/newsfirstlive-kannada/media/post_attachments/wp-content/uploads/2025/02/MS_DHONI_ROHIT.jpg)
ಐಸಿಸಿ ಟ್ರೋಫಿ ಗೆಲ್ಲೋದು ಅಷ್ಟು ಸುಲಭದ ಟಾಸ್ಕ್ ಅಲ್ಲ. ಎಂತೆಂಥಾ ದಿಗ್ಗಜರೇ ಈ ಟ್ರೋಫಿ ಗೆಲ್ಲಲಾಗದೆ ಸೋತು ಹೋಗಿದ್ದಾರೆ. ಆದರೆ, ಮಹಾನಾಯಕ ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ಇದು ಈಸೀ ಟಾಸ್ಕ್. ಐಸಿಸಿ ಈವೆಂಟ್ಸ್ ಗೆಲ್ಲೋದು ಸುಲಭ ಅನ್ನೋದನ್ನು ತೋರಿಸಿದ್ದು, ಒನ್ ಆ್ಯಂಡ್ ಒನ್ಲಿ ಮಹೇಂದ್ರ ಸಿಂಗ್ ಧೋನಿ. ಈಗ ಚಾಂಪಿಯನ್ಸ್ ಟ್ರೋಫಿ ತಯಾರಿಯಲ್ಲಿರುವ ಟೀಮ್ ಇಂಡಿಯಾಗೆ ಧೋನಿ ಸ್ಪೆಷಲ್ ಸಂದೇಶ ಕಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಕಂಡ ಗ್ರೇಟೆಸ್ಟ್ ಕ್ಯಾಪ್ಟನ್. ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ. 3 ಐಸಿಸಿ ಟ್ರೋಫಿ ಗೆದ್ದು ಕೊಟ್ಟ ಏಕೈಕ, ಸರ್ವ ಶ್ರೇಷ್ಠ ನಾಯಕ. ಐಸಿಸಿ ಟೂರ್ನಿಗಳನ್ನು ಸುಲಭಕ್ಕೆ ಗೆಲ್ಲಬಹುದು ಅನ್ನೋದನ್ನ ವಿಶ್ವಕ್ಕೆ ತೋರಿಸಿಕೊಟ್ಟ ಲೆಜೆಂಡರಿ ಕ್ಯಾಪ್ಟನ್. ಇದೀಗ ಈ ಲೆಜೆಂಡರಿ ನಾಯಕ ಧೋನಿ, ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಯಲ್ಲಿರುವ ಟೀಮ್ ಇಂಡಿಯಾಗೆ ಸ್ಪೆಷಲ್ ಸಂದೇಶ ರವಾನಿಸಿದ್ದಾರೆ.
ಚಾಂಪಿಯನ್ ನಾಯಕನ ಮಹಾ ಸಂದೇಶದಲ್ಲೇನಿದೆ..?
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದು, ಬರೋಬ್ಬರಿ 12 ವರ್ಷಗಳೇ ಕಳೆದಿವೆ. ಈಗ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಲು ತಂಡ ಸರ್ವ ಸಿದ್ಧತೆ ನಡೆಸ್ತಿದೆ. ಈಗಾಗಲೇ ಬಲಿಷ್ಠ ತಂಡವನ್ನ ಪ್ರಕಟಿಸಿರುವ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಬಳಿಕ ಯುಎಇಗೆ ಹಾರಲಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಕನವರಿಕೆಯಲ್ಲಿರೋ ಟೀಮ್ ಇಂಡಿಯಾಗೆ ಮಾಜಿ ಕ್ಯಾಪ್ಟನ್ ಧೋನಿ, ಚಾಂಪಿಯನ್ ಟ್ರೋಫಿ ಗೆಲ್ಲೋದು ಎಷ್ಟು ಕಷ್ಟ ಅನ್ನೋದನ್ನ ಬಿಡಿಸಿ ಹೇಳಿದ್ದಾರೆ.
ಸ್ಟಾರ್ಸ್ಪೋಟ್ಸ್ ವಾಹಿನಿಯ ಚಾಂಪಿಯನ್ಸ್ ಟ್ರೋಫಿ ಪ್ರೋಮೊದಲ್ಲಿ ಕಾಣಿಸಿಕೊಂಡಿರುವ ಮಾಹಿ, ಚಾಂಪಿಯನ್ಸ್ ಟ್ರೋಫಿ ಕುರಿತು ಮಾತನಾಡಿದ್ದಾರೆ. ಟೀಮ್ ಎಷ್ಟೇ ಬಲಿಷ್ಠವಾಗಿದ್ರೂ, ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಸಿಕ್ಕಾಪಟ್ಟೆ ಟಫ್ ಎಂದು ಧೋನಿ ಹೇಳಿಕೊಂಡಿದ್ದಾರೆ.
ನಾಯಕನಾಗಿ ತಾನು ಯಾವಾಗಲೂ ಕೂಲ್ ಆಗಿರುತ್ತೇನೆ. ಆದರೆ ಈಗ ಅಭಿಮಾನಿಯಾಗಿ ಪಂದ್ಯಗಳನ್ನ ನೋಡುವಾಗ ತುಂಬಾ ಟೆನ್ಷನ್ ಆಗಿರುತ್ತೇನೆ. ನಮ್ಮ ತಂಡ ಬಲಿಷ್ಠವಾಗಿದ್ದರೂ, ನಾವು ಕೇವಲ ಒಂದು ಪಂದ್ಯ ಸೋತರೆ ಟೂರ್ನಿಯಿಂದ ಹೊರ ಹೋಗಬೇಕಾಗುತ್ತದೆ. ಈ ಟೆನ್ಷನ್ನಿಂದ ಹೊರಗೆ ಮಾತ್ರವಲ್ಲದೆ ನನ್ನೊಳಗೂ ಟೆಂಪರೇಚರ್ ಏರುತ್ತಿದೆ.
ಧೋನಿ, ಭಾರತದ ಮಾಜಿ ನಾಯಕ
ಚಾಂಪಿಯನ್ಸ್ ಟ್ರೋಫಿ ಎಂದರೆ ಹಿಮಾಲಯದಲ್ಲಿಯೂ ಕುಳಿತರೂ ಬೆವರು ಬರುತ್ತದೆ. ತಲೆ ಮೇಲೆ ಐಸ್ ಕ್ಯೂಬ್ ಕ್ಯಾಪ್ ಧರಿಸಿದ್ರೂ ಕಡಿಮೆಯಾಗದ ತಲೆ ಬಿಸಿ, ಧೋನಿ ರೆಫ್ರಿಜರೇಷನ್ ಸಿಸ್ಟಮ್ ತಂದ್ರೂ ಕೂಲ್ ಆಗಲ್ಲ. ನೋಡೋಕೆ ಇದು ತಮಾಷೆ ಅನಿಸಿದ್ರೂ, ಚಾಂಪಿಯನ್ಸ್ ಟ್ರೋಫಿಯ ಅಸಲಿ ಹೀಟ್ ಹೀಗೆ ಇರುತ್ತೆ.
ಒಂದೇ ಒಂದು ಪಂದ್ಯ ಸೋತರೂ ಅಪಾಯ ಫಿಕ್ಸ್.!
ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಟೀಮ್ ಇಂಡಿಯಾಗೆ ಸುಲಭದ್ದಲ್ಲ. ಯುಎಇ ಕಂಡೀಷನ್ಸ್ನಲ್ಲಿ ಆಡ್ತಿರುವ ಟೀಮ್ ಇಂಡಿಯಾ, ಬಾಂಗ್ಲಾ, ಪಾಕ್, ನ್ಯೂಜಿಲೆಂಡ್ನಂಥ ಬಲಿಷ್ಠ ಎದುರಾಳಿಗಳನ್ನೇ ಎದುರಿಸಲಿದೆ. ಈ ಪೈಕಿ ಒಂದೇ ಒಂದು ಪಂದ್ಯ ಸೋತರೂ, ಟೂರ್ನಿಯಿಂದ ಹೊರ ಬೀಳಬೇಕಾಗುತ್ತದೆ. ರನ್ ರೇಟ್ ಆಧಾರದಲ್ಲಿ ಮತ್ತೊಂದು ತಂಡ ಸೆಮೀಸ್ಗೆ ಎಂಟ್ರಿ ನೀಡಲಿದೆ.
ಇದನ್ನೂ ಓದಿ: WWEಗೆ ಎಂಟ್ರಿ ಕೊಟ್ಟ ವಿಶ್ವದ ಫೇಮಸ್ ಯೂಟ್ಯೂಬ್ ಸ್ಟಾರ್.. ರಿಂಗ್ನಲ್ಲಿ ಹಿಗ್ಗಾಮುಗ್ಗಾ ಹೊಡೆದ ಸ್ಪರ್ಧಿಗಳು
2021ರ ಟಿ20 ವಿಶ್ವಕಪ್ನಲ್ಲಿ ಇದೇ ಯುಎಇನಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳು ಟೀಮ್ ಇಂಡಿಯಾ ಎದುರಾಳಿಗಳಾಗಿದ್ವು. ಅವುಗಳ ಎದುರು ಸೋತಿದ್ದ ಟೀಮ್ ಇಂಡಿಯಾ, ಲೀಗ್ ಹಂತದಿಂದಲೇ ಹೊರಬಿದಿತ್ತು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ತಂಡಗಳೇ ಎದುರಾಳಿಗಳಾಗಿವೆ. ಅದೇ ದುಬೈ ಸ್ಟೇಡಿಯಂ ವೇದಿಕೆಯಾಗಿದೆ. ಸದ್ಯ ಆತ್ಮವಿಶ್ವಾಸದಲ್ಲಿರುವ ಎದುರಾಳಿ ತಂಡಗಳ ಎದುರು ಟೀಮ್ ಇಂಡಿಯಾ ಎಚ್ಚರಿಕೆ ಹೆಜ್ಜೆ ಇಡಬೇಕಿದೆ. ಅಕಸ್ಮಾತ್ ಒಂದೇ ಒಂದು ಪಂದ್ಯದಲ್ಲಿ ಎಡವಿದ್ರೂ, ಮತ್ತೊಂದು ತಂಡದ ಸೋಲು, ಗೆಲುವಿನ ಮೇಲೆ ಟೀಮ್ ಇಂಡಿಯಾ ಭವಿಷ್ಯ ನಿರ್ಧಾರವಾಗಲಿದೆ.
2013ರಲ್ಲಿ ಸೋಲಿಲ್ಲದ ಸರದಾರನಾಗಿ ಗೆದ್ದಿದ್ದ ಭಾರತ.!
ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಕಾರಣ ಅಜೇಯ ಗೆಲುವಿನ ಆಟ ಅನ್ನೋದ್ರಲ್ಲಿ ಡೌಟೇ ಇಲ್ಲ. ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಗೌತಮ್ ಗಂಭೀರ್ರಂಥ ಆಟಗಾರರನ್ನೇ ಹೊರಗಿಟ್ಟು, ಯುವ ಆಟಗಾರ ತಂಡದೊಂದಿಗೆ ಧೋನಿ ಅಖಾಡಕ್ಕಿಳಿದಿದ್ರು. ಟೂರ್ನಿಯಲ್ಲಿ ಕೆಚ್ಚೆದೆಯ ಆಟವಾಡಿದ್ದ ಯಂಗ್ ಟೀಮ್ ಇಂಡಿಯಾ ಅಂತಿಮವಾಗಿ ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗಾಗಿ 2013ರ ಗೆಲುವಿನ ಮಂತ್ರ ಹಾಗೂ ಧೋನಿಯ ಎಚ್ಚರಿಕೆ ಮಾತನ್ನ ರೋಹಿತ್ ಪಡೆ ಗಂಭೀರವಾಗಿ ಸ್ವೀಕರಿಸಿ ಮುನ್ನುಗಿದರಷ್ಟೇ ಗೆಲುವು ಸಾಧ್ಯ. ಇಲ್ಲ ಚಾಂಪಿಯನ್ಸ್ ಟ್ರೋಫಿಯ ಕನಸು ಕನಸಾಗಿಯೇ ಉಳಿಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ