/newsfirstlive-kannada/media/post_attachments/wp-content/uploads/2024/10/Mysore-dasara.jpg)
415ನೇ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. 5ನೇ ಬಾರಿ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಇನ್ನು, ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಸ್ತಬ್ಧಚಿತ್ರಗಳು, ಕಲಾತಂಡಗಳ ಪ್ರದರ್ಶನ ಮೆರಗು ನೀಡಲಿದೆ.
750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊರಲಿರುವ ಕ್ಯಾ.ಅಭಿಮನ್ಯು!
ನಾಡಹಬ್ಬ ದಸರಾ ಸಡಗರ ಸದ್ಯ ಕೊನೆಘಟ್ಟಕ್ಕೆ ತಲುಪಿದೆ. ದಶ ದಿನದ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಗಟ್ಟಲೆ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕ್ತಿದ್ದಾರೆ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡಿ ನಾಡಿನ ಜನಕ್ಕೆ ದರ್ಶನ ತೋರಲಿದ್ದಾಳೆ.
ವಿಜಯದಶಮಿಯ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಕ್ಯಾಪ್ಟನ್ ಅಭಿಮನ್ಯು ಐದನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲು ರೆಡಿಯಾಗಿದ್ದಾನೆ. ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡ್ಲಿದ್ದಾರೆ. ಜಂಬೂಸವಾರಿ ಉದ್ಘಾಟನೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಮೈಸೂರು ಕೊಡಗು ಸಂಸದ ಹಾಗೂ ರಾಜವಂಶಸ್ಥರಾದ ಯದುವೀರ್ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಸಾಥ್ ನೀಡಲಿದ್ದಾರೆ.
ಇನ್ನು, ಚಿನ್ನದ ಅಂಬಾರಿ ಹೊತ್ತು ಸಾಗೋ ಕ್ಯಾಪ್ಟನ್ ಅಭಿಮನ್ಯುವಿಗೆ ಲಕ್ಷ್ಮೀ, ಹಿರಣ್ಯ ಕುಮ್ಕಿ ಆನೆಗಳಾಗಿ ಸಾಥ್ ನೀಡಿದ್ರೆ, ಧನಂಜಯ ನಿಶಾನೆ ಆನೆಯಾಗಲಿದ್ದಾನೆ. ಗೋಪಿ ನೌಪತ್ ಆನೆಯಾಗಲಿದ್ದು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ.
140ಕ್ಕೂ ಹೆಚ್ಚು ಕಲಾತಂಡ ಹಾಗೂ 51 ಸ್ತಬ್ಧ ಚಿತ್ರ
ವಿವಿಧ ಜಿಲ್ಲೆಗಳು ಕಲಾತಂಡಗಳು, ಕಿಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿ ಮಕ್ಕಳ ಕುಣಿತ ಸೇರಿ 140ಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ 51 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಇನ್ನು, ಜಂಬೂ ಸವಾರಿ ನಿಮಿತ್ತ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ