/newsfirstlive-kannada/media/post_attachments/wp-content/uploads/2024/10/ACCIDENT-2.jpg)
ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಜಯನಗರ ರೈಲ್ವೆ ನಿಲ್ದಾಣ ಬಳಿಯಿಂದ ಗಂಗಾಧರ ರಾವ್ ಎಂಬಾತ ತಾಯಿ ಗೋವಿಂದಮ್ಮ ಜೊತೆ ಗೂಡ್ಸ್ ಶೆಡ್ ಏರಿಯಾಗೆ ಆಟೋದಲ್ಲಿ ಹೋಗುತ್ತಿದ್ದರು.
ವೈ.ಎಸ್.ಆರ್ ಜಂಕ್ಷನ್‌ನಲ್ಲಿ ಸಣ್ಣ ಕೆಲಸ ಇರುವ ಕಾರಣ ಗಂಗಾಧರ ಕೆಳಗೆ ಇಳಿದಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಗಂಗಾಧರ ರಾವ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅಪಘಾತವನ್ನು ಕಂಡ ತಾಯಿ ಗೋವಿಂದಮ್ಮ, ಆಟೋದಿಂದ ಇಳಿದು ಮಗನ ಬಳಿ ಓಡಿ ಬಂದಿದ್ದಾಳೆ.
ಮಾನವೀಯತೆ ತೋರಿಸದ ಜನ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ನೋಡಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾಳೆ. ಮಗನ ಸ್ಥಿತಿ ನೋಡಿದ ತಾಯಿ ಹೃದಯವಿದ್ರಾವಕವಾಗಿ ಅಳಲು ತೋಡಿಕೊಂಡಿದ್ದಾಳೆ. ‘ಅಣ್ಣ, ಯಾರಾದರೂ ಸಹಾಯ ಮಾಡಿ. ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಬೇಕು. ನೀವು ಸಹಾಯ ಮಾಡಿದರೆ ಆತ ಬದುಕುತ್ತಾನೆ’ ಎಂದು ಜೋರಾಗಿ ಕಣ್ಣೀರು ಇಟ್ಟಿದ್ದಾಳೆ. ಆದರೆ ಯಾರೊಬ್ಬರೂ ಕೂಡ ಆಕೆಯ ಸಹಾಯಕ್ಕೆ ಬಂದಿಲ್ಲ.
ಇದನ್ನೂ ಓದಿ:ನಾಗರಿಕ ವಿಮಾನಯಾನದಲ್ಲಿ ಲಕ್ಷ ಲಕ್ಷ ಸಂಬಳ.. ಈ ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ
ಅಪಘಾತ ಸಂಭವಿಸಿದ ವೈಎಸ್‌ಆರ್ ಜಂಕ್ಷನ್‌ನಲ್ಲಿ ನಿತ್ಯ ಸಾವಿರಾರು ಜನರು ಸಂಚರಿಸ್ತಾರೆ. ಘಟನಾ ಸ್ಥಳದ ಕಡೆಯಿಂದ ನೂರಾರು ಜನ ಬಂದು ಹೋಗುತ್ತಿದ್ದರು. ಆದರೆ ಗೋವಿಂದಮ್ಮನ ಕೂಗು ಯಾರಿಗೂ ಕೇಳಿಸಲಿಲ್ಲ. ರಕ್ತದ ಮಡುವಿನಲ್ಲಿದ್ದ ಗಂಗಾಧರನ ಹಾಗೂ ಮಗನ ಪಕ್ಕದಲ್ಲಿ ಅಳುತ್ತಿರುವ ತಾಯಿಯ ಫೋಟೋ ಹಾಗೂ ವಿಡಿಯೋಗಳನ್ನು ಜನ ಚಿತ್ರಿಸಿಕೊಳ್ಳುತ್ತಿದ್ದರು. ಯಾರೊಬ್ಬರೂ ಮಾನವೀಯತೆ ತೋರಿಸಲಿಲ್ಲ ಎಂದು ವರದಿಯಾಗಿದೆ.
5 ನಿಮಿಷಗಳ ಅಂತರದಲ್ಲಿ ಆಸ್ಪತ್ರೆಗಳಿದ್ದವು
ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಒದ್ದಾಡಿದ್ದರಿಂದ ಗಂಗಾಧರ ರಾವ್, ಸಾಕಷ್ಟು ರಕ್ತವನ್ನು ಕಳೆದುಕೊಂಡರು. ಅಪಘಾತವು ಮಧ್ಯಾಹ್ನ 12:45 ಕ್ಕೆ ಸಂಭವಿಸಿತ್ತು. ಸರ್ಕಾರಿ ಆ್ಯಂಬುಲೆನ್ಸ್ ಬರುವ ತನಕ ಕಾಯಬೇಕಾಯಿತು. ಅಪಘಾತ ಸಂಭವಿಸಿದ ಅರ್ಧ ಗಂಟೆಯ ನಂತರ 1:15 ನಿಮಿಷಗಳ ಮೇಲೆ ಬಂದಿದೆ. ಅಷ್ಟರಲ್ಲೇ, ಗಂಗಾಧರ ರಾವ್ ಆಗಲೇ ತೀರಿಹೋಗಿದ್ದರು. ಅಪಘಾತದ ನಂತರ ತಡವಾಗಿದ್ದರಿಂದ ಗಂಗಾಧರ ರಾವ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳದಿಂದ ಕೇವಲ ಐದು ನಿಮಿಷಗಳ ಅಂತರದಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಿವೆ. ತುರ್ತಾಗಿ ಯಾರಾದರೂ ಸಹಾಯ ಮಾಡಿದ್ದರೆ ಗಂಗಾಧರ ರಾವ್ ಜೀವ ಉಳಿಸಬಹುದಿತ್ತು. ಮಗನ ಸಾವಿನ ಬಗ್ಗೆ ಗೋವಿಂದಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ