/newsfirstlive-kannada/media/post_attachments/wp-content/uploads/2025/02/CHABBIRAM-YADAV-1.jpg)
ನಾವು ಸಿನಿಮಾಗಳಲ್ಲಿ ಅನೇಕ ಡಾಕು ಅಥವಾ ವಿಲನ್ಗಳನ್ನ ನೋಡಿರುತ್ತೇವೆ. ಅವರ ಕ್ರೌರ್ಯ ಆ ನೀಚತನ ಕಂಡು ನಮ್ಮಲ್ಲಿಯೇ ಒಂದು ಆಕ್ರೋಶ ಮಡುಗಟ್ಟಿರುತ್ತದೆ. ಅವರ ಕಿರಾತಕತನ ನಮ್ಮಲ್ಲಿ ಒಂದು ದ್ವೇಷವನ್ನು ಹುಟ್ಟಿಸುತ್ತದೆ ಮಾತ್ರವಲ್ಲ. ವಿಲನ್ ಪಾತ್ರಗಳು ಕೂಡ ಕೆಲವೊಮ್ಮೆ ಪ್ರಭಾವ ಬೀರುವ ಸಾಧ್ಯತೆಯೂ ಕೂಡ ಇರುತ್ತದೆ. ಇಂತಹ ಅನೇಕ ಸಿನಿಮಾದ ಅನೇಕ ಡಾಕುಗಳನ್ನು ನಾವು ನೋಡಿದ್ದೇವೆ. ಆದ್ರೆ ಈ ದೇಶದಲ್ಲಿ ರಿಯಲ್ಲಾಗಿಯೇ ಅಂತಹ ಹತ್ತು ಭಯಾನಕ ಡಾಕುಗಳನ್ನು ಕಂಡಿದೆ. ಅವರ ಕ್ರೌರ್ಯಗಳಿಗೆ ಮೂಕ ಸಾಕ್ಷಿಯಾಗಿದೆ. ಕ್ರೌರ್ಯಕ್ಕೆ ಇನ್ನೊಂದು ಮುಖವೇ ಇವರೇನಾ ಎಂಬ ಮಟ್ಟಿಗೆ ಅವರ ಮೆರೆದಾಟಗಳು ಆಗಿ ಹೋಗಿವೆ. ಯಾರು ಅವರೆಲ್ಲಾ ಎನ್ನುವುದರ ಬಗ್ಗೆ ಇಲ್ಲಿ ವಿಶೇಷ ವರದಿಯಿದೆ.
ಫೋಲನ್ ದೇವಿ: ಇವಳು ದೇಶ ಕಂಡ ಅತ್ಯಂತ ಕ್ರೂರ ಹಾಗೂ ಪ್ರತಿಶೋಧಕ್ಕಾಗಿ ತಿರುಗಿ ಬಿದ್ದ ಹೆಣ್ಣು ಎಂದು ಕರೆಯಲಾಗುತ್ತದೆ. ಫೂಲನ್ ದೇವಿಯನ್ನು ಚಂಬಲ್ ಕಣವಿ ರಾಣಿ ಎಂದೇ ಕರೆಯಲಾಗುತ್ತಿತ್ತು. ಆಕೆಯ ಮೇಳೆ ದೌರ್ಜನ್ಯ ಮೆರೆದ ಠಾಕೂರು ಸಮುದಾಯದವರ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಕೈಗೆ ಬಂದೂಕು ಎತ್ತಿಕೊಂಡ ಮಹಿಳೆ ಈಕೆ. ಫೂಲನ್ ದೇವಿಯನ್ನು ಪಾಪದ ಹೂವು ಎಂದೇ ಕರೆಯಲಾಗುತ್ತಿತ್ತು. 1981ರಲ್ಲಿ ಫೂಲನ್ ದೇವಿ ಠಾಕೂರ್ ಸಮುದಾಯಕ್ಕೆ ಸೇರಿದ ಸುಮಾರು 20 ಜನರನ್ನು ಸಾಲುಗಟ್ಟಿ ನಿಲ್ಲಿಸಿ ಗುಂಡು ಹೊಡೆದು ಹತ್ಯೆ ಮಾಡಿದ್ದಳು. ತನ್ನದೇ ಆದ ಒಂದು ಗ್ಯಾಂಗ್ ಕಟ್ಟಿಕೊಂಡು ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ನಡುವೆ ಇರುವ ಚಂಬಲ್ ಕಣಿವೆಯಲ್ಲಿ ನೆಲೆಸಿದ್ದಳು. ಠಾಕೂರ್ ಸಮುದಾಯಕ್ಕೆ ಸೇರಿದವರು ಈಕೆಯ ಮೇಲೆ ದೌರ್ಜನ್ಯ ನಡೆಸಿ ದೈಹಿಕವಾಗಿ ಬಲವಂತವಾಗಿ ಬಳಸಿಕೊಂಡು ಇವಳ ಪ್ರಿಯಕರನನ್ನು ಕೂಡ ಹತ್ಯೆ ಮಾಡಿದ್ದರು. ಅದರ ಸೇಡು ತೀರಿಸಿಕೊಳ್ಳಲು ಈಕೆ ಪ್ರೇಮಿಗಳ ದಿನದಂದೇ ಅಂದ್ರೆ ಫೆಬ್ರವರಿ 14 1981ರಲ್ಲಿ ಬಹಮೈ ಗ್ರಾಮಕ್ಕೆ ನುಗ್ಗಿ 20 ಜನ ಠಾಕೂರ್ ಸಮುದಾಯಕ್ಕೆ ಸೇರಿದವರನ್ನು ಸಾಲಾಗಿ ಗುಂಡಿಟ್ಟು ಅವರ ಕಥೆ ಮುಗಿಸಿದ್ದಳು. ಈ ಒಂದು ಕ್ರೌರ್ಯ ಜಾಗತಿಕವಾಗಿಯೇ ಸದ್ದು ಮಾಡಿತ್ತು.
ಮಾನ್ ಸಿಂಗ್:ಈತ ರಜಪೂತ ಸಮುದಾಯಕ್ಕೆ ಸೇರಿದವನು ಈತ 1939 ರಿಂದ 1955ರವರೆಗೆ ತನ್ನ ಅಟ್ಟಹಾಸವನ್ನು ಮೆರೆದಿದ್ದ. ಇವನಂತಹ ನಟೋರಿಯಸ್ ಡಾಕುವನ್ನು ಉತ್ತರಪ್ರದೇಶ ಹಿಂದೆಂದೂ ಕಂಡು ಕೇಳರಿದಿದ್ದಿಲ್ಲ. ಇಷ್ಟು ವರ್ಷಗಳಲ್ಲಿ ಈತ 1,112 ದರೋಡೆಗಳನ್ನು ಮಾಡಿದ್ದ. ಸುಮಾರು 185 ಜನರನ್ನು ಹತ್ಯೆ ಮಾಡಿದ್ದ ಅವರಲ್ಲಿ ಸುಮಾರು 32 ಜನರು ಪೊಲೀಸ್ ಅಧಿಕಾರಿಗಳೇ ಇದ್ದರು. ಸುಮಾರು ನೂರಕ್ಕೂ ಹೆಚ್ಚು ಕೇಸ್ಗಳು ಈತನ ಮೇಲೆ ಇದ್ದವು. ಇವನು ಕೂಡ ಚಂಬಲ್ ಕಣಿವೆಯಲ್ಲಿಯೇ ತನ್ನ ದರ್ಬಾರ್ ಶುರುವಿಟ್ಟುಕೊಂಡವನು. ಸರ್ಕಾರಕ್ಕೆ ಬೇಕಾಗಿದ್ದ ಈ ಮೋಸ್ಟ್ ವಾಟೆಂಡ್ ನಟೋರಿಯಸ್ ರೌಡಿ. ಬಡವರ ಮನದಲ್ಲಿ ರಾಬಿನ್ ಹುಡ್ ಎಂಬ ಖ್ಯಾತಿಯನ್ನು ಗಳಿಸಿದ್ದ. ಬಡವರಿಗೆ ಈತನು ಮಾಡುತ್ತಿದ್ದ ಸಹಾಯ ಅವನನ್ನು ಈ ಖ್ಯಾತಿಗೆ ಒಳಪಡಿಸಿತ್ತು 1955ರಲ್ಲಿ ಮಧ್ಯಪ್ರದೇಶದ ಭಿಂಡ್ ಎಂಬಲ್ಲಿ ಈತನನ್ನು ಎನ್ಕೌಂಟರ್ ಮಾಡಿ ಉಡಾಯಿಸಲಾಯ್ತು.
ಪಾನ್ ಸಿಂಗ್ ತೋಮರ್: ಚಂಬಲ್ ಕಣಿವೆ ಕಂಡ ಮತ್ತೊಬ್ಬ ಕುಖ್ಯಾತ ಡಾಕು ಅಂದ್ರೆ ಅದು ಪಾನ್ ಸಿಂಗ್ ತೋಮರ್ ಪ್ರಸಿದ್ಧ ಕ್ರೀಡಾಪಟು ಆಗಿದ್ದ. ಭಾರತೀಯ ಸೇನೆಯಲ್ಲಿ ಸೇವೆಯನ್ನು ಕೂಡ ಸಲ್ಲಿಸಿದ್ದ. ರಜಪೂತ ಕುಟುಂಬದಲ್ಲಿ ಜನಿಸಿದ ಈತ ಭಾರತೀಯ ಸೇನೆಯಲ್ಲಿ 51 ಇಂಜನೀಯರ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದ. 1958ರಲ್ಲಿ ಟೋಕಿಯೋದಲ್ಲಿ ನಡೆದ ಏಷಿಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 1962ರಲ್ಲಿ ನಡೆದ ಇಂಡೋ ಚೀನಾ ವಾರ್ನಲ್ಲಿಯೂ ಕೂಡ ಭಾಗಿಯಾಗಿದ್ದ.
1977ರಲ್ಲಿ ಈತ ನಿವೃತ್ತಗೊಂಡ ಬಳಿಕ ತನ್ನೂರಿಗೆ ಬಂದ ತೋಮರ್, ಸಣ್ಣದೊಂದು ಭೂವ್ಯಾಜ್ಯದಿಂದಾಗಿ ಸಂಬಂಧಿಕರಿಂದ ಆದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಈತ ಬಂದೂಕು ಕೈಗೆತ್ತಿಕೊಂಡ. ದೇಶ ಕಂಡ ಅತ್ಯಂತ ಕುಖ್ಯಾತ ಢಾಕುಗಳಲ್ಲಿ ಒಬ್ಬನಾಗಿ ಹೋದ. ಈತನ ತಲೆಯ ಮೇಲೆ ಅಂದಿನ ಕಾಲಕ್ಕೆ ಸುಮಾರು 10 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಕೊನೆಗೆ ಅಕ್ಟೋಬರ್ 1, 1981 ರಂದು ಈತನನ್ನು ಎನ್ಕೌಂಟರ್ ಮಾಡಲಾಯ್ತು .
ವೀರಪ್ಪನ್: ಈತ ಯಾರಿಗೆ ತಾನೆ ಗೊತ್ತಿಲ್ಲ. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರವನ್ನು ಬಿಡದಂತೆ ಕಾಡಿದ ನೀಚ ಈತ. ಈತನನ್ನು ದಂತಚೋರ, ನರಹಂತಕ ಎಂತಲೇ ಕರೆಯಲಾಗುತ್ತಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಆನೆಗಳನ್ನು ಹತ್ಯೆ ಮಾಡಿ ಅವುಗಳ ದಂತವನ್ನು ಮಾರಿದವನು ಇವನು. ಕಾಡಿನಲ್ಲಿ ಗಂಧದ ಗಿಡಗಳನ್ನು ಅಕ್ರಮವಾಗಿ ಕಡಿದು ಮಾರಿ ಜೇಬು ತುಂಬಿಸಿಕೊಳ್ಳುತ್ತಿದ್ದ. ಹಲವು ಪೊಲೀಸರನ್ನು ರಾಜಕಾರಣಿಗಳನ್ನು ನಿರ್ದಯವಾಗಿ ಕೊಂದವನು ಈ ವೀರಪ್ಪನ್. ತನ್ನ 36ನೇ ವಯಸ್ಸಿನಲ್ಲಿಯೇ ಅಂದಿನ ಪ್ರಸಿದ್ಧ ರಾಜಕಾರಣಿಯನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿದ್ದ. 1987ರಲ್ಲಿ ಸತ್ಯಮಂಗಲಂನ ಫಾರೆಸ್ಟ್ ಆಫೀಸರ್ ಚಿದಂಬರಂ ಎಂಬುವವರನ್ನು ಹತ್ಯೆ ಮಾಡಿದ್ದ. 1991ರಲ್ಲಿ ಐಪಿಎಸ್ ಆಫೀಸರ್ ಪಂಡಿಪಲ್ಲಿ ಶ್ರೀನಿವಾಸ್ ಎಂಬುವವರನ್ನು ಹತ್ಯೆ ಮಾಡಿದ್ದ. 1992ರಲ್ಲಿ ಮತ್ತೊಬ್ಬ ಅಧಿಕಾರಿ ಹರಿಕೃಷ್ಣ ಎಂಬವವರನ್ನು ಕೂಡ ಹತ್ಯೆ ಮಾಡಿದ್ದ. ಚಾಮರಾಜನಗರ ಜಿಲ್ಲೆಯ ಮಲಯಮಹದೇಶ್ವರ ಬೆಟ್ಟದ ಬಳಿ ಪಲಾರ ಎಂಬಲ್ಲಿ ಬಾಂಬ್ ಬ್ಲಾಸ್ಟ್ ಮಾಡಿ ಸುಮಾರು 22 ಜನರ ಅರಣ್ಯ ಅಧಿಕಾರಿಗಳನ್ನು ಹತ್ಯೆ ಮಾಡಿದ ನೀಚ ವೀರಪ್ಪನ್. ಇವನು ನಟಸಾರ್ವಭೌಮ ಡಾ ರಾಜ್ಕುಮಾರ್ ಅವರನ್ನು ಕೂಡ ಕಿಡ್ನಾಪ್ ಮಾಡಿದ್ದ. ಕರ್ನಾಟಕದ ಮಾಜಿ ಸಚಿವ ಹೆಚ್ ನಾಗಪ್ಪನವರನ್ನು ಕಿಡ್ನಾಪ್ ಮಾಡಿ ಕೊನೆಗೆ ಕೊಂದು ಹಾಕಿದ್ದ. ಕೊನೆಗೆ 18 ಅಕ್ಟೋಬರ್ 2004ರಲ್ಲಿ ತಮಿಳುನಾಡು ಸ್ಪೇಷಲ್ ಟಾಸ್ಕ್ ಫೋರ್ಸ್ ನಡೆಸಿದ ಆಪರೇಷನ್ನಲ್ಲಿ ಈತನನ್ನು ಎನ್ಕೌಂಟರ್ ಮಾಡಿ ಬಿಸಾಡಲಾಯ್ತು.
ಜಗ್ಗಾ ಜಟ್: ಇವನ ಮೂಲ ಹೆಸರು ಜಗತ್ ಸಿಂಗ್. ಬ್ರಿಟಿಷ್ ಕಾಲದಲ್ಲಿ ಬ್ರಿಟಿಷರಿಗೆ ತಲೆನೋವಾಗಿದ್ದ ಈತ. ಶ್ರೀಮಂತರ ಹಣವನ್ನು ಕದ್ದು ಬಡವರಿಗೆ ಹಂಚುವ ಹುಚ್ಚು ಇವನಿಗೆ ಇತ್ತು. ಪೊಲೀಸ್ ಅಧಿಕಾರಿಯಿಂದ ಬಂದೂಕನ್ನು ಕಿತ್ತುಕೊಂಡು ಕಂಗಾಪುರ ಅನ್ನೋ ಗ್ರಾಮದಲ್ಲಿ ಪೊಲೀಸ್ನನ್ನೇ ಕೊಂದಿದ್ದ. ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಅವರಿಂದ ಹಣ ವಸೂಲಿ ಮಾಡಿ ಕೊಡದಿದ್ದವರನ್ನು ನಿರ್ದಯವಾಗಿ ಹತ್ಯೆ ಮಾಡಿ ಬಂದ ಹಣವನ್ನು ಬಡವರಿಗೆ ಹಂಚುತ್ತಿದ್ದ. ಇವನು ಕೇವಲ 29 ವಯಸ್ಸಿನಲ್ಲಿದ್ದಾಗಲೇ ಅವನದೇ ಪಡೆಯವರು ವಿಶ್ವಾಸಘಾತ ಮಾಡಿ ಕೊಂದರು.
ಮೋಹರ್ ಸಿಂಗ್ ಗುರ್ಜರ್: ಈತನೂ ಕೂಡ ಸುಮಾರು 15 ವರ್ಷಗಳ ಕಾಲ ಚಂಬಲ್ ಕಣಿವೆಯಲ್ಲಿ ತನ್ನದೇ ರೌಡಿ ಲೋಕದ ರಾಜ್ಯಭಾರ ಮಾಡಿದ ಡಾಕು. ಈತನ ಮೇಲೆ 315 ಕೇಸ್ಗಳಿದ್ದವು. ಅದರಲ್ಲಿ 85 ಹತ್ಯೆಕಾಂಡದ ಕೇಸ್ಗಳಿದ್ದವು. 1972ರಲ್ಲಿ ಈತ ತನ್ನ ಜೀವವನ್ನನು ತಾನೇ ಕಳೆದುಕೊಂಡ
ಇದನ್ನೂ ಓದಿ:ಪುಣೆ ಬಸ್‌ನಲ್ಲಿ ರಾಕ್ಷಸ ಕೃತ್ಯ.. ಕಿರಾತಕ ಸಿಕ್ಕಿಬಿದ್ದಿದ್ದೇ ರೋಚಕ! 75 ಗಂಟೆಯ ಆ ಬೇಟೆ ಹೇಗಿತ್ತು?
ಮಾಲಂಗಿ: ಈಕೆಯೂ ಕೂಡ ಬ್ರಿಟಿಷ್ ಸಾಮ್ರಾಜ್ಯ ಹಾಗೂ ಜಮೀನ್ದಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಡಾಕು. ಭ್ರಷ್ಟ ಅಧಿಕಾರಿಗಳನ್ನು ಬಿಡದೇ ಹತ್ಯೆ ಮಾಡುತ್ತಿದ್ದ ಮಾಲಂಗಿ ಶ್ರೀಮಂತರ ಮನೆಗಳನ್ನು ಲೂಟಿ ಮಾಡಿ ತಾನುಂಡು ಉಳಿದ ಹಣವನ್ನು ಬಡವರಿಗೆ ಹಂಚುತ್ತಿದ್ದಳು.
ಚಬ್ಬಿರಾಮ್ ಯಾದವ್: ಈತ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ತನ್ನದೇ ದರ್ಬಾರ್ ಶುರುವಿಟ್ಟುಕೊಂಡಿದ್ದ. ದೇಶ ಕಂಡ ಅತ್ಯಂತ ಕ್ರೂರ ಡಾಕುಗಳಲ್ಲಿ ಇವನೂ ಒಬ್ಬ. ಮೂರು ರಾಜ್ಯಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದ. ಯಾದವ ಸಮುದಾಯದ ಬಡವರ ಪಾಲಿಗೆ ಈತ ದೇವರಂತೆ ಕಾಣಿಸಿಕೊಂಡಿದ್ದ. 1983ರಲ್ಲಿ ಈತನನ್ನು ಎನ್ಕೌಂಟರ್ ಮಾಡಲಾಯ್ತು.
ಗಬ್ಬರ್ ಸಿಂಹ ಗುರ್ಜರ್: ಶೋಲೆ ಸಿನಿಮಾದಲ್ಲಿ ತೋರಿಸಿದ ಗಬ್ಬರ್ ಸಿಂಗ್ ಈತನ ಕಥೆಯನ್ನೇ ಹೋಲುತ್ತದೆ. ಚಂಬಲ್ ಕಣಿವೆ ಕಂಡ ಮತ್ತೊಬ್ಬ ಕುಖ್ಯಾತ ಕ್ರೂರ ಮನುಷ್ಯ ಈತ ಸುಮಾರು 116 ಜನರ ಮೂಗನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ್ದ. 1959ರಲ್ಲಿ ಪೊಲೀಸರು ಈತನನ್ನು ಎನ್ಕೌಂಟರ್ ಮಾಡಿದರು.
ಇದನ್ನೂ ಓದಿ: ಛತ್ರಪತಿ ಶಿವಾಜಿಯನ್ನು ಪ್ರೀತಿಸುತ್ತಿದ್ದಳಾ ಔರಂಗಜೇಬ್ನ ಪುತ್ರಿ? ಜೈಬುನ್ನಿಸ್ಸಾ ಬಗ್ಗೆ ಇತಿಹಾಸ ಏನು ಹೇಳುತ್ತದೆ?
ದದುವಾ: ಚಂಬಲ್ ಕಣಿವೆಯಲ್ಲಿ 30 ವರ್ಷಗಳ ಕಾಲ ನಿರಂತರ ದರೋಡೆ, ಲೂಟಿ ಕೊಲೆ ಮಾಡಿದ ಕುಖ್ಯಾತ ಡಾಕು ದದುವಾ. ಈತ ಸುಮಾರು 150ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ್ದಾನೆ 200ಕ್ಕೂ ಹೆಚ್ಚು ಡಕಾಯಿತಿ ಮಾಡಿದ ಪ್ರಕರಣಗಳು ಈತನ ಮೇಲೆ ಇದ್ದವು 2007ರಲ್ಲಿ ಯುಪಿಯ ಸ್ಪೇಷಲ್ ಟಾಸ್ಕ್ ಫೋರ್ಸ್ ಇವನನ್ನು ಹೊಡೆದುರುಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ