/newsfirstlive-kannada/media/post_attachments/wp-content/uploads/2025/05/RCB_MI.jpg)
ಕಮ್ಬ್ಯಾಕ್ ಅಂದ್ರೆ, ಹೇಗಿರಬೇಕು..? ಸೋಲಿನ ನಡುವೆ ಪುಟಿದೇಳುವುದು ಹೇಗೆ ಅನ್ನೋದನ್ನ ಈ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತೋರಿಸಿಕೊಟ್ಟಿದೆ. ಈ ಸೀಸನ್ನಲ್ಲಿ ಮುಂಬೈ ಕಥೆ ಮುಗಿದೇ ಹೋಯ್ತು ಎಂಬ ಸ್ಥಿತಿಯಿಂದ 6ನೇ ಐಪಿಎಲ್ ಟ್ರೋಫಿ ಗೆಲ್ಲೋ ಹಂತಕ್ಕೆ ಅಂಬಾನಿ ಬ್ರಿಗೆಡ್ ಬಂದು ನಿಂತಿದೆ. ಮುಂಬೈನ ರಣರೋಚಕ ಕಮ್ಬ್ಯಾಕ್ನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಮುಂಬೈ ಇಂಡಿಯನ್ಸ್.. ಇಂಡಿಯನ್ ಪ್ರೀಮೀಯರ್ ಲೀಗ್ನ ಚಾಂಪಿಯನ್ ಟೀಮ್.. IPLನ ಕಮ್ಬ್ಯಾಕ್ ಕಿಂಗ್.. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ತಂಡದಂತೆ ಕಮ್ಬ್ಯಾಕ್ ಮಾಡಿ ಟ್ರೋಫಿ ಗೆದ್ದ ಮತ್ತೊಂದು ಟೀಮ್ ಇಲ್ಲ. ಹಲವು ಬಾರಿ ಕಮ್ಬ್ಯಾಕ್ ಕಾ ಕೇರ್ ಆಫ್ ಅಡ್ರೆಸ್ ನಾವು ಅನ್ನೋದನ್ನ ನಿರೂಪಿಸಿರುವ ಮುಂಬೈ ಟೀಮ್, ಪ್ರಸಕ್ತ ಸೀಸನ್ಲ್ಲೂ ಪಾತಾಳದಿಂದ ಪುಟಿದೆದ್ದಿದೆ. ಕೇವಲ ಪುಟಿದೆದ್ದಿಲ್ಲ.. ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಆಗಿ ನಿಂತಿದೆ. ಪ್ಲೇ ಆಫ್ ಕಣದಲ್ಲಿರುವ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ನಂಬರ್ 9 ರಿಂದ ನಂಬರ್-4.. ಮುಂಬೈ ಕಮ್ಬ್ಯಾಕ್ ಕಿಂಗ್.!
ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಮುಂಬೈ ಇಂಡಿಯನ್ಸ್, ಗೆಲುವಿಗಾಗಿ ಪರದಾಡಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ 5 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಗೆದ್ದಿದ್ದ ಮುಂಬೈ ಇಂಡಿಯನ್ಸ್, ಪಾಯಿಂಟ್ ಟೇಬಲ್ನಲ್ಲಿ ಪಾತಾಳಕ್ಕೆ ಕುಸಿದಿತ್ತು. 9ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಸ್ಥಿತಿ ನೋಡಿ, 2023ರ ಐಪಿಎಲ್ ಸೀಸನ್ ರೀಪಿಟ್ ಆಗುತ್ತೆ ಎಂದು ಭವಿಷ್ಯ ನುಡಿದವರೇ ಹೆಚ್ಚು. ಆದ್ರೆ, ಸ್ಮಾಲ್ ಇಂಟ್ರವಲ್ ಬಳಿಕ ಮುಂಬೈ ಇಂಡಿಯನ್ಸ್ ಮಾನ್ಸ್ಟರ್ ಅವತಾರ ತಾಳಿತು.
8 ಮ್ಯಾಚ್.. 7 ಗೆಲುವು.. ಪ್ಲೇ ಆಫ್ಗೆ ಮುಂಬೈ ಲಗ್ಗೆ..!
5ರಲ್ಲಿ ಕೇವಲ 1 ಮ್ಯಾಚ್ ಗೆದ್ದಿದ್ದ ಮುಂಬೈ, ಗೆಲುವಿನ ಹಳಿಗೆ ಮರಳಿದ್ದು ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದೊಂದಿಗೆ. ಡೆಲ್ಲಿಯ ಅರುಣ್ ಜೇಟ್ಲಿ ಸ್ಟೆಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅದೃಷ್ಟ ಮುಂಬೈ ಇಂಡಿಯನ್ಸ್ ಕೈಹಿಡಿದಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳ ಆಚಾತುರ್ಯದ ರನೌಟ್ಸ್, ಮುಂಬೈಗೆ ವರವಾಗಿ ಪರಿಣಮಿಸಿತು. ಆ ಅದೃಷ್ಟದ ಗೆಲುವಿನೊಂದುಗೆ ಶುರುವಾದ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನಾಗಲೋಟ ಟ್ರೋಫಿ ಗೆಲ್ಲೋ ಹಂತಕ್ಕೆ ತಂದು ನಿಲ್ಲಿಸಿದೆ.
ಪಾತಾಳಕ್ಕೆ ಕುಸಿದಿದ್ದ ಮುಂಬೈ, ಕೊನೆಯ 8 ಪಂದ್ಯಗಳಲ್ಲಿ ಕೆಚ್ಚದೆಯ ಹೋರಾಟ ನಡೆಸಿದೆ. ಪ್ರತಿ ಮ್ಯಾಚ್ನ ಡು ಆರ್ ಡೈ ಮಾದರಿಯಲ್ಲೇ ಸ್ವೀಕರಿಸಿದ್ದ ಮುಂಬೈ, 8ರ ಪೈಕಿ 7 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಮುಂಬೈ ಇಂಡಿಯನ್ಸ್ ಕಪ್ ಗೆಲುವಿನ ಕನಸು ಕಮರಿತು ಎಂದವರಿಗೆ ಆಟದಿಂದಲೇ ಖಡಕ್ ಅನ್ಸರ್ ಕೊಟ್ಟಿರೋ ಹಾರ್ದಿಕ್ ಪಡೆ, ಈಗ ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಅನಿಸಿದೆ.
ಬೂಮ್ರಾ ಎಂಟ್ರಿ ಬಳಿಕ ಬದಲಾಯ್ತು ಮುಂಬೈ ಲಕ್..!
ಮುಂಬೈ ಇಂಡಿಯನ್ಸ್ ಲಕ್ ಬದಲಾಗಿದ್ದೆ ಜಸ್ಪ್ರೀತ್ ಬೂಮ್ರಾ ಎಂಟ್ರಿಯಿಂದ ಅನ್ನೋದ್ರಲ್ಲಿ ಡೌಟೇ ಇಲ್ಲ. ಬೂಮ್ರಾ ಅಲಭ್ಯತೆಯಲ್ಲಿ ಸತತ ಸೋಲುಂಡಿದ್ದ ಮುಂಬೈ, ನಂತರ ಬೂಮ್ರಾ ಕಮ್ಬ್ಯಾಕ್ ಬಳಿಕ ಆಡಿದ 9 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ದಾಖಲಿಸಿತು. ಈ 9 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ ಬೂಮ್ರಾ, 6.40ರ ಏಕಾನಮಿ ಕಾಯ್ದುಕೊಂಡಿದ್ದಾರೆ. ಈ ಇಂಪ್ಯಾಕ್ಟ್ ಫುಲ್ ಪರ್ಫಾಮೆನ್ಸ್ ಮುಂಬೈ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಬೂಮ್ರಾನೇ ಅಲ್ಲ. ಟ್ರೆಂಟ್ ಬೋಲ್ಟ್ರ ಪವರ್ ಫುಲ್ ಸ್ಪೆಲ್ಸ್ ಜೊತೆಗೆ ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ ಸ್ಪೋಟಕ ಆಟ, ಸೂರ್ಯಕುಮಾರ್ ಯಾದವ್ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ಮುಂಬೈ ಇಂಡಿಯನ್ಸ್ ಗೆಲುವಿನ ನಾಗಲೋಟಕ್ಕೆ ಉಳಿದ ಕಾರಣಗಳು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
2014-2015ರಲ್ಲೂ ಮುಂಬೈ ‘ಮಾನ್ಸ್ಟರ್’ ಕಮ್ಬ್ಯಾಕ್..!
2014 ಹಾಗೂ 2015ರ ಐಪಿಎಲ್ ಸೀಸನ್.. ಈ ಸೀಸನ್ಗಳಲ್ಲಿ ಮುಂಬೈ ಕಮ್ಬ್ಯಾಕ್ ಆಕ್ಷರಶಃ ಎದುರಾಳಿಗಳ ನಿದ್ದೆ ಗೆಡಿಸಿತ್ತು. 2014ರಲ್ಲಿ ಸತತ 5 ಮ್ಯಾಚ್ ಸೋತಿದ್ದ ಮುಂಬೈ, ನಂತರ ಪ್ಲೇ ಆಫ್ಗೆ ಎಂಟ್ರಿ ನೀಡಿ ಸೋತಿತ್ತು. ಆದ್ರೆ. 2015ರ ಸೀಸನ್ನಲ್ಲಿ ಸತತ 4 ಮ್ಯಾಚ್ ಸೋತಿದ್ದ ಮುಂಬೈ, ನಂತರ ಸಾಲಿಡ್ ಕಮ್ಬ್ಯಾಕ್ ಮಾಡಿತ್ತು. ಅಷ್ಟೇ ಅಲ್ಲ.! ಕೊನೆಗೆ ಟ್ರೋಫಿಗೂ ಮುತ್ತಿಟ್ಟಿತ್ತು.
ಇದನ್ನೂ ಓದಿ: ಬೀಚ್ನಲ್ಲಿ ಖ್ಯಾತ ಕ್ರಿಕೆಟರ್ ಸಹೋದರ, ಆತನ ಹೆಂಡತಿ ಜಸ್ಟ್ ಮಿಸ್.. ಅಸಲಿಗೆ ಆಗಿದ್ದೇನು? -Video
ಮುಂಬೈ 6ನೇ ಟ್ರೋಫಿ ಕನಸು.. ಎದುರಾಳಿಗೆ ಢವಢವ..!
ಟೂರ್ನಿಯ ಆರಂಭದಲ್ಲಿ ಟ್ರೋಫಿ ಗೆಲುವನ್ನೇ ಕೈಬಿಟ್ಟಿದ್ದ ಮುಂಬೈ, ಈಗ 6ನೇ ಟ್ರೋಫಿ ಗೆಲುವಿನ ಕನಸು ಕಾಣ್ತಿದೆ. ಮುಂಬೈ ಇಂಡಿಯನ್ಸ್ ಪ್ಲೇ ಆಪ್ಗೆ ಎಂಟ್ರಿ ನೀಡಿರುವುದು ಪ್ಲೇ ಆಫ್ಗೇರಿರುವ ತಂಡಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 11ನೇ ಬಾರಿಗೆ ಪ್ಲೇ ಆಫ್ಗೆ ಬಂದಿರುವ ಮುಂಬೈ, ಈ ಹಿಂದೆ ಪ್ಲೇ ಆಫ್ಗೆ ಎಂಟ್ರಿ ನೀಡಿದ 10ರ ಪೈಕಿ 5 ಬಾರಿ ಟ್ರೋಫಿ ಗೆದ್ದಿದೆ.
ಪ್ಲೇ ಆಫ್ ಹಂತಗಳಲ್ಲಿ ಡೇಂಜರಸ್ ಆಟವಾಡುವ ಮುಂಬೈ, ಯಾವುದೇ ಕಂಡೀಷನ್ಸ್ನಲ್ಲಾಗಲಿ, ಎಂಥಹ ಬಲಿಷ್ಠ ತಂಡವನ್ನಾಗಲಿ ಚಿಂದಿ ಉಡಾಯಿಸಬಲ್ಲದು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಪ್ ಎಂಟ್ರಿ ಎದುರಾಳಿನ ಪಾಲಿಗೆ ಎಚ್ಚರಿಕೆಯ ಕರೆಗಂಟೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ