿರಿಯಾ ಸೈನಿಕರು ಸಿಡಿಸುತ್ತಿದ್ದ ಶೆಲ್ಗಳು ಇಸ್ರೇಲ್ ಸೈನಿಕರನ್ನು ಇಂಚು ಕೂಡ ಅಲಗದಂತೆ ಮಾಡಿ ಹಾಕಿದ್ದವು. ಆಗಲೇ ಮೋಸಾದ್ನಿಂದ ಇಸ್ರೇಲ್ ಸೈನಿಕರಿಗೆ ಒಂದು ಕರೆ ಹೋಯಿತು. ಗುಡ್ಡದ ಮೇಲೆ ಕಾಣುತ್ತಿರುವ ಯೂಕಲಿಪ್ಸ್ ಮರಗಳ ಇಪ್ಪತ್ತು ಅಡಿ ಎಡಕ್ಕೆ ಗುರಿಯಿಟ್ಟು ಹೊಡೆಯಿರಿ ಅಂತ. ಅಷ್ಟೇ ಕೆಲವೇ ಕೆಲವು ಗಂಟೆಗಳಲ್ಲಿ ಇಸ್ರೇಲ್ 2 ಸಾವಿರಕ್ಕೂ ಅಧಿಕ ಸಿರಿಯಾ ಸೈನಿಕರನ್ನು ಹತ್ಯೆ ಮಾಡಿ. ಗೋಲನ್ ಹೈಟ್ಸ್ ಮೇಲೆ ತನ್ನ ಧ್ವಜ ನೆಟ್ಟಿತ್ತು. 1965ರಲ್ಲಿ ಎಲಿ ಕೋಹೆನ್ ನೆಡೆಸಿದ್ದ ಮರಗಳು 1967ರಲ್ಲಿ ಇಸ್ರೇಲ್ಗೆ ವರದಾನವಾಗಿದ್ದವು.
ಗ್ರಂಥಋಣ: ಯಹೂದಿ.
ಲೇಖಕರು: ಶ್ರೀಕಾಂತ್ ಶೆಟ್ಟಿ ಕಾರ್ಕಳ ( ಮಹಾಕಾಲ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ