/newsfirstlive-kannada/media/post_attachments/wp-content/uploads/2025/07/MUMBAI_RAINFALL.jpg)
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಬ್ಯುಸಿ ಮುಂಬೈನಲ್ಲಿ ಜನಜೀವನ, ವಾಣಿಜ್ಯ ಚಟುವಟಿಕೆಗಳಿಗೆ ಭಾರೀ ತೊಂದರೆಯಾಗಿದೆ. ಮಳೆಯಿಂದಾಗಿ ಮುಂಬೈ ಸ್ತಬ್ಧವಾಗಿದ್ದು ಅನೇಕ ಪ್ರದೇಶಗಳು ಜಲಾವೃತ್ತವಾಗಿವೆ. ಸಾರಿಗೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಅಂಧೇರಿ ರೈಲು ಸುರಂಗ ಮಾರ್ಗಕ್ಕೆ ಮಳೆ ನೀರು ನುಗ್ಗಿದ್ದರಿಂದ ಸಂಚಾರ ಸ್ಥಗಿತವಾಗಿದೆ.
ಮಳೆಯಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಏರ್ಪೋರ್ಟ್ನಲ್ಲಿ ಏರ್ ಇಂಡಿಯಾ ವಿಮಾನವೊಂದು ರನ್ ವೇಯಿಂದ ಸ್ಕಿಡ್ ಆಗಿದೆ. ಕೇರಳದ ಕೊಚ್ಚಿಯಿಂದ ಮುಂಬೈ ಏರ್ಪೋರ್ಟ್ಗೆ ಬಂದು ಲ್ಯಾಂಡಿಂಗ್ ಆಗುವಾಗ ವಿಮಾನ ರನ್ ವೇಯಿಂದ ಸ್ಕಿಡ್ ಆಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ವಿಮಾನ ನಿಲ್ದಾಣದಲ್ಲಿ ತಕ್ಷಣವೇ ಎಮರ್ಜೆನ್ಸಿ ರೆಸ್ಪಾನ್ಸ್ ಆ್ಯಕ್ಟೀವ್ ಮಾಡಲಾಗಿತ್ತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ವಿಮಾನದ ಇಂಜಿನ್ ಭಾಗಕ್ಕೆ ಸ್ಪಲ್ಪ ಡ್ಯಾಮೇಜ್ ಆಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆಯು ಮುಂಬೈ ನಗರ ಮತ್ತು ರಾಯಘಡ ಜಿಲ್ಲೆಗೆ ಇಂದು ಆರೇಂಜ್ ಆಲರ್ಟ್ ನೀಡಿದೆ. ಇನ್ನೂ ಮುಂದಿನ 24 ಗಂಟೆಗಳ ಕಾಲ ಮುಂಬೈ, ಥಾಣೆ, ಪಾಲ್ಘರ್ ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್ ನೀಡಲಾಗಿದೆ. ಮುಂಬೈ, ಕೊಂಕಣ್ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
ದೊಡ್ಡ ಮಟ್ಟದಲ್ಲಿ ಸಮುದ್ರ ಅಲೆಗಳು
ಮುಂಬೈನ ಹಾಗೂ ನಗರದ ಸುತ್ತಮುತ್ತಲ ಜನರು ಸಮುದ್ರದ ತೀರಕ್ಕೆ ಹೋಗದಂತೆ ಐಎಂಡಿ ಸಲಹೆ ನೀಡಿದೆ. ಅನಗತ್ಯ ಸಂಚಾರ ಮಾಡಬೇಡಿ ಎಂದಿರುವ ಭಾರತೀಯ ಹವಾಮಾನ ಇಲಾಖೆ, ಸಮುದ್ರದಲ್ಲಿ 3.88 ಮೀಟರ್ ಎತ್ತರದವರೆಗೂ ಅಲೆಗಳು ಏಳುತ್ತಿವೆ ಎಂದಿದೆ. ಇಂದು ರಾತ್ರಿ 8.31ಕ್ಕೆ 3.42 ಮೀಟರ್ ಎತ್ತರದವರೆಗೂ ಅಲೆಗಳು ಏಳುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಬೈನ ಬೊರಿವಿಲಿ, ಮಲಾಡ್, ಖಾಂಡಿವಲಿ, ಗೋರೆಗಾಂವ್, ಥಾಣೆ, ಅಂಧೇರಿ- ಘಟಕೋಪರ, ಬಿಕೆಸಿ, ಕುರ್ಲಾ, ಚೆಂಬುರ್ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತೆ ಎಂದು ಐಎಂಡಿ ಆಲರ್ಟ್ ನೀಡಿದೆ. ಮುಂಬೈನ ಸಬ್ ಆರ್ಬನ್, ಥಾಣೆ, ಪಾಲ್ಘರ್, ರಾಯಘಡ, ರತ್ನಗಿರಿ, ಸಿಂಧುದುರ್ಗ, ಲಾತೂರ್, ಬೀಡ್ ಜಿಲ್ಲೆಗಳಿಗೆ ಸೋಮವಾರ ಯೆಲ್ಲೋ ಆಲರ್ಟ್ ನೀಡಲಾಗಿದೆ.
ಇದನ್ನೂ ಓದಿ: ಕೇರಳಕ್ಕೆ ಗುಡ್ಬೈ ಹೇಳಲಿರೋ ಬ್ರಿಟನ್ F-35 ಫೈಟರ್ ಜೆಟ್.. ವಿಶ್ವದ ದುಬಾರಿ ವಿಮಾನಕ್ಕೆ ಏನಾಗಿತ್ತು..?
ಜು 23, 24 ರಂದು ಮತ್ತಷ್ಟು ವರುಣಾರ್ಭಟ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂಬೈನಲ್ಲಿ ಈ ವಾರ ಧಾರಾಕಾರವಾಗಿ ಮಳೆಯಾಗಲಿದೆ. ಜುಲೈ 22 ರಿಂದ 26 ರವರೆಗೆ ಸಾಧಾರಣದಿಂದ ದೊಡ್ಡ ಮಳೆಯಾಗುವ ಮುನ್ಸೂಚನೆ ನೀಡಿದೆ. ನಾಳೆ ಮುಂಬೈನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಜುಲೈ 23 ಮತ್ತು 24 ರಂದು ವರುಣಾರ್ಭಟ ಜೋರಾಗಿ ಇರಲಿದೆ. ಜುಲೈ 25 ಮತ್ತು 26 ರಂದು ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಮಾನ ಪ್ರಯಾಣಿಕರಿಗೆ ಏರ್ಲೈನ್ಸ್ಗಳಿಂದ ಸಲಹೆ ನೀಡಲಾಗಿದೆ.
ಮುಂಬೈನಲ್ಲಿ ಜೋರು ಮಳೆಯಿಂದ ವಿಮಾನ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಇಂಡಿಗೋ, ಸ್ಪೈಸ್ ಜೆಟ್ ಸೇರಿದಂತೆ ವಿವಿಧ ಏರ್ ಲೈನ್ಸ್ ಗಳು ವಿಮಾನ ಪ್ರಯಾಣಿಕರಿಗೆ ಕೆಲವೊಂದು ಸಲಹೆ ನೀಡಿವೆ. ಏರ್ಪೋರ್ಟ್ಗೆ ಹೋಗುವ ಬಹಳಷ್ಟು ರಸ್ತೆಗಳಲ್ಲಿ ನಿಧಾನಗತಿಯ ಟ್ರಾಫಿಕ್ ಇದೆ. ಇಂದು ನೀವು ವಿಮಾನದಲ್ಲಿ ಪ್ರಯಾಣ ಮಾಡುವವರಾಗಿದ್ದರೇ, ಮುಂಚಿತವಾಗಿಯೇ ಪ್ಲ್ಯಾನ್ ಮಾಡಿಕೊಂಡು ಏರ್ಪೋರ್ಟ್ಗೆ ಬನ್ನಿ. ಸ್ಪಲ್ಪ ಬೇಗ ಮನೆಯಿಂದ ಹೊರಡಿ. ಮನೆಯಿಂದ ಹೊರಡುವ ಮುನ್ನ ನಿಮ್ಮ ವಿಮಾನದ ಟೇಕಾಫ್ ಸಮಯ ವೆಬ್ಸೈಟ್ ಹಾಗೂ ಕಂಪನಿಯ ಆ್ಯಪ್ನಲ್ಲಿ ಪರಿಶೀಲಿಸಿ. ಇಂಥ ಸ್ಥಿತಿಯಲ್ಲಿ ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ