ವಂಚಕನನ್ನೇ ಶ್ವಾನದ ಮೂಲಕ ವಂಚಿಸಿದ ಕಿಲಾಡಿ; ಡಿಜಿಟಲ್ ಅರೆಸ್ಟ್ ಮಾಡಲು ಬಂದವ ಮಂಗನಾಗಿದ್ದು ಹೇಗೆ?

author-image
Gopal Kulkarni
Updated On
ವಂಚಕನನ್ನೇ ಶ್ವಾನದ ಮೂಲಕ ವಂಚಿಸಿದ ಕಿಲಾಡಿ; ಡಿಜಿಟಲ್ ಅರೆಸ್ಟ್ ಮಾಡಲು ಬಂದವ ಮಂಗನಾಗಿದ್ದು ಹೇಗೆ?
Advertisment
  • ಮುಳ್ಳನ್ನು ಮುಳ್ಳಿನಿಂದಲೇ ಮೀಟಿದ ಮುಂಬೈನ ಚಾಲಾಕಿ ಹುಡುಗ
  • ಆನ್​ಲೈನ್​ನಲ್ಲಿ ವಂಚಿಸಲು ಬಂದವ ಇಂಗು ತಿಂದ ಮಂಗನಂತಾದ
  • ಯುವಕನ ಸಮಯ ಪ್ರಜ್ಞೆಗೆ ಭೇಷ್​ ಎನ್ನುತ್ತಿರುವ ನೆಟ್ಟಿಗರು, ಆಗಿದ್ದೇನು?

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತೊಂದಿದೆ. ಈ ನಾಣ್ಣುಡಿಗೆ ತಕ್ಕಂತೆ ನಡೆದುಕೊಂಡಿದ್ದಾನೆ ಮುಂಬೈನ ಒಬ್ಬ ಯುವಕ. ತನ್ನನ್ನು ವಂಚಿಸಲು ಬಂದವನನ್ನು ತನ್ನ ಸಾಕು ನಾಯಿಯ ಮೂಲಕ ಅವನನ್ನೇ ವಂಚಿಸಿ ಮಂಗನಾಗುವಂತೆ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ.

ವಿಡಿಯೋ ಶುರುವಾಗುವುದೇ ವಂಚಕನೊಬ್ಬ ವಿಡಿಯೋ ಕಾಲ್​ನಲ್ಲಿ ತನ್ನನ್ನು ತಾನು ಅಂದೇರಿ ವೆಸ್ಟ್​ ಪೊಲೀಸ್​ ಅಧಿಕಾರಿಯೆಂದು ಪರಿಚಯಿಸಿಕೊಳ್ಳುವ ಮೂಲಕವೇ ಶುರುವಾಗುತ್ತದೆ. ನಿನ್ನ ಮುಖ ತೋರಿಸು ಅಂತ ಯುವಕನಿಗೆ ಆ ಕಡೆ ವಿಡಿಯೋ ಕಾಲ್​ನಲ್ಲಿದ್ದ ಪೊಲೀಸ್ ರೂಪಿ ಆಗ್ರಹಿಸುತ್ತದೆ. ಇದನ್ನು ನೋಡುತ್ತಲೆ ಆ ಯುವಕ ತನ್ನ ಮುದ್ದಿನ ಶ್ವಾನವನ್ನು ಕ್ಯಾಮರಾದ ಮುಂದೆ ತಂದು ಹಿಡಿದು ನೋಡಿ ಸರ್ ನನ್ನ ಮುಖ, ನಾನು ಕ್ಯಾಮರಾ ಮುಂದೆ ಬಂದಿದ್ದೇನೆ ಎಂದು ಹೇಳುತ್ತಾನೆ.

ಇದನ್ನೂ ಓದಿ:ಪ್ರಧಾನಮಂತ್ರಿ ಕೋವಿಡ್ ನಿಧಿಗೆ ಇಂದಿಗೂ ಹರಿದು ಬರುತ್ತಿದೆ ಭರಪೂರ ಹಣ; ಎಷ್ಟು ಕೋಟಿ ಸಂಗ್ರಹ?

ಈ ರೀತಿಯ ಅನಿರೀಕ್ಷಿತ ಪ್ರತಿಕ್ರಿಯೆ ಕಂಡ ನಕಲಿ ಪೊಲೀಸ್ ಅಧಿಕಾರಿ ಇಂಗು ತಿಂದ ಮಂಗನಂತಾಗುತ್ತಾನೆ. ನಾನು ಕುರಿಯನ್ನು ಹಳ್ಳಕ್ಕೆ ಕೆಡುವಲು ಬಂದು ನಾನೆ ಕುರಿಯಾದೆ ಎಂಬುದು ಆತನಿಗೆ ಅರಿವಾಗುತ್ತದೆ. ಆತಂಕದಿಂದ ಒಂದು ಸ್ಮೈಲ್​ ಕೊಟ್ಟ ಆತ ತನ್ನ ಕ್ಯಾಮರಾವನ್ನು ಆಫ್​ ಮಾಡುತ್ತಾನೆ. ಈ ಕಡೆ ಯುವಕ ಹಲೋ ಠಾಣೆದಾರ್ (ಠಾಣಾಧಿಕಾರಿ) ಎಲ್ಲಿ ಹೋದ್ರಿ ಎಂದು ಲೇವಡಿ ಮಾಡುತ್ತಲೇ ವಿಡಿಯೋ ಕೊನೆಗೊಳ್ಳುತ್ತದೆ.


ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ಮುಂಬೈ ಪೊಲೀಸ್ ವೇಷದಲ್ಲಿ ಬಂದ, ವಂಚನೆ ಕರೆ ವಿಫಲಗೊಂಡಿತು ಎಂದು ಅಡಿಬರಹವನ್ನಿಟ್ಟು ಪೋಸ್ಟ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಚಪ್ಪಾಳೆ ಹೊಡೆದು ಭೇಷ್ ಎನ್ನುತ್ತಿದ್ದಾರೆ. ಯುವಕನ ಸಮಯಪ್ರಜ್ಞೆಗೆ ಶಹಬ್ಬಾಷ್ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಅಣ್ಣನನ್ನು ಮದುವೆಯಾದ್ರೆ ಎಲ್ಲಾ ತಮ್ಮಂದಿರು ಗಂಡಂದಿರು;ಇದು ವಿಚಿತ್ರ ಅಲ್ಲ ಸತ್ಯವಾದ ಘಟನೆ

ಇತ್ತೀಚೆಗೆ ಬೆಂಗಳೂರಿನ ಸಾಪ್ಟ್​ವೇರ್ ಇಂಜನೀಯರ್ ಒಬ್ಬರು ಇಂತಹುದೇ ಕಾಲ್​ನಿಂದ ಡಿಜಿಟಲ್ ಅರೆಸ್ಟ್ ಆಗಿ ಸುಮಾರು 11.8 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದರು. ಇದೇ ರೀತಿ ಕಾಲ್​ ಮಾಡಿದ ನಕಲಿ ಪೊಲೀಸ್ ಅಧಿಕಾರಿ ನೀವು ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಿ ಎಂದು ಆತನನ್ನು ಹೆದರಿಸಿ ಖಾತೆಯಿಂದ 11.8 ಕೋಟಿ ರೂಪಾಯಿ ವಂಚಿಸಿದ್ದರು. ಇಂತಹ ಕರೆ ಬಂದಾಗ ಅವುಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬಾರದು. ಅದನ್ನು ಪರಿಗಣಿಸಬೇಕಾದ ರೀತಿ ಇದು ಎಂದು ಉದಾಹರಣೆ ಕೊಟ್ಟಂತಾಗಿದೆ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ಈ ವಿಡಿಯೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment