ಮುಡಾ ಕೇಸ್.. ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್​ ರಿಲೀಫ್.. ಇ.ಡಿ. ಮೇಲ್ಮನವಿ ಸುಪ್ರೀಂಕೋರ್ಟ್​​ನಲ್ಲಿ ವಜಾ

author-image
Veena Gangani
Updated On
ಮುಡಾ ಕೇಸ್.. ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್​ ರಿಲೀಫ್.. ಇ.ಡಿ. ಮೇಲ್ಮನವಿ ಸುಪ್ರೀಂಕೋರ್ಟ್​​ನಲ್ಲಿ ವಜಾ
Advertisment
  • ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಇ.ಡಿ.ಗೆ ತೀವ್ರ ಹಿನ್ನಡೆ
  • ರಾಜಕೀಯ ಹೋರಾಟಕ್ಕೆ ಇ.ಡಿ. ಬಳಕೆ ಆಗುತ್ತಿರುವುದೇಕೆ?
  • ಸುಪ್ರೀಂಕೋರ್ಟ್​ನಲ್ಲೂ ಸಿಎಂ ಪತ್ನಿಗೆ ಸಿಕ್ತು ದೊಡ್ಡ ರಿಲೀಫ್

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧದ ಮುಡಾ ಕೇಸ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಇ.ಡಿ.ಗೆ ತೀವ್ರ ಹಿನ್ನಡೆಯಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧದ ಇ.ಡಿ. ಕೇಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಇ.ಡಿ. ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

publive-image

ಸುಪ್ರೀಂಕೋರ್ಟ್​ಗೆ ಇ.ಡಿ. ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠ ವಜಾಗೊಳಿಸಿದೆ. ಇದೇ ವೇಳೆ ಸುಪ್ರೀಂಕೋರ್ಟ್ ಸಿಜೆಐ ನೇತೃತ್ವದ ಪೀಠವು, ಇ.ಡಿ.ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಹೋರಾಟಕ್ಕೆ ಇ.ಡಿ. ಬಳಕೆ ಆಗುತ್ತಿರುವುದೇಕೆ? ಎಂದು ಇ.ಡಿ.ಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಈ ಮೂಲಕ ಇ.ಡಿ. ರಾಜಕೀಯ ಅಸ್ತ್ರವಾಗಿ ಕೇಂದ್ರ ಸರ್ಕಾರದಿಂದ ಬಳಕೆ ಆಗುತ್ತಿದೆ ಎಂಬ ವಿಪಕ್ಷಗಳ ಅಭಿಪ್ರಾಯವನ್ನೇ ಸುಪ್ರೀಂಕೋರ್ಟ್ ಕೂಡ ವ್ಯಕ್ತಪಡಿಸಿದೆ. ರಾಜಕೀಯ ಹೋರಾಟವನ್ನು ಚುನಾವಣೆಯಲ್ಲಿ ಜನರ ಮುಂದೆ ನಡೆಸಲಿ ಬಿಡಿ ಎಂದು ಸುಪ್ರೀಂಕೋರ್ಟ್ ಇ.ಡಿ.ಗೆ ಹೇಳಿದೆ.

publive-image

ಇದನ್ನೂ ಓದಿ:ಈ 5 ಒಳ್ಳೆಯ ಅಭ್ಯಾಸ ನಿಮ್ಮ ಇಡೀ ಲೈಫ್​ ಸ್ಟೈಲ್​ ಬದಲಾಯಿಸುತ್ತೆ.. ಓದಲೇಬೇಕಾದ ಸ್ಟೋರಿ!

ಹೈಕೋರ್ಟ್ ಆದೇಶದ ವಿರುದ್ಧ ಇ.ಡಿ. ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಸಿಜೆಐ ಬಿ.ಆರ್.ಗವಾಯಿ ಅವರು ಇ.ಡಿ. ಪರ ವಾದ ಮಂಡನೆಗೆ ಹಾಜರಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಿಗೆ , ಮಿಸ್ಟರ್ ರಾಜು, ನಾವು ಬಾಯಿ ತೆರೆದು ಮಾತನಾಡುವಂತೆ ಮಾಡಬೇಡಿ. ಇಲ್ಲದಿದ್ದರೇ, ನಾವು ಇ.ಡಿ. ಬಗ್ಗೆ ಕೆಲವೊಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತೆ. ದುರಾದೃಷ್ಟಕರ ಅಂದರೇ, ಮಹಾರಾಷ್ಟ್ರದಲ್ಲಿ ನಮಗೆ ಕೆಲ ಅನುಭವಗಳಾಗಿವೆ. ಈ ಹಿಂಸೆಯನ್ನು ನೀವು ದೇಶಾದ್ಯಂತ ಶಾಶ್ವತವಾಗಿ ನಿರಂತರವಾಗಿ ಮಾಡಬೇಡಿ. ರಾಜಕೀಯ ಹೋರಾಟವನ್ನು ಜನರ ಎದುರು, ಚುನಾವಣೆಯಲ್ಲಿ ಮಾಡಲಿ ಬಿಡಿ. ನೀವು ಏಕೆ ಇದರಲ್ಲಿ ಬಳಕೆ ಆಗುತ್ತೀರಿ? ಹೈಕೋರ್ಟ್ ಏಕಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಕಾರಣಗಳನ್ನು ಕೊಡಲು ಅನುಸರಿಸಿರುವ ವಿಧಾನದಲ್ಲಿ ಯಾವುದೇ ದೋಷ ನಮಗೆ ಕಂಡು ಬರುತ್ತಿಲ್ಲ. ಈ ವಿಚಿತ್ರ ಸತ್ಯ ಮತ್ತು ಸಂದರ್ಭದಲ್ಲಿ ನಾವು ಈ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ.

publive-image

ಕೆಲ ಕಠಿಣ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಉಳಿತಾಯ ಮಾಡಿದ್ದಕ್ಕೆ ನಾವು ಎಎಸ್‌ಜಿ ರಾಜು ಅವರಿಗೆ ಥ್ಯಾಂಕ್ಸ್ ಹೇಳಬೇಕು ಎಂದು ಸುಪ್ರೀಂಕೋರ್ಟ್ ಸಿಜೆಐ ಗವಾಯಿ ಅವರು ಹೇಳಿದರು. 2025ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಇ.ಡಿ. ನೀಡಿದ್ದ ಸಮನ್ಸ್ ಅನ್ನು ರದ್ದುಪಡಿಸಿತ್ತು. ಈಗ ಸುಪ್ರೀಂಕೋರ್ಟ್​ನಲ್ಲೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಸುಪ್ರೀಂಕೋರ್ಟ್ ನಲ್ಲಿ ಈ ರಿಲೀಫ್ ಸಿಗದಿದ್ದರೇ, ಒಂದು ವೇಳೆ ಇ.ಡಿ. ಪರ ಆದೇಶ ನೀಡಿದ್ರೆ, ಪಾರ್ವತಿ ಅವರಿಗೆ ಸಂಕಷ್ಟ ಎದುರಾಗುತ್ತಿತ್ತು. ಇ.ಡಿ. ಅಧಿಕಾರಿಗಳು ತನಿಖೆ ಮುಂದುವರಿಸಿ, ಪಾರ್ವತಿ ಅವರನ್ನು ಬಂಧಿಸುವ ಕ್ರಮವನ್ನು ಕೈಗೊಳ್ಳಲು ಕೂಡ ಕಾನೂನಿನಲ್ಲಿ ಅವಕಾಶ ಇತ್ತು. ಆ ಎಲ್ಲ ಸಂಕಷ್ಟದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಇಬ್ಬರೂ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment