Advertisment

ಮೈಸೂರಿನ ಈ ಆನೆ ಹಾಲಿವುಡ್ ಸಿನಿಮಾದಲ್ಲೂ ನಟಿಸಿತ್ತು.. ಜಂಬೂ ಸವಾರಿಯ ಆನೆಗಳ ಇತಿಹಾಸ ಬಲ್ಲಿರೇನು..?

author-image
Ganesh
Updated On
ಮೈಸೂರಿನ ಈ ಆನೆ ಹಾಲಿವುಡ್ ಸಿನಿಮಾದಲ್ಲೂ ನಟಿಸಿತ್ತು.. ಜಂಬೂ ಸವಾರಿಯ ಆನೆಗಳ ಇತಿಹಾಸ ಬಲ್ಲಿರೇನು..?
Advertisment
  • ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಂಬಾರಿ ಹೊತ್ತಿದ್ದ ಆನೆಗಳು ಯಾವ್ಯಾವುದು..?
  • ಈ ಬಾರಿ ದಸರಾದಲ್ಲಿ ಅಭಿಮನ್ಯು ಜತೆಗೆ ಎಷ್ಟು ಆನೆಗಳು ಹೆಜ್ಜೆ ಹಾಕಲಿವೆ
  • ಚಿನ್ನದ ಅಂಬಾರಿ ಹೊತ್ತಿದ್ದ ಆನೆಗಳಲ್ಲಿ ಅತ್ಯಂತ ತೂಕದ ಆನೆ ಯಾವುದು?

ನಾಡಿನ ಸಂಭ್ರಮ.. ‘ಮೈಸೂರು ದಸರಾ’ ಎಂದಾಗ ಮನದಲ್ಲಿ ಅರಳುವುದು ಎರಡು ಅಂಶಗಳು. ಒಂದು ಅಪ್ಪಟ ಚಿನ್ನದಿಂದ ನಳನಳಿಸುತ್ತಿರುವ 750 ಕೆ.ಜಿ ತೂಕದ ಅಂಬಾರಿ. ಇನ್ನೊಂದು ಆ ಚಿನ್ನದ ಅಂಬಾರಿ ಹೊತ್ತ ಬೃಹತ್ ಗಾತ್ರದ ಆನೆ. ಮೈಸೂರಿನ ರಾಜಬೀದಿಗಳಲ್ಲಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಆನೆಯ ವೈಭೋಗ ನೋಡಿದರೆ.. ಆಹಾ..! ಎಂಥ ಸೌಂದರ್ಯವಾದ ದೃಶ್ಯ. ಎಷ್ಟೇ ದುಬಾರಿ ಬೆಲೆಯ ಡಿಜಿಟಲ್​ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ ಮಾಡಿದರೂ ಅತ್ಯದ್ಭುತವಾದ ಈ ದೃಶ್ಯ ಕಾಣಲು ಅಸಾಧ್ಯ. ಹೀಗೆ ಸಂಭ್ರಮದ ದಸರಾ ಮಹೋತ್ಸವದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಆನೆಗಳ ಇತಿಹಾಸವೇ ಈ ಆರ್ಟಿಕಲ್​ನ ಪ್ರಯಾಣ.

Advertisment

ಜಯಮಾರ್ತಾಂಡ, ವಿಜಯ ಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್, ರಾಜೇಂದ್ರ, ಗಜೇಂದ್ರ, ಐರಾವತ, ಬಿಳಿಗಿರಿ, ದ್ರೋಣ, ಅರ್ಜುನ, ಬಲರಾಮ, ಅಭಿಮನ್ಯು. ಅಯ್ಯೋ.. ಶಾಲೆಯಲ್ಲಿ ಕರೆದಾಗೆ ಇಲ್ಲಿ ಅಟೆನೆನ್ಸ್ ಏನೂ ಕರೆಯುತ್ತಿಲ್ಲ. ಇವರೆಲ್ಲ ಮೈಸೂರಿನ ಸ್ಪೆಷಲ್ ಕುಂಜರು. ಅರ್ಥವಾಗಲಿಲ್ವಾ.. 1932ರಿಂದ ಮೈಸೂರು ಮಹಾರಾಜ, ಅರಮನೆ, ಅಂಬಾರಿಯನ್ನು ತೀರ ಸಮೀಪದಿಂದ ನೋಡಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿ, ಜನರ ಮೆಚ್ಚುಗೆಗೆ ಪಾತ್ರರಾದ ಚಿನ್ನ ಖಚಿತ ಅಂಬಾರಿ ಹೊತ್ತ ಆನೆಗಳ ಹೆಸರುಗಳಿವು.

ಜಯಮಾರ್ತಾಂಡ

ಇತಿಹಾಸದಲ್ಲೇ ಮೊಟ್ಟ ಮೊದಲು ಅಂಬಾರಿಯನ್ನು ಹೊತ್ತಿರುವ ಆನೆ ಎಂದರೆ ಅದು ಜಯಮಾರ್ತಾಂಡ. ಕೃಷ್ಣದೇವರಾಯ ಒಡೆಯರ್‌ ಕಾಲದಿಂದ ವಿಜಯದಶಮಿ ಮಹೋತ್ಸವ ಪ್ರಾರಂಭವಾಯಿತು. ಅಂದಿನಿಂದಲೇ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕಿದ್ದ ಗಜ ಜಯಮಾರ್ತಾಂಡ ಅಂಬಾರಿ ಹೊರಲು ಪ್ರಾರಂಭಿಸಿದ. ಸುಮಾರು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಜಯಮಾರ್ತಾಂಡನು ಒಡೆಯರ ಪ್ರೀತಿಗೆ ಪಾತ್ರವಾಗಿದ್ದ. ಹೀಗಾಗಿಯೇ ಕೃಷ್ಣದೇವರಾಯ ಒಡೆಯರ್​ ಅವರು ಈ ಆನೆಯ ನೆನಪಿಗಾಗಿ ಅರಮನೆಯ ಮಹಾದ್ವಾರ ಒಂದಕ್ಕೆ ಜಯಮಾರ್ತಾಂಡ ಎಂದು ಹೆಸರು ಇಟ್ಟಿದ್ದಾರೆ. ಜಯಮಾರ್ತಾಂಡ ಒಟ್ಟು 6,400 ಕೆ.ಜಿ ತೂಕವಿದ್ದ.

ಐರಾವತ

1935ರಲ್ಲಿ ಐರಾವತ ಎನ್ನುವ ಆನೆಯು ಬಹು ಬೇಡಿಕೆಯಾದ್ದಾಗಿತ್ತು. ಏಕೆಂದರೆ ಈ ಆನೆಯು ಕೇವಲ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೇ ಹಾಲಿವುಡ್​ನ ಸಿನಿಮಾ 'ದಿ ಎಲಿಫೆಂಟ್ ಬಾಯ್'ನಲ್ಲಿ ಕಾಣಿಸಿಕೊಂಡಿತ್ತು. ಇದರ ಮಾವುತನೇ ಸಿನಿಮಾದ ನಾಯಕನಾಗಿ ನಟಿಸಿರುವುದು ಇನ್ನೊಂದು ವಿಶೇಷ. 7 ವರ್ಷದವನಾದ ಮಾವುತ ಮೈಸೂರು ಸಾಬು ಹಾಗೂ ಐರಾವತ ಆನೆ ಇರುವ ಈ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನಗೊಂಡು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

Advertisment

publive-image

ಬಿಳಿಗಿರಿ

ಇಡೀ ಮೈಸೂರು ದಸರಾ ಇತಿಹಾಸದಲ್ಲೇ ಜಂಬೂ ಸವಾರಿಯಲ್ಲಿ ಅಂಬಾರಿಯನ್ನು ಹೊತ್ತುಕೊಂಡ ಆನೆಗಳಲ್ಲೇ ಅತ್ಯಂತ ತೂಕದ ಆನೆ ಎಂದರೆ ಅದು ಬಿಳಿಗಿರಿ. ಅತ್ಯಂತ ದೈತ್ಯವಾಗಿದ್ದ ಇದು ನಡೆಯುತ್ತಿದ್ದರೆ ಬೆಟ್ಟವೇ ನಡೆಯುತ್ತಿದೆ ಎಂದು ಭಾಸವಾಗುತ್ತಿತ್ತು. ಇದರ ಎತ್ತರ 10.5 ಅಡಿ ಇದ್ದು ಸುಮಾರು 7 ಸಾವಿರ ಕೆಜಿಗೂ ಅಧಿಕ ತೂಕವಿತ್ತು. ಆಗಿನ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣದೇವರಾಯ ಒಡೆಯರ್​ನ್ನ ಹೊತ್ತೊಕೊಂಡು ನಡೆದಿದ್ದ ಕೊನೆಯ ಆನೆ ಎಂದರೆ ಈ ಬಿಳಿಗಿರಿನೇ.

ರಾಜೇಂದ್ರ

ಈ ಆನೆಯನ್ನು ಈಗಲೂ ನೀವು ನೋಡಬಹುದು. ಹೇಗೆಂದರೆ ಡಾ.ರಾಜ್​ಕುಮಾರ್ ಅವರು ಅಭಿನಯದ ಗಂಧದ ಗುಡಿ ಸಿನಿಮಾ ನೋಡಿದರೆ ಈ ರಾಜೇಂದ್ರ ಆನೆಯನ್ನ ನೋಡಬಹುದು. ಈ ಸಿನಿಮಾದಲ್ಲಿ ಡಾ. ರಾಜ್​ಕುಮಾರ್ ಈ ಆನೆ ದಂತದ ಮೇಲೆ ಕುಳಿತು ನಾವು ಆಡುವ ನುಡಿಯೇ ಕನ್ನಡ ನುಡಿ ಎಂದು ಹಾಡಿದ್ದು ವಿಶೇಷವಾಗಿತ್ತು. ಆನೆ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದರಿಂದ ಜನರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿತ್ತು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ಸಿಗದಿದ್ದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ..

ದ್ರೋಣ

ಆನೆ ದ್ರೋಣ ಅಂತ್ಯಂತ ಶಾಂತ ಮೂರ್ತಿ. ಈತನ ಈ ವರ್ತನೆಯಿಂದಲೋ ಏನೋ ಒಟ್ಟು 18 ವರ್ಷಗಳು ಸತತವಾಗಿ ಚಿನ್ನದ ಅಂಬಾರಿಯನ್ನು ಹೊರುವಲ್ಲಿ ಪ್ರಮುಖನಾಗಿದ್ದ. 10.25 ಎತ್ತರವಿದ್ದ ಇದು ಸುಮಾರು 6,400 ಕೆ.ಜಿ ತೂಕವಿತ್ತು. ಆಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್’ನಲ್ಲಿನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಕೊಂಡು ಹೋಗಿದ್ದ ಆನೆಯೇ ದ್ರೋಣ. ಅಂಬಾರಿ ಹೊರುವ ಶಕ್ತಿ ದ್ರೋಣಗಿತ್ತು. ಆದರೆ 1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ. ಈ ಸುದ್ದಿ ತಿಳಿದು ನಾಡಿನ ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದರು.

Advertisment

publive-image

ಬಲರಾಮ

ಬಲರಾಮ ಶಾಂತ ಸ್ವಭಾವದವನು. 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ ಎಂಬ ಆನೆಗಳನ್ನು ಹಿಡಿದಿದ್ದರು. 11 ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮನಿಗೆ ವಯಸ್ಸು ಆಗಿದ್ದರಿಂದ ನಿವೃತ್ತಿ ನೀಡಲಾಗಿತ್ತು.

ಅರ್ಜುನ

ದ್ರೋಣನ ನಂತರ ಅಂಬಾರಿ ಹೊರುವ ಜವಾಬ್ದಾರಿ ತುಂಟ ಅರ್ಜುನನ ಹೆಗಲೇರಿತು. ಒಂದು ಬಾರಿ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗಿದ್ದ ಈತನಿಗೆ ಅದೇನು ಆಯಿತು ಗೊತ್ತಿಲ್ಲ. ನಂತರ ದಿನಗಳಲ್ಲಿ ಕೋಪದಲ್ಲಿ ಮಾವುತನನ್ನ ಕೊಂದು ಬಿಟ್ಟ. ಇದು ಅರ್ಜುನ ಮೇಲೆ ಭಾರೀ ಪರಿಣಾಮ ಬೀರಿತು. ಹೀಗಾಗಿ ಅಂಬಾರಿ ಹೊರುವ ಜವಾಬ್ದಾರಿ ಮತ್ತೆ ಬಲರಾಮಗೆ ನೀಡಿದ್ದರು. ಬಲರಾಮನೂ 11 ವರ್ಷ ಅಂಬಾರಿಯನ್ನು ಹೊತ್ತಿದ್ದ. ವಯಸ್ಸಾಗಿದ್ದರಿಂದ ಮತ್ತೆ ಅಂಬಾರಿಯನ್ನು ಅರ್ಜುನ ಹೊರಿಸಲಾಯಿತು. ಅರ್ಜನ ಬರೋಬ್ಬರಿ 5,535 ಕೆ.ಜಿ ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲ ಆನೆಗಳಿಗಿಂತ ಬಲಿಷ್ಠ ಎನಿಸಿಕೊಂಡಿದ್ದ. 60 ವರ್ಷದ ಈ ಆನೆ 2012ರಿಂದ 2019ರ ವರೆಗೆ ಯಶಸ್ವಿಯಾಗಿ ಅಂಬಾರಿ ಹೊತ್ತು ನಿವೃತ್ತಿ ಪಡೆದುಕೊಂಡಿದ್ದ. 2023 ಡಿಸೆಂಬರ್​ನಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ.

publive-image

ಅಭಿಮನ್ಯು

2020ರಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿಯನ್ನು ಹೊರುತ್ತಿರುವ ಅಭಿಮನ್ಯು ಆನೆ ಈ ಬಾರಿಯೂ (2023) ಶೃಂಗಾರ ಮಾಡಿಕೊಂಡು ಮದುಮಗನಂತೆ ಚಿನ್ನದ ಅಂಬಾರಿಗೆ ಬೆನ್ನು ಕೊಟ್ಟು ರಾಜಬೀದಿಯಲ್ಲಿ ಸಾಗಲಿದ್ದಾನೆ. 48 ವರ್ಷದ ಈ ಗಜರಾಜ. ಕಾಡಾನೆಗಳನ್ನ ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವುದಕ್ಕೆ ಸಹಾಯ ಮಾಡುವುದರಲ್ಲಿ ಅಭಿಮನ್ಯು ನೈಪುಣ್ಯತೆ ಹೊಂದಿದ್ದಾನೆ. ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾಕ್ಕೆ ಕಡವಿ ಸೆರೆ ಹಿಡಿಯಲಾಗಿತ್ತು. ಈಗಾಗಲೇ 13 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದಾನೆ. 5ನೇ ಬಾರಿಗೆ ಅಂಬಾರಿ ಹೊತ್ತುಕೊಳ್ಳುತ್ತಿದ್ದಾನೆ.

Advertisment

ಅಭಿಮನ್ಯು ಅಂಬಾರಿ ಹೊತ್ತಿರುವ ದೃಶ್ಯಗಳನ್ನು ವಿಶ್ವವೇ ಕಣ್ತುಂಬಿಕೊಳ್ಳಲ್ಲಿದೆ

750 ಕೆಜಿ ಅಪ್ಪಟ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಇರುತ್ತಾಳೆ. ರಾಜಮಾರ್ಗಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಪ್ರವಾಹದೋಪಾದಿ ಜನಸಾಗರದ ನಡುವೆ ಚಾಮುಂಡೇಶ್ವರಿ ಇರುವ ಅಂಬಾರಿಯನ್ನು ಹೊತ್ತ ಅಭಿಮನ್ಯು ಗಂಭೀರವಾಗಿ ಹೆಜ್ಜೆಗಳನ್ನು ಇಡುತ್ತ ಸಾಗಲಿದ್ದಾನೆ. 24 ಕುಶಾಲ ತೋಪುಗಳ ಸದ್ದಿನ ಹಿನ್ನೆಲೆಯಲ್ಲಿ ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ಅಭಿಮನ್ಯು ಅಂಬಾರಿ ಹೊತ್ತು ನಡೆಯುವ ದೃಶ್ಯಗಳನ್ನು ಇಡೀ ವಿಶ್ವವೇ ಕಣ್ತುಂಬಿಕೊಳ್ಳಲ್ಲಿದೆ.

publive-image

ಅಂಬಾರಿ ಹೊತ್ತ ಅಭಿಮನ್ಯು ಜತೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳವಾದ್ಯ, ಕಂಸಾಳೆ ಕುಣಿತದ ಮೈನವಿರೇಳಿಸುವ ದೃಶ್ಯ ಹಾಗೂ ಕಲಾತಂಡಗಳ ಅಮೋಘವಾದ ನೃತ್ಯ, ಮನಮೋಹಕ ಸ್ತಬ್ಧ ಚಿತ್ರಗಳು, ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಆಕರ್ಷಣೆ ಆಗಲಿವೆ. ಇದನ್ನೆಲ್ಲ ನೋಡಲು ಎರಡು ಕಣ್ಣುಗಳು ಸಾಲದು.

ವಿಶೇಷ ವರದಿ: ಭೀಮಪ್ಪ ಡಿಜಿಟಲ್ ಡೆಸ್ಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment