Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ

author-image
AS Harshith
Updated On
Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ
Advertisment
  • ಸ್ವತಂತ್ರ ಭಾರತದ ನಂತರ ಮೈಸೂರು ದಸರಾ ನಾಡಹಬ್ಬ ಆಗಿದ್ದು ಹೇಗೆ..?
  • 1969ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಕೊನೆಯ ದಸರಾ ಆಚರಣೆ!
  • ಪ್ರತಿವರ್ಷ ಯುದ್ಧ ಗೆದ್ದ ಸಂಭ್ರಮಕ್ಕೆ ವಿಜಯನಗರ ಅರಸರು ದಸರಾ ಸಂಭ್ರಮ

ಮೈಸೂರು ದಸರಾ ಅನ್ನೋದು ಕೇವಲ ಹಬ್ಬವಲ್ಲ. ಇದು ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಅನಾವರಣಗೊಳಿಸುವ ಒಂದು ಸಂಭ್ರಮ. ಮೈಸೂರಿನಲ್ಲಿ ಆಚರಿಸುವ ನವರಾತ್ರಿಗೆ ವಿಶೇಷವಾದ ಚರಿತ್ರೆ ಇದೆ. ನಾಡಹಬ್ಬಕ್ಕೆ ಇರುವ ಗತ್ತು, ಗಾಂಭೀರ್ಯವೇ ಮಹೋನ್ನತವಾದದ್ದು. ರಾಜ, ಮಹಾರಾಜರ ಕಾಲದಿಂದ ಆರಂಭವಾಗಿ ಇಂದಿಗೂ ರಾಜವೈಭವದಲ್ಲಿ ನಡೆಯುತ್ತಿರುವ ಮೈಸೂರು ದಸರಾ ಕರುನಾಡಿಗೆ ಹೆಮ್ಮೆ. ಶೌರ್ಯ, ಪರಾಕ್ರಮದ ಸಂಕೇತವಾದ ಮೈಸೂರು ದಸರಾ ಆರಂಭ ಆಗಿದ್ದು ಹೇಗೆ ಅನ್ನೋ ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ ಬನ್ನಿ.

publive-image

ಹೊಯ್ಸಳರಿಂದ ಆರಂಭ, ವಿಜಯನಗರದಲ್ಲಿ ವೈಭವ..

ಮೈಸೂರು ದಸರಾ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. 14ನೇ ಶತಮಾನದಲ್ಲಿ ಇದನ್ನು ಮಹಾನವಮಿ ಎಂದು ಕರೆಯಲಾಗುತ್ತಿತ್ತು. ಹೊಯ್ಸಳರ ಕಾಲದಲ್ಲಿ ಯುದ್ಧವನ್ನು ಗೆದ್ದ ವಿಜೃಂಭಣೆಯ ಸಂಕೇತವಾಗಿ ದಸರಾವನ್ನು ಆಚರಣೆ ಮಾಡಲಾಗುತ್ತಿತ್ತು. ಹೊಯ್ಸಳರ ನಂತರ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬ ವೈಭವದಿಂದ ನಡೆಯಿತು. ಪ್ರತಿವರ್ಷ ಯುದ್ಧ ಗೆದ್ದ ಸಂಭ್ರಮಕ್ಕೆ ವಿಜಯನಗರ ಅರಸರು ದಸರಾ ಆಚರಣೆ ಮಾಡುತ್ತಿದ್ದರು. ಹಂಪಿಯ ಹಜಾರ ರಾಮ ದೇವಾಲಯದ ಹೊರಗೋಡೆಯ ಕಲಾಕೃತಿಯಲ್ಲಿ ದಸರಾ ಉತ್ಸವಗಳನ್ನು ಚಿತ್ರಿಸಲಾಗಿದೆ. 15ನೇ ಶತಮಾನದಲ್ಲಿ ಇಟಾಲಿಯನ್ ಪ್ರವಾಸಿ ನಿಕೊಲೊ ಡಿ' ಕಾಂಟಿ ಅವರು ದಸರಾ ಹಬ್ಬದ ಮಹತ್ವವನ್ನು ವಿವರಿಸಿದ್ದಾರೆ. ಅಂದಿನ ದಸರಾ ಆಚರಣೆಯಲ್ಲಿ ಸ್ಪರ್ಧೆಗಳು, ಹಾಡುಗಾರಿಕೆ, ನೃತ್ಯ, ಪಟಾಕಿ ಅಬ್ಬರ, ಮಿಲಿಟರಿ ಮೆರವಣಿಗೆ ಮತ್ತು ಪ್ರಜೆಗಳಿಗೆ ದಾನ, ಉಡುಗೊರೆಗಳನ್ನು ನೀಡುವ ಸಂಪ್ರದಾಯಗಳನ್ನು ಪಾಲಿಸಲಾಗಿತ್ತು. ಶಕ್ತಿದೇವತೆ ದುರ್ಗಮಾತೆಯನ್ನು ಪೂಜೆಸಿದ ಉಲ್ಲೇಖಗಳು ಇವೆ. ಆದರೆ ವಿಜಯನಗರ ಅರಸರ ಕಾಲದಲ್ಲಿ ದಸರಾ ನವರಾತ್ರಿಯಾಗಿ ಆಚರಿಸುತ್ತಿರಲಿಲ್ಲ.

ಇದನ್ನೂ ಓದಿ: ಮೈಸೂರು ದಸರಾ ಮೂಲ ಶ್ರೀರಂಗಪಟ್ಟಣ.. ಏನು ಹೇಳುತ್ತಿದೆ ಗತವೈಭವದ ಚರಿತ್ರೆ..?

publive-image

1610 -ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ

ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯವು ಪತನಗೊಂಡಿತು. ಇದಾದ ನಂತರ ಹಿಂದೂ ಸಾಮ್ರಾಜ್ಯದ ಆಚರಣೆಗಳು ಸುಲ್ತಾನರ ಆಡಳಿತಾವಧಿಯಲ್ಲಿ ತೆರೆಮರೆಗೆ ಸರಿದಿದ್ದವು. ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭಾಗಗಳಲ್ಲಿ ಮೈಸೂರಿನ ಒಡೆಯರ್‌ ರಾಜ್ಯವನ್ನು ಸ್ಥಾಪಿಸಿದರು. ಆಗ ಮಹಾನವಮಿ ಉತ್ಸವವನ್ನು ಮುಂದುವರೆಸಲು ನಿರ್ಧರಿಸಿದರು. ಸೆಪ್ಟೆಂಬರ್ 1610ರ ಅವಧಿಯಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ರಾಜ ವೈಭೋಗದಲ್ಲಿ ಮೊದಲ ಬಾರಿಗೆ ಪ್ರಾರಂಭ ಮಾಡಲಾಯಿತು.

ಇದನ್ನೂ ಓದಿ: Mysore Dasara 2024: ವಿಜಯದಶಮಿಯಂದು ಪೂಜಾ ವಿಧಾನಗಳು ಹೇಗೆ ನಡೆಯುತ್ತೆ? ಇಲ್ಲಿದೆ ಮಾಹಿತಿ

publive-image

1612 - ಮೈಸೂರಿಗೆ ಸ್ಥಳಾಂತರವಾದ ದಸರಾ ದರ್ಬಾರ್

ಶ್ರೀರಂಗಪಟ್ಟಣದಲ್ಲಿದ್ದ ಮೈಸೂರು ಸಂಸ್ಥಾನವನ್ನು 1612ರಲ್ಲಿ ಮೈಸೂರಿಗೆ ಸ್ಥಳಾಂತರ ಮಾಡಲಾಯ್ತು. ಯದುವಂಶದ ಶ್ರೀರಾಜ ಒಡೆಯರ್ ಚಿನ್ನದ ಸಿಂಹಾಸನದ ಮೇಲೆ ಕೂತು ಮೊದಲ ದಸರಾ ಆಚರಣೆ ಮಾಡಿದರು. ಅಂದಿನಿಂದ ದಸರಾವನ್ನು ನವರಾತ್ರಿಗಳು ಅಂದ್ರೆ 10 ದಿನಗಳ ಕಾಲ ಆಚರಣೆ ಮಾಡುವ ಸಂಪ್ರದಾಯ ಆರಂಭವಾಯ್ತು. ಮೈಸೂರು ದಸರಾ ಶ್ರೀರಂಗಪಟ್ಟಣದಿಂದ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮುಂದುವರೆಸಿದ್ದು ವಿಶೇಷ. 1805ರಿಂದ 1969ರವರೆಗೂ ಮಹಾರಾಜರೇ ಖುದ್ದಾಗಿ ದಸರಾ ನಡೆಸಿ, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

publive-image

1969ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ಕೊನೆಯ ರಾಜರ ದಸರಾವನ್ನು ಆಚರಿಸಿದರು. ಅದಾದ ಬಳಿಕ 1970ರಲ್ಲಿ ದಸರಾದಲ್ಲಿ ರಾಜರು ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಿದರು. ಇದಕ್ಕೆ ಕಾರಣ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೂ 1950ರವರೆಗೂ ಮೈಸೂರು ಸಂಸ್ಥಾನವನ್ನು ಮಹಾರಾಜರೇ ಆಳುತ್ತಿದ್ದರು. ಭಾಷಾವಾರು ಪ್ರಾಂತ್ಯದ ಬಳಿಕ 1956ರಿಂದ 1964ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1969ರಲ್ಲಿ ಮಾಜಿ ಮಹಾರಾಜರ ಹೆಸರು ಮತ್ತು ರಾಜಧನವನ್ನು ನಿಲ್ಲಿಸಿ ಬಿಟ್ಟಿದ್ದರು. ಇದರಿಂದ ದೇಶದಲ್ಲಿ 560 ಮಾಜಿ ಮಹಾರಾಜರು ಇಂದಿರಾ ಗಾಂಧಿ ನಿಲುವಿನ ವಿರುದ್ಧ ಕೋರ್ಟ್ ಕಟಕಟೆ ಏರಲು ನಿರ್ಧರಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಜಯಚಾಮರಾಜೇಂದ್ರ ಒಡೆಯರ್, ಸ್ವತಂತ್ರ ಭಾರತದಲ್ಲಿ ನಾನೊಬ್ಬ ಸಾಮಾನ್ಯ ಪ್ರಜೆ, ಹೀಗಾಗಿ ಜನಸಾಮಾನ್ಯನಾಗಿಯೇ ನಾವು ಬದುಕಬೇಕು ಎಂಬುದಾಗಿ ಹೇಳಿದ್ದರು.

publive-image

1970ರಲ್ಲಿ ನಾನು ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ, ದರ್ಬಾರನ್ನೂ ನಡೆಸುವುದಿಲ್ಲ ಎಂದು ಜಯಚಾಮರಾಜೇಂದ್ರ ಒಡೆಯರ್ ಘೋಷಿಸಿಬಿಟ್ಟರು. ಮೈಸೂರು ನಗರಿ ಪ್ರಸಿದ್ಧಿಯಾಗಿದ್ದೇ ದಸರಾದಿಂದ ಈಗ ಏಕಾಏಕಿ ದಸರಾ ನಿಂತು ಬಿಟ್ಟರೆ ಏನು ಕಥೆ ಎಂಬ ಚರ್ಚೆಯೂ ನಡೆದಿತ್ತು. ಕೊನೆಗೆ ಕೆಲವು ಗಣ್ಯರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಮರದ ಅಂಬಾರಿಯನ್ನು ಆನೆಯ ಮೇಲೆ ಇಟ್ಟು ಖಾಸಗಿ ದಸರಾ ಮೆರವಣಿಗೆ ನಡೆಸಿದ್ದರು. 1970, 1971, 1972 ಹಾಗೂ 1973ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಸಿಂಹಾಸನದಲ್ಲಿ ಕುಳಿತುಕೊಳ್ಳದೇ ತಮ್ಮ ಪಟ್ಟದ ಕತ್ತಿಯನ್ನು ಇಟ್ಟು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದರಂತೆ. ಅಂಬಾರಿಯನ್ನೂ ಏರದೇ ಅಂಬಾರಿ ಹೊತ್ತ ಆನೆಯ ಹಿಂದೆ ಕಾರಿನಲ್ಲಿ ಬನ್ನಿ ಮಂಟಪದವರೆಗೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದರು.

ಚಿನ್ನದ ಅಂಬಾರಿಯಲ್ಲಿ ನಾಡದೇವತೆಯ ಮೆರವಣಿಗೆ

ಪ್ರವಾಸೋದ್ಯಮದಿಂದ ಮೈಸೂರು ವಂಚಿತವಾಗಲಿದೆ ಎಂಬ ಆತಂಕದಿಂದ 1971ರಲ್ಲಿಯೂ ಮೈಸೂರು ಜನರೇ ಸೇರಿಕೊಂಡು ದಸರಾ ನಡೆಸಿದ್ದರು. 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮೈಸೂರಿನ ಗಣ್ಯರು ಭೇಟಿ ಮಾಡಿ ದಸರಾ ನಡೆಸುವಂತೆ ಮನವಿ ಮಾಡಿದ್ದರಂತೆ. ಅದರಂತೆ ಜಯಚಾಮರಾಜೇಂದ್ರ ಒಡೆಯರ್ ಜೊತೆ ಮಾತನಾಡಿ ಚಿನ್ನದ ಅಂಬಾರಿಯನ್ನೇ ಆನೆಯ ಮೇಲೆ ಇಟ್ಟು ದಸರಾ ನಾಡಹಬ್ಬ ಎಂದು ಸರ್ಕಾರದಿಂದಲೇ ಪುನಃ ಚಾಲ್ತಿಗೆ ಬಂತು. ಇಂದಿಗೂ ನಾಡದೇವತೆ ಚಾಮುಂಡೇಶ್ವರಿಯನ್ನ ಅಂಬಾರಿಯಲ್ಲಿಟ್ಟು ಬನ್ನಿ ಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ.

publive-image

ಮೈಸೂರು ದಸರಾವು ಸ್ವಾತಂತ್ರ್ಯ ನಂತರ ನಾಡಹಬ್ಬ ಎಂದೇ ಕರೆಯಲಾಗಿದೆ. ದಸರಾ, ನವರಾತ್ರಿ ಮತ್ತು ವಿಜಯದಶಮಿಯಂದು ದುಷ್ಟಶಕ್ತಿಯ ಸಂಹರಿಸಿ ವಿಜಯವನ್ನು ಆಚರಿಸಲಾಗುತ್ತದೆ. ಮಹಿಷಾಸುರ ರಾಕ್ಷಸನಾಗಿದ್ದು, ದೇವಿಯ ವಧೆಯಿಂದ ನಗರಕ್ಕೆ ಮೈಸೂರು ಎಂದು ಹೆಸರು ಬಂದಿದೆ ಎನ್ನಲಾಗಿದೆ. ರಾಜ್ಯದ ಕತ್ತಿ, ಆಯುಧಗಳು, ಆನೆಗಳು, ಕುದುರೆಗಳು ಮತ್ತು ನಾಡ ದೇವತೆಗೆ ಪೂಜಿಸುವುದು ಶ್ರೇಷ್ಟವಾಗಿದೆ. ಇದು 10 ದಿನಗಳ ಹಬ್ಬವಾಗಿದ್ದು, ನವರಾತ್ರಿಯಂದು ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಯಾಗುತ್ತದೆ. ಮೈಸೂರು ನಗರವು ನವರಾತ್ರಿಯಂದು ದಸರಾ ಹಬ್ಬವನ್ನು ವೈಭವ ಮತ್ತು ವಿಜೃಂಭಣೆಯಿಂದ ಆಚರಿಸುವ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment