/newsfirstlive-kannada/media/post_attachments/wp-content/uploads/2025/05/ramya.jpg)
ಬೆಂಗಳೂರು: 6 ಕೋಟಿ 20 ಲಕ್ಷ ರೂಪಾಯಿಗೆ ನಟಿ ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ನೆರೆ ರಾಜ್ಯದ ಮಿಲ್ಕಿ ಬ್ಯೂಟಿಯನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ಯಾಂಡಲ್‌ವುಡ್ ನಟಿಯರು ಸರ್ಕಾರಕ್ಕೆ ಕನ್ನಡದ ನಟಿಯರು ಸಿಗಲಿಲ್ವಾ ಎಂದು ಆಕ್ರೋಶ ಹೊರ ಹಾಕಿದ್ದರು.
ನಟಿ ತಮನ್ನಾ ಭಾಟಿಯಾ ರಾಯಭಾರಿ ವಿವಾದ ಹಾಗೂ ಸಿಟ್ಟಿನ ಮಧ್ಯೆ KSDL ಕಳೆದ ಮೇ ತಿಂಗಳಲ್ಲಿ ₹186 ಕೋಟಿ ವಹಿವಾಟು ನಡೆಸಿ ದಾಖಲೆ ಬರೆದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. KSDL ಕಳೆದ 108 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ಸಾಧನೆ ಮಾಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು ಸೋಪ್ ರಾಯಭಾರಿಯಾದ ತಮನ್ನಾ.. 2 ವರ್ಷಕ್ಕೆ ಪಡೆಯೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
ಎಂ.ಬಿ ಪಾಟೀಲ್ ಹೇಳಿದ್ದೇನು?
ನಮ್ಮ ಸರ್ಕಾರದ ವತಿಯಿಂದ KSDL ಸಂಸ್ಥೆಯನ್ನು ಬಲಪಡಿಸಿ ಮಾರುಕಟ್ಟೆಯನ್ನು ವಿಸ್ತರಿಸಿದ ಪರಿಣಾಮ ಸಂಸ್ಥೆಯ ಸಾಧನೆ ಏರುಗತಿಯ ಹಾದಿಯಲ್ಲಿಯೇ ಮುಂದುವರೆಯುತ್ತಿದೆ.
KSDL ಕಳೆದ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. 108 ವರ್ಷಗಳ ಇತಿಹಾಸದಲ್ಲಿ ಕೇವಲ 1ತಿಂಗಳಲ್ಲಿ ಹೀಗೆ ಭಾರೀ ವಹಿವಾಟು ನಡೆಸಿರುವುದು ಇದೇ ಮೊದಲು.
ಈ ಹಿಂದೆ 2024ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 178 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಬ್ರೇಕ್ ಮಾಡಲಾಗಿದೆ.
KSDL ಸಂಸ್ಥೆಗೆ ಮೇ ತಿಂಗಳಲ್ಲಿ 151.50 ಕೋಟಿ ರೂ. ವಹಿವಾಟಿನ ಗುರಿ ನಿಗದಿಪಡಿಸಲಾಗಿತ್ತು. ಅದಕ್ಕಿಂತ ₹35 ಕೋಟಿ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಶೇಕಡ 120ರಷ್ಟು ಸಾಧನೆ ಮತ್ತು ಶೇಕಡ 15ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಈ ವಹಿವಾಟಿನ ಪೈಕಿ ರಫ್ತಿನ ಮೂಲಕ 1.81 ಕೋಟಿ ರೂ. ಗಳಿಸಲಾಗಿದೆ. ರಫ್ತು ವಹಿವಾಟನ್ನು ವಾರ್ಷಿಕವಾಗಿ 150 ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ.
ಸಂಸ್ಥೆಯು ತಯಾರಿಸುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಎಲ್ಲಾ 45 ಬಗೆಯ ಉತ್ಪನ್ನಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ನವದೆಹಲಿ ಶಾಖೆಗಳಲ್ಲಿ ಮತ್ತು ಬೆಂಗಳೂರಿನ ನೇರ ಮಾರುಕಟ್ಟೆ ವಿಭಾಗದ ಮೂಲಕ ನಿರೀಕ್ಷೆಗೂ ಮೀರಿ ಮಾರಾಟವಾಗಿವೆ. KSDL ಉತ್ಪನ್ನಗಳಾದ ಸಾಬೂನು, ಶವರ್ ಜೆಲ್, ಅಗರಬತ್ತಿ ಮುಂತಾದವುಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳು ಫಲ ಕೊಡುತ್ತಿವೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಅತಿ ಹೆಚ್ಚು ಅಂದದೆ ₹85 ಕೋಟಿ ವಹಿವಾಟು ನಡೆದಿದೆ. ಉಳಿದ ₹100 ಕೋಟಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಆಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ